ಏನಿದು ರಾಷ್ಟ್ರಪತಿ ಆಡಳಿತ, ಯಾವ ಸಂದರ್ಭದಲ್ಲಿ ಹೇರಲಾಗುತ್ತದೆ; ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ನೀಡಿದ ಆದೇಶವೇನು?

What Is President Rule: ರಾಷ್ಟ್ರಪತಿ ಆಡಳಿತ ಅಂದರೆ ಏನು, ಯಾವೆಲ್ಲ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯಗಳ ಮೇಲೆ ಹೇರಬಹುದು, ಸಂವಿಧಾನದ ಯಾವ ಪರಿಚ್ಛೇದದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಈ ಹಿಂದಿನ ರಾಷ್ಟ್ರಪತಿ ಆಡಳಿತ ಹೇರಿಕೆಯ ಪ್ರಮುಖ ಘಟನೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ

news18
Updated:July 19, 2019, 4:52 PM IST
ಏನಿದು ರಾಷ್ಟ್ರಪತಿ ಆಡಳಿತ, ಯಾವ ಸಂದರ್ಭದಲ್ಲಿ ಹೇರಲಾಗುತ್ತದೆ; ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ನೀಡಿದ ಆದೇಶವೇನು?
ಸಾಂದರ್ಭಿಕ ಚಿತ್ರ
  • News18
  • Last Updated: July 19, 2019, 4:52 PM IST
  • Share this:
ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಸಾಂವಿಧಾನಿಕ ಬಿಕ್ಕಟ್ಟು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಕೆರಳಿದೆ. ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ಆದೇಶ ನೀಡಿದ್ದಾರೆ. ಆದರೆ, ವಿಶ್ವಾಸಮತ ಯಾಚನೆ ಸದ್ಯದಲ್ಲಿ ಸಾಧ್ಯವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಮುಂದೆ ಮೈತ್ರಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿ ರಾಷ್ಟ್ರಪತಿಗೆ ಶಿಫಾರಸು ಮಾಡುವ ಅಧಿಕಾರವಿದೆ. ಒಂದು ವೇಳೆ ರಾಜ್ಯಪಾಲರು ಹಾಗೆ ಮನವಿ ಮಾಡಿದರೆ ರಾಷ್ಟ್ರಪತಿ ರಾಜ್ಯದ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವನ್ನು ವಜಾಗೊಳಿಸಿ, ರಾಜ್ಯದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದು, ಇಲ್ಲವೇ ರಾಜ್ಯಪಾಲರ ಆಡಳಿತಕ್ಕೆ ಒಪ್ಪಿಸಬಹುದು.

ಹಾಗಾದರೆ, ರಾಷ್ಟ್ರಪತಿ ಆಡಳಿತ ಅಂದರೆ ಏನು, ಯಾವೆಲ್ಲ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯಗಳ ಮೇಲೆ ಹೇರಬಹುದು, ಸಂವಿಧಾನದ ಯಾವ ಪರಿಚ್ಛೇದದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಈ ಹಿಂದಿನ ರಾಷ್ಟ್ರಪತಿ ಆಡಳಿತ ಹೇರಿಕೆಯ ಪ್ರಮುಖ ಘಟನೆಗಳು ಯಾವುವು, ಕೆಲ ಪ್ರಮುಖ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳೇನು ಎಂಬ ಮಾಹಿತಿ ಇಲ್ಲಿದೆ.

ಯಾವುದೇ ರಾಜ್ಯದಲ್ಲಿ ಸರ್ಕಾರವು ಕಾರ್ಯನಿರ್ವಹಿಸುವಲ್ಲಿ ವಿಫಲವಾದಾಗ  ಸಂವಿಧಾನದ ವಿಧಿ​ 356ರ ಪ್ರಕಾರ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಅಥವಾ ಕೇಂದ್ರದ ಆಡಳಿತವನ್ನು ಹೇರಬಹುದಾಗಿದೆ. ರಾಷ್ಟ್ರಪತಿ ಆಡಳಿತ ಎನ್ನುವುದು ಭಾರತೀಯ ಸಂವಿಧಾನದ ಅನುಚ್ಛೇದ 356ರಂತೆ ಕೇಂದ್ರವು ರಾಜ್ಯ ಸರ್ಕಾರದ ಮೇಲೆ ವಿಧಿಸುವ ಪ್ರಕ್ರಿಯೆಯಾಗಿದೆ.

ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತದ ವಿವಿಧ ಪಾಳೇಗಾರರು, ರಾಜ್ಯಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಭಾರತ ಸರ್ಕಾರದ ಕಾಯ್ದೆ 1935ಅನ್ನು ರಚಿಸಲಾಯಿತು. ಈ ಕಾಯ್ದೆಯ 93ನೇ ವಿಧಿ ಪ್ರಕಾರ ಆಯಾ ಪ್ರಾಂತ್ಯದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದರೆ ಅಥವಾ ಆ ರಾಜ್ಯದಲ್ಲಿ ಅಶಾಂತಿ ತಲೆದೋರಿದೆ ಎಂಬುದು ಖಾತ್ರಿಯಾದರೆ ರಾಜ್ಯಪಾಲರು ಆಯಾ ಪ್ರಾಂತ್ಯದ ಅಧಿಕಾರವನ್ನು ಕೈಗೆತ್ತಿಕೊಂಡು ತಾವೇ ಆಡಳಿತ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಸಂದರ್ಭದಲ್ಲಿ ಇದನ್ನೇ ಮಾದರಿಯಾಗಿರಿಸಿಕೊಂಡು 356ನೇ ಅನುಚ್ಛೇದವನ್ನು ಸೇರಿಸಲಾಗಿದೆ.

ಯಾವುದೇ ರಾಜ್ಯದಲ್ಲಿ ಸರ್ಕಾರ ಬಹುಮತ ಕಳೆದುಕೊಂಡರೆ ರಾಜ್ಯಪಾಲರು ರಾಷ್ಟ್ರಪತಿ ಮೂಲಕ ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ. ಇದರ ಅವಧಿ ಆರು ತಿಂಗಳು. ಈ ಅವಧಿಯೊಳಗೆ ಯಾವ ಪಕ್ಷವೂ ಬಹುಮತ ಸಾಬೀತುಪಡಿಸದಿದ್ದರೆ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ರಾಜ್ಯದ ಕಾರ್ಯ ನಿರ್ವಹಣೆ ಅಧಿಕಾರ ಚುನಾಯಿತ ಮುಖ್ಯಮಂತ್ರಿ ಬದಲಾಗಿ ರಾಷ್ಟ್ರಪತಿ ಕೈಗೆ ಹೋಗುವುದರಿಂದ ಇದನ್ನು ರಾಷ್ಟ್ರಪತಿ ಆಡಳಿತ ಎನ್ನುತ್ತಾರೆ. ರಾಜ್ಯಗಳಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತನಿಧಿಯಾಗಿರುತ್ತಾರೆ. ಆದ್ದರಿಂದ ಅವರು ಸಲಹೆಗಾರರನ್ನು ನೇಮಿಸಿಕೊಳ್ಳುವ ಮೂಲಕ ರಾಜ್ಯದ ದೈನಂದಿನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ನೀತಿಗಳೇ ರಾಜ್ಯದಲ್ಲಿ ಅನುಸರಿಸಲ್ಪಡುತ್ತವೆ.

ಯಾವ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದು

  • ಮುಖ್ಯಮಂತ್ರಿ ನೇಮಕದಲ್ಲಿ ವಿಫಲವಾದಾಗ

  • ಮೈತ್ರಿಕೂಟದ ಪಕ್ಷಗಳು ಬೆಂಬಲ ವಾಪಸ್​ ಪಡೆದಾಗ

  • ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟರೆ

  • ರಾಜಕೀಯ ಅಸ್ಥಿರತೆ ತಲೆದೋರಿದರೆ

  • ರಾಜ್ಯ ಸರ್ಕಾರ ಅಸಂವಿಧಾನಿಕವಾಗಿ ಕಾರ್ಯನಿರ್ವಹಿಸಿದರೆ

  • ಕಾನೂನು ಸುವ್ಯವಸ್ಥೆ ಕುಸಿದಾಗ


ಬೊಮ್ಮಾಯಿ ಪ್ರಕರಣದ ಐತಿಹಾಸಿಕ ತೀರ್ಪು:

ಕರ್ನಾಟಕದಲ್ಲಿ ಎಸ್​.ಆರ್​.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ 1989ರ ಏಪ್ರಿಲ್ 20ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಏಪ್ರಿಲ್​ 27ರಂದು ವಿಧಾನಸಭೆ ಅಧಿವೇಶನ ಕರೆಯಲಾಗಿದ್ದು, ಅಂದು ಬಹುಮತ ಸಾಬೀತುಪಡಿಸುವುದಾಗಿ ತಿಳಿಸಿದ್ದರು. ಆದರೆ, ಇದರ ಮರುದಿನವೇ ಬೊಮ್ಮಾಯಿ ಅವರಿಗೆ ಭಾರೀ ಆಘಾತ ಕಾದಿತ್ತು. ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್​ ಅವರು ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಿಸರ್ಜಿಸಿ  ರಾಷ್ಟ್ರಪತಿ ಆಳ್ವಿಕೆ ಹೇರುವ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದರು. ಇದನ್ನು ಪ್ರಶ್ನಿಸಿ ಬೊಮ್ಮಾಯಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ ಎಂದು ಏ.26ರಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬೊಮ್ಮಾಯಿ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್​ ಸರ್ಕಾರವೊಂದು ಬಹುಮತ ಹೊಂದಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಂವಿಧಾನದ ವೇದಿಕೆ ವಿಧಾನಸಭೆಯ ಅಧಿವೇಶನವೇ ಹೊರತು ರಾಜಭವನ ಅಲ್ಲ. ಸಂವಿಧಾನದ 356ನೇ ವಿಧಿ ರಾಷ್ಟ್ರಪತಿಗೆ ನೀಡಿರುವುದು ಷರತ್ತುಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ ಎಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು.

ಬಿಹಾರ ಪ್ರಕರಣ:

2005ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಆಗ ಜೆಡಿಯು ಮುಖಂಡ ನಿತೀಶ್​ ಕುಮಾರ್ ಮತ್ತು ಬಿಜೆಪಿ ನಡುವೆ ಮೈತ್ರಿ ಕಸರತ್ತು ನಡೆಯುತ್ತಿತ್ತು. ಈ ವೇಳೆ ಬಿಹಾರ ರಾಜ್ಯಪಾಲ ಬೂಟಾಸಿಂಗ್ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಆಗ ರಷ್ಯಾ ಪ್ರವಾಸದಲ್ಲಿ ಇದ್ದ ರಾಷ್ಟ್ರಪತಿ ಡಾ. ಎ.ಪಿ.ಜಿ. ಅಬ್ದುಲ್​ ಕಲಾಂ ಅವರಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಒಪ್ಪಿಗೆ ಪಡೆದು, ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಈ ನಿರ್ಧಾರವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದಾಗ ರಾಜ್ಯಪಾಲ ಮತ್ತು ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

Published by: HR Ramesh
First published: July 19, 2019, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading