ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ, ಎಂಬಿ ಪಾಟೀಲ್​​ ನಡುವೇ ತೀವ್ರ ಪೈಪೋಟಿ: ಅಧ್ಯಕ್ಷರ ನೇಮಕಕ್ಕೆ ವಿಳಂಬ ಯಾಕೆ ಗೊತ್ತೇ?

ಡಿ.ಕೆ ಶಿವಕುಮಾರ್ ಆಯ್ಕೆಗಿಂತಲೂ ಎಂ.ಬಿ ಪಾಟೀಲ್ ಆಯ್ಕೆಯೇ ಸೂಕ್ತ, ಮುಂದಿನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬಹುದು ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮೂಲಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಎಂ.ಬಿ ಪಾಟೀಲ್, ಡಿ.ಕೆ. ಶಿವಕುಮಾರ್​.

ಎಂ.ಬಿ ಪಾಟೀಲ್, ಡಿ.ಕೆ. ಶಿವಕುಮಾರ್​.

 • Share this:
  ಬೆಂಗಳೂರು(ಜ.21): ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಯ್ತು. ಬರೋಬ್ಬರಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತು. ಇನ್ನು ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಗೆದ್ದರೆ, ಇನ್ನೆರಡು ಕ್ಷೇತ್ರಗಳಾದ ಶಿವಾಜಿನಗರ ಹಾಗು ಹುಣಸೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯ್ತು. ಈ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ನಾಯಕರು, ಸೋಲಿನ ನೈತಿಕ ಹೊಣೆ ಹೊತ್ತು ಪಟ್ಟದಿಂದ ಕೆಳಗಿಳಿಯುವ ಮನಸ್ಸು ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷ ಹಾಗು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇನ್ನು ಸಿದ್ದರಾಮಯ್ಯ ಆಪ್ತ ಬಳಗದಲ್ಲೇ ಗುರುತಿಸಿಕೊಂಡಿರುವ ದಿನೇಶ್ ಗುಂಡೂರಾವ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿ ಬರೋಬ್ಬರಿ ಒಂದು ತಿಂಗಳಾಯ್ತು. ಅಂದಿನಿಂದಲೂ ರಾಜೀನಾಮೆ ಅಂಗೀಕಾರ, ನೂತನ ಅಧ್ಯಕ್ಷರ ನೇಮಕಕ್ಕೆ ಭಾರೀ ಕಸರತ್ತು ನಡೆಯುತ್ತಿದೆ. ಸಭೆ ಮೇಲೆ ಸಭೆ ಮಾಡಿದರು ನೇಮಕದ ಆದೇಶ ಮಾಡಲು ಸಾಧ್ಯವಾಗ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್‌ನ ಈ ಕ್ರಮ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲಿ ಪ್ರಮುಖವಾದುದು ತಡವಾಗ್ತಿರೋದು ಯಾಕೆ ಅನ್ನುವುದು.

  ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಬಗ್ಗೆ ಮಹತ್ವದ ನಿರ್ಧಾರಕ್ಕೆ ಬರಲು ಹೈಕಮಾಂಡ್ ಪರದಾಡುತ್ತಿದೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಎಂ.ಬಿ ಪಾಟೀಲ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಯಾರಿಗೆ ಪಕ್ಷದ ಹೊಣೆಗಾರಿಕೆ ವಹಿಸಿದರೆ ಅನುಕೂಲಕರ ಎನ್ನುವ ಬಗ್ಗೆಯೂ ಕೂಲಂಕಷವಾಗಿ ಅಧ್ಯಯನ ನಡೆಸಲು ಸಮಿತಿಯಿಂದ ವರದಿ ಪಡೆದಿತ್ತು.

  ಹೈಕಮಾಂಡ್ ಸಮಿತಿ ವರದಿ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ ಸೋನಿಯಾ ಗಾಂಧಿ, ಅಂತಿಮವಾಗಿ ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಒಲವು ತೋರಿಸಿದ್ದಾರೆ‌ ಎನ್ನಲಾಗಿತ್ತು. ಆದರೆ ಸಿದ್ದರಾಮಯ್ಯ ಬಿಜೆಪಿ ಲಿಂಗಾಯತರನ್ನು ಓಲೈಸಿಕೊಂಡು ರಾಜ್ಯದಲ್ಲಿ ರಾಜಕಾರಣ ಮಾಡುತ್ತಿದೆ. ಹಾಗಾಗಿ ನಾವು ಲಿಂಗಾಯತರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಿದರೆ ಬಿಜೆಪಿಗೆ ಸೆಡ್ಡು ಹೊಡೆಯಲು ಅನುಕೂಲ ಎನ್ನುವ ಮೂಲಕ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಆಯ್ಕೆಗೆ ಟ್ರಬಲ್ ಆಗಿದ್ದಾರೆ.

  ಡಿ.ಕೆ ಶಿವಕುಮಾರ್ ಆಯ್ಕೆಗಿಂತಲೂ ಎಂ.ಬಿ ಪಾಟೀಲ್ ಆಯ್ಕೆಯೇ ಸೂಕ್ತ, ಮುಂದಿನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬಹುದು ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮೂಲಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: ಕಾಂಗ್ರೆಸ್​ ರಾಜ್ಯಾಧ್ಯಕ್ಷ ಹುದ್ದೆಗೆ ಡಿಕೆಶಿ?; ಕುಗ್ಗಿರುವ ಪಕ್ಷದ ವರ್ಚಸ್ಸನ್ನು ವೃದ್ಧಿಸಲು ಟ್ರಬಲ್ ಶೂಟರ್​ಗೆ ಮಣೆ ಹಾಕಿತಾ ಹೈಕಮಾಂಡ್?

  ಕಾಂಗ್ರೆಸ್ ಹೈಕಮಾಂಡ್ ಎದುರು ಸಿದ್ದರಾಮಯ್ಯ ಈ ವರಸೆ ತೆಗೆಯುತ್ತಿದ್ದ ಹಾಗೆ ಹೈಕಮಾಂಡ್ ನಾಯಕರ ಬಳಿಕ ಹಿರಿಯ ಕಾಂಗ್ರೆಸ್ಸಿಗರು ಮತ್ತೊಂದು ದಾಳ ಉರುಳಿಸಿದ್ದು, ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನದ ಜೊತೆಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನೂ ಕೊಡಲಾಗಿದೆ. ಈ ಎರಡು ಹುದ್ದೆಗಳನ್ನು ಬೇರ್ಪಡಿಸಿ, ಇಬ್ಬರಿಗೆ ಕೊಡಬಹುದು. ಇದರಿಂದ ಶಾಸಕರ ಮೇಲೆ ಹಿಡಿತ ಹಾಗು ಸರ್ಕಾರದ ವಿರುದ್ಧ ಹೋರಾಟಕ್ಕೆ ಅನುಕೂಲಕರ ಎಂದು ಪಟ್ಟು ಹಿಡಿದಿದ್ದಾರೆ.

  ಇನ್ನು, ಇದರಿಂದ ವಿಚಲಿತರಾಗಿರುವ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದೇ ಆದರೆ ನಾಲ್ವರು ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ. ನಾಲ್ವರು ಕಾರ್ಯಾಧ್ಯಕ್ಷರಾದರೆ ನಾನು ಅಧ್ಯಕ್ಷನಾಗಿ ಕೆಲಸ ಮಾಡಲ್ಲ. ನಿಮಗೆ ಬೇಕಾದವರನ್ನು ಅಧ್ಯಕ್ಷರನ್ನು ಮಾಡಿ, ನಾನು ಸಾಮಾನ್ಯ ಕಾರ್ಯಕರ್ತನಾಗಿ ಇರ್ತೇನೆ ಎಂದಿದ್ದಾರಂತೆ ಟ್ರಬಲ್ ಶೂಟರ್.

  ಒಟ್ಟಾರೆ ಇಬ್ಬರು ಘಟಾನುಘಟಿ ನಾಯಕರ ನಡುವೆ ಸಿಲುಕಿರುವ ಕಾಂಗ್ರೆಸ್ ಹೈಕಮಾಂಡ್ ಮುಂದೇನು ಮಾಡುವುದು ಎನ್ನುವ ತೊಳಲಾಟದಲ್ಲಿ ಸಿಲುಕಿದ್ದು, ಮಹತ್ವದ ನಿರ್ಧಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಪತ್ರ ಬರೆಯುತ್ತಿದ್ದು, ನೇಮಕ ಮಾಡಿ, ಇಲ್ಲಾ ಹಿಂದೆ ಇದ್ದವರೇ ಮುಂದುವರಿಯಿರಿ ಎಂದು ಹೇಳಿ ಎಂದು ಒತ್ತಾಯ ಮಾಡ್ತಿದ್ದಾರೆ.

  (ಲೇಖಕರು: ಮಂಜೇಗೌಡ, ಕೆ. ಮಲ್ಲೇನಹಳ್ಳಿ)
  First published: