ಭವಿಷ್ಯದಲ್ಲಿ ಯಾವ ಬ್ಯಾಂಕ್ ಮುಚ್ತೀರಾ? ಈಗಲೇ ತಿಳಿಸಿಬಿಡಿ; ಮೋದಿ, ಆರ್​ಬಿಐ ಗವರ್ನರ್​ ಲೇವಡಿ ಮಾಡಿದ ಸಿ.ಎಂ. ಇಬ್ರಾಹಿಂ

ದೇಶದ ಸುಸ್ಥಿರ ಆರ್ಥಿಕತೆಯ ಕುರಿತ ಚರ್ಚೆಯನ್ನು ಬದಿಗಿಟ್ಟಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೋದಲ್ಲಿ ಬಂದಲ್ಲೆಲ್ಲಾ ಪಾಕಿಸ್ತಾನ, ಕಲಂ 370 ಬಿಟ್ಟು ಬೇರೇನೂ ಮಾತನಾಡುತ್ತಿಲ್ಲ. ಬದಲಿಗೆ ಪಕ್ಷಾಂತರ ಹಾಗೂ ಯಾರನ್ನೂ ಜೈಲಿಗೆ ಅಟ್ಟಬೇಕು ಎಂಬ ಕುರಿತು ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

MAshok Kumar | news18-kannada
Updated:October 28, 2019, 12:56 PM IST
ಭವಿಷ್ಯದಲ್ಲಿ ಯಾವ ಬ್ಯಾಂಕ್ ಮುಚ್ತೀರಾ? ಈಗಲೇ ತಿಳಿಸಿಬಿಡಿ; ಮೋದಿ, ಆರ್​ಬಿಐ ಗವರ್ನರ್​ ಲೇವಡಿ ಮಾಡಿದ ಸಿ.ಎಂ. ಇಬ್ರಾಹಿಂ
ನರೇಂದ್ರ ಮೋದಿ, ಸಿಎಂ ಇಬ್ರಾಹಿಂ.
  • Share this:
ವಿಜಯಪುರ (ಅಕ್ಟೋಬರ್ 28); ಭವಿಷ್ಯದಲ್ಲಿ ದೇಶದ ಯಾವ ಸಾರ್ವಜನಿಕ ಬ್ಯಾಂಕ್ ಅನ್ನು ಮುಚ್ಚಲಿದ್ದೀರಿ? 2 ಸಾವಿರ ರೂ ಮುಖ ಬೆಲೆಯ ನೋಟುಗಳನ್ನು ಮುಂದುವರೆಸ್ತೀರೋ? ಇಲ್ಲವೋ? ಎಂಬ ಕುರಿತು ಈಗಲೇ ತಿಳಿಸಿಬಿಡಿ ಜನರಾದರೂ ತುಸು ಎಚ್ಚರಾಗಿರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತಾ ದಾಸ್ ವಿರುದ್ಧ ಮಾಜಿ ಸಚಿವ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಿಎಂ ಇಬ್ರಾಹಿಂ, “ಮೋದಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸಾರ್ವಜನಿಕ ಬ್ಯಾಂಕುಗಳ 2.3 ಲಕ್ಷ ಕೋಟಿ ಹಣ ನಷ್ಟವಾಗಿದೆ. ಮುಂದಿನ ಮಾರ್ಚ್ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಊಹಿಸಲೂ ಅಸಾಧ್ಯವಾಗಲಿದೆ. ಜವಳಿ, ಅಟೊಮೋಬೈಲ್ ಉದ್ಯಮಗಳು ಪಾತಾಳಕ್ಕೆ ಕುಸಿದಿದೆ. ಕೃಷಿ ಬೆಳವಣಿಗೆ ಶೇ. 6-7 ಕಡಿಮೆಯಾಗಿದೆ ಅಲ್ಲದೆ, ಈ ನಡುವೆ ಒಂದೊಂದೆ ಬ್ಯಾಂಕುಗಳನ್ನು ಮುಚ್ಚಲಾಗ್ತಿದೆ. ಹೀಗಾಗಿ ಜನ ಪರಿತಪಿಸುವಂತಾಗಿದ್ದು, ಭವಿಷ್ಯದಲ್ಲಿ ಯಾವ ಬ್ಯಾಂಕ್ ಮುಚ್ತಾರೋ ಎಂದು ಭಯದಲ್ಲೇ ಬದುಕುವಂತಾಗಿದೆ” ಎಂದು ಮೋದಿ ಆಡಳಿತವನ್ನು ಅಪಹಾಸ್ಯಕ್ಕೆ ಈಡುಮಾಡಿದ್ದಾರೆ.

“ಕೇಂದ್ರ ಸರ್ಕಾರ ಭಾರತಕ್ಕೆ ಪಾಕಿಸ್ತಾನದ ವಿನಾಃ ಬೇರೆ ಸಮಸ್ಯೆಯೇ ಇಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ, ದೇಶದಲ್ಲಿ ಆಂತರಿಕವಾಗಿ ಹತ್ತಾರು ಸಮಸ್ಯೆ ಇದೆ. ಹೀಗಾಗಿ ಕೇಂದ್ರ ಗೃಹ ಮತ್ತು ಹಣಕಾಸು ಸಚಿವರು ದೇಶದ ಆಂತರಿಕ ಪರಿಸ್ಥಿತಿಯ ಬಗ್ಗೆ ಮೊದಲು ಸ್ಪಷ್ಟಪಡಿಸಬೇಕು. ಏಕೆಂದರೆ ಬ್ಯಾಂಕುಗಳಿಗೆ ಇದೀಗ ಕೆಟ್ಟ ಕಾಲ ಬಂದಿದೆ. ಬ್ಯಾಂಕಿನಲ್ಲಿ ಹಣ ಇಟ್ಟರೆ ಮರಳಿ ಬರುವ ಗ್ಯಾರಂಟಿ ಇಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ.

ದೇಶದ ಸುಸ್ಥಿರ ಆರ್ಥಿಕತೆಯ ಕುರಿತ ಚರ್ಚೆಯನ್ನು ಬದಿಗಿಟ್ಟಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೋದಲ್ಲಿ ಬಂದಲ್ಲೆಲ್ಲಾ ಪಾಕಿಸ್ತಾನ, ಕಲಂ 370 ಬಿಟ್ಟು ಬೇರೇನೂ ಮಾತನಾಡುತ್ತಿಲ್ಲ. ಬದಲಿಗೆ ಪಕ್ಷಾಂತರ ಹಾಗೂ ಯಾರನ್ನೂ ಜೈಲಿಗೆ ಅಟ್ಟಬೇಕು ಎಂಬ ಕುರಿತು ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಇನ್ನೂ ಡಿಕೆಶಿ ಹಾಗೂ ಚಿದಂಬರಂ ಅವರನ್ನು ಜೈಲಿನಲ್ಲಿ ಇಟ್ಟದ್ದು ಯಾಕೆ? ಎಂದು ಅವರಿಗೆ ಗೊತ್ತಿಲ್ಲ. ಇವರು ಕೇವಲ ಐದೇ ವರ್ಷದಲ್ಲಿ ದೇಶವನ್ನು ಹಾಳು ಮಾಡಿದ್ದು, ಇದನ್ನು ಸರಿಪಡಿಸಲು 10 ವರ್ಷ ಬೇಕು” ಎಂದು ಅವರು ಲೇವಡಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಪ್ರವಾಹ ವೀಕ್ಷಣೆಗೆ ಪ್ರಧಾನಿ ಮೋದಿ ಆಗಮಿಸದ ವಿಚಾರವನ್ನೂ ಪ್ರಸ್ತಾಪಿಸಿರುವ ಸಿಎಂ ಇಬ್ರಾಹಿಂ, “ಇತಿಹಾಸ ಕಾಣದ ಪ್ರವಾಹಕ್ಕೆ ಸಿಲುಕಿ ಇಡೀ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ಜನರಲ್ಲಿ ಧೈರ್ಯ ತುಂಬಿಸಬೇಕಾದದ್ದು ಪ್ರಧಾನಿಯ ಕರ್ತವ್ಯ. ಆದರೆ, ಅವರು ಇಲ್ಲಿಗೆ ಬರುವುದಿರಲಿ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲೂ ಕರ್ನಾಟಕದ ಕುರಿತು ಉಲ್ಲೇಖ ಮಾಡಿಲ್ಲ. ಕೇಂದ್ರದಿಂದ ಸೂಕ್ತ ಪರಿಹಾರದ ಹಣವೂ ಬರಲಿಲ್ಲ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ರಾಜ್ಯದ ಪ್ರವಾಹ ಸ್ಥಿತಿಯನ್ನು ನಿಭಾಯಿಸಲು ಸರ್ಕಾರ ನಿಸ್ಸಹಾಯಕವಾಗಿದೆ. ಈ ನಡುವೆ ಮೋದಿ ಭೇಟಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವಕಾಶ ಕೇಳಿದ್ರೂ ನೀಡಲಾಗ್ತಿಲ್ಲ. ಅಮಿತ್ ಶಾ ವೀಸಾ ನೀಡುವವರೆಗೆ ಬಿಎಸ್​ವೈ ಪ್ರಧಾನಿ ಮೋದಿಯನ್ನು ಭೇಟಿ ಮಾಡುವುದು ಸಾಧ್ಯವಿಲ್ಲ. ಸ್ವತಃ ಬಿಜೆಪಿ ಅವರಿಗೆ ಇದೀಗ ಬಿಎಸ್​ವೈ ಒಲ್ಲದ ಗಂಡನಂತಾಗಿದ್ದಾರೆ” ಎಂದು ಸಿಎಂ ಇಬ್ರಾಹಿಂ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ : ಯಾರತ್ರಾನೂ ನನ್ನ ಸರ್ಕಾರ ಉಳಿಸ್ರಪ್ಪ ಎಂದು ಭಿಕ್ಷೆ ಬೇಡುವ ರಾಜಕೀಯ ಜಾಯಮಾನ ನನ್ನದಲ್ಲ; ಹೆಚ್​.ಡಿ. ಕುಮಾರಸ್ವಾಮಿ
First published: October 28, 2019, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading