ಬೆಂಗಳೂರು: ಸಾರಿಗೆ ಕೆಲಸಗಾರರ ಬಗ್ಗೆ ಸರ್ಕಾರ ತಿರಸ್ಕಾರ ಭಾವನೆ ತೋರಿಸುತ್ತಿದೆ. ನೌಕರರ ಮನೆ ಮುಂದೆ ಹೋಗಿ ಅವರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತಿದೆ. ಇದರಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ನಾವು ವಿಶ್ರಾಂತಿ ಪಡೆಯಲು ಕೊರೋನಾ ತೋರಿಸುತ್ತಿದ್ದೀರಾ. ಪ್ರಾಕೃತಿಕ ಸಮಸ್ಯೆ ಜಾಸ್ತಿ ಇರುತ್ತವೆ, ಅದನ್ನ ನಾವು ಎದುರಿಸಬೇಕು. ಸಮಸ್ಯೆ ಬಗ್ಗೆ ಮುಕ್ತ ಮಾತುಕತೆ ಮಾಡಿ ಬಗೆಹರಿಸಬೇಕು. ಸರ್ಕಾರ ದೌರ್ಜನ್ಯದ ಮಾರ್ಗ ಅನುಸರಿಸುತ್ತಿದೆ. ಹಲವಾರು ನೌಕರರನ್ನು ಕಾರಣ ಕೊಡದೇ ಅರೆಸ್ಟ್ ಮಾಡಿ, ಭಯೋತ್ಪಾದಕರಾಗಿ ನೋಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ನೌಕರರ ಹನ್ನೊಂದನೆ ದಿನದ ಮುಷ್ಕರ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ. 1 ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ದರಿದ್ದಾರೆ. ಸೋಮವಾರದವರೆಗೂ ಸರ್ಕಾರಕ್ಕೆ ಡೆಡ್ ಲೈನ್. ಆಗಲೂ ಸರ್ಕಾರ ಸ್ಪಂದಿಸದಿದ್ದರೆ ಸೋಮವಾರದ ನಂತರ ಜೈಲ್ ಬರೋ ಚಳುವಳಿ ಆರಂಭ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಕೊಡುತ್ತೇವೆ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಸರ್ಕಾರಕ್ಕೆ ತಿದ್ದಿ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದರು.
ಬಾಗಲಕೋಟೆ ಜಮಖಂಡಿಯಲ್ಲಿ ಸರ್ಕಾರಿ ಬಸ್ ಚಾಲಕ ಕಲ್ಲೇಟಿನಿಂದ ಮೃತಪಟ್ಟ ಘಟನೆಗೆ ವಿಷಾದ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ್, ಈ ರೀತಿ ಘಟನೆ ನಡೆಯಬಾರದಿತ್ತು. ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸುತ್ತೇವೆ. ನಮ್ಮವರು ಶಾಂತಿಯುತ ರೀತಿಯಲ್ಲಿ ಧರಣಿ ಮಾಡ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಪಕ್ಷಕ್ಕೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಖೂಬಾ ಉಚ್ಚಾಟನೆ ಮಾಡಿದ ಬಿಜೆಪಿ
ನೌಕರರಿಗೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿಯವರೆಗೂ ಪ್ರಾಣ ಕಳೆದುಕೊಂಡ ನೌಕರರ ಸಾವಿಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ಸಮಸ್ಯೆ ಈಡೇರಿಸದಿದ್ದರೆ ನಾವು ಕೂಡ ಆತ್ಮಹತ್ಯೆಯ ದಾರಿ ಹಿಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರಕ್ಕೆ ಎರಡು ದಿನ ಸಮಯ ಕೊಡುತ್ತೆವೆ, ಸೋಮವಾರದ ನಂತರ ಮುಷ್ಕರ ತೀವ್ರಗೊಳಿಸಲಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ