Session Highlights- ರೇವಣ್ಣ, ಗಣೇಶ್ ಮೇಲೆ ಸ್ಪೀಕರ್ ಕೋಪ; ಕಾಗೇರಿ ಅಭಿಮಾನಿಯಾದ ರಮೇಶ್ ಕುಮಾರ್

Karnataka Assembly Session 2021: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಯನ್ನ ನಿಯಮ 60 ಅಡಿಯಲ್ಲಿ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಂವಾದ ವೇಳೆ ರಮೇಶ್ ಕುಮಾರ್ ತಾವು ಸ್ಪೀಕರ್ ಕಾಗೇರಿ ಅಭಿಮಾನಿ ಎಂದು ಹೇಳಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ

ವಿಶ್ವೇಶ್ವರ ಹೆಗಡೆ ಕಾಗೇರಿ

 • Share this:
  ಬೆಂಗಳೂರು, ಸೆ. 17: ರಾಜ್ಯದ ವಿಧಾನಸಭೆಯಲ್ಲಿ ನಡೆಯುವ ಅಧಿವೇಶನದಲ್ಲಿ (Karnataka Assembly Session) ಸದನದ ಕಲಾಪಗಳು ಸ್ವಾರಸ್ಯಕರವಾಗಿರುತ್ತವೆ. ಕೋಪ, ಭಾವಾವೇಶ, ಹಾಸ್ಯ ಚಟಾಕಿ, ಲೇವಡಿ, ಕಣ್ಣೀರು ಹೀಗೆ ವಿವಿಧ ಭಾವನೆಗಳ ಸಮ್ಮಿಳನವಾಗುತ್ತದೆ. ಕೆಲವೊಮ್ಮೆ ಗಂಭೀರ ಚರ್ಚೆಗಳಾದರೆ ಇನ್ನೂ ಕೆಲವೊಮ್ಮೆ ಗಂಭೀರವಾಗಿರಬೇಕಾದ ವಿಚಾರಗಳು ಹಗುರ ಮಾತುಗಳಿಂದ ತೂಕ ಕಳೆದುಕೊಂಡುಬಿಡುವುದುಂಟು. ಸಿದ್ದರಾಮಯ್ಯ (Siddaramaiah), ರಮೇಶ್ ಕುಮಾರ್ (Ramesh Kumar), ರೇವಣ್ಣ (HD Revanna) ಮೊದಲಾದವರು ಸದನದಲ್ಲಿ ಇದ್ದರೆ ಅಲ್ಲಿ ವಿಶೇಷ ಕಳೆ ಕಟ್ಟುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ನಡೆದ ಸದನದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳಿಗೆ ವಿಧಾನಸಭೆ ಸಾಕ್ಷಿಯಾಯಿತು. ಸದನದ ಆರಂಭದಲ್ಲೇ ವಿಶ್ವೇಶ್ವರ ಹೆಗಡೆ ತಲೆ ಬಿಸಿ ಮಾಡಿಕೊಂಡಂತೆ ತೋರಿತು. ಜೆಡಿಎಸ್​ನ ಹೆಚ್ ಡಿ ರೇವಣ್ಣ, ಕಾಂಗ್ರೆಸ್​ನ ಕಂಪ್ಲಿ ಗಣೇಶ್ ಮತ್ತು ನಾರಾಯಣಸ್ವಾಮಿ ಅವರು ಆರಂಭದಲ್ಲೇ ಸ್ಪೀಕರ್ ಕೈಲಿ ಬೈಸಿಕೊಂಡ ಘಟನೆ ನಡೆದವು.

  ಸದನ ಆರಂಭವಾಗುತ್ತಲೇ ಹೆಚ್ ಡಿ ರೇವಣ್ಣ ಎದ್ದುನಿಂತರು. ತಮ್ಮ ಕ್ಷೇತ್ರದಲ್ಲಿ ಕಾಮಗಾರಿಗಳು ವಿಳಂಬವಾಗಿರುವ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಅವರು ಪಟ್ಟು ಹಿಡಿದರು. ಆಗ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೋಪಗೊಂಡರು. ನೀವು ಹೇಳಿದಾಗೆಲ್ಲಾ ಚರ್ಚೆಗೆ ಅವಕಾಶ ಕೊಡಲು ಆಗೋದಿಲ್ಲ, ಕೂತುಕೊಳ್ಳಿ ಎಂದು ಗದರಿದರು. ಸ್ಪೀಕರ್ ಸೂಚನೆ ಬಳಿಕ ಸುಮ್ಮನಾದ ರೇವಣ್ಣ, ತಾನು ಆ ಪೀಠಕ್ಕೆ ಗೌರವ ಕೊಡುತ್ತೇನೆ ಎಮದು ಹೇಳಿ ಕೂತರು.

  ನಾನಿರೋದ್ಯಾಕೆ ಎಂದು ಕಂಪ್ಲಿಗೆ ಗದರಿದ ಸ್ಪೀಕರ್: ಸ್ವಲ್ಪ ಹೊತ್ತಿನ ಬಳಿಕ ಮತ್ತೊಂದು ಪ್ರಸಂಗವು ಸ್ಪೀಕರ್ ಅವರನ್ನ ಕೆರಳಿಸಿತು. ಕಾಂಗ್ರೆಸ್ ಶಾಸಕ ಜೆ ಎನ್ ಗಣೇಶ್ ಅವರು ತಮ್ಮ ಕಂಪ್ಲಿ ಕ್ಷೇತ್ರದ ಒಂದು ಜಮೀನಿನ ಬಗ್ಗೆ ಪ್ರಶ್ನೆ ಕ ಏಳಲು ಸಮಯ ಕೊಡಲಾಗಿತ್ತು. ಎರಡು ಮೂರು ಬಾರಿ ಸಚಿವರಿಂದಲೂ ಸ್ಪೀಕರ್ ಆ ಪ್ರಶ್ನೆಗಳಿಗೆ ಉತ್ತರ ಕೊಡಿಸಿದ್ದರು. ಅಷ್ಟಾದರೂ ಕಂಪ್ಲಿ ಗಣೇಶ್ ಮತ್ತೆ ಮತ್ತೆ ಪ್ರಶ್ನೆ ಕೇಳಲು ಮುಂದಾದರು. ಗಣೇಶ್ ನಿಮ್ಮದು ಮುಗಿಯಿತು, ನೆಕ್ಸ್ಟ್ ನಾರಾಯಣಸ್ವಾಮಿ ಅವರೇ ಮಾತನಾಡಿ ಎಂದು ಸ್ಪೀಕರ್ ಹೇಳಿದರು. ಆದರೂ ಕಂಪ್ಲಿ ಗಣೇಶ್ ಮತ್ತೆ ಮಾತನಾಡಲು ಶುರು ಮಾಡಿದಾಗ, ಗಣೇಶ್ ನಿಮ್ಮ ಮೈಕ್ ಆಫ್ ಮಾಡಿ, ನಾರಾಯಣಸ್ವಾಮಿ ಮೈಕ್ ಆನ್ ಮಾಡಿ ಮಾತನಾಡಿ ಎಂದು ಸ್ಪೀಕರ್ ಜೋರಾಗಿ ಹೇಳಿದರು. ಆಗ ನಾರಾಯಣಸ್ವಾಮಿ, ಮೊದಲು ಗಣೇಶ್ ಮಾತನಾಡಲಿ, ಆಮೇಲೆ ನಾನು ಮಾತನಾಡುತ್ತೇನೆ ಎಂದರು. ಇದಕ್ಕೆ ಕೋಪಗೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ಸದನ ಕಣ್ರೀ, ನೀವು ನೀವು ಹೊಂದಾಣಿಕೆ ಮಾಡಿಕೊಂಡುಬಿಟ್ಟರೆ ನಾನು ಇಲ್ಲಿ ಏನು ಮಾಡಬೇಕು ಎಂದು ಹೇಳಿದರು.

  ಇದನ್ನೂ ಓದಿ: ಪಂದ್ಯ ಶುರುವಾಗುವ ಕೆಲವೇ ಕ್ಷಣ ಮೊದಲು ಇಡೀ ಪಾಕ್ ಪ್ರವಾಸವನ್ನೇ ರದ್ದುಗೊಳಿಸಿದ ಕಿವೀಸ್

  ನಾನು ನಿಮ್ಮ ಅಭಿಮಾನಿ ಎಂದು ಸ್ಪೀಕರ್​ಗೆ ಹೇಳಿದ ರಮೇಶ್ ಕುಮಾರ್:

  ಇದೇ ವೇಳೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಿಯಮ 60ರ ಅಡಿಯಲ್ಲಿ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸ್ಪೀಕರ್ ಅವರನ್ನ ಕೋರಿದರು. ಸೆಕ್ಷನ್ 60 ಆಗಲ್ಲ, ಸೆಕ್ಷನ್ 69 ಅಡಿಯಲ್ಲಿ ಸೋಮವಾರ ಅಥವಾ ಮಂಗಳವಾರ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ತಿಳಿಸಿದರು. ಮಂಗಳವಾರ ಬೇಡ, ಸೋಮವಾರವೇ ಚರ್ಚೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಮಧ್ಯ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಲ್ಲವನ್ನೂ ನಿಯಮ 69ಕ್ಕೆ ವರ್ಗಾವಣೆ ಮಾಡಿದರೆ ಹೇಗೆ? ನಿಯಮ 60ನ್ನೇ ತೆಗೆದುಹಾಕಬೇಕಾಗುತ್ತದೆ. ನಿಯಮ 60 ಇರುವುದು ಗಂಭೀರ ವಿಚಾರಗಳನ್ನ ಚರ್ಚಿಸಲು. ಮೈಸೂರು ಸಾಮೂಹಿಕ ಅತ್ಯಾಚಾರದಂಥ ಗಂಭೀರ ವಿಚಾರವನ್ನು ಚರ್ಚಿಸಲು ನಿಯಮ 60 ಅಡಿಯಲ್ಲಿ ಅವಕಾಶ ಮಾಡಿಕೊಡಿ ಎಂದು ವಾದ ಮುಂದಿಟ್ಟರು.

  ನೀವು ನಮ್ಮನ್ನು ಎಲ್ಲಿ ಸಿಕ್ಕಿಸ್ತೀರೋ ಎಂದು ಸ್ಪೀಕರ್ ಹಾಸ್ಯ ಮಾಡಿದರು. ಹಾಗೇನೂ ಮಾಡಲ್ಲ, ನೀವು ನಮ್ಮ ಅಭಿಲಾಷಿ ಎಂದು ರಮೇಶ್ ಕುಮಾರ್ ಉತ್ತರಿಸಿದರು. ಬಳಿಕ ಕಾಗೇರಿ ಅವರು ಸೋಮವಾರ ಮೈಸೂರು ರೇಪ್ ಪ್ರಕರಣದ ಚರ್ಚೆಗೆ ಅವಕಾಶ ಕೊಟ್ಟರು. ಹಾಗೇ ಮಾತನಾಡಿದ ರಮೇಶ್ ಕುಮಾರ್ ತಾವು ಸ್ಪೀಕರ್ ಕಾಗೇರಿ ಅಭಿಮಾನಿ ಎಂದು ಹೇಳಿದರು. ಈ ಬಾರಿ ನಾವು ಸದನದ ಬಾವಿಗೆ ಇಳಿಯಲ್ಲ. ಹಾಗೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದೆ. ನಾವು ಮಾತನಾಡುವ ವಿಚಾರ ಕಡತಕ್ಕೆ ಹೋಗಬೇಕು. ಆ ನಿಟ್ಟಿನಲ್ಲಿ ಚರ್ಚೆ ಮಾಡುತ್ತೇವೆ ಎಂದು ರಮೇಶ್ ಕುಮಾರ್ ಹೇಳಿದರು. ಆಗ ಪ್ರತಿಕ್ರಿಯಿಸಿದ ಸ್ಪೀಕರ್, ಈ ಬಾರಿ ನನಗೆ ಕೆಲಸ ಕೊಟ್ಟಿರಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅ ನಂತರ ನಾನು ನಿಮ್ಮ ಅಭಿಮಾನಿ ಎಂದು ರಮೇಶ್ ಕುಮಾರ್ ಹೇಳಿದಾಗ ಸದನ ನಗೆಗಡಲಿನಲ್ಲಿ ತೇಲಿತು.

  ಆದರೆ, ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಯನ್ನು ನಿಯಮ 60ರ ಅಡಿಯಲ್ಲಿ ಅವಕಾಶ ಕೊಡಲು ಸ್ಪೀಕರ್ ನಿರಾಕರಿಸಿದರು. ನಿಯಮ 69ರಲ್ಲಿ ಚರ್ಚೆ ಮಾಡಿ ಎಂದು ಸೂಚಿಸಿದರು. ಸಮಯ ಕಡಿಮೆ ಮಾಡೋಕೆ 69ರ ಅಡಿಯಲ್ಲಿ ಚರ್ಚೆಗೆ ಕೊಡುತ್ತಿದ್ದೀರಿ. ನಾನು ಮೊದಲು ನಿಯಮ 60ರ ಅಡಿಯಲ್ಲಿ ಮಾತನಾಡುತ್ತೇನೆ. ಬಳಿಕ ನೀವು 69ಕ್ಕೆ ಅದನ್ನ ಕನ್ವರ್ಟ್ ಮಾಡಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು. ಅದಕ್ಕೆ ಸ್ಪೀಕರ್ ಕಾಗೇರಿ ಕೂಡ ಒಪ್ಪಿಗೆ ಕೊಟ್ಟರು.

  ವರದಿ: ಕೃಷ್ಣ ಜಿ.ವಿ,
  Published by:Vijayasarthy SN
  First published: