Weekend Curfew: ಚಾಮರಾಜನಗರ ಜಿಲ್ಲೆಯಲ್ಲಿ ಆ.30ರವರೆಗೂ ವೀಕೆಂಡ್ ಕರ್ಫ್ಯೂ ವಿಸ್ತರಣೆ; ಹೆಚ್ಚುವರಿ ನಿರ್ಬಂಧ

ಮಲೈ ಮಹದೇಶ್ವರ ಬೆಟ್ಟ, ಮುಜರಾಯಿ ಇಲಾಖೆ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ದೇವಸ್ಥಾನ ಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ದರ್ಶನಕ್ಕೆ  ಅವಕಾಶ ಇರಲಿದೆ. ಎಲ್ಲಾ ರೀತಿಯ ಉತ್ಸವ, ಸೇವೆ, ತೀರ್ಥ ಪ್ರಸಾದ, ದಾಸೋಹ, ಮುಡಿ-ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಚಾಮರಾಜನಗರ ಜಿಲ್ಲಾಡಳಿತ

ಚಾಮರಾಜನಗರ ಜಿಲ್ಲಾಡಳಿತ

  • Share this:
ಚಾಮರಾಜನಗರ (ಆ.18) ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗದ ಹಿನ್ನಲೆಯಲ್ಲಿ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಗಸ್ಟ್ 30 ರ ಬೆಳಿಗ್ಗೆ 6 ಗಂಟೆ ತನಕ  ವೀಕೆಂಡ್ ಕರ್ಫ್ಯೂ  ಸೇರಿದಂತೆ, ಕೆಲವು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ.

ದೈನಂದಿನ ಬಳಕೆಗೆ ಅಗತ್ಯ ಇರುವ ಕೆಲವು ಚಟುವಟಿಕೆ ಹಾಗೂ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಥಿಯೇಟರ್, ಸಿನಿಮಾ ಹಾಲ್, ಪಬ್ ಗಳಿಗೆ ಅವಕಾಶ ಇರುವುದಿಲ್ಲ, ತರಬೇತಿ ಉದ್ದೇಶ ಹೊರತುಪಡಿಸಿ ಸ್ವಿಮ್ಮಿಂಗ್ ಫೂಲ್ ಗಳಿಗೂ ಸಹ ನಿರ್ಬಂಧ ಹೇರಲಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಮನರಂಜನೆ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮದುವೆಗಳಿಗೆ ನೂರು ಜನರು ಹಾಗೂ ಅಂತ್ಯಕ್ರಿಯೆಗೆ 20 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಜಿಲ್ಲೆಯ  ಮಲೈ ಮಹದೇಶ್ವರ ಬೆಟ್ಟ, ಮುಜರಾಯಿ ಇಲಾಖೆ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ದೇವಸ್ಥಾನ ಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ದರ್ಶನಕ್ಕೆ  ಅವಕಾಶ ಇರಲಿದೆ. ಎಲ್ಲಾ ರೀತಿಯ ಉತ್ಸವ, ಸೇವೆ, ತೀರ್ಥ ಪ್ರಸಾದ, ದಾಸೋಹ, ಮುಡಿ-ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಮತ್ತು ಭಾನುವಾರ ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಅವಕಾಶ ನೀಡಲಾಗಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ:Tuberculosis: ಕ್ಷಯ ರೋಗ ಕೋವಿಡ್​ಗಿಂತ ಮಾರಕ; ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಶನಿವಾರ ಭಾನುವಾರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಬಂಡೀಪುರ ಹಾಗೂ ಬಿ.ಆರ್ .ಟಿ ಹುಲಿರಕ್ಷಿತಾರಣ್ಯಗಳಲ್ಲಿ ವಾರಾಂತ್ಯದಲ್ಲಿ ಸಫಾರಿ ನಿಷೇಧಿಸಲಾಗಿದೆ. ರೆಸಾರ್ಟ್, ಲಾಡ್ಜ್, ಹೋಂಸ್ಟೇ, ಅರಣ್ಯ ವಸತಿಗೃಹಗಳಲ್ಲಿ ತಂಗುವವರು, ಸಫಾರಿಗೆ ತೆರಳುವವರು   72 ಗಂಟೆಯೊಳಗೆ ಮಾಡಿಸಿರುವ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ಪ್ರಮಾಣ ಪತ್ರ  ಹೊಂದಿರಬೇಕು

ಕೇರಳ ಹಾಗೂ ತಮಿಳುನಾಡಿನಿಂದ ಬರುವವರು ಸಹ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶಾವಕಾಶ ಇರಲಿದೆ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಶಂಕುಸ್ಥಾಪನೆ, ಉದ್ಘಾಟನೆ, ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ

ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖ

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಬಿಗಿ ಕ್ರಮಗಳ  ಪರಿಣಾಮ, ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಗಡಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹಬ್ಬಬಹುದೆಂಬ  ಆತಂಕ ಮುಂದುವರೆದಿದೆ.

ಆಗಸ್ಟ್ 17 ರಂದು ಕೇವಲ 7 ಪ್ರಕರಣಗಳು ಮಾತ್ರ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಪ್ರಸ್ತುತ 169 ಸಕ್ರಿಯ ಪ್ರಕರಣಗಳಿದ್ದು ಈ ಪೈಕಿ 5 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:Karnataka 2nd PUC Exam: ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ; ಈ ವಿದ್ಯಾರ್ಥಿಗಳಿಗೆ ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಕೋವಿಡ್ ಲಸಿಕೆ ಅಭಿಯಾನದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಶೇ.50 ರಷ್ಟು ಲಸಿಕಾ ಅಭಿಯಾನ ನಡೆದಿದ್ದು, ಇದುವರೆಗೆ  3,88,317 ಮಂದಿಗೆ ಮೊದಲ ಡೋಸ್​ ಹಾಗೂ 1,10,744 ಮಂದಿಗೆ  ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ ಜಿಲ್ಲೆಯಲ್ಲಿ 12,305 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: