ಜನರಿಗೆ ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ಗೊತ್ತಿದೆ, ಹೀಗಾಗಿ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ; ಆರ್.ಅಶೋಕ್ ಭವಿಷ್ಯ

ಶರತ್ ಬಚ್ಚೇಗೌಡ ಅವರನ್ನು ಪಕ್ಷಕ್ಕೇ ಸೇರಿಸಿಕೊಳ್ಳುವ ಮಾತೇ ಇಲ್ಲ. ಸರ್ಕಾರ ರಚನೆಗೆ ಕಾರಣ ಆಗಿರುವ ಎಂಟಿಬಿಗೆ ಶರತ್ ದ್ರೋಹ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ. ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿ ಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

HR Ramesh | news18-kannada
Updated:November 22, 2019, 5:39 PM IST
ಜನರಿಗೆ ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ ಗೊತ್ತಿದೆ, ಹೀಗಾಗಿ 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ; ಆರ್.ಅಶೋಕ್ ಭವಿಷ್ಯ
ಸಚಿವ ಆರ್​.ಅಶೋಕ್​
  • Share this:
ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲ. ಜೆಡಿಎಸ್ ಸೋಲುವ ಭಯದಲ್ಲಿ ಗೂಂಡಾಗಿರಿ ಮಾಡುತ್ತಿದೆ. ಕೆಲವು ಕಡೆಗಳಲ್ಲಿ ಜೆಡಿಎಸ್​ನಿಂದ ಗೂಂಡಾಗಿರಿ ನಡೆಯುತ್ತಿದೆ. ಇದೆಲ್ಲಾ ನೋಡಿದ್ರೆ  ಜೆಡಿಎಸ್ ಪ್ರಾದೇಶಿಕ ಪಕ್ಷನಾ ಅಥವಾ ರಾಷ್ಟ್ರೀಯ ಪಕ್ಷನಾ ಗೊತ್ತಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಜೆಡಿಎಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಜೆಡಿಎಸ್ ಕಾಂಗ್ರೆಸ್ ಜೊತೆ ಇದೆಯೋ ಅಥವಾ ಸ್ವತಂತ್ರ ವಾಗಿ ಇದೆಯೋ ಗೊತ್ತಿಲ್ಲ. ಜೆಡಿಎಸ್ ನಡೆ ನಿಜಕ್ಕೂ ಕೂಡ ಗೊಂದಲದಲ್ಲಿದೆ, ಆ ಪಕ್ಷ ಅತಂತ್ರ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಕ್ಷವನ್ನೇ ವಿಸರ್ಜಿಸಿದರೆ ಒಳ್ಳೆಯದು ಎಂದು ಹೇಳಿದರು.

ಚುನಾವಣೆಯಲ್ಲಿ ಸೋಲುವ ಭೀತಿ ಎರಡೂ ಪಕ್ಷಗಳಿಗೆ ಕಾಡುತ್ತಿದೆ. ಕಾಂಗ್ರೆಸ್ ಜೊತೆಗಿನ ಜೆಡಿಎಸ್ ಒಳ ಒಪ್ಪಂದ ಜನರಿಗೆ ಗೊತ್ತಾಗ್ತಿದೆ. ರಾಜ್ಯದ ಜನರ ಬಯಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು ಎನ್ನುವುದು. ಹೀಗಾಗಿ ರಾಜ್ಯದಲ್ಲಿ ಮೂರೂವರೇ ವರ್ಷ ಬಿಜೆಪಿ ಸರ್ಕಾರವೇ ಇರಲಿದೆ. ಕಾಂಗ್ರೆಸ್ ಇನ್ನೂ ಪ್ರಚಾರದಲ್ಲಿ ಟೇಕ್ ಆಫ್ ಆಗಿಲ್ಲ. ಬೂತ್ ಮಟ್ಟದಲ್ಲಿ ಇನ್ನೂ ಪ್ರಚಾರ ಶುರು ಮಾಡಿಲ್ಲ. ಬರೀ ಸಿದ್ದರಾಮಯ್ಯ ಒಬ್ಬರೇ ಓಡಾಡ್ತಿದ್ದಾರೆ. ಸಿದ್ದರಾಮಯ್ಯ ಒನ್ ಮನ್ ಶೋ ತರ ದಾರಿಯಲ್ಲಿ ಒಬ್ಬರೇ ನಡೆದುಕೊಂಡು ಹೋಗ್ತಿದ್ದಾರೆ. ಹಳೆ ಕಾಂಗ್ರೆಸ್ಸೋ, ಹೊಸ ಕಾಂಗ್ರೇಸ್ಸೋ ಎಂಬ ಗೊಂದಲದಲ್ಲೇ ಇದ್ದಾರೆ. ಅವರಿನ್ನೂ ಈ ಗೊಂದಲದಿಂದ ಹೊರಗೆ ಬಂದಿಲ್ಲ. ಇತ್ತ ಜೆಡಿಎಸ್ ನವರು ಇರುವ ಅಭ್ಯರ್ಥಿಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡ್ತಿದ್ದಾರೆ.  ಹೀಗಾಗಿ ಇವರಿಬ್ಬರು ಕೂಡ ಉಪ‌ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ನಾವೇ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಗೆ ಪಕ್ಷಾಂತರ ಮಾಡುವುದರಲ್ಲಿ ಪಿಎಚ್​.ಡಿ ಕೊಡಬೇಕು. ಸಿದ್ದರಾಮಯ್ಯಗೆ ಈಗಾಗಲೇ ಮೂರು ಪಕ್ಷ ಆಗಿದೆ. ನೀವು ಜೆಡಿಎಸ್ ಬಿಟ್ಟು ಬಂದಾಗ ಆಗ ಯಾವ ಪ್ರಾಣಿ ಆಗಿದ್ರಿ. ಈಗ ಪಕ್ಷಾಂತರ ಮಾಡಿದವರನ್ನು ಕೋಳಿ, ಕುರಿ ಅಂತಿರಲ್ಲಾ. ಆಗ ನೀವು ಯಾವ ಪ್ರಾಣಿ ಆಗಿದ್ರಿ. ಸಿದ್ದರಾಮಯ್ಯಗೆ ಟಿಪ್ಪು ಆವರಿಸಿಬಿಟ್ಟಿದೆ. ತಿಲಕ ಇಡಲು ಹೋದಾಗ ನನಗೆ ತಿಲಕ ಇಡಬೇಡಿ ಅಂತಾರೆ. ನಾಮ ಇಡೋರನ್ನು ವ್ಯಂಗ್ಯ ಮಾಡ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು.

ಸಿದ್ದರಾಮಯ್ಯಗೆ ಎಡಗಡೆಗೆ ಡಿಕೆಶಿ ಭಯ, ಬಲಕ್ಕೆ ಪರಮೇಶ್ವರ್ ಭಯ, ಹಿಂದೆ ಕೆ ಎಚ್ ಮುನಿಯಪ್ಪನ ಭಯ, ಮುಂದೆ ಬಿ ಕೆ ಹರಿಪ್ರಸಾದ್ ಭಯ ಕಾಡ್ತಿದೆ. ಸಿದ್ದರಾಮಯ್ಯ ವೈರಾಗ್ಯರಾಗಿದ್ದಾರೆ. ಈ ಭಯದ ನಡುವೆ ಅವರು ಆಲಾಪನೆ ಮಾಡ್ತಿದ್ದಾರೆ. ಅಮಿತ್ ಶಾಗೆ ಸಿದ್ದರಾಮಯ್ಯ ಯಾರು ಅನ್ನೋದೆ ಗೊತ್ತಿಲ್ಲ. ಸಿದ್ದರಾಮಯ್ಯ ರಾಹುಲ್‌ ಗಾಂಧಿ, ಹಾಗೂ ಸೋನಿಯಾ ಗಾಂಧಿ ಅಪಾಯ್ಟಮೆಂಟ್ ತೆಗೆದುಕೊಳ್ಳಲಿ. ದೆಹಲಿಗೆ ಸೋನಿಯಾ ಭೇಟಿಗೆ ಹೋದಾಗ ವಾರಗಟ್ಟಲೇ ಕಾಯುತ್ತಾರೆ. ಮೊದಲು ಸಿದ್ದರಾಮಯ್ಯ ಅವರ ಪಕ್ಷದ ರಾಷ್ಟ್ರೀಯ ನಾಯಕರ ಅಪಾಯ್ಟಮೆಂಟ್ ಪಡೆಯಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ತಿರುಗೇಟು ನೀಡಿದರು.

ಇದನ್ನು ಓದಿ: ನನ್ನ ತಂದೆ ನನ್ನ ಪರ ಪ್ರಚಾರ ಮಾಡೋದಿಲ್ಲ; ಶಿಸ್ತುಕ್ರಮದ ಪ್ರಶ್ನೆಯೇ ಇಲ್ಲ; ಶರತ್​​ ಬಚ್ಚೇಗೌಡ

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಗೆದ್ದರೆ, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಅಶೋಕ್, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಗೆದ್ದೆ ಗೆಲ್ತಾರೆ. ಶರತ್ ಬಚ್ಚೇಗೌಡ ಅವರನ್ನು ಪಕ್ಷಕ್ಕೇ ಸೇರಿಸಿಕೊಳ್ಳುವ ಮಾತೇ ಇಲ್ಲ. ಸರ್ಕಾರ ರಚನೆಗೆ ಕಾರಣ ಆಗಿರುವ ಎಂಟಿಬಿಗೆ ಶರತ್ ದ್ರೋಹ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ. ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿ ಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ