ಹದಿನೈದಕ್ಕೆ ಹದಿನೈದೂ ಕ್ಷೇತ್ರವನ್ನು ಗೆಲ್ಲುತ್ತೇವೆ; ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ

ಇಂದು ಸಂಜೆ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದೆ. ಈ ವೇಳೆ ಅನರ್ಹರಿಗೆ ಟಿಕೆಟ್ ನೀಡಬೇಕೋ ಅಥವಾ ಬೇಡವೋ ಎನ್ನುವ ಕುರಿತು ನಿರ್ಧರಿಸುತ್ತೇವೆ ಎಂದು ಬಿಎಸ್​ವೈ ಹೇಳಿದ್ದಾರೆ.

Rajesh Duggumane | news18-kannada
Updated:November 13, 2019, 12:14 PM IST
ಹದಿನೈದಕ್ಕೆ ಹದಿನೈದೂ ಕ್ಷೇತ್ರವನ್ನು ಗೆಲ್ಲುತ್ತೇವೆ; ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ
ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು (ನ.13): ಕರ್ನಾಟಕದ 17 ಶಾಸಕರನ್ನು ಅನರ್ಹ ಮಾಡಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ನೀಡಿದೆ. ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ ಕುಮಾರ್​ ನೀಡಿದ್ದ ಅನರ್ಹತೆ ಆದೇಶವನ್ನು ಕೋರ್ಟ್​ ಎತ್ತಿ ಹಿಡಿದಿದೆ. ಅದರ ಜತೆಜತೆಗೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೂ ಸುಪ್ರೀಂ ಕೋರ್ಟ್​​ ನೀಡಿದೆ. ಈ ತೀರ್ಪನ್ನು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್​ವೈ, “ಎಲ್ಲರೂ ಅನರ್ಹ ಶಾಸಕರ ಪ್ರಕರಣದ ತೀರ್ಪು ಏನು ಬರಲಿದೆ ಎನ್ನುವುದನ್ನು ಕಾಯುತ್ತಾ ಇದ್ದರು. ಈಗ ತೀರ್ಪು ಹೊರ ಬಂದಿದೆ. ನಾಳೆಯಿಂದ 15 ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಿದ್ಧತೆ ನಡೆಯಲಿದೆ. ಎಲ್ಲ ಸಚಿವರಿಗೆ ಈ ಕ್ಷೇತ್ರಗಳ ಜವಾಬ್ದಾರಿ ನೀಡುತ್ತೇವೆ. ಎಲ್ಲ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ” ಎಂದು ವಿಶ್ವಾಸವ್ಯಕ್ತಪಡಿಸಿದರು.

ಇನ್ನು, ಅನರ್ಹರಿಗೆ ಟಿಕೆಟ್​ ನೀಡಬೇಕೋ ಅಥವಾ ಬೇಡವೋ ಎನ್ನುವ ಕುರಿತು ಪಕ್ಷದ ನಿರ್ಧಾರವೇನು ಎನ್ನುವ ಬಗ್ಗೆ ಬಿಎಸ್​ವೈ ಮಾತನಾಡಿದ್ದಾರೆ. “ಇಂದು ಸಂಜೆ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದೆ. ಈ ವೇಳೆ ಅನರ್ಹರಿಗೆ ಟಿಕೆಟ್ ನೀಡಬೇಕೋ ಅಥವಾ ಬೇಡವೋ ಎನ್ನುವ ಕುರಿತು ನಿರ್ಧರಿಸುತ್ತೇವೆ,” ಎಂದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಹೊಸಕೋಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಶರತ್​ ಬಚ್ಚೇಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಚಾರದಲ್ಲಿ ಬಚ್ಚೇಗೌಡಗೆ ಬಿಎಸ್​ವೈ ತಿರುಗೇಟು ನೀಡಿದ್ದಾರೆ. “ನಮ್ಮ ಜೊತೆ ಇಲ್ಲದವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಜೊತೆ ಯಾರಿದ್ದಾರೋ ಅವರನ್ನು ನಾವುಕರೆದುಕೊಂಡು ಹೋಗುತ್ತೇವೆ,” ಎಂದರು.

ಸುಪ್ರೀಂಕೋರ್ಟ್​ ತೀರ್ಪಿನಲ್ಲಿ ಹೇಳಿದ್ದೇನು?:

  • 17 ಶಾಸಕರು ರಾಜೀನಾಮೆ ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಹೌದು ಎಂದು ಒಪ್ಪಿಕೊಂಡ ಸುಪ್ರೀಂಕೋರ್ಟ್​. ಈ ಹಿನ್ನೆಲೆಯಲ್ಲಿ ಅನರ್ಹತೆಯನ್ನು ಕೋರ್ಟ್​ ಎತ್ತಿ ಹಿಡಿದಿದೆ.
  • ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. 2023ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ. ಜನಪ್ರತಿನಿಧಿ ಕಾಯ್ದೆ ಪ್ರಕಾರ, 6 ವರ್ಷ ಚುನಾವಣೆ ನಿಲ್ಲಬಾರದು ಎಂಬ ಕಾನೂನು ಇಲ್ಲ.

  • ಅನರ್ಹರು, ಚುನಾವಣೆಗೆ ಸ್ಪರ್ಧಿಸಿದಂತೂ ಲಾಭದಾಯಕ ಹುದ್ದೆ ಹೊಂದುವಂತಿಲ್ಲ.

  • ಶಾಸಕರ ಅನರ್ಹತೆಯ ಅವಧಿಯನ್ನ ಸ್ಪೀಕರ್​ ನಿರ್ಧರಿಸುವಂತಿಲ್ಲ

  • ಹೈಕೋರ್ಟ್​​ಗೂ ಹೋಗದೆ ಅನರ್ಹರು ಸುಪ್ರಿಂಕೋರ್ಟ್​ಗೆ ಬಂದಿದ್ದು ತಪ್ಪು

  • ಇತ್ತೀಚೆಗೆ ಸ್ಪೀಕರ್​ಗಳು ಜನಾಭಿಪ್ರಾಯದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ

  • ರಾಜೀನಾಮೆ ವೈಯಕ್ತಿಕವಾಗಿದ್ದಾಗ ಸ್ಪೀಕರ್​ ರಾಜೀನಾಮೆ ಅಂಗೀಕರಿಸಬೇಕು

  • ಕುದುರೆ ವ್ಯಾಪಾರ ನಡೆದಿದ್ರೆ ರಾಜೀನಾಮೆ ನಿರ್ಧಾರ ಸ್ಪೀಕರ್​ಗೆ ಬಿಟ್ಟಿದ್ದು, ಆದ್ರೆ ಚುನಾವಣೆಗೆ ನಿಂತಾಗ ಜನಾಭಿಪ್ರಾಯವೇ ಎಲ್ಲವನ್ನೂ ನಿರ್ಧರಿಸುತ್ತೆ


ಏನಿದು ಪ್ರಕರಣ:

ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಈ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಇದಾದ ಬೆನ್ನಲ್ಲೇ ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿ ಜುಲೈ 28ರಂದು ಮಹತ್ವದ ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಆಗಸ್ಟ್​ 1ರಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇತ್ತು. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಎರಡು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲ. ಈಗ ಕೊನೆಗೂ ತೀರ್ಪು ಹೊರ ಬಿದ್ದಿದೆ, ಅನರ್ಹರಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.

First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ