Kodagu: ಕೊಡವರಿಗೆ ಟಿಪ್ಪು ಮೇಲೆ ಏಕೆ ಸಿಟ್ಟು; ದೇವಟುಪರಂಬುವಿನ ಘಟನೆ ಏನು?

ಕೊಡಗಿನ ಮೇಲೆ ಬರೋಬ್ಬರಿ 32 ಬಾರಿ ದಂಡೆತ್ತಿ ಬಂದಿದ್ದ ಟಿಪ್ಪು ಕೊಡವರ ಸೈನ್ಯದ ವಿರುದ್ಧ ಸೋತು ಸುಣ್ಣವಾಗಿದ್ದ. ಕೊಡಗಿನ ಗಡಿ ಕುಶಾಲನಗರದ ಮುಳ್ಳುಸೋಗೆ ಮತ್ತು ಸುಂಟಿಕೊಪ್ಪದ ಉಲುಗುಲಿ ಬಳಿ ಕೊಡವರ ಗೆರಿಲ್ಲಾ ಯುದ್ಧಕ್ಕೆ ಸೋತಿದ್ದ

ಟಿಪ್ಪು ಸುಲ್ತಾನ್​

ಟಿಪ್ಪು ಸುಲ್ತಾನ್​

  • Share this:
ಕೊಡಗು (ಮಾ. 29) : ರಾಜ್ಯ ಶಿಕ್ಷಣ ಇಲಾಖೆಯ ಪಠ್ಯದಲ್ಲಿ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿರುವುದರಿಂದ, ಅದನ್ನು ಹಿಂದಿನಿಂದಲೂ ಹಾಗೇಯೇ ಕಲಿಯುತ್ತಿದ್ದೇವೆ. ಆದರೆ ಟಿಪ್ಪು (Tipu sultan) ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಹೀಗಾಗಿ ಆತನನ್ನು ಪಠ್ಯದಿಂದ ಕೈಬಿಡಬೇಕು ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ (Appachu Ranjan) ಮೊದಲ ಬಾರಿಗೆ 2016 ರಲ್ಲಿ 16 ಪುಟಗಳ ಲಿಖಿತ ದೂರನ್ನು ವಿಧಾನಸಭೆಯಲ್ಲಿ ಸಲ್ಲಿಸಿದ್ದರು. ಆದರೆ ಇದೀಗ ಅವರದೇ ಸರ್ಕಾರ ಅಧಿಕಾರದಲ್ಲಿರುವಾಗ ಟಿಪ್ಪು ವಿಷಯವನ್ನು ಪಠ್ಯದಿಂದ ಕೈಬಿಡಬೇಕು ಎನ್ನೋದು ಸರ್ಕಾರದ ಮಟ್ಟದಲ್ಲಿಯೇ ಚರ್ಚೆಯಾಗುತ್ತಿದೆ. ಹಾಗಾದರೆ ಟಿಪ್ಪುವನ್ನು ಪಠ್ಯದಿಂದ ಕೈಬಿಡಬೇಕು ಎಂದು ಅಪ್ಪಚ್ಚು ರಂಜನ್ ಅವರು ವಿಧಾನಸಭೆಗೆ ದೂರು ನೀಡಿದ್ದು ಯಾಕೆ.? ಅಷ್ಟಕ್ಕೂ ಕೊಡಗಿನಲ್ಲಿ ಟಿಪ್ಪು ನಡೆಸಿದ ಕ್ರೌರ್ಯಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಕೊಡವರ ಸೈನ್ಯದ ಎದುರು ಸೋತಿದ್ದ ಟಿಪ್ಪು

ಮೈಸೂರನ್ನು ಆಳ್ವಿಕೆ ಮಾಡುತ್ತಿದ್ದ ಟಿಪ್ಪು 1785 ರಲ್ಲಿ ಕೊಡಗಿನಲ್ಲಿ ನರಮೇಧವನ್ನೇ ನಡೆಸಿದ್ದ ಎನ್ನೋದಕ್ಕೆ ಸಾಕಷ್ಟು ದಾಖಲೆ ಕುರುಹುಗಳಿವೆ. ಇದಕ್ಕೂ ಮುನ್ನ ಕೊಡಗಿನ ಮೇಲೆ ಬರೋಬ್ಬರಿ 32 ಬಾರಿ ದಂಡೆತ್ತಿ ಬಂದಿದ್ದ ಟಿಪ್ಪು ಕೊಡವರ ಸೈನ್ಯದ ವಿರುದ್ಧ ಸೋತು ಸುಣ್ಣವಾಗಿದ್ದ. ಕೊಡಗಿನ ಗಡಿ ಕುಶಾಲನಗರದ ಮುಳ್ಳುಸೋಗೆ ಮತ್ತು ಸುಂಟಿಕೊಪ್ಪದ ಉಲುಗುಲಿ ಬಳಿ ಕೊಡವರ ಗೆರಿಲ್ಲಾ ಯುದ್ಧಕ್ಕೆ ಸೋತಿದ್ದ. ಫ್ರೆಂಚರ ಸಹಾಯದಿಂದ ಯುದ್ಧ ಮಾಡುತ್ತಿದ್ದ ಟಿಪ್ಪು ಮೋಸದಿಂದ ಕೊಡವರನ್ನು ಹತ್ಯೆ ಮಾಡಿದ್ದ ಎಂಬುದಕ್ಕೆ ಇಂದಿಗೂ ಪೂಜನೀಯ ಸ್ಥಾನ ಹೊಂದಿರುವ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಸಮೀಪ ಇರುವ ದೇವಟುಪರಂಬು ಸಾಕ್ಷಿ.ನಾವು ನಿಮ್ಮ ವಿರುದ್ಧ ಯುದ್ಧ ಮಾಡುವುದಿಲ್ಲ, ಶಾಂತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ. ನೀವು ನಿರಾಯುಧವಾಗಿ ಬನ್ನಿ ಎಂದು ಆಹ್ವಾನ ನೀಡಿದ್ದನಂತೆ. ಹೀಗೆ ಮೋಸದಿಂದ ಅಂದು 80 ಸಾವಿರ ಕೊಡವರನ್ನು ಟಿಪ್ಪು ಹತ್ಯೆ ಮಾಡಿದ ಎನ್ನೋದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್ ಯು ನಾಚಪ್ಪ ಹೇಳುತ್ತಾರೆ. ಅದಕ್ಕೆ ಪಟ್ಟೋಲೆ ಪಣಮೆ ಕೃತಿಯಲ್ಲಿ ಸಾಕ್ಷಿ ಇವೆ ಎಂದಿದ್ದಾರೆ. ದೇವಟುಪರಂಬುವಿನಲ್ಲಿ ಇಂದಿಗೂ ಕೊಡವರು ಪ್ರತೀ ವರ್ಷ ಮೀದಿ ಅಂದರೆ ಹಿರಿಯರಿಗೆ ಹೆಡೆ ಇಟ್ಟು ಪೂಜಿಸುತ್ತಾರೆ. ಜೊತೆಗೆ ಕೊಡವ ಸಂಪ್ರದಾಯದಂತೆ ಮೂರು ಸುತ್ತು ಗುಂಡು ಹಾರಿಸಿ ಹಿರಿಯರಿಗೆ ಶ್ರದ್ದಾಂಜಲಿ ಅರ್ಪಿಸುತ್ತಾರೆ.

ಇದನ್ನು ಓದಿ: ಸ್ಮಶಾನ ಕಾಯಕದಲ್ಲಿ ನೀಲಮ್ಮ: ಎಲ್ಲರಿಗೂ ಮಾದರಿ ಈ ಗಟ್ಟಿಗಿತ್ತಿ

ಭಗಂಡೇಶ್ವರ ದೇವಾಲಯದ ಮೇಲೆ ದಾಳಿ

ಇಷ್ಟೇ ಅಲ್ಲ, ಟಿಪ್ಪುವಿನ ಕ್ರೌರ್ಯ ಕೊಡಗಿನ ದೇವಾಲಯಗಳ ಮೇಲೂ ಆಗಿತ್ತು ಎಂಬುದನ್ನು ಹಲವು ಕುರುಹುಗಳು ಸಾಕ್ಷೀಕರಿಸುತ್ತವೆ. ಅಯ್ಯಂಗೇರಿಯಲ್ಲಿ ಕೊಡವರ ಹತ್ಯೆ ಮಾಡಿದ್ದ ಟಿಪ್ಪು ಬಳಿಕ ಅದೇ ಮಾರ್ಗವಾಗಿ ಬಂದು ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೇಲೂ ದಾಳಿ ಮಾಡಿದ್ದ ಎನ್ನಲಾಗುತ್ತದೆ. ಈಶ್ವರನ ವಿಗ್ರಹದ ಮುಂದೆ ಇದ್ದ ಎರಡು ಆನೆಗಳ ವಿಗ್ರಹಗಳನ್ನು ಕತ್ತರಿಸಿದ್ದ ಎನ್ನಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಸೊಂಡಿಲು, ಬಾಲ ಮತ್ತು ಕಿವಿಗಳು ಮುರಿದಿರುವ ಎರಡು ಕಲ್ಲಿನ ಆನೆ ವಿಗ್ರಹಗಳು ಇವೆ.ಈ ವಿಗ್ರಹಗಳನ್ನು ಭಗ್ನಗೊಂಡಿರುವ ವಿಗ್ರಹಗಳನ್ನು ದೇವಾಲಯದಲ್ಲಿ ಇರಿಸಿಕೊಳ್ಳಬಾರದು ಎಂದು ಶಿಲ್ಪಿಗಳು ಅವುಗಳನ್ನು ಸರಿಪಡಿಸಿಕೊಡುವುದಾಗಿ ಮುಂದೆ ಬಂದರು. ಆದರೆ ಟಿಪ್ಪುವಿನ ಕ್ರೌರ್ಯವನ್ನು ಸುಮ್ಮನೆ ಹೇಳಿದರೆ ಜನರು ನಂಬುವುದು ಕಷ್ಟ ಎನ್ನುವ ಕಾರಣಕ್ಕೆ ಸಾಕ್ಷಿಯಾಗಿ ವಿಗ್ನಗೊಂಡಿರುವ ಆನೆ ವಿಗ್ರಹಗಳನ್ನು ಇರಿಸಿಕೊಳ್ಳಲಾಗಿದೆ. ಆದರೆ ದೇವಾಲಯ ಮುಖ ಮಂಟಪದ ಬಳಿಗೆ ಅವುಗಳನ್ನು ಸ್ಥಳಾಂತರಿಸಿ ಅಲ್ಲಿಯೇ ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಭಟ್.

ಇದನ್ನು ಓದಿ: UP CM yogi adityanathಗೆ ತಲುಪಿದ ಮಂಗಳೂರಿನ ಪ್ರಸಾದ

ಭಾಗಮಂಡಲದ ದೇವಾಲಯದ ಮೇಲಿನ ದಾಳಿ ಬಳಿಕ ಕಾವೇರಿ ಉಗಮಸ್ಥಾನ ತಲಕಾವೇರಿಗೂ ದಾಳಿ ಮಾಡಿದ್ದನಂತೆ. ಆದರೆ ಅಲ್ಲಿ ಏನು ಸಿಗದ ಹಿನ್ನಲೆಯಲ್ಲಿ ಅಲ್ಲಿಂದ ವಾಪಸ್ ಆದನಂತೆ. ಒಟ್ಟಿನಲ್ಲಿ ಟಿಪ್ಪು ಕೊಡಗಿನ ಮೇಲೆ ಇಂತಹ ದಾಳಿಗಳನ್ನು ಮಾಡಿ ಕ್ರೌರ್ಯ ನಡೆಸಿದ್ದರಿಂದಲೇ ಟಿಪ್ಪುವನ್ನು ಕೊಡವರು ಇಷ್ಟು ವಿರೋಧಿಸಲು ಕಾರಣ ಎನ್ನಲಾಗುತ್ತಿದೆ.
Published by:Seema R
First published: