ಕತ್ತಿ, ಕೋರೆ, ಶೆಟ್ಟಿ ಬಿಟ್ಟು ಕಡಾಡಿ, ಗಸ್ತಿಗೆ ಟಿಕೆಟ್ ಕೊಟ್ಟ ಬಿಜೆಪಿ ಹೈಕಮಾಂಡ್​ನ ಮರ್ಮವೇನು?

ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗಲು ಬಿ.ಎಲ್. ಸಂತೋಷ್ ಅವರೇ ಪ್ರಮುಖ ಕಾರಣಕರ್ತರೆನ್ನಲಾಗಿದೆ. ಹಾಗೆಯೇ ಈರಣ್ಣ ಕಡಾಡಿ ಅವರು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಆಪ್ತರಾಗಿದ್ದಾರೆ.

ಬಿಜೆಪಿ

ಬಿಜೆಪಿ

 • Share this:
  ಬೆಂಗಳೂರು(ಜೂನ್ 08): ರಾಜ್ಯ ರಾಜಕಾರಣದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ತಳಮಟ್ಟದ ಇಬ್ಬರು ಕಾರ್ಯಕರ್ತರಿಗೆ ರಾಜ್ಯಸಭಾ ಪ್ರವೇಶಿಸುವ ಅವಕಾಶ ಮಾಡಿಕೊಟ್ಟಿದೆ. ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಹೆಚ್ಚು ಹೆಸರೇ ಕೇಳದ ಈ ಇಬ್ಬರಿಗೆ ಟಿಕೆಟ್ ನೀಡಿದ್ದು ಒಂದು ಅಚ್ಚರಿಯಾದರೆ, ಬಿಜೆಪಿಯೊಳಗೆ ಬಂಡಾಯದ ಕಹಳೆ ಮೊಳಗಿಸಿದ್ದ ಉಮೇಶ್ ಕತ್ತಿ ಮತ್ತವರ ಬಳಗಕ್ಕೆ ಶಾಕ್ ಕೊಟ್ಟಿದ್ದು ಇನ್ನೊಂದು ಅಚ್ಚರಿ.

  ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಹರಸಾಹಸ ನಡೆಸಿದ್ದರು. ಅದಕ್ಕಾಗಿ ಅಸಮಾಧಾನಿತ ಶಾಸಕರ ಸಭೆ ನಡೆಸಿ ಒತ್ತಡ ತಂದಿದ್ದರು. ಹಾಗೆಯೇ, ಪ್ರಭಾಕರ್ ಕೋರೆ ಕೂಡ ರಾಜ್ಯಸಭಾ ಟಿಕೆಟ್​ಗೆ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇನ್ನೊಂದೆಡೆ ಪ್ರಕಾಶ್ ಶೆಟ್ಟಿ ಅವರು ಬಿ.ವೈ. ವಿಜಯೇಂದ್ರ ಮೂಲಕ ದೊಡ್ಡ ಲಾಬಿ ಮಾಡಿದ್ದರು. ರಾಜ್ಯ ಘಟಕದಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲು ರಮೇಶ್ ಕತ್ತಿ, ಪ್ರಭಾಕರ್ ಕೋರೆ ಮತ್ತು ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಹೈಕಮಾಂಡ್​ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಹೈಕಮಾಂಡ್ ಈ ಪಟ್ಟಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಬದಲಾಗಿ, ಎಲೆಮರೆಕಾಯಿಗಳಂತಿರುವ ಬೆಳಗಾವಿ ಬಿಜೆಪಿ ಪ್ರಭಾರಿ ಈರಣ್ಣ ಕಡಾಡಿ ಮತ್ತು ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಗಸ್ತಿ ಅವರಿಗೆ ಟಿಕೆಟ್ ಘೋಷಿಸಿದೆ.

  ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಅಖಾಡಕ್ಕೆ ದೇವೇಗೌಡ; ಮೋದಿ ಸರ್ಕಾರ ಹಣಿಯಲು ಗೌಡರಿಗೆ ಕೈ ಬೆಂಬಲ

  ಉಮೇಶ್ ಕತ್ತಿ ಬೆಳಗಾವಿ ರಾಜಕಾರಣವನ್ನು ತನ್ನ ಹಿಡಿತಕ್ಕೆ ಇಟ್ಟುಕೊಳ್ಳುವ ಪ್ರಯತ್ನದಲ್ಲಿದ್ದರೆ, ಪಕ್ಷವು ಅವರ ಊರಿನ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಪವರ್ ಬ್ಯಾಲೆನ್ಸ್ ಮಾಡುತ್ತಿದೆಯಾ ಎಂದನಿದೇ ಇರದು. ಹಾಗೆಯೇ, ಪದವಿ ಇಲ್ಲವೆಂದು ಸಂಪೂರ್ಣ ನಿಷ್ಕ್ರಿಯಗೊಂಡಿದ್ದ ಪ್ರಭಾಕರ್ ಕೋರೆಗೂ ಹೈಕಮಾಂಡ್ ಒಂದು ಎಚ್ಚರಿಕೆಯ ಕರೆಗಂಟೆ ನೀಡಿದಂತಿದೆ. ಇನ್ನು, ಪ್ರಕಾಶ್ ಶೆಟ್ಟಿ ಅವರಿಗೆ ಯಾವುದೇ ಲಾಬಿ ಕೆಲಸ ಮಾಡುವುದಿಲ್ಲವೆಂಬ ಸಂದೇಶ ರವಾನೆ ಮಾಡಿದಂತಿದೆ.

  ಮೂಲಗಳ ಪ್ರಕಾರ, ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗಲು ಬಿ.ಎಲ್. ಸಂತೋಷ್ ಅವರೇ ಪ್ರಮುಖ ಕಾರಣಕರ್ತರೆನ್ನಲಾಗಿದೆ. ಹಾಗೆಯೇ ಈರಣ್ಣ ಕಡಾಡಿ ಅವರು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಆಪ್ತರಾಗಿದ್ದಾರೆ. ಬೆಳಗಾವಿಯ ಬಿಜೆಪಿ ಪವರ್ ಪೊಲಿಟಿಕ್ಸ್​ನಲ್ಲಿ ಉಮೇಶ್ ಕತ್ತಿಗಿಂತ ತಾನು ಪ್ರಬಲ ಎಂದು ಸುರೇಶ್ ಅಂಗಡಿ ಸಾಬೀತು ಮಾಡಲು ಹೊರಟಂತಿದೆ.

  First published: