ಬೆಂಗಳೂರು (ಸೆ. 11): ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆ ಕಾದಾಟ ಬೆಂಗಳೂರಿಗೆ ಬಂದು ತಲುಪಿದೆ. ಜೆಡಿಎಸ್ ಬೆಂಬಲವಿಲ್ಲದೆ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಿಲ್ಲ. ಕಾಂಗ್ರೆಸ್ - ಬಿಜೆಪಿ ಎರಡೂ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ. ಹೀಗಾಗಿಜೆಡಿಎಸ್ ಸಖ್ಯ ಬೆಳೆಸಲು ಎರಡೂ ರಾಷ್ಟ್ರೀಯ ಪಕ್ಷಗಳು ಹಿಂದೆ ಬಿದ್ದಿವೆ. ಅತ್ತ ಕಾಂಗ್ರೆಸ್ ಯಾವ ತ್ಯಾಗಕ್ಕಾದರೂ ಸಿದ್ಧ ಎನ್ನುತ್ತಿದೆ, ಬಿಜೆಪಿ ಕೂಡ ಹೆಚ್ಡಿಕೆ ಜೊತೆ ಚರ್ಚೆ ನಡೆಸಿದೆ. ಕಿಂಗ್ ಮೇಕರ್ ಜೆಡಿಎಸ್ ತೀರ್ಮಾನವೇ ಇಲ್ಲಿ ಅಂತಿಮ. ಹೀಗಾಗಿ ಜೆಡಿಎಸ್ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಕಲಬುರಗಿ ಮಹಾನಗರ ಪಾಲಿಕೆ ಫಲಿತಾಂಶ ಅತಂತ್ರವಾಗಿದೆ. ಕಾಂಗ್ರೆಸ್ 27 ವಾರ್ಡ್, ಬಿಜೆಪಿ 23 ವಾರ್ಡ್ ಗೆದಿದ್ದರೂ, ಜೆಡಿಎಸ್ ಸಹಾಯವಿಲ್ಲದೇ ಅಧಿಕಾರ ಸಿಗೋದಿಲ್ಲ. ಹೀಗಾಗಿ ಜೆಡಿಎಸ್ ಬೆಂಬಲ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಜಿದ್ದಿಗೆ ಬಿದ್ದಿದ್ದಾರೆ. ಶತಾಯ ಗತಾಯ ಅಧಿಕಾರ ಪಡೆಯಲು ಕಾಂಗ್ರೆಸ್ ಹಲವು ಸುತ್ತಿನ ಮಾತುಕತೆ ನಡೆಸಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತನಾಡಿದ್ದಾರೆ. ಇಂದು ಕೂಡ ಹತ್ತಕ್ಕೂ ಹೆಚ್ಚು ಕಲಬುರಗಿ ಕಾಂಗ್ರೆಸ್ ಕಾರ್ಪೋರೆಟರ್‌ಗಳು ಖರ್ಗೆ ನಿವಾಸಕ್ಕೆ ಭೇಟಿ ನೀಡಿದರು. ಪ್ರಿಯಾಂಕ್ ಖರ್ಗೆ ಜೊತೆ ಚರ್ಚಿಸಿದರು. ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿ ಮಾಡಿದ ಕಾರ್ಪೋರೇಟರ್‌ಗಳು ಇದೇ ವಿಚಾರವಾಗಿ ಚರ್ಚೆ ನಡೆಸಿದ್ರು. ಒಂದು ಹೆಜ್ಜೆ ಮುಂದೆ ಹೋಗಿ ಕಾಂಪ್ರೊಮೈಸ್ ಆಗಲು ರೆಡಿ ಇರುವ ಕಾಂಗ್ರೆಸ್, ಮೇಯರ್ ಹುದ್ದೆಯನ್ನೂ ತ್ಯಾಗ ಮಾಡುವ ಚಿಂತನೆಯಲ್ಲಿ ತೊಡಗಿದೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಯಾವ ತ್ಯಾಗಕ್ಕೂ ಸಿದ್ಧ ಎನ್ನುತ್ತಿದ್ದಾರಂತೆ. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಜೆಡಿಎಸ್, ಕಾಂಗ್ರೆಸ್ ಮುಂದೆ ಕೆಲವು ಡಿಮ್ಯಾಂಡ್ ಇಟ್ಟಿದೆ. ಡಿಮ್ಯಾಂಡ್‌ಗಳ ಚೌಕಾಸಿಯಲ್ಲಿರುವ ಕಾಂಗ್ರೆಸ್ ಯಾವ ನಡೆ ಇಡಲಿದೆ ಎಂಬುದು ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.
ನೋಟಿಫಿಕೇಷನ್ ಹೊರಡಿಸದೆ ಅಧಿಕಾರ ದುರುಪಯೋಗ: ಡಿಕೆಶಿ
ಕಲ್ಬುರ್ಗಿಯಲ್ಲಿ ನಮಗೆ ಒಳ್ಳೆಯ ಫಲಿತಾಂಶ ನಮಗೆ ಸಿಕ್ಕಿದೆ. ಬಿಜೆಪಿ ಅವರು ಇಡೀ ಸರ್ಕಾರ ಅಲ್ಲಿ ಇದ್ದು ಕಡಿಮೆ ಗೆದ್ದಿದ್ದಾರೆ. ನಮ್ಮವರೇ ಅಲ್ಲಿ ಹೋಗಿ ಗೆದ್ದಿದ್ದಾರೆ. ನಾಳೆ ಹುಬ್ಬಳ್ಳಿ ಮತ್ತು ಬೆಳಗಾವಿ ಹೋಗ್ತಿದ್ದೇನೆ. ಸದಸ್ಯರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತೇನೆ. ಕಲ್ಬುರ್ಗಿ ವಿಚಾರದಲ್ಲಿ ನಮ್ಮ ಖರ್ಗೆ ಸಾಹೇಬ್ರು ದೇವೇಗೌಡರ ಜತೆ ಚರ್ಚೆ ಮಾಡಿದ್ದಾರೆ. ಬಿಜೆಪಿ ನೋಟಿಫಿಕೇಷನ್ ಹೊರಡಿಸಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಕೆಲಸ ಬಿಜೆಪಿ ಮಾಡ್ತಿದೆ. ಪಕ್ಷಕ್ಕೆ ಲಾಭ ಆಗುವ ರೀತಿ ಏನು ತೀರ್ಮಾನ ಮಾಡಬೇಕೋ ಅದನ್ನ ಮಾಡುತ್ತೇವೆ. ಜನರು ಅಲ್ಲೊಂದು ತೀರ್ಮಾನ ಕೊಟ್ಟಿದ್ದಾರೆ. ಆ ತೀರ್ಮಾನಕ್ಕೆ ತಕ್ಕಂತೆ ನಿರ್ಧಾರ ಆಗುತ್ತೆ. ಜೆಡಿಎಸ್ ನಾಯಕರ ಜತೆ ಮಾತನಾಡ್ತೀರಾ ಅನ್ನೋ ಪ್ರಶ್ನೆಗೆ ಪಕ್ಷಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಕಲಬುರ್ಗಿ ಪಾಲಿಕೆ: ಜೆಡಿಎಸ್ ನಡೆ ನಿಗೂಢ; ಬಿಜೆಪಿಗೆ ಅಧಿಕಾರ ತಪ್ಪಿಸಲು ಕೈ ಪ್ಲಾನ್
ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಬರಲು ಸಿದ್ಧರಿದ್ದಾರೆ: ಪ್ರಿಯಾಂಕ್ ಖರ್ಗೆ
ಸದ್ಯದ ಸ್ಥಿತಿಗತಿ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಕೆಲ ಕಾರ್ಪೋರೇಟರ್ ಗಳು ಗೆದ್ದ ಬಳಿಕ ಡಿಕೆಶಿ ಭೇಟಿ ಮಾಡಿದ್ದಾರೆ. ಜೆಡಿಎಸ್ ಜೊತೆಗೆ ಚರ್ಚೆ ನಡೆದಿದೆ. ಜೆಡಿಎಸ್ ಅವರ ಪಕ್ಷದ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ನಾವು ನಮ್ಮ ಪಕ್ಷದ ಹಿತದ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಸದ್ಯಕ್ಕೆ ಅವರು ಅವರ ಡಿಮ್ಯಾಂಡ್ ಇಟ್ಡಿದ್ದಾರೆ. ಮೊದಲು ಸರ್ಕಾರ ನೋಟಿಫಿಕೇಷನ್ ಹೊರಡಿಸಲಿ. ಸದಸ್ಯರ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಬಿಜೆಪಿಯವರು ನಮ್ಮ ಸದಸ್ಯರಿಗೆ ಆಮಿಷ ಒಡ್ತಿದ್ದಾರೆ. ಬೋರ್ಡ್ ಮೆಂಬರ್ ಮಾಡ್ತೀವಿ, ಸ್ಥಾಯಿ ಸಮಿತಿ ಚೇರ್ ಮನ್ ಮಾಡ್ತೀವಿ ಅಂತ ಆಮಿಷ ಒಡ್ತಿದ್ದಾರೆ. ಬೈ ಹುಕ್ ಆರ್ ಕುಕ್ ಸರ್ಕಾರ ಎಲ್ಲ ರೀತಿಯಲ್ಲಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಳ್ಳುತ್ತಿದೆ. ಅವರಿಗೆ ಮನಸ್ಸಿದ್ದರೆ ನೋಟಿಫಿಕೇಷನ್ ದಿನಾಂಕ ಪ್ರಕಟ ಮಾಡಬೇಕು. ಆದರೆ ಹುಬ್ಬಳ್ಳಿ ಕಲಬುರಗಿಯ ಎರಡೂ ಕಡೆ ಬಿಜೆಪಿಗೆ ಸಂಖ್ಯಾ ಬಲ ಇಲ್ಲ. ಹೀಗಾಗಿ ಅವರು ನೋಟಿಫಿಕೇಷನ್ ಹೊರಡಿಸುತ್ತಿಲ್ಲ. ಜೆಡಿಎಸ್ ನವರೂ ಕೂಡ ಕಲಬುರ್ಗಿ ಹಿತವನ್ನು ಬಯಸುವುದಾದರೆ ನಮ್ಮ ಜೊತೆ ಕೈ ಜೋಡಿಸಬೇಕು. ನಮ್ಮ ಸಂಖ್ಯಾ ಬಲ ಜಾಸ್ತಿ ಇರುವುದರಿಂದ ಜೆಡಿಎಸ್ ಜೊತೆ ಕೆಲವಷ್ಟು ಚರ್ಚೆ ನಡೆಯುತ್ತಿದೆ. ಕೆಲ ಬಿಜೆಪಿ ಸದಸ್ಯರೇ ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಆದರೆ ಸಿದ್ದಾಂತ ಹೊಂದಾಣಿಕೆ ಆಗಬೇಕಲ್ಲ. ನಾನು ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ನಾಯಕರ ಜೊತೆಗೆ ಮಾತನಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಹೆಚ್ಡಿಕೆ ಭೇಟಿ ಮಾಡಿದ ಆರ್.ಅಶೋಕ್:
ಇತ್ತ ಕಾಂಗ್ರೆಸ್ ಭಾರೀ ಪ್ರಯತ್ನ ಮಾಡುತ್ತಿದ್ದರೆ, ಅತ್ತ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಜೆಡಿಎಸ್ ಪಕ್ಷದ ಸದಸ್ಯರ ಬೆಂಬಲ ಪಡೆಯಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ದೇವೇಗೌಡರ ಉತ್ತಮ ಒಡನಾಟವನ್ನೂ ಇಲ್ಲಿ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಜೆಡಿಎಸ್ ಬಿಜೆಪಿ ಮೈತ್ರಿಕೂಟ ಸ್ಥಾಪನೆಗೆ ಹಲವು ರೀತಿಯಲ್ಲಿ ಸ್ಟ್ರಾಟಜಿ ರೂಪಿಸ್ತಿದೆ. ಇದರ ಭಾಗವಾಗಿ ಕಂದಾಯ ಸಚಿವ ಆರ್.ಅಶೋಕ್, ಹೆಚ್.ಡಿ.ಕುಮಾರಸ್ವಾಮಿಯವರ ಬಿಡದಿ ತೋಟದ ಮನೆಗೆ ತೆರಳಿದರು. ಹೆಚ್ಡಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿ, ಕಲಬುರಗಿ ಪಾಲಿಕೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿಯ ಈ ಮನವಿಗೆ ಯಾವುದೇ ಗ್ರೀನ್ ಸಿಗ್ನಲ್ ನೀಡದ ಕುಮಾರಸ್ವಾಮಿ, ಸೋಮವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.
ಸೋಮವಾರ ಸಂಜೆ ತೀರ್ಮಾನ:
ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸೋಮವಾರ ಎಲ್ಲ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಮಾಡುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಪ್ರತಿಷ್ಠೆಯ ಕಣವಾಗಿರುವ ಕಲಬುರಗಿ ಪಾಲಿಕೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಇಳಿದಿವೆ. ತೆನೆ ಪಕ್ಷದ ನಾಯಕರ ಮನವೊಲಿಕೆಗೆ ನಾನಾ ಕಸರತ್ತು ನಡೆಯುತ್ತಿದೆ. ಇದೆಲ್ಲದರ ಜೊತೆಗೆ ತಮಗೆ ಬೆಂಬಲ ಸಿಕ್ಕರೆ ಮಾತ್ರ ಮೇಯರ್ ಚುನಾವಣೆ ನೋಟಿಫಿಕೇಷನ್ ಹೊರಡಿಸಲು ಬಿಜೆಪಿ ಪ್ಲಾನ್ ಮಾಡ್ತಿದೆ. 4 ವಾರ್ಡ್ ಗಳಲ್ಲಿ ಗೆದ್ದಿರುವ ಜೆಡಿಎಸ್ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಕಲಬುರಗಿ ಕಾದಾಟ ಹೇಗೆ ಬೇಕಾದರೂ ಟರ್ನ್ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ