ಕರ್ನಾಟಕದಲ್ಲಿ ಭಾರತ್ ಬಂದ್​ಗೆ ಯಾರೆಲ್ಲರ ಬೆಂಬಲವಿದೆ? ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?

HR Ramesh | news18
Updated:September 9, 2018, 11:05 PM IST
ಕರ್ನಾಟಕದಲ್ಲಿ ಭಾರತ್ ಬಂದ್​ಗೆ ಯಾರೆಲ್ಲರ ಬೆಂಬಲವಿದೆ? ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?
  • Advertorial
  • Last Updated: September 9, 2018, 11:05 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.9): ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಖಂಡಿಸಿ, ಎನ್​ಡಿಎ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನೇತೃತ್ವದಲ್ಲಿ ಸೆ.10 (ಸೋಮವಾರ) ಕರೆ ನೀಡಿರುವ ಬಂದ್​ಗೆ  ರಾಜ್ಯದಲ್ಲಿ ಜೆಡಿಎಸ್​ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ಜೆಡಿಎಸ್​ ಹಾಗೂ ಕಾಂಗ್ರೆಸ್​ ಜಂಟಿಯಾಗಿ ಬಂದ್​ಗೆ ಬೆಂಬಲ ನೀಡಿರುವುದರಿಂದ ಸರ್ಕಾರಿ ಸೇವೆಗಳು ಬಹುತೇಕ ಬಂದ್​ ಆಗುವ ಸಾಧ್ಯತೆ ಇದೆ. ಇನ್ನು ನಿಗಮ ಸಾರಿಗೆಗಳು ಸಹ ಬೆಂಬಲ ನೀಡಿರುವುದರಿಂದ ನಾಲ್ಕು ನಿಗಮಗಳ ಬಸ್​ಗಳು, ಆಟೋಗಳು, ಖಾಸಗಿ ಟ್ಯಾಕ್ಸಿಗಳು ಹಾಗೂ ಖಾಸಗಿ ಶಾಲಾ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಇನ್ನು ಓಲಾ, ಊಬರ್​ ಖಾಸಗಿ ಟ್ಯಾಕ್ಸಿ ಸೇವೆಗಳು ನಾಳೆ ಸ್ಥಗಿತಗೊಳ್ಳಲಿದೆ.

ಆದರೆ, ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಿಲ್ಲ. ಆದರೆ, ಬಸ್​ ವ್ಯತ್ಯಯದಿಂದಾಗಿ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಸರ್ಕಾರಿ ಅನುದಾನರಹಿತ ಶಾಲೆಗಳ ಸಂಘಟನೆ ಬಂದ್​ಗೆ ಬೆಂಬಲ ನೀಡಿರುವುದರಿಂದ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಯಾ ಶಾಲಾ ಆಡಳಿತ ಮಂಡಳಿ ವಿವೇಚನಾ ಅಧಿಕಾರ ಬಳಸಿ, ರಜೆ ನೀಡುವಂತೆ ತಿಳಿಸಲಾಗಿದೆ. ಸೆ.10 ರ ರಜೆಯ ತರಗತಿಗಳನ್ನು ಸೆ.15ರ ಶನಿವಾರ ಪೂರ್ತಿ ದಿನ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.

ಸಿಸಿಐ, ಎಸ್​ಯುಸಿಐ. ಎಐಟಿಯುಸಿ  ಹಾಗೂ ಸಿಐಟಿಯು ಸೇರಿದಂತೆ ಎಡಪಕ್ಷ ಸಂಘಟನೆಗಳು ಹಾಗೂ ಸಾರಿಗೆ ನಿಗಮಗಳ ನೌಕರರ ಒಕ್ಕೂಟಗಳು ಬಂದ್​ಗೆ ಬೆಂಬಲ ಸೂಚಿಸಿವೆ.

ಇದನ್ನು ಓದಿ: ದಾಖಲೆಯೊಂದಿಗೆ ಬನ್ನಿ ಚರ್ಚಿಸಲು ಸಿದ್ದ; ಕಾಂಗ್ರೆಸ್​ ನಾಯಕರಿಗೆ ಶಾ ಆಹ್ವಾನ

ನಮ್ಮದು ರಾಜಕೀಯೇತರ ಸಂಘಟನೆ. ಒಂದು ರಾಜಕೀಯ ಪಕ್ಷ ನೀಡಿರುವ ಬಂದ್​ಗೆ ನಮ್ಮ ಬೆಂಬಲವಿಲ್ಲ ಎಂದು ಸರಕು, ಸಾಗಣೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ. ಹೀಗಾಗಿ ನಾಳಿನ ಬಂದ್​ನಲ್ಲಿ ಸರಕು ಮತ್ತು ಸಾಗಣೆ ಲಾರಿಗಳು ಎಂದಿನಂತೆ ಸಂಚರಿಸಲಿವೆ.ಯಾವೆಲ್ಲ ಸೇವೆಗಳು ಲಭ್ಯ?

ಔಷಧಿಗಳು, ಆಸ್ಪತ್ರೆ ತುರ್ತು ಸೇವೆಗಳು, ತರಕಾರಿ, ಹಾಲು ಸರಬರಾಜು, ಮೆಟ್ರೋ ಸೇವೆಗಳು ಎಂದಿನಂತೆ ಲಭ್ಯವಾಗಲಿದೆ.

ಯಾವೆಲ್ಲ ಸೇವೆಗಳು ಅಲಭ್ಯ?

ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಬಸ್ ಸಂಚಾರ, ಆಟೋ, ಓಲಾ-ಊಬರ್, ಖಾಸಗಿ ಶಾಲೆಗಳ ವಾಹನಗಳು, ಐಟಿ-ಬಿಟಿ ವಾಹನಗಳ ಸೇವೆಗಳು ಅಲಭ್ಯವಾಗಲಿವೆ.

ಇನ್ನು ಸರ್ಕಾರಿ ಕಚೇರಿ, ಸರ್ಕಾರಿ ಶಾಲಾ-ಕಾಲೇಜುಗಳು, ಬ್ಯಾಂಕುಗಳು, ಗಾರ್ಮೆಂಟ್ಸ್​, ಐಟಿ-ಬಿಟಿ ಕಂಪನಿಗಳ ಸೇವೆಗಳ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ.

ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿಕೆ

ಬೆಂಗಳೂರಲ್ಲಿ ಬಿಗಿ ಬಂದೋಬಸ್ತ್

ಭಾರತ್​ ಬಂದ್​ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರಿನಲ್ಲಿ ಬಿಗಿ-ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

30 ಕೆಎಸ್​ಆರ್​ಪಿ, 30 ಸಿಎಆರ್ ತುಕಡಿ, ಆಯಾ ಠಾಣಾ ವ್ತಾಪ್ತಿಯಲ್ಲಿ ಹೊಯ್ಸಳ ಗಸ್ತು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ, ನಗರದ 15 ಸಾವಿರಕ್ಕೂ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ

ಭಾರತ್​ ಬಂದ್​ಗೆ ಭಾರತೀಯ ವೈದ್ಯಕೀಯ ಸಂಘ ನೈತಿಕ ಬೆಂಬಲ ನೀಡಲಿದೆ. ಆದರೆ,  ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಕೆಸಿ ಜನರಲ್, ಕಿಮ್ಸ್, ವಿಕ್ಟೋರಿಯಾ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ತಲಾ ಎರಡರಿಂದ ಮೂರು ಆ್ಯಂಬುಲೆನ್ಸ್​ಗಳು ಇವೆ. ಅಗತ್ಯವಿದ್ದಲ್ಲಿ ಖಾಸಗಿಯಾಗಿ ಆ್ಯಂಬುಲೆನ್ಸ್ ಸೇವೆ ಪಡೆಯಲು ನಿರ್ಧರಿಸಲಾಗಿದೆ. 108 ಸೇವೆ, ಮೆಡಿಕಲ್ ಶಾಪ್ ಗಳು ಕೂಡ ಎಂದಿನಂತೆ ತೆರೆಯಲಿವೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ ರವೀಂದ್ರ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
First published:September 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ