ಕಪಾಲಬೆಟ್ಟದ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ; ಡಿ.ಕೆ. ಶಿವಕುಮಾರ್ ಭರವಸೆ

ಕನಕಪುರದ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ವಿರೋಧಿಸಿ ಇಂದು ಹಿಂದೂ ಜಾಗೃತಿ ವೇದಿಕೆ ವತಿಯಿಂದ ಕನಕಪುರ ಚಲೋ ನಡೆಸಲಾಗುತ್ತಿದೆ.

Sushma Chakre | news18-kannada
Updated:January 13, 2020, 12:55 PM IST
ಕಪಾಲಬೆಟ್ಟದ ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣ; ಡಿ.ಕೆ. ಶಿವಕುಮಾರ್ ಭರವಸೆ
ಮಾಜಿ ಸಚಿವ ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ಜ. 13): ಕನಕಪುರ ಚಲೋಗೆ ಬಂದಿರುವ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ಗೊತ್ತಿಲ್ಲ. ಅಧಿಕಾರಕ್ಕಾಗಿ ಈ ರೀತಿಯ ಹೋರಾಟ ಮಾಡುತ್ತಿದ್ದಾರೆ. ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣವಾಗುವುದರಲ್ಲಿ ಅನುಮಾನ ಬೇಡ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಕನಕಪುರದ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ವಿರೋಧಿಸಿ ಇಂದು ಹಿಂದೂ ಜಾಗೃತಿ ವೇದಿಕೆ ವತಿಯಿಂದ 'ಕನಕಪುರ ಚಲೋ' ನಡೆಸಲಾಗುತ್ತಿದೆ. ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ರಸ್ತೆಗಿಳಿದಿರುವುದರಿಂದ ಕನಕಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ವಹಿಸಲಾಗಿದೆ.

ಇದರ ನಡುವೆಯೇ ಏಸು ಪ್ರತಿಮೆ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಧಿಕಾರಿ ವರದಿ ಕೊಟ್ಟಿದಾರೆ. ಸಂಪುಟ ಸಭೆಯಲ್ಲೇ ಎಲ್ಲವೂ ಕ್ಲಿಯರ್ ಆಗುತ್ತದೆ. ಗೋಮಾಳ ಜಾಗದಲ್ಲೇ ಏಸು ಪ್ರತಿಮೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕನಕಪುರ ಚಲೋ; ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ

ಪ್ರತಿಭಟನಾಕಾರರು ಬರುತ್ತಾರೆ, ಹೋಗುತ್ತಾರೆ. ಅದರಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಏನೂ ತೊಂದರೆಯಾಗಲ್ಲ. ಕನಕಪುರದಲ್ಲಿ ಶಾಂತಿ ಕಾಪಾಡಬೇಕೆಂದು ನಾನು ಹೇಳಿದ್ದೇನೆ. ನಮ್ಮಲ್ಲಿಂದ ಒಂದು ನರಪಿಳ್ಳೆಯೂ ಪ್ರತಿಭಟನಾ ಸ್ಥಳಕ್ಕೆ ಹೋಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿರೋದ್ರಿಂದ ಕೆಲವರು ಹೋಗುತ್ತಾರೆ. ರಾಜಕಾರಣದಲ್ಲಿ ಪ್ರತಿಭಟನಾಕಾರರು ಇರಬೇಕು. ಆಗ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಪ್ರತಿಭಟನಾಕಾರರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.

ನಮ್ಮ ಕಾಂಗ್ರೆಸ್ ಶಾಸಕರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಜಾತಿ, ಧರ್ಮ ಅನ್ನೋದೆಲ್ಲಾ ನನಗೆ ಲೆಕ್ಕಕ್ಕಿಲ್ಲ. ನನ್ನದೇ ಆದ ತತ್ವ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಪಾಪ ಅವರಿಗೇನೋ ಅಜೆಂಡಾ ಇರಬೇಕು. ಅದಕ್ಕೆ ಇಲ್ಲಿ ಪ್ರತಿಭಟನೆ ಮಾಡೋಕೆ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಕಾರಿಗೆ 100 ರೂ. ದಂಡ; 1 ವರ್ಷ ಕಳೆದರೂ ಫೈನ್ ಕಟ್ಟದ ಸಿಎಂಇಂದು ವಿವಿಧ ಸಂಘಟನೆಗಳಿಂದ 'ಕನಕಪುರ ಚಲೋ'ಗೆ ಕರೆ ನೀಡಲಾಗಿದ್ದು, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರಿನಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಪಾಲಬೆಟ್ಟದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕನಕಪುರ ನಗರದಲ್ಲಿ ಬೃಹತ್ ಪ್ರತಿಭಟನೆ ಹಿನ್ನೆಲೆ ಕಪಾಲಬೆಟ್ಟ, ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.  ಪೊಲೀಸರು ಇಂದು ಕಪಾಲ ಬೆಟ್ಟಕ್ಕೆ ಹೋಗುವವರಿಗೆ ಸಂಪೂರ್ಣ ನಿಷೇಧ ಹೇರಿದ್ದಾರೆ. ಭದ್ರತೆಗೆ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಏನಿದು ವಿವಾದ?:

ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶಗಳು ಕೇಳಿಬಂದ ನಂತರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ಯೋಜನೆಯನ್ನು ವಿರೋಧಿಸಿ ಇಂದು 'ಕನಕಪುರ ಚಲೋ' ನಡೆಸಲಾಗುತ್ತಿದೆ.

ಸದ್ಯಕ್ಕೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಕಾಮಗಾರಿ ಸ್ಥಗಿತಗೊಂಡಿದ್ದು, ಎಲ್ಲ ಕೆಲಸಗಾರರು ಅಲ್ಲಿಂದ ಬೇರೆಡೆ ಹೋಗಿದ್ದಾರೆ. ಅಲ್ಲದೆ, ಈ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವ ಬಗ್ಗೆ ವಿವಾದ ಉಂಟಾದ ಕಾರಣ ಸುತ್ತಲೂ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇಂದು ನಡೆಯುವ ಕನಕಪುರ ಚಲೋ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್  ಭಾಗಿಯಾಗಿದ್ದಾರೆ.

ಕಪಾಲಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗದಲ್ಲಿ ಒಂದು ಧರ್ಮದ ದೇವರ ಪ್ರತಿಮೆ ನಿರ್ಮಾಣ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಸ್​ಮಸ್ ವೇಳೆ ಅದರ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿತ್ತು. ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಏಸು ಪ್ರತಿಮೆಯ ಶಂಕುಸ್ಥಾಪನೆ ಮಾಡುವ ಮೂಲಕ ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ