ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತು: ದೆಹಲಿಯಲ್ಲಿ ಸಿದ್ದರಾಮಯ್ಯ; ಎಂಬಿ ಪಾಟೀಲ್​, ಡಿಕೆಶಿ? ಯಾರಿಗೆ ಪಟ್ಟ?

ವೇಣುಗೋಪಾಲ್​ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಧ್ಯಕ್ಷರು ಯಾರಾದರೆ ಉತ್ತಮ ಎಂಬ ಬಗ್ಗೆ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್ ಬಿಟ್ಟಿದ್ದು, ಎಂದಿದ್ದಾರೆ

news18-kannada
Updated:January 14, 2020, 2:21 PM IST
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತು: ದೆಹಲಿಯಲ್ಲಿ ಸಿದ್ದರಾಮಯ್ಯ; ಎಂಬಿ ಪಾಟೀಲ್​, ಡಿಕೆಶಿ? ಯಾರಿಗೆ ಪಟ್ಟ?
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು (ಜ.14): ಸಂಕ್ರಾಂತಿಯೊಳಗೆ ಕೆಪಿಸಿಸಿಗೆ ನೂತನ ಸಾರಥಿ ನೇಮಿಸಲು ಮುಂದಾಗಿರುವ ಹೈ ಕಮಾಂಡ್​ ಭೇಟಿಗೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಒಂದೆಡೆ ಡಿಕೆ ಶಿವಕುಮಾರ್​ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಸಿದ್ದರಾಮಯ್ಯ ಎಂಬಿ ಪಾಟೀಲ್​ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಈ ಹಂತದಲ್ಲಿ ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್​ ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ಜೊತೆ ಎಂಬಿ ಪಾಟೀಲ್​ ಕೂಡ ದೆಹಲಿಗೆ ತೆರಳಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಡಿಕೆ ಶಿವಕುಮಾರ್​ ಬದಲು ತಮಗೆ ನಿಷ್ಠರಾಗಿರುವ ಎಂಬಿ ಪಾಟೀಲ್​ರನ್ನು ಅಧ್ಯಕ್ಷ ಗಾದಿಗೇರಿಸಲು ಸಿದ್ದರಾಮಯ್ಯ ಕೂಡ ತಮ್ಮೆಲ್ಲಾ ಪ್ರಯತ್ನ ಮುಂದುವರೆಸಿದ್ದಾರೆ. ಜತೆಗೆ ಕಾಂಗ್ರೆಸ್​ ಪಕ್ಷದೊಳಗೂ ಎಂಬಿ ಪಾಟೀಲ್​ ಪರ ಹೆಚ್ಚಿನ ಶಾಸಕರ ಒಲವಿದೆ ಎನ್ನಲಾಗುತ್ತಿದೆ.

ಸೋನಿಯಾ ಗಾಂಧಿಯವರನ್ನು ಸಿದ್ದರಾಮಯ್ಯ ಇಂದು ಸಂಜೆ ಭೇಟಿ ಮಾಡಲಿದ್ದಾರೆ. ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್​ರನ್ನು​ ಭೇಟಿ ಮಾಡಿದ ಸಿದ್ದರಾಮಯ್ಯ ಸುಮಾರು ಒಂದು ಗಂಟೆ ಕಾಲ ಸುದೀರ್ಘ ಮಾತುಕತೆ ನಡೆಸಿದರು.

ದೆಹಲಿಯ ನರ್ಮದಾ ಅಪಾರ್ಟ್​​ಮೆಂಟ್​​​​ನಲ್ಲಿ ಭೇಟಿ ಮಾಡಿದ ಸಿದ್ದರಾಮಯ್ಯ, ತಮ್ಮ ಬೆಂಬಲಿಗರನ್ನೇ  ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂಬ ಮನವಿಯನ್ನು ಸಲ್ಲಿಸಿದರು. ವೈಯಕ್ತಿಕ ವರ್ಚಸ್ಸು, ಜಾತಿ, ಕಾರ್ಯಕ್ಷಮತೆ ನೋಡಿ ಆಯ್ಕೆ ಮಾಡಬೇಕು. ಒಕ್ಕಲಿಗರಿಗೆ ಕೊಡಬೇಕೆನಿಸಿದರೆ ಕೃಷ್ಣಭೈರೇಗೌಡ ಅವರಿಗೆ ನೀಡಿ, ಇನ್ನು ಲಿಂಗಾಯತರ ಪೈಕಿ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆಗೆ ಸ್ಥಾನ ನೀಡಿ. ಈ ಮೂಲಕ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಿದಂತೆ ಆಗುತ್ತದೆ ಎಂದು ಸಿದ್ದರಾಮಯ್ಯ ವೇಣುಗೋಪಾಲ್​ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ್​ ಆಯ್ಕೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್​ ಪಕ್ಷದ ಅಧ್ಯಕ್ಷರಾದರೆ, ತಮ್ಮ ವರ್ಚಸ್ಸಿಗೆ ಕುಂದು ಬರುವ ಸಾಧ್ಯತೆ ಮನಗಂಡಿರುವ ಸಿದ್ದರಾಮಯ್ಯ, ಈ ಮೂಲಕ ತಮ್ಮ ಬೆಂಬಲಿಗರಿಗೇ ಸ್ಥಾನ ನೀಡಬೇಕು ಎಂದು ಬಯಸಿದ್ದಾರೆ ಎನ್ನಲಾಗುತ್ತಿದೆ.

ಡಿಕೆ ಶಿವಕುಮಾರ್​ ಹೊರತಾಗಿ ಕೆಎಚ್​ ಮುನಿಯಪ್ಪ ಕೂಡ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬೆಂಬಲಿಸಿ ಶಾಸಕರಾದ ಎಂ.ಬಿ. ಪಾಟೀಲ್, ಜಮೀರ್, ಆರ್​.ವಿ ದೇಶಪಾಂಡೆ, ಭೈರತಿ ಸುರೇಶ್, ಭೀಮಾನಾಯಕ್, ರಾಘವೇಂದ್ರ ಹಿಟ್ನಾಳ್, ಐವಾನ್ ಡಿಸೋಜಾ, ಪ್ರಕಾಶ್ ರಾಥೋಡ್, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿದ್ದು, ಪಕ್ಷದ ನಾಯಕನ ಪರ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

ಅಭಿಪ್ರಾಯ ತಿಳಿಸಿದ್ದೇನೆ, ನಿರ್ಧಾರ ಹೈ ಕಮಾಂಡ್​ಗೆ ಸೇರಿದ್ದು: ವೇಣುಗೋಪಾಲ್​ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಧ್ಯಕ್ಷರು ಯಾರಾದರೆ ಉತ್ತಮ ಎಂಬ ಬಗ್ಗೆ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್ ಬಿಟ್ಟದ್ದು. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಟೇಕಾಫ್ ಕೂಡಾ ಆಗಿಲ್ಲ. ಇದನ್ನು ಈ ಹಿಂದೆ ಜಗದೀಶ್ ಶೆಟ್ಟರ್ ಹೇಳಿದ್ದರು. ರಾಜ್ಯ ಸರ್ಕಾರದ ಬಳಿ ದುಡ್ಡು ಇಲ್ಲ. ಜೊತೆಗೆ ಕೆಲಸ‌ ಮಾಡುವ ಆಸಕ್ತಿ ಇಲ್ಲ. ಬಿಎಸ್‌ವೈ ಬಳಿ 16 ಇಲಾಖೆಗಳಿವೆ. 6 ತಿಂಗಳಿಂದ ನಿಭಾಯಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ರಾಜ್ಯಕ್ಕೆ ಅಮಿತ್​ ಶಾ ಆಗಮಿಸಿದಾಗಲೇ ಸಂಪುಟ ವಿಸ್ತರಣೆ ಕುರಿತು ಚರ್ಚೆ; ಸಿಎಂ ಯಡಿಯೂರಪ್ಪ

ಇದೇ ವೇಳೆ ನೆರೆ ಪರಿಹಾರ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ದ ನಿರ್ಲಕ್ಷ್ಯದ ಕುರಿತು ಹರಿಹಾಯ್ದ ಅವರು, ನೆರೆ ಪರಿಹಾರಕ್ಕೆ 36 ಸಾವಿರ ಕೋಟಿ ಮನವಿ ಮಾಡಲಾಗಿದೆ. ಆದರೆ 1869 ಕೋಟಿ ಮಾತ್ರ ನೀಡಿದ್ದಾರೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ. ಜಿಲ್ಲಾ ಮಂತ್ರಿಗಳು ಜನರ ಕಷ್ಟ ಸುಖ‌ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 
First published: January 14, 2020, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading