ಡ್ರಗ್ಸ್​ ದಂಧೆಯಲ್ಲಿ ಯಾರೇ ಇದ್ದರೂ ಕಠಿಣ ಕಾನೂನು ಕ್ರಮ; ಬಸವರಾಜ್ ಬೊಮ್ಮಾಯಿ ಎಚ್ಚರಿಕೆ

ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲೂ ಡ್ರಗ್ಸ್ ಬಳಕೆ‌ ಆಗುತ್ತಿರುವ ಬಗ್ಗೆ ದೂರುಗಳಿವೆ. ಸಿಸಿಬಿಯವರಿಗೆ ಕೂಲಂಕುಷವಾಗಿ ತನಿಖೆ ಮಾಡಲು ಹೇಳಿದ್ದೇವೆ.‌ ಚಿತ್ರರಂಗ ಇರಲಿ ಇನ್ಯಾವುದೇ ರಂಗ ಇರಲಿ ನಾವು ಬಿಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಚಿವ ಬಸವರಾಜ್​ ಬೊಮ್ಮಾಯಿ.

ಸಚಿವ ಬಸವರಾಜ್​ ಬೊಮ್ಮಾಯಿ.

  • Share this:
ಹುಬ್ಬಳ್ಳಿ (ಆ. 30): ಚಿತ್ರರಂಗ ಮಾತ್ರವಲ್ಲದೆ ಬಹಳಷ್ಟು ಜನ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಡ್ರಗ್ಸ್ ಮೂಲವನ್ನು ಸಂಪೂರ್ಣ ಕೆದಕಲು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಾರ್ಕ್ ದಂಧೆಯ ಕರಾಳ ಜಾಲವನ್ನು ಭೇದಿಸಲು ಸಜ್ಜಾಗಿದ್ದೇವೆ. ಡ್ರಗ್ಸ್ ಪೂರೈಕೆಯ ಡಾರ್ಕ್ ನೆಟ್ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಸಾಮಾನ್ಯ ಅಂಚೆ ಮೂಲಕವೂ ಡ್ರಗ್ಸ್ ಪೂರೈಕೆ ಆಗುತ್ತಿದೆ. ಡ್ರಗ್ಸ್ ದಂಧೆಯ ಜಾಲ ದೇಶ- ವಿದೇಶದವರೆಗೂ ಹಬ್ಬಿದೆ. ಎನ್.ಸಿ.ಬಿ. ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದೆ. ಅದರಲ್ಲಿ ಚಿತ್ರರಂಗದ ಕೆಲವರಿದ್ದಾರೆ ಎಂಬ ಮಾಹಿತಿ ಇದೆ. ಚಿತ್ರರಂಗದಲ್ಲಿ ಡ್ರಗ್ಸ್ ಕರಾಳ ದಂಧೆ ಇದೆ ಎಂದು ಆರೋಪಿಸಿರುವ ಇಂದ್ರಜಿತ್ ಲಂಕೇಶ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅವರು ಏನು ಮಾಹಿತಿ ಕೊಡ್ತಾರೆ ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಬೀದರ್​ನಲ್ಲಿ ದುರಸ್ತಿಯಾಗದ ಬ್ಯಾರೇಜ್; ತೆಲಂಗಾಣಕ್ಕೆ ಹರಿಯುತ್ತಿದೆ ಮಾಂಜ್ರಾ ನದಿ ನೀರು

ಸಿಸಿಬಿಯವರಿಗೆ ಕೂಲಂಕುಷವಾಗಿ ತನಿಖೆ ಮಾಡಲು ಹೇಳಿದ್ದೇವೆ.‌ ಚಿತ್ರರಂಗ ಇರಲಿ ಇನ್ಯಾವುದೇ ರಂಗ ಇರಲಿ ನಾವು ಬಿಡುವುದಿಲ್ಲ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲೂ ಡ್ರಗ್ಸ್ ಬಳಕೆ‌ ಆಗುತ್ತಿರುವ ಬಗ್ಗೆ ದೂರುಗಳಿವೆ. ಈ ಕುರಿತು ಮಾಹಿತಿ ನೀಡುವಂತೆ ಕಾಲೇಜು ಆಡಳಿತ ಮಂಡಳಿಗಳಿಗೂ ಸೂಚನೆ ನೀಡುತ್ತೇವೆ‌ ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡದಲ್ಲಿ ಕ್ರೈಮ್ ರೇಟ್ ಹೆಚ್ಚುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ- ಧಾರವಾಡದಲ್ಲಿ ಉಂಟಾಗುತ್ತಿರುವ ಸರಣಿ ಕೊಲೆಗಳು ಹಾಗೂ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್‌ ಅವರನ್ನು ಸ್ವಗ್ರಹಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದು ಬಿಟ್ಟು ಫೀಲ್ಡ್‌ಗೆ ಇಳಿಯಬೇಕು. ಮನೆಯಲ್ಲಿ ಕೂತರೆ ಕ್ರೈಂ ಕಂಟ್ರೋಲ್‌ಗೆ ಬರಲ್ಲ. ಅವಳಿ ನಗರದಲ್ಲಿ ಶೂಟೌಟ್ ಮತ್ತು ಡಬಲ್ ಮರ್ಡರ್ ನಿರಂತರವಾಗಿ ನಡೆಯುತ್ತಿವೆ. ಇತ್ತೀಚೆಗೆ ಕ್ರೈಮ್ ರೇಟ್ ಹೆಚ್ಚಾಗುತ್ತಿದೆ. ಗೂಂಡಾಗಳಿಗೆ ಹೆದರಿಕೆ ಇಲ್ಲದಂತಾಗಿದೆ. ಸಾರ್ವಜನಿಕರು ಆತಂಕಗೊಂಡಿದ್ದಾರೆ. ಒಂದು ವಾರದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಪೊಲೀಸರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.
Published by:Sushma Chakre
First published: