ವಿಜಯಪುರ: ಜೆಡಿಎಸ್ ಪಕ್ಷದಿಂದ ಪಂಚರತ್ನ ಯೋಜನೆಯಲ್ಲಿ ( Pancharatna Program ) ಘೋಷಣೆಯಂತೆ ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡಲು ವಿಫಲರಾದರೆ 2028ರಲ್ಲಿ ಜೆಡಿಎಸ್ (JDS) ಪಕ್ಷವನ್ನ ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪಂಚರತ್ನ ರಥಯಾತ್ರೆ (Pancharatna Rath Yatra) ಬಹಿರಂಗ ಸಭೆಯಲ್ಲಿ ಮಾತನಾಡುವ ವೇಳೆ ಕುಮಾರಸ್ವಾಮಿ ಭಾವುಕರಾಗಿ ಈ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲು ಒಳ್ಳೆಯ ಕಾರ್ಯಕ್ರಮ ನೀಡಬೇಕಾಗಿದೆ. ನಮ್ಮ ಅನ್ನದಾತರು ಸಾಲದಲ್ಲಿ ಮುಳುಗಿ ಸಂಕಷ್ಟದಲ್ಲಿದ್ದಾರೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲ ಮುಕ್ತರನ್ನಾಗಿ ಮಾಡುತ್ತೇವೆ. ಒಂದು ವೇಳೆ ಜೆಡಿಎಸ್ಗೆ ಸಂಪೂರ್ಣ ಬಹುಮತ ನೀಡಿ ಐದು ವರ್ಷ ಪೂರ್ಣಾವಧಿ ಅಧಿಕಾರ ಸಿಕ್ಕಿದರೆ ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪೂರ್ಣಪ್ರಮಾಣದಲ್ಲಿ ಅಧಿಕಾರ ಕೊಟ್ಟರೆ ಮಾತಿಗೆ ತಪ್ಪದೆ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಒಂದು ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದು ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವಲ್ಲಿ ನಾನೇನಾದರೂ ವಿಫಲನಾದರೆ 2028ಕ್ಕೆ ಜೆಡಿಎಸ್ ಪಕ್ಷವನ್ನು ವಿಸರ್ಜಿಸುತ್ತೇನೆ. ಮುಂದೆ ನಿಮ್ಮ ಬಳಿ ಬಂದು ಮತ ಕೇಳುವುದಿಲ್ಲ ಎಂದು ಕಣ್ತುಂಬಿಕೊಂಡರು. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲು ಕಂಡೆವು. ಆದರೂ ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೇಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನು ನಾನು ಮರೆತಿಲ್ಲ ಎಂದು ಹೇಳಿದರು.
ಜೆಡಿಎಸ್ ಯೋಜಿಸಿರುವ ಪಂಚರತ್ನ ಯೋಜನೆಗಳ ಬಗ್ಗೆ ಮಾತನಾಡಲು ಕನಿಷ್ಠ ಮೂರ್ನಾಲ್ಕು ಗಂಟೆಗಳಾದರು ಬೇಕು. ಪಂಚರತ್ನ ಯೋಜನೆಗೆ ಯಾವುದೇ ಜಾತಿ-ಧರ್ಮ ಇಲ್ಲ. ನಮ್ಮ 5 ಕಾರ್ಯಕ್ರಮಗಳು ಜಾರಿಯಾದರೆ ನಮ್ಮ ರಾಜ್ಯ ರಾಮರಾಜ್ಯವಾಗುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇಂತಹ ಕಾರ್ಯಕ್ರಮಗಳನ್ನು ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸುತ್ತಿದೆ.
ಅಧಿಕಾರ ಸಿಕ್ಕರೆ ಕ್ರಾಂತಿಕಾರಿ ಬದಲಾಣೆ
ಜೆಡಿಎಸ್ಗೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಅವಕಾಶ ನೀಡಿದರೆ ಶಿಕ್ಷಣ, ಆರೋಗ್ಯ, ವಸತಿ, ಕೃಷಿ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ 5 ವರ್ಷಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮಗಾಗಿ ನಾನಿದ್ದೇನೆ. ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿಗಳಿವೆ. ಸಾಲ ಮಾಡಿದ ರೈತರು ಹೆದರಬೇಕಿಲ್ಲ ಎಂದು ನಿಮ್ಮ ಕಷ್ಟಬಗೆಹರಿಸಲು ನಾನಿದ್ದೇನೆ. ಗ್ರಾಮ ಪಂಚಾಯಿತಿ ಹಂತದಲ್ಲೇ ಎಲ್ಲಾ ಸೌಲಭ್ಯ ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಪಂಚರತ್ನ ರಥಯಾತ್ರೆ ಏಕೆ?
ವಿಧಾನಸಭಾ ಚುನಾವಣೆಗೆ ವರ್ಷ ಇದ್ದಾಗಲೇ ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಬೃಹತ್ ಸಮಾವೇಶ, ಇದೀಗ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆ. ಹಾಗೆಯೇ ಬಿಜೆಪಿ ಜನಸಂಕಲ್ಪ ಯಾತ್ರೆ ಶುರುಮಾಡಿಕೊಂಡಿದೆ. ಅದೇ ರೀತಿ ಜೆಡಿಎಸ್ 5 ಯೋಜನೆಗಳನ್ನು ರೂಪಿಸಿಕೊಂಡು ಪಂಚರತ್ನ ರಥಯಾತ್ರೆಯನ್ನು ರಾಜ್ಯಾದ್ಯಂತ ನಡೆಸುತ್ತಿದೆ.
ಯೋಜನೆಯಲ್ಲಿನ ಅಂಶಗಳು
2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸ್ವಂತ ಬಲದ ಅಧಿಕಾರ ಹಿಡಿಯಬೇಕು ಎಂದು ಉದ್ದೇಶ ಹೊಂದಿರುವ ಜೆಡಿಎಸ್ ಪಕ್ಷ ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ. ಈ ಐದು ಅಂಶಗಳನ್ನು ಇಟ್ಟುಕೊಂಡು ಜನರ ಮುಂದೆ ಪ್ರಚಾರ ಮಾಡಲು ಪಂಚರತ್ನ ಯಾತ್ರೆಯನ್ನು ಆರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ