ರಾಜ್ಯದಲ್ಲಿ Weekend Curfew, Night Curfew ವಿಸ್ತರಣೆ.. ಎಲ್ಲಿಯವರೆಗೆ..?

ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳದ ಬಗ್ಗೆ ವರ್ಚುವಲ್ ಸಭೆಯಲ್ಲಿ ಸಿಎಂ ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ನೈಟ್​​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಅನ್ನು ಈ ತಿಂಗಳ ಅಂತ್ಯವರೆಗೆ ಅಂದರೆ ಜನವರಿ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೊನಾ (CORONA) ಸ್ಥಿತಿಗತಿಗಳ ಸಂಬಂಧ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮಹತ್ವದ ಸಭೆ (Meeting) ನಡೆಸಿದರು. ಖುದ್ದು ಸಿಎಂ ಕೊರೊನಾ ಸೋಂಕಿಗೆ ತುತ್ತಾಗಿರುವುದರಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಸಭೆ ಮಾಡಿದರು. ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳದ ಬಗ್ಗೆ  ವರ್ಚುವಲ್ ಸಭೆಯಲ್ಲಿ ಸಿಎಂ ಕಳವಳ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿ ಮಾಡಲು ನಿರ್ಧಾರ ಮಾಡಲಾಯಿತು. ಸದ್ಯ ಜಾರಿಯಲ್ಲಿರುವ ನೈಟ್​​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಅನ್ನು ಈ ತಿಂಗಳ ಅಂತ್ಯವರೆಗೆ ಅಂದರೆ ಜನವರಿ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು ಹೀಗಿವೆ..

ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು 

1) ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಲಾಯಿತು.

2)  ಶಾಲಾ ಮಕ್ಕಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಕರಣಗಳನ್ನು ಆಧರಿಸಿ ಬಿಇಓ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿಯನ್ನು ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು.

4) ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಲು ಸೂಚಿಸಲಾಯಿತು.

5) ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು.

6) ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಲಾಯಿತು.

7) ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಯಿತು.

8) ಮೂರನೇ ಅಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುವಂತೆ ಹಾಗೂ ಸೂಕ್ತ ಔಷಧಿಗಳ ಕಿಟ್ ಅನ್ನು ಒದಗಿಸುವಂತೆ ಸೂಚಿಸಿದರು.

9) ಪರೀಕ್ಷಾ ವರದಿ ಬಂದ ಕೂಡಲೇ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂದು ನಿರ್ಧರಿಸುವ ಟ್ರಯಾಜಿಂಗ್ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸಿದರು.

10) ಹೋಮ್ ಐಸೊಲೇಷನ್ ಮತ್ತು ಟ್ರಯಾಜಿಂಗ್ ಪ್ರಕ್ರಿಯೆಯಲ್ಲಿ ಹೌಸ್ ಸರ್ಜನ್ ವೈದ್ಯರು ಹಾಗೂ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.

11) ಬೆಂಗಳೂರಿನಲ್ಲಿ ಕೂಡಲೇ 27  ಕೋವಿಡ್ ಕೇರ್ ಸೆಂಟರುಗಳನ್ನು ಪ್ರಾರಂಭಿಸಲು ಸೂಚಿಸಿದರು.

12) ಮುಂಬರುವ ಸಂಕ್ರಾಂತಿ, ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗೆ ಸೂಚಿಸಿದರು.

13) ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು 9 ತಿಂಗಳು ಪೂರೈಸಿದ ಮುಂಚೂಣಿಯ ಕಾರ್ಯಕರ್ತರಿಗೆ 3ನೇ ಡೋಸ್ ಅನ್ನು ಆದ್ಯತೆಯ ಮೇರೆಗೆ ನೀಡಲು ಸೂಚಿಸಿದರು.

14) ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 1.3 ಲಕ್ಷ ವರೆಗೆ ಹೆಚ್ಚಿಸಲು ಸೂಚಿಸಿದರು.

15) ಯಾವುದೇ ರೀತಿಯ ಸಾರ್ವಜನಿಕ ಸಮಾವೇಶಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

16) ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ವಸ್ತುಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

17) ರಾಜ್ಯದಲ್ಲಿ ಯಾವುದೇ ರೀತಿಯ ಸಿದ್ಧತೆಯಲ್ಲಿ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಇದನ್ನೂ ಓದಿ: CM Bommai Tests Positive: ಕೊರೊನಾ ಸೋಂಕಿಗೆ ತುತ್ತಾದ ಸಿಎಂ ಬಸವರಾಜ ಬೊಮ್ಮಾಯಿ

ಮಾರುಕಟ್ಟೆಗಳು ಶಿಫ್ಟ್​​

ಸಭೆಯ ಮುಕ್ತಾಯದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕೋವಿಡ್​​ ಹೆಚ್ಚಳ ಹಿನ್ನೆಲೆ ಟೆಸ್ಟ್ ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಯಿತು ಎಂದು ತಿಳಿಸಿದರು. ಇಡೀ ರಾಜ್ಯದಲ್ಲಿ ಒಂದುವರೆ ಲಕ್ಷ ಟೆಸ್ಟಿಂಗ್ ಆಗಬೇಕು. ಹೋಮ್ ಐಸೂಲೇಷನ್ ನಲ್ಲಿರುವವರಿಗೆ ಹೆಚ್ಚಿನ ನಿಗಾ ಇಡಬೇಕು. ಬೂಸ್ಟರ್ ಡೋಸ್ ಗಳನ್ನ ಫ್ರಂಟ್ ಲೈನ್ ವರ್ಕರ್ಸ್ ಗೆ ಬೇಗ ಕೊಡಬೇಕು. ವಿಷೇಶವಾಗಿ ಮಕ್ಕಳಲ್ಲಿ ಕೋವಿಡ್ ಲಕ್ಷಣ ಕಂಡುಬರುತ್ತಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಲು ಯಾವುದೇ ರೀತಿಯಲ್ಲೂ ಔಷಧಿ  ಕೊರತೆ ಆಗಬಾರದು. ಎಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್ ಗಳನ್ನ ರಿಸರ್ವ್ ಮಾಡ್ಬೇಕು. ನಗರದಲ್ಲಿರುವ ಮಾರ್ಕೆಟ್ ಗಳನ್ನ ವಿಕೇಂದ್ರೀಕರಣ ಮಾಡಿ, ಬೇರೆ ಬೇರೆ ಮೈದಾನಗಳಿಗೆ ಶಿಫ್ಟ್​ ಮಾಡಬೇಕು. ಪ್ರತಿಭಟನೆಗೆ ಅವಕಾಶ ಕೊಡಬಾರದು, ಅದನ್ನು ಸ್ಥಳೀಯವಾಗಿ ಪೊಲೀಸರು ನೋಡಿಕೊಳ್ಳಬೇಕು ಎಂದರು.

ಪಾದಯಾತ್ರೆ ಮಾಡಿದವರ ಮೇಲೆ FIR

ಜನಜಂಗುಳಿ, ಪ್ರತಿಭಟನೆಗಳು ನಿರ್ಬಂಧ ಹೇರಬೇಕು. ಶಾಲಾ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಬಂದರೆ‌ ಡಿಸಿಗಳು ನಿರ್ಧಾರ ತಗೋಬೇಕು. ನಿರ್ದಿಷ್ಟ ಶಾಲಾ ಕಾಲೇಜುಗಳು ಬಂದ್ ಮಾಡಬೇಕಾ? ಬೇರೆ ಕ್ರಮ ತಗೋಬೇಕಾ ಅಂತ ಡಿಸಿ ನಿರ್ಧಾರ ಮಾಡಬೇಕು. ಜನ ಆತಂಕಕ್ಕೆ ಒಳಗಾಗಬಾರದು. ನಾಳೆ ಬಂದ್ ಆಗುತ್ತೆ ಅನ್ನೋ ಭಯ ಇರಬಾರದು. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು. ಪಾದಯಾತ್ರೆ ಮಾಡಿದವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ FIR ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ರಮದ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು. ಲಾಕ್​​ಡೌನ್​​ ಬಗ್ಗೆ ಇವತ್ತು ಚರ್ಚೆ ಆಗಿಲ್ಲ, ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ಅದರ ಬಗ್ಗೆ ನಂತರ ಚರ್ಚೆ ಮಾಡುತ್ತೇವೆ. ಹಾಲಿ ಮಾರ್ಗಸೂಚಿ ಯಥಾಸ್ಥಿತಿ ಮುಂದುವರಿಕೆ, ಇವತ್ತಿನ‌ ನಿರ್ಧಾರಗಳು ಹೆಚ್ಚುವರಿ ಕ್ರಮಗಳು.   ವೀಕೆಂಡ್ ಕರ್ಫ್ಯೂ ಕುರಿತು ಮುಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗಿವುದು. ಜನವರಿ 14 ರ ಪ್ರಧಾನಿಯವರ ಸಭೆ ಬಳಿಕ ಇದರ ಬಗ್ಗೆ ಚರ್ಚೆ ಆಗಲಿದೆ ಎಂದರು.

ಸಭೆಯಲ್ಲಿ ಸಚಿವರಾದ ಡಾ.ಕೆ. ಸುಧಾಕರ್, ಬಿ.ಸಿ. ನಾಗೇಶ್, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Published by:Kavya V
First published: