ರೆಸಾರ್ಟ್​ ರಾಜಕಾರಣ, ಕುದುರೆ ವ್ಯಾಪಾರ, ಪೂಜೆ; ಇದು ಗದ್ದುಗೆ ಗುದ್ದಾಟದ ಹೈಲೈಟ್ಸ್​!


Updated:May 16, 2018, 8:33 PM IST
ರೆಸಾರ್ಟ್​ ರಾಜಕಾರಣ, ಕುದುರೆ ವ್ಯಾಪಾರ, ಪೂಜೆ; ಇದು ಗದ್ದುಗೆ ಗುದ್ದಾಟದ ಹೈಲೈಟ್ಸ್​!

Updated: May 16, 2018, 8:33 PM IST
- ಶರತ್​ ಶರ್ಮ ಕಲಗಾರು, ನ್ಯೂಸ್​ 18 ಕನ್ನಡ

ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್​, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳೂ ತಮ್ಮೆಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಬಿಜೆಪಿ ಬಹುಮತ ಸಾಭೀತು ಮಾಡಲು ಕುದುರೆ ವ್ಯಾಪಾರಕ್ಕಿಳಿದಿದೆ. ಇದರ ಭಾಗವಾಗಿ ಬಿಜೆಪಿ ಪರ ವೀರಶೈವ ಪಂಚ ಪೀಠದ ಮಠಾಧೀಶರೂ ಕೂಡ ಅಖಾಡಕ್ಕಿಳಿದಿದ್ದಾರೆ.

ಕಾಂಗ್ರೆಸ್​ನಲ್ಲಿರುವ ವೀರಶೈವ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೆ ಮಠಾಧೀಶರು ಕೈ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಒಕ್ಕಲಿಗ ಶಾಸಕರ ಮೇಲೆ ಜೆಡಿಎಸ್​ ಕಣ್ಣಿಟ್ಟಿದೆ. ಜತೆಗೆ ಅಹಿಂದ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಕಾಂಗ್ರೆಸ್​ ಪ್ರಯತ್ನಿಸುತ್ತಿದೆ. ಒಟ್ಟಿನಲ್ಲಿ ಮೂರೂ ಪಕ್ಷಗಳು ಬಹುಮತ ಸಾಭೀತಿಗೆ ಶಾಸಕರ ಬೇಟೆಗಿಳಿದಿವೆ.

ಜಾತಿ ಪ್ರೇಮದ ಆಧಾರದ ಮೇಲೆ ಮೂರೂ ಪಕ್ಷಗಳು ಆಪರೇಷನ್​ಗೆ ಮುಂದಾಗಿದ್ದಾರೆ. ಕುಮಾರಸ್ವಾಮಿ, ಬಿಎಸ್​ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಈ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅಹಿಂದ ವರ್ಚಸ್ಸು ಸಿದ್ದರಾಮಯ್ಯ ಅವರಿಗಿದೆ. ಆ ಕಾರಣಕ್ಕಾಗಿಯೇ ಅಹಿಂದ ಶಾಸಕರನ್ನು ಮೈತ್ರಿ ಸರ್ಕಾರಕ್ಕೆ ಸೆಳೆಯುವಂತೆ ಕುಮಾರಸ್ವಾಮಿ ಮುಂದಾಗಿದ್ದಾರೆ.

ಅಧಿಕಾರ ಸ್ಥಾಪನೆಗಾಗಿ ಪ್ರತಿ ಕ್ಷಣ ಒಂದಿಲ್ಲೊಂದು ಬೆಳವಣಿಗೆಗಳು ರಾಜ್ಯದಲ್ಲಿ ಆಗುತ್ತಿವೆ. ಸದ್ಯ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​, ಮಲ್ಲಿಕಾರ್ಜುನ್​ ಖರ್ಗೆ ಮತ್ತಿತರ ಕಾಂಗ್ರೆಸ್​ ಮತ್ತು ಜೆಡಿಎಸ್​ ಹಿರಿಯ ನಾಯಕರು ಶಾಸಕರ ಬೇಟೆಗಿಳಿದ್ದಾರೆ. ಜೆಡಿಎಸ್​ ಮತ್ತು ಕಾಂಗ್ರೆಸ್​ ಎರಡೂ ಪಕ್ಷಗಳಿಗೆ ಕರ್ನಾಟಕದಲ್ಲಿ ಅಧಿಕಾರ ಬೇಕೇ ಬೇಕು ಎಂಬ ಸ್ಥಿತಿಯಿದೆ. ರಾಜ್ಯಗಳ ಮೇಲೆ ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್​ಗೆ ಕರ್ನಾಟಕವನ್ನು ಬಿಟ್ಟುಕೊಟ್ಟರೆ 2019ರ ಲೋಕ ಸಭೆ ಚುನಾವಣೆಗೆ ಸ್ಪರ್ದಿಸಲು ನೈತಿಕ ಬಲ ಕುಗ್ಗಿ ಹೋಗಲಿದೆ.

ಜತೆಗೆ ಕಳೆದ ಹತ್ತು ವರ್ಷಗಳಿಂದ ಅಧಿಕಾರ ಕೇಂದ್ರದಲ್ಲಿರದ ಜೆಡಿಎಸ್​ಗಿದು ಅಂತಿಮ ಅವಕಾಶ. ಆದರೆ ಬಿಜೆಪಿ ಹೈಕಮಾಂಡ್​ ಮತ್ತು ಹಿರಿಯ ನಾಯಕರು ಶತಾಯ ಗತಾಯ ಬಹುಮತ ಸಾಭೀತು ಮಾಡಲು ಮುಂದಾಗಿದ್ದಾರೆ. ಗುರುವಾರ ಮುಂಜಾನೆ 9.30ಕ್ಕೆ ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಬಿಎಸ್​ವೈ ಗುರುವಾರ ಮುಂಜಾನೆ ಪ್ರಮಾಣವಚನ ಸ್ವೀಕಾರ ಮಾಡಿದರೆ, ನಂತರ ಬಹುಮತ ಸಾಭೀತಿಗೆ ರಾಜ್ಯಪಾಲರು 10 ದಿನಗಳ ಸಮಯಾವಕಾಶ ಸಿಕ್ಕಿದೆ.

ಯಡಿಯೂರಪ್ಪ ಅವರ ಮನವಿಯಂತೆ ಏಳು ದಿನಗಳ ಅವಕಾಶ ಕೊಟ್ಟಲ್ಲಿ, ಕುದುರೆ ವ್ಯಾಪಾರಕ್ಕೆ ಹೆಚ್ಚು ಸಮಯ ಸಿಗಲಿದೆ. ಮತ್ತು ಅಷ್ಟು ದಿನಗಳ ಕಾಲ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರನ್ನು ಒಟ್ಟಾಗಿಟ್ಟುಕೊಳ್ಳುವುದೂ ಕಷ್ಟದ ಮಾತು.
Loading...

ಒಂದೆಡೆ ಕುದುರೆ ವ್ಯಾಪಾರ, ರೆಸಾರ್ಟ್​ ರಾಜಕಾರಣಕ್ಕೆ ಮುಂದಾದ ರಾಜಕೀಯ ಪಕ್ಷಗಳು ಪೂಜೆ ಪುನಸ್ಕಾರಗಳನ್ನೂ ಮಾಡಿಸುತ್ತಿವೆ. ನೆಚ್ಚಿನ ಜ್ಯೋತಿಷಿಗಳ ಬಳಿ ಶಕುನಗಳನ್ನೂ ಕೇಳುತ್ತಿದ್ದಾರೆ. ರಾಜಕೀಯ ಮುಖಂಡರ ಬೆಂಬಲಿಗರು ಪೂಜೆಗಳನ್ನು ರಾಜ್ಯದ ಹಲವೆಡೆ ಮಾಡಿಸಿದ್ದಾರೆ. ಆ ಮೂಲಕ ಅವರ ನೆಚ್ಚಿನ ನಾಯಕ ಅಧಿಕಾರ ಗದ್ದುಗೆಗೇರಲಿ ಎಂಬ ಆಸೆ ಹೊರ ಹಾಕಿದ್ದಾರೆ. ಆದರೆ ಅಂತಿಮವಾಗಿ ಯಾರ ಪಾಲಿಗೆ ಕರ್ನಾಟಕ ಒಲಿಯಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

ಬಿಜೆಪಿ ಮೂಲಗಳು ತಿಳಿಸುವಂತೆ, ಈಗಾಗಲೇ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಕೆಲಸ ಶಾಸಕರು ಬಿಜೆಪಿ ಜತೆ ನಿರಂತರ ಸಂಪರ್ಕದಲ್ಲಿದ್ದು, ಬಹುಮತ ಸಾಭೀತು ಮಾಡಲಿದ್ದಾರೆ. ಒಂದೋ ಶಾಸಕರು ಗೈರು ಹಾಜರಾಗುತ್ತಾರೆ ಅಥವಾ ಅಡ್ಡಮತದಾನ ಮಾಡುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಇತ್ತ ಜೆಡಿಎಸ್​ ಮತ್ತು ಕಾಂಗ್ರೆಸ್​ ಕೂಡ ಅದೇ ರೀತಿಯ ವಿಶ್ವಾಸ ಹೊಂದಿದೆ.

ಕಾಂಗ್ರೆಸ್​ ಮುಖಂಡ ಡಿ.ಕೆ. ಶಿವಕುಮಾರ್​ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್​ ಶಾಸಕರ ಆಪರೇಷನ್​ಗೆ ಬಿಜೆಪಿ ಕೈಹಾಕಿದರೆ, ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಆಪರೇಷನ್​ ಮಾಡಲಿದೆ ಎಂದು ಶಿವಕುಮಾರ್​ ಹೇಳಿದ್ದಾರೆ. ಗೋವಾ, ಮಿಝೋರಾಮ್​, ಮಣಿಪುರದಲ್ಲಿ ಬಹುಮತವಿಲ್ಲದಿದ್ದರೂ ಬಿಜೆಪಿ ಸರ್ಕಾರ ಸ್ಥಾಪನೆಯನ್ನು ಮಾಡಿತ್ತು. ಇದನ್ನೇ ಈಗ ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್​ ಮತ್ತು ಜೆಡಿಎಸ್​, ಬಹುಮತಕ್ಕೆ ಎರಡೂ ಪಕ್ಷಗಳು ಲಿಖಿತ ಬೆಂಬಲ ನೀಡಿದ್ದರೂ, ಸರ್ಕಾರ ಸ್ಥಾಪನೆಗೆ ಆಹ್ವಾನ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

ರಾಜ್ಯಪಾಲರ ನಡೆಯ ಬಗ್ಗೆ ಸಾರ್ವಕಜನಿಕವಾಗಿ ಬೇಸರ ವ್ಯಕ್ತವಾಗಿದೆ. ಆದರೆ ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರವಾಗಿರುವುದರಿಂದ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಆದರೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಕಾಂಗ್ರೆಸ್​ ನಿರ್ಧರಿಸಿದೆ. ಇಂದು ರಾತ್ರಿಯೇ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನಿವಾಸಕ್ಕೆ ತೆರಳಲಿರುವ ಕಾಂಗ್ರೆಸ್​ ಮುಖಂಡರ ನಿಯೋಗ, ದೂರು ಸಲ್ಲಿಸಲಿದೆ.

ಕಡೆಯ ಕ್ಷಣದ ಹಗ್ಗಜಗ್ಗಾಟಕ್ಕೆ ಕರ್ನಾಟಕ ಸಾಕ್ಷಿಯಾಗಿದ್ದು, ಅಂತಿಮವಾಗಿ ಅಧಿಕಾರ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕು.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ