ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ (Karnataka Election Results) ಹೊರಬಿದ್ದಿದ್ದು, ಕಾಂಗ್ರೆಸ್ (Congress) 136 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದುಕೊಂಡಿದೆ. ಇತ್ತ ಬಿಜೆಪಿಗೆ (BJP) ರಾಜ್ಯದ ಜನರು ವ್ಯತಿರಿಕ್ತ ಮತದಾನ ಮಾಡಿದ್ದು, ಹಾಲಿ ಸಚಿವರಿಗೆ (Present Minister) ಸೋಲುಣಿಸಿದ್ದಾರೆ. ಒಟ್ಟು 12 ಹಾಲಿ ಸಚಿವರು ಈ ಬಾರಿ ಚುನಾವಣೆಯಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ. ಕೆ. ಸುಧಾಕರ್ (K Sudhakar) ಕೂಡ ಸೋಲು ಕಂಡಿದ್ದು, ಯಾರಿಗೂ ಸರಿಯಾಗಿ ಹೆಸರೇ ತಿಳಿಯದ ಯುವಕ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್ ( Pradeep Eshwar) 70 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರಲ್ಲಿ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪರಿಶ್ರಮ ಅಕಾಡೆಮಿ ನಡೆಸುತ್ತಿರುವ ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್ ರಾಜ್ಯದಲ್ಲಿ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪರಿಶ್ರಮ ಅಕಾಡೆಮಿ ನಡೆಸುತ್ತಿದ್ದಾರೆ. ಶಿಕ್ಷಣ ತಜ್ಞರ ತಂಡವನ್ನು ಕಟ್ಟಿಕೊಂಡು ಎಂಬಿಬಿಎಸ್ ವೃತ್ತಿ ಜೀವನ ಬಯಸುವ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪರಿಶ್ರಮ ಅಕಾಡೆಮಿ ಅತ್ಯುತ್ತಮ ನೀಟ್ ತರಬೇತಿ ಅಕಾಡೆಮಿಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: BJP Defet: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?
ಪ್ರದೀಪ್ ಈಶ್ವರ್ ಅವರು ಜೀವಶಾಸ್ತ್ರ ಉಪನ್ಯಾಸಕರಾಗಿದ್ದಾರೆ. ಜೊತೆಗೆ ಪ್ರದೀಪ್ ಅತ್ಯುತ್ತಮ ಮೋಟಿವೇಷನಲ್ ಸ್ಪೀಕರ್ ಆಗಿದ್ದಾರೆ. ಪ್ರದೀಪ್ ಈಶ್ವರ್ ಅವರು, ಪರಿಶ್ರಮ ಅಕಾಡೆಮಿಯನ್ನು ಪ್ರಾರಂಭಿಸುವ ಮೊದಲು, ಭಾರತದ ಉದ್ದಗಲಕ್ಕೂ ಸಂಚರಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯದಲ್ಲೂ MBBS ಸೀಟುಗಳನ್ನು ಪಡೆಯಲು ನೂರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಅವರ ವಿದ್ಯಾರ್ಥಿಗಳು ಭಾರತದ ಬಹುತೇಕ ಉನ್ನತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಪಡೆದು ಓದುತ್ತಿದ್ದಾರೆ.
ಪ್ರದೀಪ್ NEET ನಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಿರುವ ಜ್ಞಾನ ಹೊಂದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಲು ಪರಿಶ್ರಮ ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ. ಇವರ ಅಕಾಡೆಮಿಯ ನೀಟ್ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಶ್ರೇಯಾಂಕಗಳನ್ನು ಪಡೆದುಕೊಳ್ಳುತ್ತಿದ್ದಾರೆ.
2018ರಲ್ಲಿ ನವೀನ್ ಕಿರಣ್ ಪರ ಪ್ರಚಾರ
ಇನ್ನು2018ರ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ನವೀನ್ ಕಿರಣ್ ಪರ ಪ್ರಚಾರ ಮಾಡಿದ್ದರು. ಈ ವೇಳೆ ಅವರ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದವು. ನಂತರ ರಾಜಕಾರಣದಿಂದ ದೂರ ಸರಿದಿದ್ದರು. ಆದರೆ ಕಾಂಗ್ರೆಸ್ಗೆ ಸುಧಾಕರ್ ಅವರನ್ನು ಚುನಾವಣೆಯಲ್ಲಿ ಎದುರಿಸುವ ಪ್ರಬಲ ನಾಯಕರ ಹುಡುಕಾಟದಲ್ಲಿದ್ದ ಸೂಕ್ತ ಅಭ್ಯರ್ಥಿ ಸಿಕ್ಕಿರಲಿಲ್ಲ. ಪ್ರದೀಪ್ ಹೆಸರೂ ಕೂಡ ಕೇಳಿ ಬಂದಿರಲಿಲ್ಲ.
ಜಾತಿ ಆಧಾರಿತ ಟಿಕೆಟ್
ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಹುಡುಕುತ್ತಿದ್ದ ಕಾಂಗ್ರೆಸ್ ಬಲಿಜ ಸಮೂದಾಯಕ್ಕೆ ಟಿಕೆಟ್ ನೀಡಲು ಬಯಸಿತ್ತು. ಈ ವೇಳೆ ಪ್ರದೀಪ್ ಹೆಸರು ಮುನ್ನಲೆಗೆ ಬಂದಿದೆ. ಕೊನೆ ಹಂತದಲ್ಲಿ ಪ್ರದೀಪ್ಗೆ ಟಿಕೆಟ್ ಘೋಷಣೆ ಮಾಡಿತ್ತು.
ಇನ್ನು ಪ್ರದೀಪ್ ಅವರನ್ನು ಕ್ಷೇತ್ರದಲ್ಲಿ ಡಮ್ಮಿ ಅಭ್ಯರ್ಥಿ ಎಂದೇ ಪರಿಗಣಿಸಲಾಗಿತ್ತು. ಜೊತೆಗೆ ಅವರು ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರ ಬೇನಾಮಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಆದರೂ ದೃತಿಗೆಡದ ಯುವ ನಾಯಕ ಬಲಿಜ ಸಮೂದಾಯ, ಕುರುಬ, ಮುಸ್ಲೀಂ ಹಾಗೂ ದಲಿತ ಮತಗಳನ್ನು ಪಡೆದು ಹಾಲಿ ಸಚಿವರಿಗೆ ಸೋಲುಣಿಸಿದ್ದಾರೆ.
ಪ್ರದೀಪ್ ಈಶ್ವರ್ ಗೆಲುವಿಗೆ ಕಾರಣಗಳು
ಪ್ರದೀಪ್ ಈಶ್ವರ್ ಬಲಿಜ ಸಮುದಾಯದಕ್ಕೆ ಸೇರಿದ್ದು, ತಮ್ಮ ಸಮುದಾಯದ ಪೂರ್ಣ ಬೆಂಬಲ ಪಡೆದಿದ್ದರು. ಜೊತೆಗೆ ಮುಸ್ಲಿಮ್ ಮತಗಳು ಕೈ ಹಿಡಿದಿವೆ. ಸಿದ್ದರಾಮಯ್ಯ ರಾಜ್ಯದ ಪ್ರಮುಖ ಕುರುಬ ಸಮುದಾಯದ ನಾಯಕರಾಗಿರುವುದರಿಂದ ಶೇ.60ರಷ್ಟು ಬೆಂಬಲ ಪಡೆದಿದ್ದರು. ಇವೆಲ್ಲದರ ಜೊತೆಗೆ ಸುಧಾಕರ್ ಮತ್ತು ಬಿಜೆಪಿ ವಿರೋಧಿ ಅಲೆಯನ್ನು ಬಳಸಿಕೊಂಡ ಪ್ರದೀಪ್ ಈಶ್ವರ್ ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಹಿರಿಯರ ಕಾಲಿಗೆ ಬಿದ್ದು ಮತಯಾಚನೆ ಮಾಡಿದ್ದರು. ಇದೀಗ ಅನುಕಂಪದ ಅಲೆ ಅವರನ್ನು ಗೆಲ್ಲುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ