ಬೆಂಗಳೂರು; ಐಎಂಎ (ಐ ಮ್ಯಾನಿಟರಿ ಅಡ್ವೈಸರ್) ಪ್ರಕರಣ ರಾಜ್ಯದಲ್ಲಿ ನಡೆದ ಅತಿ ದೊಡ್ಡ ವಂಚನೆ ಪ್ರಕರಣಗಳಲ್ಲಿ ಒಂದು. ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ನೆನ್ನೆಯಷ್ಟೇ ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ. ಇತರೆ ಆರೋಪಿಗಳನ್ನು ಸಿಬಿಐ ಬಂಧಿಸುತ್ತಾ ಬರುತ್ತಿದೆ.
ಸುಮಾರು 32 ಸಾವಿರಕ್ಕೂ ಹೆಚ್ಚು ಜನರಿಗೆ 500 ಕೋಟಿಗೂ ಅಧಿಕ ಹಣ ವಂಚನೆ ಎಸಗಿದ ಪ್ರಕರಣ ಇದಾಗಿದ್ದು, ಇಲ್ಲಿ ಹಣ ಕಳೆದುಕೊಂಡವರು ಬಹುತೇಕ ಬಡವರೇ ಆಗಿದ್ದಾರೆ. ಕಳೆದ ವರ್ಷ ಬಯಲಾದ ಈ ಪ್ರಕರಣದಲ್ಲಿ ಯಾರೂ ಗಮನಿಸದ ಅಂಶ ಸಹ ಒಂದಿದೆ. ಕೆಲ ಉನ್ನತ ಮಟ್ಟದ ಅಧಿಕಾರಿಗಳಿಗೆ ಕೋಟ್ಯಂತರ ಹಣ ತಿನ್ನಿಸಿ, ಸಾವಿರಾರು ಬಡಜನರ ಹಣ ಲೂಟಿ ಮಾಡಿದ ಮೊಹಮ್ಮದ್ ಮನ್ಸೂರ್ ಖಾನ್ ಬೆಂಗಳೂರು ಬಿಟ್ಟು ದುಬೈಗೆ ಹೋಗಿದ್ದಾದರೂ ಹೇಗೆ? ಇಡೀ ಪೊಲೀಸ್ ಇಲಾಖೆ ಆತನ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರೂ ಆತ ಪರಾರಿಯಾಗಿದ್ದು ಹೇಗೆ? ಆತ ತಪ್ಪಿಸಿಕೊಳ್ಳಲು ಕೆಲ ಪೊಲೀಸ್ ಅಧಿಕಾರಿಗಳೇ ನೆರವಾದರಾ? ಅಥವಾ ರಾಜಕಾರಣಿಗಳು ಪ್ರಭಾವ ಬೀರಿದ್ದಾರಾ? ಎಂಬ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರಕಬೇಕಾದರೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಆದರೆ, ಮನ್ಸೂರ್ ಖಾನ್ ಬಂಧನವಾಗಿ ಒಂದೂವರೆ ವರ್ಷ ಕಳೆದರೂ ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ.
ಇದನ್ನು ಓದಿ: ಐಎಂಎ ಬಹುಕೋಟಿ ವಂಚನೆ ಪ್ರಕರಣ; ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ
ಮನ್ಸೂರ್ ಖಾನ್ ದುಬೈಗೆ ಪರಾರಿಯಾದ ಬಳಿಕ ವಿಶೇಷ ತನಿಖಾ ತಂಡ ದುಬೈಗೆ ತೆರಳಿ ಆತನನ್ನು ಬಂಧಿಸಿ ಕಳೆದ ವರ್ಷ ಜುಲೈ 20ರಂದು ಭಾರತಕ್ಕೆ ಕರೆತಂದಿತು. ಆದರೆ, ಇದಕ್ಕೂ ಮೊದಲು ಮನ್ಸೂರ್ ಖಾನ್ ಮಾಡಿದ ವಂಚನೆ ಬಯಲಾದಾಗಲೂ ಹಾಗೂ ಆತ ಮೊದಲ ವಿಡಿಯೋ ಮಾಡಿ ಬಿಟ್ಟಾಗ ಆತ ಭಾರತದಲ್ಲಿಯೇ ಇದ್ದ. ಪ್ರಕರಣ ಗಂಭೀರತೆ ಪಡೆದುಕೊಂಡಾಗ ಆತ ದುಬೈಗೆ ಪರಾರಿಯಾಗಿದ್ದ. ಇಂತಹ ಸಂದರ್ಭದಲ್ಲಿ ಆತ ವಿಮಾನ ನಿಲ್ದಾಣದಿಂದ ನೇರವಾಗಿ ದುಬೈಗೆ ಪರಾರಿಯಾಗಲು ಹೇಗೆ ಸಾಧ್ಯವಾಯಿತು? ಇದಕ್ಕೆ ಸಹಾಯ ಮಾಡಿದವರು ಯಾರು? ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ