ಬೆಂಗಳೂರು (ಮಾರ್ಚ್ 22); ಅದು ದೇಶಕ್ಕೆ ಅನ್ನ ನೀಡುವ ಅನ್ನದಾತನ 116 ದಿನಗಳ ನಿರಂತರ ಹೋರಾಟ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳ ವಿರುದ್ಧ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಪ್ರತಿಭಟನೆ. ಇಷ್ಟು ದಿನಗಳ ಕಾಲ ರಾಷ್ಟ್ರ ರಾಜಧಾನಿಗೆ ಸೀಮಿತವಾಗಿದ್ದ ಆಕ್ರೋಶ ಇಂದು ರಾಜ್ಯ ರಾಜಧಾನಿಯಲ್ಲೂ ವ್ಯಕ್ತವಾಯ್ತು. ಕಳೆದ 4 ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇದೇ 26ರಂದು ನಾಲ್ಕು ತಿಂಗಳು ಪೂರ್ಣಗೊಳ್ಳಲಿದ್ದು ಅಂದು ಭಾರತ್ ಬಂದ್ ಗೆ ಈಗಾಗಲೇ ರೈತ ನಾಯಕರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ರೈತ ಮುಖಂಡರು ಮುಂದಾಗಿದ್ದು, ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಸಮಾವೇಶಗಳನ್ನು ನಡೆಸುತ್ತಿದ್ದು ಇಂದು ರಾಜ್ಯದಲ್ಲೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.
ರಾಜಧಾನಿಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ರು. ರೈತರು ವಿಧಾನಸೌಧ ಚಲೋಗೆ ಮುಂದಾಗಿದ್ರು. ಇಂದು 12ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾದ ರ್ಯಾಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಮೂಲಕ ಸಾಗಿದ್ರು. ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿದ್ರು. ಶೇಷಾದ್ರಿ ರೋಡ್ ಮೂಲಕ ರೈತರು ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ರು ಆದರೆ ಪೊಲೀಸರು ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ರೋಡ್ ಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ತಡೆದರು.
ರೈತರು ಮಾತ್ರ ಬ್ಯಾರಿಕೇಡ್ ಗಳನ್ನು ತಳ್ಳಲು ಮುಂದಾದ್ರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಮತ್ತು ತಳ್ಳಾಟ ನೂಕಾಟ ಉಂಟಾಯಿತು. ಮಹಿಳೆಯರು ರೋಡ್ ಮೇಲೆ ಕುಳಿತು ನಾವು ವಿಧಾನ ಸೌಧ ಮುತ್ತಿಗೆ ಹಾಕಬೇಕು ನಮ್ಮನ್ನು ಬಿಡಿ ಅಂತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಪ್ರವೇಶ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಗಳು ರೈತರನ್ನು ಅಲ್ಲಿಂದ ಫ್ರೀಡಂ ಪಾರ್ಕ್ ಗೆ ಕಳಿಸಿದರು.
ಫ್ರೀಡಂ ಪಾರ್ಕ್ ಪಕ್ಕದ ಕಾಳಿದಾಸ ರೋಡಲ್ಲಿ ಬೃಹತ್ ವೇದಿಕೆ ಮೂಲಕ ಸಮಾವೇಶ ಮಾಡಿದ್ರು. ವೇದಿಕೆಯಲ್ಲಿ ರಾಷ್ಟ್ರ ರೈತ ಮುಖಂಡರಾದ ರಾಕೇಶ್ ಸಿಂಗ್ ಟಿಕಾಯತ್, ಡಾ. ದರ್ಶನ್ ಪಾಲ್, ಯದ್ದವೀರ್ ಸಿಂಗ್ ಹಾಗೂ ರಾಜ್ಯ ಮುಖಂಡರುಗಳಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ನಟ ಚೇತನ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಭಾಗಿಯಾಗಿದರು.
ಈ ಸಂಧರ್ಭ ಮಾತಾನಾಡಿದ ರೈತ ನಾಯಕ ರಾಕೇಶ್ ಸಿಂಗ್ ಟಿಕಾಯತ್, ದೇಶದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ ಮೋದಿ ಸರ್ಕಾರ. ಹೀಗಾಗಿ ರೈತರ ಜೊತೆಗೆ ಮಾತುಕತೆಗೆ ಬರುತ್ತಿಲ್ಲ ಅವರು. ಈಗ ಅಸಲಿಗೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದೆ. ಇಡೀ ದೇಶ ಬಂಧನಕ್ಕೊಳಗಾಗಿದೆ. ರೈಲ್ವೇ, ಏರ್ಪೋರ್ಟ್, ತೈಲ ಕಂಪೆನಿ, ಎಲ್ಐಸಿ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಪೊಲೀಸರನ್ನು ಬಿಟ್ಟು ಶ್ರಮಿಕ ರೈತ ವರ್ಗದ ಮೇಲೆ ದಬ್ಬಾಳಿಕೆ ಮಾಡಲಾಗ್ತಿದೆ. ರೈತರು ತಮ್ಮ ದಾರಿಯನ್ನು ತಾವೇ ಸೃಷ್ಠಿಸಿಕೊಳ್ತಾರೆ. ಕೇಂದ್ರ ಸರ್ಕಾರ ವಿರುದ್ಧ ಮುಂದೆ ದೊಡ್ಡ ಮಟ್ಟದ ಹೋರಾಟ ಮಾಡ್ಬೇಕಾಗಿದೆ ಎಂದರು.
ಈ ವೇಳೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ನಟ ಚೇತನ್, ಇದು ಎರಡನೇ ಸ್ವಾತಂತ್ರ್ಯ ಹೋರಾಟಕರೊನಾ ಸಂಕಷ್ಟದ ಸಂದರ್ಭದಲ್ಲಿ ರೈತ ವಿರೋಧಿ ಕಾಯ್ದೆ ಜಾರಿ ಮಾಡಿದ್ದಾರೆ ರೈತರ ಪರ ನಿಲ್ಲುತ್ತಾರೊ ಅಂತಹವರನ್ನು ಭಯೋತ್ಪಾದಕರು ಅಂತ ಹಣೆಪಟ್ಟಿ ಕಟ್ಟುತ್ತಾರೆ ನಾವಲ್ಲ ಭಯೋತ್ಪಾದಕರು , ಜನವಿರೋಧಿ ಕಾಯ್ದೆ ಜಾರಿ ಮಾಡುವ ಕೇಂದ್ರ, ರಾಜ್ಯ ಸರ್ಕಾರಗಳು ಭಯೋತ್ಪಾದಕರು ರೈತರ ಹೆಸರು ಪಡೆಯುವ ನೈತಿಕ ಹಕ್ಕಿಲ್ಲ, ಸಿಎಂ ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿ, ರೈತ ವಿರೋಧಿ ಕಾನೂನನ್ನು ಬೆಂಬಲಿಸುತ್ತಾರೆ ಮಣ್ಣಿನ ಮಗ ಎನ್ನುವ ಮಾಜಿ ಪ್ರಧಾನಿಗೂ ಮಣ್ಣಿನ ಮಕ್ಕಳ ಬಗ್ಗೆ ಅನುಕಂಪವಿಲ್ಲ ವಿರೋಧ ಪಕ್ಷದವರು ಎಪಿಎಂಸಿ ಕಾಯ್ದೆ ಬೇಕು ಎಂದು ಹೇಳುತ್ತಾರೆ ಈ ಮೂರು ಪಕ್ಷಗಳ ಗುರಿ ಒಂದೇ, ಅದೇ ದಬ್ಬಾಳಿಕೆಯ ಗುರಿ ಎಂದು ಹೇಳಿದರು.
ಇನ್ನೂ ಈ ವೇಳೆ ವೇದಿಕೆಗೆ ಆಗಮಿಸಿದ ಕೃಷಿ ಸಚಿವ ಬಿ.ಸಿ ಪಾಟೀಲ್ ಗೆ ಟೀಕಿಸಿದ ರಾಕೇಶ್ ಟಿಕಾಯತ್ ವೇದಿಕೆಯಲ್ಲಿ ಅವರ ವಿರುದ್ಧವೇ ಮಾತನಾಡಬೇಕಾ ಎಂದು ಕಾಲೆಳೆದ್ರು. ನಂತರ ಮಾತಾನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಮ್ಮ ಆರ್ಥಿಕ ನೀತಿ ಬುಡಮೇಲು ಆಗಿದೆ. ಇಂಪಿರಿಯಲ್ ಬ್ಯಾಂಕ್ ಇತ್ತು. ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಸಮಾನವಾಗಿತ್ತು. ಇವತ್ತು ಆರ್ ಬಿ ಐ ಬಂದು ಎಲ್ಲ ತಲೆಗೆಳಗಾಗಿದೆ. ಸರ್ಕಾರ ಹಗಲು ದರೋಡೆ ನೀತಿ ರೂಪಿಸುತ್ತಿದೆ. ಈ ದೇಶದ ಎಲ್ಲಾ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಖಾಸಗಿ ಕಂಪನಿಗಳ ಕೈಗೆ ಹೋಗಬೇಕು ಎಂಬುದು ಅವರ ಉದ್ದೇಶವಾಗಿದೆ.
ಕೃಷಿಕರು ಹಳ್ಳಿಗಳಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ತಿಂಗಳ 26ಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ನಾಲ್ಕು ತಿಂಗಳುಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು ರಾಜ್ಯದಲ್ಲೂ ಬಂದ್ ಬೆಂಬಲ ನೀಡಲು ರೈತ ಮುಖಂಡರು ಮಾರ್ಚ್ 26 ರಂದು ಕರ್ನಾಟಕ ಬಂದ್ ಎಂಬ ಫ್ಲೆಕ್ಸ್ ಅನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ರು. ನಂತರ ರೈತ ಮುಖಂಡರು ಕೃಷಿ ಸಚಿವ ಬಿ.ಸಿ.ಪಾಟೀಲ್ ಗೆ ಕೇಂದ್ರ ಕೃಷಿ ಕಾಯ್ದೆ ತಿದ್ದು ಪಡಿ ಸೇರಿದಂತೆ 23 ಅಂಶಗಳುಳ್ಳ ಮನವಿ ಪತ್ರ ನೀಡಿದರು.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಟ್ರೆ ಲೋಕಸಭೆ ಚುನಾವಣೆಗೆ ನಿಲ್ತೀನಿ; ಇಲ್ಲಾಂದ್ರೆ ರಾಜಕೀಯ ನಿವೃತ್ತಿ ಎಂದ ಮುತಾಲಿಕ್
ಮನವಿ ಸ್ವೀಕರಿಸಿ ಮಾತಾನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್ ರೈತರ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುತ್ತೇನೆ ರೈತರ ಮನವಿಯನ್ನ ಸಿಎಂಗೆ ತಲುಪಿಸುವ ಕೆಲಸ ಮಾಡುತ್ತೇನೆ. ಈಗಲೇ ಹೋಗಿ ಸಿಎಂರನ್ನ ಭೇಟಿ ಮಾಡಿ ನಿಮ್ಮ ಮನವಿ ಬಗ್ಗೆ ಸಲ್ಲಿಸುತ್ತೇನೆ ನಂತ್ರ ಸಿಎಂ ಈ ಕುರಿತು ನಿರ್ಧಾರ ತೆಗೆದುಕೊಳ್ತಾರೆ ಅಂದರು. ಒಟ್ನಲ್ಲಿ ಬೆಂಗಳೂರಲ್ಲಿ ಸಂಯುಕ್ತ ಹೋರಾಟ - ಕರ್ನಾಟಕ ಮತ್ತು ಐಕ್ಯ ಹೋರಾಟ ಸಮಿತಿ ಅಡಿಯಲ್ಲಿ ಟ್ರಾಕ್ಟರ್ ಪರೇಡ್ ಮತ್ತು ಸಾಕಷ್ಟು ಪ್ರತಿಭಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ