Pulse Polio: ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ; ಪಲ್ಸ್ ಪೋಲಿಯೋ ಯೋಜನೆಗೆ ಸಂಚಕಾರ?

ಸರ್ಕಾರ ಜನವರಿ 18ರೊಳಗೆ ನಮಗೆ ಕೊಡಬೇಕಿರುವ ಬಾಕಿ ವೇತನವನ್ನು ಪಾವತಿ ಮಾಡಿದ್ರೆ ಪಲ್ಸ್​ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಆದ್ರೆ ಸರ್ಕಾರ ಬಾಕಿ ವೇತನ ಪಾವತಿ ಮಾಡುತ್ತಾ..? ಇಲ್ಲಾ ಪಲ್ಸ್​ ಪೋಲಿಯೋ ಲಸಿಕೆಗೆ ಈ ಬಾರಿ ಗ್ರಹಣ ಹಿಡಿಯುತ್ತಾ ಅನ್ನೋದು ಜನವರಿ 19ರ ಬಳಿಕವಷ್ಟೇ ಗೊತ್ತಾಗಲಿದೆ.

news18-kannada
Updated:January 11, 2020, 4:16 PM IST
Pulse Polio: ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ; ಪಲ್ಸ್ ಪೋಲಿಯೋ ಯೋಜನೆಗೆ ಸಂಚಕಾರ?
ಪಲ್ಸ್​ ಪೋಲಿಯೋ
  • Share this:
ಬೆಂಗಳೂರು(ಜ.11): ಈ ವರ್ಷ ಆರಂಭದಿಂದಲೂ ಸೂರ್ಯಗ್ರಹಣ, ಚಂದ್ರಗ್ರಹಣದ್ದೇ ಸುದ್ದಿ. ಕಂಕಣ ಸೂರ್ಯಗ್ರಹಣದ ಬಳಿಕ ನಿನ್ನೆ ರಾತ್ರಿ ತೋಳ ಚಂದ್ರಗ್ರಹಣ ಸಂಭವಿಸಿದೆ. ಚಂದ್ರ ಗ್ರಹಣ ಅಷ್ಟೇನು ಭಾರತದಲ್ಲಿ ಗೋಚರ ಆಗದಿದ್ದರೂ, ಸೂರ್ಯಗ್ರಹಣ ಅತ್ಯಂತ ಪ್ರಭಾವಿಯಾಗಿ ಗೋಚರಿಸಿತ್ತು. ಆ ಬಳಿಕ ಬೆಂಗಳೂರಿನಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಹೋರಾಟ ಸರ್ಕಾರವನ್ನೇ ಬೆಚ್ಚಿ ಬೀಳೀಸಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಗುಲಾಬಿ ಬಣ್ಣದ ಸೀರೆಯನ್ನು ಉಟ್ಟು, ಬೃಹತ್​ ಪ್ರತಿಭಟನಾ ಜಾಥಾ ನಡೆಸಿದ್ದರು. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೃಹತ್​ ರ‍್ಯಾಲಿ ಹೊರಟು ಫ್ರೀಡಂ ಪಾರ್ಕ್​ ಬಳಿ ಜಮಾವಣೆ ಆಗಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ನಮ್ಮ ಬಾಕಿ ವೇತನ ಕೊಡದಿದ್ರೆ ನಾವು ಕೆಲಸ ಮಾಡಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ರು. ಆ ಬಳಿಕ ದೆಹಲಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಆದಷ್ಟೂ ಶೀಘ್ರವಾಗಿ ನಿಮ್ಮ ಸಮಸ್ಯೆ ಬಗೆಹರಿಸ್ತೇನೆ ಎಂದು ಭರವಸೆ ಕೊಟ್ಟ ಬಳಿಕ ಪ್ರತಿಭಟನೆ ಕೈಬಿಡಲಾಗಿತ್ತು. ಆದ್ರೆ ವೇತನ ಬರುವ ತನಕ ನಾವು ಕೆಲಸ ಮಾಡಲ್ಲ ಎಂದು ಮನೆಗೆ ಹೋಗಿರುವುದು ಸಮಸ್ಯೆ ತಂದೊಡ್ಡಿದೆ.

ರಾಜ್ಯದಲ್ಲಿ ಸರಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಸರ್ಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಲು ಬಳಸಿಕೊಳ್ಳಲಾಗ್ತಿತ್ತು. ಮಕ್ಕಳಿಗೆ ಪಲ್ಸ್​ ಪೋಲಿಯೋ ಹಾಕುವುದರಿಂದ ಹಿಡಿದು, ಗರ್ಭಿಣಿ, ಬಾಣಂತಿಗೆ ಪೋಷಣೆ ಜೊತೆಗೆ ಸರ್ವೇ ಕೆಲಸಗಳನ್ನೂ ಮಾಡಿಸುತ್ತಾರೆ. ಆದ್ರೆ ಗರ್ಭಿಣಿಯರು, ಬಾಣಂತಿ ಮತ್ತು ಇಂಜೆಕ್ಷನ್​ ಕೊಡುವ ಕೆಲಸಕ್ಕೆ ಸರ್ಕಾರ ಪ್ರತ್ಯೇಕವಾಗಿ 300,250 ಹಾಗು 200 ರೂಪಾಯಿ ಸಭಾವನೆ ಫಿಕ್ಷ್​ ಮಾಡಿತ್ತು., ಆದ್ರೆ ತಿಂಗಳಿಗೆ 300 ರಂತೆ ಮಾತ್ರ ಹಣ ಕೊಟ್ಟು ನಮ್ಮನ್ನು ಮೋಸ ಮಾಡಿದೆ.

ಕಳೆದ 15 ತಿಂಗಳಿಂದ ನಮಗೆ ಪಾವತಿಯಾಗಬೇಕಿದ್ದ ಹೆಚ್ಚುವರಿ ವೇತನ ಬರುವ ತನಕ ಕೆಲಸ ಮಾಡಲ್ಲ ಎಂಬುದು ಆಶಾ ಕಾರ್ಯಕರ್ತರ ಅಳಲು. ಇದೀಗ ಸರ್ಕಾರ, ಮಾತ್ರ ಬಾಕಿ ಹಣ ಪಾವತಿ ಮಾಡಿಲ್ಲ, ಹಾಗಾಗಿ ಪಲ್ಸ್​ ಪೋಲಿಯೋ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ ಎಂದಿದ್ದಾರೆ. ಹಾಗಾಗಿ ಈ ಬಾರಿಯ ಪಲ್ಸ್​ ಪೋಲಿಯೋ ಕಾರ್ಯಕ್ರಮ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಇದನ್ನೂ ಓದಿ: ವಿಜಯನಗರ ಪ್ರತ್ಯೇಕ ಜಿಲ್ಲೆ: ಹಂಪಿ ಉತ್ಸವ ಭಾಷಣದ ವೇಳೆ ತುಟಿ ಬಿಚ್ಚದ ಸಿಎಂ; ಆನಂದ್​​ ಸಿಂಗ್​​ ಆಸೆಗೆ ತಣ್ಣೀರು

ಸರ್ಕಾರ ನರ್ಸ್​ಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಸ್ವಯಂಸೇವಕ ಸಂಘದವರನ್ನು ಬಳಸಿಕೊಂಡು ಪಲ್ಸ್​ ಪೋಲಿಯೋ ಯಶಸ್ವಿ ಮಾಡುವ ಯೋಜನೆ ಹಾಕಿಕೊಂಡಿದೆ. ಇದೇ ಧೈರ್ಯದ ಮೇಲೆ ನಾವು ಕೆಲಸಕ್ಕೆ ಹಾಜರಾಗದ ಆಶಾ ಕಾರ್ಯಕರ್ತೆಯರ ವೇತವನ್ನು ಕಡಿತ ಮಾಡಲಾಗುವುದು ಎಂದು ಬ್ರಹ್ಮಾಸ್ತ್ರವನ್ನೂ ಪ್ರಯೋಗ ಮಾಡಿದೆ. ಆದ್ರೆ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕೊಡ್ತಿರೋ ಕಾಯಂ ವೇತನ ಕೇವಲ ₹3, 500 ಮಾತ್ರ.

ಹೀಗಾಗಿ ಸರ್ಕಾರ ವೇತನ ಕಡಿತಗೊಳಿಸುವ ನಿರ್ಧಾರಕ್ಕೆ ಆಶಾ ಕಾರ್ಯಕರ್ತೆಯರು ಯಾವುದೇ ಬೆಲೆ ಕೊಟ್ಟಿಲ್ಲ. ಹೀಗಾಗಿ ಪಲ್ಸ್​ ಪೋಲಿಯೋ ಕಾರ್ಯಕ್ರಮದಿಂದಲೂ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಸರ್ಕಾರಿ ವೈದ್ಯರು, ನರ್ಸ್​ಗಳು ಆಶಾ ಕಾರ್ಯಕರ್ತೆಯರ ಬೆನ್ನು ಬಿದ್ದಿದ್ದು, ಹಳ್ಳಿ ಹಳ್ಳಿಗಳಲ್ಲಿ ಮಕ್ಕಳು, ಬಾಣಂತಿ, ಗರ್ಭಿಣಿ ಹೀಗೆ ಎಲ್ಲಾ ಅಂಕಿ ಅಂಶಗಳನ್ನು ಇಟ್ಟುಕೊಂಡಿರುವ ಆಶಾ ಕಾರ್ಯಕರ್ತೆ ಬಾರದಿದ್ದರೆ ಕಾರ್ಯಕ್ರಮ ಯಶಸ್ವಿ ಕಷ್ಟ ಅನ್ನೋ ಮಾತುಗಳು ಕೇಳಿ ಬಂದಿವೆ.ಸರ್ಕಾರ ಜನವರಿ 18ರೊಳಗೆ ನಮಗೆ ಕೊಡಬೇಕಿರುವ ಬಾಕಿ ವೇತನವನ್ನು ಪಾವತಿ ಮಾಡಿದ್ರೆ ಪಲ್ಸ್​ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಆದ್ರೆ ಸರ್ಕಾರ ಬಾಕಿ ವೇತನ ಪಾವತಿ ಮಾಡುತ್ತಾ..? ಇಲ್ಲಾ ಪಲ್ಸ್​ ಪೋಲಿಯೋ ಲಸಿಕೆಗೆ ಈ ಬಾರಿ ಗ್ರಹಣ ಹಿಡಿಯುತ್ತಾ ಅನ್ನೋದು ಜನವರಿ 19ರ ಬಳಿಕವಷ್ಟೇ ಗೊತ್ತಾಗಲಿದೆ.

(ಲೇಖಕ: ಮಂಜೇಗೌಡ, ಕೆ ಮಲ್ಲೇನಹಳ್ಳಿ)
Published by: Ganesh Nachikethu
First published: January 11, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading