Pejawar Seer Health: ಪೇಜಾವರ ಶ್ರೀಗಳ ಕೊನೆಯಾಸೆಯಂತೆ ಮಠಕ್ಕೆ ಶಿಫ್ಟ್​ ಮಾಡಲಾಗಿದೆ; ಸಂಸದೆ ಶೋಭಾ ಕರಂದ್ಲಾಜೆ

Pejawar Seer Health Critical: ಪೇಜಾವರ ಶ್ರೀಗಳು ಯಾವುದೇ ಚಿಕಿತ್ಸೆಗೂ ಸ್ಪಂದಿಸದ ಕಾರಣ ಅವರನ್ನು ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆತರಲಾಗಿದೆ. ಕೊನೆಯ ಕ್ಷಣಗಳನ್ನು ಮಠದಲ್ಲೇ ಕಳೆಯಬೇಕೆಂಬುದು ಅವರ ಕೊನೆಯಾಸೆಯಾದ್ದರಿಂದ ಇಂದು ಮಠಕ್ಕೆ ಶಿಫ್ಟ್​ ಮಾಡಲಾಗಿದೆ.

ಪೇಜಾವರ ಸ್ವಾಮೀಜಿ

ಪೇಜಾವರ ಸ್ವಾಮೀಜಿ

  • Share this:
ಉಡುಪಿ (ಡಿ. 29): ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಆರೋಗ್ಯ ತೀವ್ರವಾಗಿ ಹದಗೆಟ್ಟಿರುವುದರಿಂದ ಸ್ವಾಮೀಜಿಗಳ ಕೊನೆಯ ಆಸೆಯಂತೆ ಪೇಜಾವರ ಅಧೋಕ್ಷಜ ಮಠಕ್ಕೆ ಶ್ರೀಗಳನ್ನು ಸ್ಥಳಾಂತರಿಸಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ 6 ತಜ್ಞ ವೈದ್ಯರ ತಂಡ ಉಡುಪಿ ಮಠದಲ್ಲಿ ಬೀಡುಬಿಟ್ಟಿದೆ.

ಶ್ರೀಗಳ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಶ್ರೀಗಳ ಅಪೇಕ್ಷೆಯಂತೆ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. ಕೊನೆಯ ಕ್ಷಣಗಳನ್ನು ಮಠದಲ್ಲೇ ಕಳೆಯಬೇಕೆಂಬ ಆಸೆಯಿದ್ದುದರಿಂದ ಅವರನ್ನು ಮಠಕ್ಕೆ ಕರೆತರಲಾಗಿದೆ. ಶ್ರೀಗಳ ಆರೋಗ್ಯ ಸ್ಥಿತಿ ತುಂಬ ಕ್ಷೀಣಿಸುತ್ತಿದೆ. ಇದು ಹೀಗೇ ಮುಂದುವರೆಯುವುದು ಕಷ್ಟ. ಮಠದ ತೀರ್ಮಾನವೇನೆಂದು ನಿರ್ಧರಿಸಿ ಎಂದು ಹೇಳಿದ್ದರಿಂದ ಮಠದ ಕಿರಿಯ ಸ್ವಾಮೀಜಿಗಳು ಮತ್ತು ವೈದ್ಯರು ಚರ್ಚೆ ನಡೆಸಿ ಮಠಕ್ಕೆ ಶಿಫ್ಟ್​ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯಿಂದ ಉಡುಪಿ ಮಠಕ್ಕೆ ಪೇಜಾವರ ಶ್ರೀಗಳ ಸ್ಥಳಾಂತರ; ಭಕ್ತರಿಗೆ ನಿರ್ಬಂಧ

ಶ್ರೀಗಳ ಜೊತೆ ವೈದ್ಯರು, ನರ್ಸ್​​ಗಳು ಇದ್ದಾರೆ. ಎಲ್ಲ ರೀತಿಯ ವೈದ್ಯಕೀಯ ಪರಿಕರಗಳನ್ನು ಮಠದಲ್ಲೇ ನೀಡಲಾಗುತ್ತದೆ. ವೈದ್ಯರು ಮಠದಲ್ಲೇ ಚಿಕಿತ್ಸೆ ನೀಡಲಿದ್ದಾರೆ. ಆಕ್ಸಿಜನ್ ಮತ್ತಿತರ ಲೈಫ್​ ಸಪೋರ್ಟ್​ ಮುಂದುವರೆಸಲಾಗುತ್ತಿದೆ. ಅವರು ಬದುಕುವ ಸಾಧ್ಯತೆ ಸ್ವಲ್ಪ ಕಡಿಮೆ ಎಂದೇ ಹೇಳಲಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಶ್ರೀಗಳು ಯಾವುದೇ ಚಿಕಿತ್ಸೆಗೂ ಸ್ಪಂದಿಸದ ಕಾರಣ ಅವರನ್ನು ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆತರಲಾಗಿದೆ. ಕೊನೆಯ ಕ್ಷಣಗಳನ್ನು ಮಠದಲ್ಲೇ ಕಳೆಯಬೇಕೆಂಬುದು ಅವರ ಕೊನೆಯಾಸೆಯಾದ್ದರಿಂದ ಇಂದು ಮಠಕ್ಕೆ ಶಿಫ್ಟ್​ ಮಾಡಲಾಗಿದ್ದು, ರಥಬೀದಿಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಠಕ್ಕೆ ಆಗಮಿಸಲಿದ್ದಾರೆ. ಶ್ರೀಗಳ ಸಂಬಂಧಿಕರು ಮತ್ತು ಭಕ್ತರು ಮಠದ ಎದುರು ನೆರೆದಿದ್ದು, ಶ್ರೀಗಳ ಸ್ಥಿತಿಗೆ ಕಂಬನಿ ಮಿಡಿಯುತ್ತಿದ್ದಾರೆ.

 
Published by:Sushma Chakre
First published: