ಬೆಂಗಳೂರು(ಮಾ.12): "ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನೂತನ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮುಂದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ದೊಡ್ಡ ಸವಾಲಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರ ಜತೆ ಮಾತಾಡಿದ ಸತೀಶ್ ಜಾರಕಿಹೊಳಿ, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಹಾಗಾಗಿ ಈ ಹುದ್ದೆ ಸಿಗದಿದ್ದಕ್ಕೆ ನನಗೇನು ಅಸಮಾಧಾನವಿಲ್ಲ ಎಂದರು.
ಹೈಕಮಾಂಡ್ ನನ್ನ ಮೇಲೆ ನಂಬಿಕೆಯಿರಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜವಾಬ್ದಾರಿ ನೀಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರಿಗೂ ಪಕ್ಷ ಸಂಘಟನೆಗಾಗಿ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದರು ಸತೀಶ್ ಜಾರಕಿಹೊಳಿ.
ಡಿ.ಕೆ ಶಿವಕುಮಾರ್ ಕೆಪಿಸಿಸಿ ಪಟ್ಟಕ್ಕಾಗಿ ಸತತ ಮೂರು ತಿಂಗಳು ಪ್ರಯತ್ನಿಸಿದರು. ಇದರ ಪ್ರತಿಫಲವಾಗಿ ಹೈಕಮಾಂಡ್ ಅವರಿಗೆ ಅಧ್ಯಕ್ಷ ಹುದ್ದೆ ನೀಡಿದೆ. ಈಗ ಡಿಕೆಶಿ ಮುಂದೆ ದೊಡ್ಡ ಸವಾಲಿದೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಿ ಮತ್ತೆ ಕಾಂಗ್ರೆಸ್ ರಾಜ್ಯಾಧಿಕಾರ ಹಿಡಿಯುವಂತೆ ಶ್ರಮ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಇದನ್ನೂ ಓದಿ: ನಾನು ಕೆಪಿಸಿಸಿ ಅಧ್ಯಕ್ಷನಾದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ; ಕಾಂಗ್ರೆಸ್ಸಿಗಾಗಿ ದುಡಿಯುವೆ - ಡಿಕೆಶಿ
ಇನ್ನು, ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ. ಡಿಕೆಶಿಯೊಂದಿಗೆ ಚರ್ಚಿಸಿ ಪಕ್ಷ ಕಟ್ಟುತ್ತೇವೆ. ಅವರ ಮುಂದಿನ ಯೋಜನೆಗಳು ಏನೆಂದು ಇನ್ನೂ ಗೊತ್ತಿಲ್ಲ. ಕಾಂಗ್ರೆಸ್ನಲ್ಲಿ ಇಲ್ಲಿಯವರೆಗೂ ಕೇಡರ್ ಬೇಸ್ ವ್ಯವಸ್ಥೆ ಇಲ್ಲ. ಒಂದಷ್ಟು ಜನ ಇದ್ದರೂ ಅಷ್ಟು ಪರಿಣಾಮಕಾರಿಯಾಗಿ ಇಲ್ಲ. ಹಾಗಾಗಿ ಸಂಘಟನೆ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಹಿಂದಿನ ಕರ್ನಾಟಕ ಉಪಚುನಾವಣೆ ಫಲಿತಾಂಶದ ಬಳಿಕ ಸೋಲಿನ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹೈಕಮಾಂಡ್ ಮಧುಸೂದನ್ ಮಿಸ್ತ್ರಿ ನೇತೃತ್ವದ ನಿಯೋಗದ ಮೂಲಕ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು? ಎಂದು ವಿವಿಧ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿತ್ತು. ಈ ವೇಳೆ ಬಹುತೇಕ ಜನ ಡಿ. ಕೆ. ಶಿವಕುಮಾರ್ರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಆಧಾರದ ಮೇಲೆ ಹೈಕಮಾಂಡ್ ಡಿ.ಕೆ ಶಿವಕುಮಾರ್ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಿ ಆದೇಶಿಸಿದೆ.
ಕರ್ನಾಟಕ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿದ್ದಾರೆ. ಹಲವು ದಿನಗಳಿಂದ ಡಿಕೆ ಶಿವಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬಂದಿತ್ತು. ಅದರಂತೆ ಈಗ ಎಐಸಿಸಿ ಡಿಕೆ ಶಿವಕುಮಾರ್ ಅವರಿಗೆ ರಾಜ್ಯ ಕಾಂಗ್ರೆಸ್ನ ನೇತೃತ್ವವನ್ನು ನೀಡಿದೆ. ಜತೆಗೆ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ