Karnataka Budget 2022: 'ಉತ್ತರ'ದ 'ಕಲ್ಯಾಣ'ಕ್ಕೆ ಸಿಎಂ ಕೊಟ್ಟಿದ್ದೇನು? ಕರಾವಳಿಗೆ ಸಿಕ್ಕಿದ್ದೇನು?

ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರು. ಹೀಗಾಗಿ ಸಹಜವಾಗಿಯೇ ಆ ಭಾಗದವರಿಗೆ ಸಿಎಂ ಚೊಚ್ಚಲ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇತ್ತು. ಹೀಗಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ್ಕೆ ಬಜೆಟ್‌ನಲ್ಲಿ ಏನು ಸಿಕ್ಕಿದೆ? ಕರಾವಳಿ ಅಭಿವೃದ್ಧಿಗೆ ಏನು ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ...

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಸಿಎಂ (CM) ಬಸವರಾಜ ಬೊಮ್ಮಾಯಿ (Basavaraj Bommai) ಇಂದು ಚೊಚ್ಚಲಬಾರಿಗೆ ಬಜೆಟ್ (Budget) ಮಂಡಿಸಿದ್ದಾರೆ. ಮೊದಲ ಬಾರಿಗೆ ಬರೋಬ್ಬರಿ 2,65,720 ಕೋಟಿ (Crore) ಗಾತ್ರದ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ವಲಯವಾರು ಪ್ರದೇಶಗಳ ಅಭಿವೃದ್ಧಿಗೆ (Development) ಆದ್ಯತೆ ನೀಡಿದ್ದಾರೆ. ಇನ್ನು ಸಿಎಂ ಉತ್ತರ ಕರ್ನಾಟಕದವರಾಗಿರೋದ್ರಿಂದ (Uttara Karnataka) ಆ ಭಾಗದ ಜೊತೆಗೆ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಜನರೂ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿಎಂ ಅವರಿಗೆ ನಿರಾಸೆ ಮಾಡದೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಇನ್ನು ಕರಾವಳಿ ಜಿಲ್ಲೆಗಳಿಗೂ ಹೊಸ ಯೋಜನೆಗಳನ್ನು ಸಿಎಂ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ್ಕೆ 3 ಸಾವಿರ ಕೋಟಿ ರೂಪಾಯಿಗಳ ಯೋಜನೆ

ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 25 ನವೋದ್ಯಮಗಳನ್ನು ಉತ್ತೇಜಿಸಲು Elevate Kalyana Karnataka ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದು, ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಹಿನ್ನೆಲೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಅನುದಾನ ನೀಡಿದ್ದಾರೆ.

ಹಲವು ತಾಲೂಕುಗಳಿಗೆ ಯೋಜನೆಗಳ ಘೋಷಣೆ

ಕಲ್ಯಾಣ ಕರ್ನಾಟಕದ ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಯೋಜನೆಗಳಿಗೆ 1,500 ಕೋಟಿ ರೂ. ಹಾಗೂ ಮೈಕ್ರೋ ಯೋಜನೆಗಳಿಗೆ 1,500 ಕೋಟಿ ರೂ. ಮೀಸಲಿಡಲಾಗಿದೆ. ಇನ್ನು, ಕೊಪ್ಪಳ, ರಾಯಚೂರು ಜಿಲ್ಲೆಯ ರೈತರ ಬಹುದಿನದ ಕನಸಾಗಿದ್ದ ಕೊಪ್ಪಳದ ನವಲಿ ಬಳಿ ಸಮತೋಲನ ಜಲಾಶಯಕ್ಕೆ 1,000 ಕೋಟಿ ರೂ. ಮೀಸಲಿಡಲಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Karnataka Budget 2022: ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ! ಬಜೆಟ್‌ನಲ್ಲಿ ಕಾಂಗ್ರೆಸ್‌ಗೆ ಟಾಂಗ್‌ ಕೊಟ್ಟ ಸಿಎಂ

ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ಅನುದಾನ

ಕಲಬುರಗಿಯಲ್ಲಿ ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದು, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ನಾಳದಲ್ಲಿ ಬೊಂಬೆ, ಶಹಾಪುರದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕಲಬುರಗಿಯಲ್ಲಿ ಮೆಗಾ-ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಅದಲ್ಲದೇ ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲು ನೀಡಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ ಸಿಎಂ ಭರಪೂರ ಕೊಡುಗೆ

 ಬೀದರ್‌ ಮತ್ತು ಕೊಪ್ಪಳದಲ್ಲಿ ವಿನೂತನ ಮಾದರಿಯ ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ, ಕಲಬುರಗಿಯಲ್ಲಿ 1000 ಸಾಮರ್ಥ್ಯದ ಬಹುಮಹಡಿಯ ದೀನ್‌ದಯಾಳ್‌ ಉಪಾಧ್ಯಯ ಸೌಹಾರ್ದ ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣ, 186 ಕೋಟಿ ರೂ. ವೆಚ್ಚದಲ್ಲಿ ರಾಯಚೂರಿನಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣ, ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ ತಯಾರಿ, ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಟೂರಿಸಂ ಸರ್ಕ್ಯೂಟ್‌ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.

ಇನ್ನು ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲು, ಬೀದರ್‌ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ, ಹೊಸಪೇಟೆ, ಬಳ್ಳಾರಿ, ಬೀದರ್‌, ಯಾದಗಿರಿಯಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.

ಉತ್ತರ ಕರ್ನಾಟಕ್ಕೆ ಸಿಕ್ಕಿದ್ದೇನು?

 ಉತ್ತರ ಕರ್ನಾಟಕ ಭಾಗಕ್ಕೆ ಈ ಬಾರಿ ಬಜೆಟ್ ಖುಷಿ ನೀಡಿದೆ. ಗದಗ-ಯಲವಿಗಿ ನೂತನ ರೈಲು ಮಾರ್ಗ ನಿರ್ಮಿಸಲಾಗುವುದು. ಇದಕ್ಕಾಗಿ 640 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗಕ್ಕೆ 927 ಕೋಟಿ, 186  ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ, ರಾಯಚೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಅಭಿವೃದ್ಧಿಯಾಗುವುದು ಎಂದಿದ್ದಾರೆ.

ಕರಾವಳಿ ಅಭಿವೃದ್ಧಿಗೆ 3 ಸಾವಿರ ಕೋಟಿ ಅನುದಾನ

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ 3 ಸಾವಿರ ಕೋಟಿ ಅನುದಾನ ಘೋಷಿಸಲಾಗಿದೆ. ಪ್ರಮುಖವಾಗಿ ಪ್ರವಾಸೋದ್ಯಮ, ಮೀನುಗಾರಿಕಾ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ.

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಉತ್ತೇಜನ

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ CRZ ಮಾನದಂಡ ಸಡಿಲಗೊಳಿಸಲಾಗಿದೆ. ಕೇಂದ್ರಸರ್ಕಾರಕ್ಕೆ ಮನವರಿಕೆ ಮಾಡಿಸಿ ಅನುಮೋದನೆ ಪಡೆಯಲು ಯತ್ನ ಮಾಡಲಾಗಿದೆ. ಅಂಕೋಲ ತಾಲೂಕಿನ ತದಡಿ ಬಂದರಿನಲ್ಲಿ ಸಮಗ್ರ ಪರಿಸರ ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ ಘೋಷಣೆ ಮಾಡಲಾಗಿದೆ.

ಕರಾವಳಿ ಭಾಗದ ಆಳ ಸಮುದ್ರದ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ 100 ಆಳ ಸಮುದ್ರ ಮೀನುಗಾರಿಕೆ ಹಡಗುಗಳಿಗೆ ನೆರವು ನೀಡಲು ಮತ್ಸ್ಯ ಸಿರಿ ಯೋಜನೆ ಅನುಷ್ಠಾನ ಮಾಡಲಾಗಿದೆ

ಕರಾವಳಿಯಲ್ಲಿ ನಾರಾಯಣ ಗುರು ವಸತಿ ಶಾಲೆ

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ನಾರಾಯಣಗುರು ವಸತಿ ಶಾಲೆ ಪ್ರಾರಂಭ. ಕರಾವಳಿಯಲ್ಲಿ ಸಾಗರಮಾಲಾ ಯೋಜನೆಯಡಿ 1880 ಕೋಟಿ ವೆಚ್ಚದಲ್ಲಿ 24 ಯೋಜನೆ ಅನುಷ್ಠಾನ ಹಾಗೂ ಕಾರವಾರ ಬಂದರು ವಿಸ್ತರಣೆ ಘೋಷಣೆ ಮಾಡಲಾಗಿದೆ.

ಕಾರವಾರದ ಮಾಜಾಳಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಂದರು ನಿರ್ಮಾಣಕ್ಕೆ ಹಣ ಮಂಜೂರು. ಅಂಕೋಲದ ಬೇಲಿಕೇರಿ-ಕೇಣಿಯಲ್ಲಿ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Karnataka Budget 2022: ಗ್ರಾಮಗಳ ಅಭಿವೃದ್ಧಿಗೆ ಸಿಎಂ ಕೊಟ್ಟಿದ್ದೇನು? ಸಮಾಜ ಕಲ್ಯಾಣಕ್ಕೆ ಸಿಕ್ಕ ಅನುದಾನವೆಷ್ಟು?

ಕಾರವಾರದಲ್ಲಿ ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪನೆ ಘೋಷಣೆ. ಕರಾವಳಿ ಭಾಗದ ಜಲಮೂಲಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಲು 840 ಕೋಟಿ ಘೋಷಣೆ, ಕಾಳೀ ನದಿಯಿಂದ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆ ರೂಪಿಸುವ ಘೋಷಣೆ ಮಾಡಲಾಗಿದೆ.
Published by:Annappa Achari
First published: