BS Yediyurappa Resigns: ಬಿ.ಎಸ್.ಯಡಿಯೂರಪ್ಪರ ರಾಜೀನಾಮೆ ನೀಡಿದ್ದರ ಹಿಂದಿನ 5 ಕಾರಣಗಳು ಇಲ್ಲಿವೆ..!

ಬಿಎಸ್​ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ವಯಸ್ಸು ಒಂದೇ ಕಾರಣವಾಯ್ತಾ? ಅಲ್ಲ ಎನ್ನುತ್ತಿದೆ ರಾಜಕೀಯ ಲೆಕ್ಕಾಚಾರ. ಹಾಗಾದರೆ ಯಡಿಯೂರಪ್ಪ ಪದತ್ಯಾಗದ ಹಿಂದಿರುವ ಬೇರೆಲ್ಲಾ ಕಾರಣಗಳು ಏನು ಅನ್ನೋದನ್ನು ನೋಡೋದಾದರೆ..

  • Share this:
ಬಿ.ಎಸ್​.ಯಡಿಯೂಪರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಎದ್ದಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 2 ವರ್ಷಗಳ ಬಳಿಕ ಬಿಎಸ್​ವೈ ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟಿದ್ದಾರೆ. ರಾಜೀನಾಮೆ ನೀಡುವಂತೆ ಯಾರೂ ನನ್ನ ಮೇಲೆ ಒತ್ತಡವೇರಿಲ್ಲ. ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಉದ್ದೇಶದಿಂದ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. 75 ವರ್ಷ ವಯಸ್ಸಾಗಿದ್ದರೂ ಸಿಎಂ ಆಗಲು ಅವಕಾಶ ನೀಡಿದ ಪ್ರಧಾನಿ ಮೋದಿ, ಅಮಿತ್​ ಶಾಗೆ ಧನ್ಯವಾದ ತಿಳಿಸಿದ್ದಾರೆ. ಬಿಎಸ್​ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ವಯಸ್ಸು ಒಂದೇ ಕಾರಣವಾಯ್ತಾ? ಅಲ್ಲ ಎನ್ನುತ್ತಿದೆ ರಾಜಕೀಯ ಲೆಕ್ಕಾಚಾರ. ಹಾಗಾದರೆ ಯಡಿಯೂರಪ್ಪ ಪದತ್ಯಾಗದ ಹಿಂದಿರುವ ಬೇರೆಲ್ಲಾ ಕಾರಣಗಳು ಏನು ಅನ್ನೋದನ್ನು ನೋಡೋದಾದರೆ..

ಕಾರಣ 1 - ಬಿಜೆಪಿಯಲ್ಲಿ ಆಂತರಿಕ ಭಿನ್ನಮತ..!

ಬಿಎಸ್​ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ದೊಡ್ಡ ಕಾರಣ ಬಿಜೆಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯ, ಸಿಎಂ ಸ್ಥಾನಕ್ಕಾಗಿ ಪೈಪೋಟಿ, ರಾಜಕೀಯ ಮಹಾತ್ವಾಕಾಂಕ್ಷೆ. ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದ ಮೊದಲ ವ್ಯಕ್ತಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​​​. 78 ವರ್ಷದ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರೆಯಬಾರದು ಎಂದು ಬಹಿರಂಗವಾಗೇ ಯತ್ನಾಳ್​​ ಹೇಳಿಕೆಗಳನ್ನು ನೀಡಿದ್ದರು. ರಾಜ್ಯದಲ್ಲಿ ಬಿಜೆಪಿ ಉಳಿಯಲು ಯಡಿಯೂರಪ್ಪರನ್ನು ಕೆಳಗಿಳಿಸಬೇಕು ಎಂದು ಹೈಕಮಾಂಡ್​ನ ಒತ್ತಾಯಿಸಿದ್ದರು. ಸಿ.ಪಿ.ಯೋಗೇಶ್ವರ್​​, ಅರವಿಂದ್​ ಬೆಲ್ಲದ್​ ಸಹ ಬಿಎಸ್​ವೈ ವಿರುದ್ಧ ಹೈಕಮಾಂಡ್​ ಮಟ್ಟದಲ್ಲಿ ರಾಜಕೀಯ ಮಾಡಿದರು. ಇನ್ನು ಕೇಂದ್ರ ಸಚಿವ ಸ್ಥಾನ ಕಳೆದುಕೊಂಡ ಮಾಜಿ ಸಿಎಂ ಸದಾನಂದಗೌಡರು ರಾಜ್ಯರಾಜಕಾರಣಕ್ಕೆ ಮರಳುವ ನಿಟ್ಟಿನಲ್ಲಿ ಯಡಿಯೂರಪ್ಪ ವಿರುದ್ಧ ಹೋದರು ಎಂಬ ಮಾತು ಕೇಳಿ ಬರುತ್ತಿದೆ.

ಕಾರಣ 2 - ಭ್ರಷ್ಟಾಚಾರ ಆರೋಪ

ಆಡಳಿತದಲ್ಲಿ ಯಡಿಯೂರಪ್ಪ ಪುತ್ರರಾದ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಹಸ್ತಕ್ಷೇಪದ ಬಗ್ಗೆ ಬಿಜೆಪಿಯೊಳಗೆ ತೀವ್ರ ಅಸಮಾಧಾನವಿತ್ತು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಸೂಪರ್​ ಸಿಎಂನಂತೆ ವರ್ತಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇನ್ನು 10 ಎಕರೆ ಭೂಮಿಯನ್ನು ಖಾಸಗಿಯವರಿಗೆ ನೀಡುವ ಮೂಲಕ ತೆರಿಗೆ ನಷ್ಟವನ್ನು ಮಾಡಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. 10 ವರ್ಷಗಳ ಹಿಂದಿನ ಡಿನೋಟಿಫಿಕೇಷನ್​ ಪ್ರಕರಣಕ್ಕೆ ಏಪ್ರಿಲ್​ನಲ್ಲಿ ಕೋರ್ಟ್​​ ತಡೆಯಾಜ್ಞೆ ನೀಡಿತ್ತು.

ಕಾರಣ 3- ಯಡಿಯೂರಪ್ಪ ವಯಸ್ಸು

ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರು ಪ್ರಮುಖ ಸ್ಥಾನದಲ್ಲಿರಬಾರದು ಎಂಬ ನಿಯಮವಿದ್ದು, 2 ವರ್ಷಗಳ ಆಡಳಿತ ನಡೆಸಿ ರಾಜೀನಾಮೆ ನೀಡುವಂತೆ ಮೊದಲೇ ಹೈಕಮಾಂಡ್​​ ಬಿಎಸ್​ವೈಗೆ ತಿಳಿಸಿತ್ತು ಎನ್ನಲಾಗುತ್ತಿದೆ. ಇನ್ನು ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಹೊಸ ಮುಖ, ಯುವ ನಾಯಕತ್ವ ಬೇಕಿದೆ ಎಂಬ ಕೂಗು ಇತ್ತು.

ಕಾರಣ 4 - ಶಿಕ್ಷಣ ಸಚಿವ ಸುರೇಶ್​ ಕುಮಾರ್​?

ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಿಕ್ಷಣ ನೀತಿಗಳನ್ನು ಜನ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ. ಖುದ್ದು ಶಿಕ್ಷಣ ಸಚಿವ ಸುರೇಶ್​ಕುಮಾರ್​​ ಅವರೇ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಹಿಂದಿನ ಸರ್ಕಾರ ಅಂಗೀಕರಿಸಿರುವ ಶಾಲಾ ಶುಲ್ಕ ನಿಯಂತ್ರಣ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದಿದ್ದರು.

ಕಾರಣ 5- ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಫಲ

ಯಡಿಯೂರಪ್ಪ ಸರ್ಕಾರ ಕೋವಿಡ್​ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸ್ವಪಕ್ಷೀಯ ಶಾಸಕ ಯತ್ನಾಳ್​ ಅವರೇ ಆರೋಪಿಸಿದ್ದರು. ಇನ್ನು ತಾಜಾ ಉದಾಹರಣೆ ಎಂಬಂತೆ ಸದ್ಯ ರಾಜ್ಯದ ಜನತೆ ಮಳೆಯಿಂದ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಟ್ಟದಲ್ಲಿ ನಾಯಕತ್ವ ಬದಲಾವಣೆಯೇ ಕಳೆದ ಕೆಳ ದಿನಗಳಿಂದ ಮುಖ್ಯವಿಷಯವಾಗಿರುವುದು ಜನರಲ್ಲಿ ಆಕ್ರೋಶ ಮಡುಗಟ್ಟಿದೆ.
Published by:Kavya V
First published: