HOME » NEWS » State » WHY IS BENGALURU SEEING A SPIKE IN COVID CASES AND HOW ARE HOTELS STEPPING INTO THE SCENE SKTV

Explainer: ಬೆಂಗಳೂರಿನಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗೋದಕ್ಕೆ ಏನು ಕಾರಣ? ತಜ್ಞರು ಹೀಗಂತಾರೆ…

ಮುಂಬೈ ಮತ್ತು ದೆಹಲಿ ನಗರಗಳು ತಮ್ಮದೇ ಆದ ರೀತಿಯಲ್ಲಿ ಲಾಕ್​ಡೌನ್ ಮಾಡಿದಾಗ ಅಲ್ಲಿದ್ದ ಕನ್ನಡಿಗರೆಲ್ಲಾ ತಂತಮ್ಮ ಊರಿಗೆ ಮರಳಿದ್ದಾರೆ. ರಾಜ್ಯದ ಗಡಿ ದಾಟುವಾಗ ಕಡ್ಡಾಯವಾಗಿ ಎಲ್ಲರೂ ಆರ್​ಟಿಪಿಸಿಆರ್​ ನೆಗೆಟಿವ್ ರಿಪೋರ್ಟ್ ಜೊತೆಗೇ ಬಂದಿರುತ್ತಾರಾದ್ರೂ ಅದನ್ನು ಶೇಕಡಾ 100 ಸುರಕ್ಷತೆ ಇದೆ ಎಂದು ಪರಿಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.

news18-kannada
Updated:April 17, 2021, 3:52 PM IST
Explainer: ಬೆಂಗಳೂರಿನಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗೋದಕ್ಕೆ ಏನು ಕಾರಣ? ತಜ್ಞರು ಹೀಗಂತಾರೆ…
ಸಾಂದರ್ಭಿಕ ಚಿತ್ರ
  • Share this:

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಮುಂಬೈ ಮತ್ತು ದೆಹಲಿಗೆ ಹೋಲಿಸಿದ್ರೆ ಬೆಂಗಳೂರಿನ ಸೋಂಕಿತರ ಸಂಖ್ಯೆ ಕಡಿಮೆಯೇ ಇದೆ, ಆದ್ರೆ ತಜ್ಞರು ಹೇಳುವ ಪ್ರಕಾರ ಈ ಸಂಖ್ಯೆ ಏರೋಕೆ ಎರಡರಿಂದ ಮೂರು ವಾರ ಸಾಕು. ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇರುವುದರಿಂದ ಬೆಂಗಳೂರಿನ ಅನೇಕ ಹೋಟೆಲುಗಳು ಕೋವಿಡ್ ಕೇರ್ ಸೆಂಟರ್​ಗಳಾಗಿ ಬದಲಾಗೋಕೆ ಸಜ್ಜಾಗಿವೆ. ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಈಗಾಗಲೇ ಹೋಟೆಲ್ ಮಾಲೀಕರ ಬಳಿ ಇದಕ್ಕೆ ಸಂಬಂಧಿಸಿದಂತೆ ಅನೇಕ ಸುತ್ತಿನ ಮಾತುಕತೆ ನಡೆಸಿದ್ದು ಕೆಲವು ವ್ಯವಸ್ಥೆಗಳನ್ನು ಮಾಡಲು ಒಪ್ಪಿಕೊಂಡಿವೆ.


ನಿನ್ನೆ ಸಂಜೆಯ ವೇಳೆಗೆ ರಾಜ್ಯದಲ್ಲಿ 14,859 ಹೊಸಾ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 78 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 9917 ಪ್ರಕರಣಗಳು ಬೆಂಗಳೂರಿನಲ್ಲೇ ಗುರುತಾಗಿವೆ. ರಾಜ್ಯದ ಒಟ್ಟಾರೆ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 60ರಷ್ಟು ಬೆಂಗಳೂರಿನಲ್ಲೇ ಕಂಡುಬಂದಿರುತ್ತವೆ. ಕೊರೊನಾ ವೈರಸ್​ ಬೆಂಗಳೂರಿನ ಮೇಲೆ ಇಷ್ಟು ಪ್ರಬಲವಾದ ಹಿಡಿತ ಹೊಂದಿರಲು ಪ್ರಮುಖ ಕಾರಣವಾದ್ರೂ ಏನು?ಇದನ್ನು ಅರ್ಥ ಮಾಡಿಕೊಳ್ಳುವ ಮೊದಲು ಯಾವುದೇ ಮಹಾನಗರದ ಜನಸಂಖ್ಯೆಯ ಗುಣಗಳನ್ನು ಅರ್ಥೈಸಿಕೊಳ್ಳಬೇಕು. ಮುಂಬೈ ಮತ್ತು ದೆಹಲಿ ನಗರಗಳು ತಮ್ಮದೇ ಆದ ರೀತಿಯಲ್ಲಿ ಲಾಕ್​ಡೌನ್ ಮಾಡಿದಾಗ ಅಲ್ಲಿದ್ದ ಕನ್ನಡಿಗರೆಲ್ಲಾ ತಂತಮ್ಮ ಊರಿಗೆ ಮರಳಿದ್ದಾರೆ. ರಾಜ್ಯದ ಗಡಿ ದಾಟುವಾಗ ಕಡ್ಡಾಯವಾಗಿ ಎಲ್ಲರೂ ಆರ್​ಟಿಪಿಸಿಆರ್​ ನೆಗೆಟಿವ್ ರಿಪೋರ್ಟ್ ಜೊತೆಗೇ ಬಂದಿರುತ್ತಾರಾದ್ರೂ ಅದನ್ನು ಶೇಕಡಾ 100 ಸುರಕ್ಷತೆ ಇದೆ ಎಂದು ಪರಿಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಯಾವುದೇ ಒಬ್ಬ ವ್ಯಕ್ತಿಗೆ ಆರ್ಟಿಪಿಸಿಆರ್​ ಮಾಡುವ ಸಂದರ್ಭದಲ್ಲಿ ಆತನೊಳಗೆ ಕೊರೊನಾ ವೈರಾಣು ಇದ್ದರೂ ಪರೀಕ್ಷೆಯಲ್ಲಿ ಗುರುತಿಸಲಾರದಷ್ಟು ಕಡಿಮೆ ಪ್ರಮಾಣದಲ್ಲಿ ಇರುವ ಸಾಧ್ಯತೆ ಇದೆ. ಆರ್ಟಿಪಿಸಿಆರ್ ಮಾಡಿಸಿ ಕೆಲವು ದಿನಗಳ ನಂತರ ಆ ವ್ಯಕ್ತಿಯಲ್ಲಿ ಸೋಂಕು ಕಂಡುಬರುವ ಸಾಧ್ಯತೆ ಇದ್ದೇ ಇದೆ ಎನ್ನುತ್ತಾರೆ ವೈದ್ಯರು.


ಬೆಂಗಳೂರು ಉದ್ಯೋಗದ ವಿಚಾರದಲ್ಲೂ ರಾಜ್ಯದ ಕೇಂದ್ರ ಸ್ಥಾನ. ರಾಜ್ಯದ ನಾನಾ ಮೂಲೆಗಳಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವವರ ಸಂಖ್ಯೆಯೂ ದೊಡ್ಡದೇ ಇದೆ. ಇದಲ್ಲದೇ ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಅತ್ಯಂತ ವೇಗವಾಗಿ ಸೋಂಕು ಹರಡುವ ಅಪಾಯವೂ ಇದ್ದೇ ಇದೆ. ಗಾಳಿ-ಬೆಳಕು ಸರಿಯಾಗಿರದ ಮನೆಗಳು, ಸಣ್ಣ ಕೋಣೆಗಳಲ್ಲಿ ಹೆಚ್ಚಿನ ಜನರ ವಾಸಿಸುವಂಥಾ ಸನ್ನಿವೇಶಗಳು ಬಹಳಷ್ಟಿವೆ. ಇನ್ನು ಮಾರುಕಟ್ಟೆಗಳಲ್ಲಂತೂ ಜನಜಂಗುಳಿ ಹಿಡಿತಕ್ಕೇ ಸಿಗುವಂತಿಲ್ಲ. ಮದುವೆ ಮುಂತಾದ ಸಮಾರಂಭಗಳು ಎಲ್ಲೆಡೆ ನಡೆಯುತ್ತಿದ್ದು ಜನರು ಕೋವಿಡ್ ನಿಯಮಗಳನ್ನು ಪಾಳಿಸುವ ಬಗ್ಗೆ ಹೆಚ್ಚು ಮಹತ್ವ ನೀಡುತ್ತಿಲ್ಲ. ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೇ ಓಡಾಡುವ ಜನರು ಕಾಣಿಸುತ್ತಾರೆ.


ಇದಲ್ಲದೇ ಇಂದು ರಾಜ್ಯದ ಮೂರು ಕಡೆ ಉಪಚುನಾವಣೆ ಕೂಡಾ ನಡೆದಿದೆ. ಈ ಸಂಬಂಧ ಬೇರೆ ಊರುಗಳಿಂದ ಕಾರ್ಯಕರ್ತರು ತಮ್ಮ ನಾಯಕರನ್ನು ಭೇಟಿಯಾಗಲು ಬೆಂಗಳೂರಿಗೆ ಆಗಮಿಸುವುದು, ಇವರೇ ಅಲ್ಲಿಗೆ ಹೋಗುವುದು ಮುಂತಾದ ಓಡಾಟಗಳು ಜೋರಾಗೇ ನಡೆದಿವೆ. ಶಕ್ತಿಕೇಂದ್ರ ವಿಧಾನಸೌಧಕ್ಕೆ ಪ್ರತಿದಿನ ನೂರಾರು ಜನ ಭೇಟಿ ನೀಡುತ್ತಾರೆ. ಸೋಂಕು ಹರಡೋಕೆ ಇವೆಲ್ಲವೂ ಪ್ರಶಸ್ತ ವಾತಾವರಣ ಕಲ್ಪಿಸಿಕೊಟ್ಟಿವೆ.


ಬೆಂಗಳೂರಿನ ಲೈಫ್​ಕೇರ್ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಪ್ರೊ ಎಲ್ ಶ್ರೀನಿವಾಸ್ ಮೂರ್ತಿ ಹೇಳುವಂತೆ ಕನಿಷ್ಠ 30 ಕೋಟಿ ಭಾರತೀಯರಿಗೆ ಲಸಿಕೆ ನೀಡಿದಾಗ ಮಾತ್ರ ವೈರಸ್ ನ ಆರ್ಭಟವನ್ನು ತಗ್ಗಿಸಬಹುದು. ಆಗ ಹರ್ಡ್ ಇಮ್ಯುನಿಟಿ ಬಗ್ಗೆ ನಾವು ಆತ್ಮವಿಶ್ವಾಸದಿಂದ ಇರಬಹುದು. ಸೋಂಕು ವೇಗವಾಗಿ ಹರಡಲು ಸಾಮಾಜಿಕ ಮತ್ತು ವೈದ್ಯಕೀಯ ಕಾರಣಗಳಿರುತ್ತವೆ. ಇದಕ್ಕೆ ಸರ್ಕಾರ, ಬಿಬಿಎಂಪಿ ಮತ್ತು ಸಾರ್ವಜನಿಕರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರಷ್ಟೇ ಸೋಂಕಿನ ನಿಯಂತ್ರಣ ಸಾಧ್ಯ. ಕಳೆದ ವರ್ಷ ಪ್ರತೀ ಸೋಂಕಿತನೂ ಇಬ್ಬರಿಗೆ ಸೋಂಕು ಹರಡುತ್ತಿದ್ದರೆ ಈ ವರ್ಷ ಪ್ರತೀ ಸೋಂಕಿತ 3ರಿಂದ 5 ಜನರಿಗೆ ಸೋಂಕನ್ನು ಹರಡುವ ಸ್ಥಿತಿ ಇದೆ. ಅಷ್ಟೇ ಅಲ್ಲ, ಪ್ರತೀ ಸೋಂಕಿತನ ಬದಲಿಗೆ ಅದೇ ಪ್ರದೇಶದ 30 ಜನ ರೋಗಲಕ್ಷಣವಿಲ್ಲದವರ ಪರೀಕ್ಷೆ ಮಾಡದೇ ಇರುವ ಅಪಾಯವೂ ಎರಡನೇ ಅಲೆಯ ಈ ಸಂದರ್ಭದಲ್ಲಿ ಕಂಡುಬರುತ್ತಿದೆ. ಇದು ಬೇರೆಲ್ಲಕ್ಕಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರವರು. ದೇಶದೆಲ್ಲೆಡೆ ಜನರ ಓಡಾಟಕ್ಕೆ ಕಡಿವಾಣ ಹಾಕಿ ಲಸಿಕೆ ನೀಡುವ ಕೆಲಸಕ್ಕೆ ವೇಗ ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ.


ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿನ 18 ಹೋಟೆಲುಗಳನ್ನು ಕೋವಿಡ್ ಕೇರ್ ಸೆಂಟರ್​ಗಳಾಗಿ ಮಾರ್ಪಾಡಿಸಲಾಗಿತ್ತು. ರಾಜಧಾನಿಯಲ್ಲಿ ಸದ್ಯ 3 ಹೋಟೆಲುಗಳು ಕೋವಿಡ್ ಸೆಂಟರ್​ಗಳಾಗಿ ಲಭ್ಯವಿದ್ದು ಭವಿಷ್ಯದಲ್ಲಿ ಅವಶ್ಯಕತೆ ತಕ್ಕಂತೆ ಹೆಚ್ಚು ಹೋಟೆಲುಗಳನ್ನು ಇದಕ್ಕಾಗಿ ಬಳಸಲು ನಿರ್ಧರಿಸಲಾಗಿದೆ. 50ಕ್ಕಿಂತ ಹೆಚ್ಚು ಹಾಸಿಗೆಗಳುಳ್ಳ 1000ಕ್ಕೂ ಹೆಚ್ಚು ಹೋಟೆಲುಗಳು ಬೆಂಗಳೂರಿನಲ್ಲಿವೆ. ಅವುಗಳನ್ನು ಮಾತ್ರ ಕೋವಿಡ್ ಕೇರ್​ ಸೆಂಟರ್​ಗಳಾಗಿ ಬಳಸಲು ನಿಶ್ಚಯಿಸಲಾಗಿದೆ.

ಸದ್ಯದ ಮಟ್ಟಿಗೆ ದೊಡ್ಡ ಆಸ್ಪತ್ರೆಗಳ ಬಳಿಯಲ್ಲೇ ಇರುವ ಹೋಟೆಲುಗಳಿಗೆ ಆದ್ಯತೆ ಕೊಡಲಾಗುತ್ತಿದೆ. ಪ್ರತೀ ಹೋಟೆಲ್ ಕೂಡಾ ಒಂದು ಆಸ್ಪತ್ರೆಯ ಜೊತೆಗೆ ಕೆಲಸ ಮಾಡಲಿದ್ದು ಹೋಟೆಲಿನಲ್ಲಿರುವ ರೋಗಿಗಳ ಚಿಕಿತ್ಸೆ, ಪರೀಕ್ಷೆ ಮುಂತಾದ ಎಲ್ಲಾ ಜವಾಬ್ದಾರಿ ಸಂಬಂಧಿಸಿದ ಆಸ್ಪತ್ರೆಯದ್ದಾಗಿರುತ್ತದೆ. ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡುವ ವೈದ್ಯರೇ ಹೋಟೆಲುಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡಲಿದ್ದಾರೆ. ಹೀಗೆ ಮಾಡೋದ್ರಿಂದ ಹೋಟೆಲಿಗಾಗಿಯೇ ಹೆಚ್ಚುವರಿಯಾಗಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವುದು ತಪ್ಪುತ್ತದೆ.


ಸದ್ಯ ರಾಜಾಜಿನಗರದ ಸುಗುಣ ಆಸ್ಪತ್ರೆ, ಶೇಷಾದ್ರಿಪುರಂನ ಅಪೊಲೊ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ತಲಾ ಒಂದೊಂದು ಹೋಟೆಲುಗಳ ಸುಪರ್ದಿ ವಹಿಸಿಕೊಂಡಿವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ. “ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಹೋಟೆಲ್ ಮಾಲೀಕರ ಜೊತೆ ನಡೆಸಿದ ಸಭೆಗಳಲ್ಲಿ ಈ ಬಾರಿ ಆಸ್ಪತ್ರೆ ಸೇರುವ ಸೋಂಕಿತರ ಸಂಖ್ಯೆ ಕಡಿಮೆ ಇರುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ರೋಗಲಕ್ಷಣಗಳಿಲ್ಲದ ಬಹುತೇಕ ಸೋಂಕಿತರು ಈ ಬಾರಿ ತಂತಮ್ಮ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗಳಲ್ಲಿ ಪ್ರತ್ಯೇಕ ಕೋಣೆ ಮತ್ತು ಶೌಚಾಲಯ ವ್ಯವಸ್ಥೆ ಇರದಿರುವವನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಫುಲ್ ಆದರಷ್ಟೇ ಏಸಿಂಪ್ಟಮ್ಯಾಟಿಕ್ ಮತ್ತು ಮೈಲ್ಡ್ ಸಿಂಪ್ಟಮ್ಸ್ ಇರುವವರನ್ನು ಹೋಟೆಲುಗಳಿಗೆ ಶಿಫ್ಟ್ ಮಾಡಲಾಗುತ್ತದೆ ಎಂದಿದ್ದಾರೆ” ಎಂದು ಪಿ ಸಿ ರಾವ್ ತಿಳಿಸಿದ್ದಾರೆ.
ಈಗಾಗಲೇ ಕೋವಿಡ್ ಪರಿಸ್ಥಿತಿಯಿಂದ ಹೋಟೆಲುಗಳಿಗೆ ವ್ಯಾಪಾರ ನಡೆಯುತ್ತಿಲ್ಲ. ಇಂಥಾ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಬದಲಾದರೆ ಕನಿಷ್ಠ ಸಿಬ್ಬಂದಿಗೆ ವೇತನ ನೀಡುವುದರ ಜೊತೆಗೆ ಹೋಟೆಲ್ ನಡೆಸಲು ಸಾಧ್ಯವಿರುವಷ್ಟು ಆದಾಯವಾದರೂ ಬರುತ್ತದೆ, ಇದು ತಮ್ಮ ವಹಿವಾಟಿಗೂ ಅನುಕೂಲಕರ ಎನ್ನುವುದು ಹೋಟೆಲ್ ಮಾಲೀಕರ ಅಭಿಪ್ರಾಯ. ಬಿಬಿಎಂಪಿ ಇನ್ನೂ ಸೋಂಕಿತರಿರುವ ಹೋಟೆಲುಗಳಿಗೆ ಬಾಡಿಗೆ ನಿರ್ಧರಿಸಿಲ್ಲ, ಇದನ್ನೂ ಸೇರಿದಂತೆ ಮತ್ತಷ್ಟು ನಿರ್ಧರಗಳನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

Published by: Soumya KN
First published: April 17, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories