ಬೆಂಗಳೂರು: ಸಿಡಿ ವಿಷಯವಾಗಿ ಕೋರ್ಟ್ ಗೆ ಹೋಗಿರುವ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎನ್ನುವ ವಿಷಯ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ ಸೃಷ್ಠಿಸಿತು. ಆಡಳಿತ- ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಹಿನ್ನಲೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆಯಲ್ಲೇ ಕಲಾಪವನ್ನು ಹತ್ತು ನಿಮಿಷ ಮುಂದೂಡಿಕೆ ಮಾಡಲಾಯಿತು. ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಹಾಗೂ ಬಿಜೆಪಿಯ ಸೋಮಶೇಖರ್ ನಡುವೆ ನೇರ ವಾಗ್ವಾ ದ ನಡೆಯಿತು.ಈ ವೇಳೆ ಮಧ್ಯಪ್ರವೇಶ ಮಾಡಿದ ಉಪ ಸಭಾಪತಿ ಪ್ರಾಣೇಶ್, ಸೋಷಿಯಲ್ ಮೀಡಿಯಾದಲ್ಲಿ ತೇಜೋವಧೆ ಮಾಡಬಹುದು ಎನ್ನುವ ಕಾರಣಕ್ಕೆ ಕೋರ್ಟ್ ಗೆ ಹೋಗಿದ್ದಾರೆ. ನಾಳೆ ನೀವೂ ಹೋಗುವ ಸ್ಥಿತಿ ಬರಬಹುದು ಎನ್ನುವುದನ್ನು ಉಲ್ಲೇಖಿಸಿ ಸದನಕ್ಕೆ ಬಂದ ನಂತರ ಅದು ಸದನದ ಆಸ್ತಿ, ಉತ್ತರ ನೀಡಿ ಎಂದು ರೂಲಿಂಗ್ ನೀಡಿದರು.
ಕಾಂಗ್ರೆಸ್ ಸದಸ್ಯರ ಗದ್ದಲ ಮುಂದುವರೆಸಿದ್ದರಿಂದ ಪ್ರಶ್ನೆ ಕೇಳಿ ನಂತರ ಬಹಿಷ್ಕಾರ ಮಾಡುವುದು ಯಾವ ನಿಯಮದಲ್ಲಿದೆ ಹೇಳಿ ಎಂದು ಸದಸ್ಯರಿಗೆ ಪ್ರಶ್ನಿಸಿದರು. ನಿಯಮ 49 ರಲ್ಲಿ ಸ್ಪಷ್ಟವಾಗಿದೆ, ಪ್ರಶ್ನೆ ಹಿಂಪಡೆಯುವುದು,ಮುಂದೂಡುವುದು, ಸಭೆ ನಡೆಯುವ ಮೊದಲು ನೋಟೀಸ್ ನೀಡಿ ಮಾಡಬಹುದು ಎಂದರು. ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ ಪ್ರತಿಭಟನಾತ್ಮಕವಾಗಿ ನಾವು ಬಹಿಷ್ಕಾರ ಮಾಡಿದ್ದೇವೆ, ವಿಶೇಷ ಸಂದರ್ಭದಲ್ಲಿ ಸಭಾಪತಿ ಅವಕಾಶ ಕೊಡಬಹುದು. ಆದರೆ ಇಲ್ಲಿ ಸನ್ನಿವೇಶ ಬೇರೆ ಇದೆ ಎಂದರು. ಇದಕ್ಕೆ ಕಾಂಗ್ರೆಸ್ ನ ಸಿಎಂ ಇಬ್ರಾಹಿಂ ಸಾತ್ ನೀಡಿದರು. ಈ ವೇಳೆ ಇಬ್ರಾಹಿಂ ಬೈರತಿ ಬಸವರಾಜ್ ನಡುವೆ ನೇರ ವಾಗ್ವಾದ ನಡೆಯಿತು. ಈ ವೇಳೆ ಸಚಿವರ ನೆರವಿಗೆ ಧಾವಿಸಿದ ಶೆಟ್ಟರ್ ನೋಟಿಸ್ ನೀಡಿ ಪ್ರಶ್ನೆ ವಾಪಸ್ ಪಡೆಯಬೇಕು, ಇವರ ನಡೆ ಸರಿಯಿಲ್ಲ ಎಂದರು. ಈ ವೇಳೆ ಮತ್ತೆ ಮಧ್ಯಪ್ರವೇಶ ಮಾಡಿದ ಉಪ ಸಭಾಪತಿ ಪ್ರಾಣೇಶ್, ನಿಯಮ 50 ರ ಅಡಿಯಲ್ಲಿ ಸಭಾಪತಿ ಸದಸ್ಯರನ್ನು ಕರೆದಾಗ ಸದಸ್ಯರು ಎದ್ದು ನಿಲ್ಲತಕ್ಕದ್ದು, ಪ್ರಶ್ನೆ ಕೇಳಲು ಅವಕಾಶ ನೀಡಿದಾಗ ಕೇಳದೇ ಇದ್ದರೆ ಅಥವಾ ಗೈರಾಗಿದ್ದರೆ ಬೇರೆಯವರು ಕೇಳಲು ಬಯಸಿದರೆ ಅವಕಾಶ ನೀಡಬಹುದು ಎಂದರು. ಬಸವರಾಜ ಹೊರಟ್ಟಿ ಸಭಾಪತಿ ಪೀಠದಲ್ಲಿದ್ದಾಗ ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂದು ಕಾಂಗ್ರೆಸ್ ನ ಸಿಎಂ ಇಬ್ರಾಹಿಂ ಪ್ರಶ್ನಿಸಿದರು. ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಉಪನಸಭಾಪತಿ ಪ್ರಾಣೇಶ್, ನಾನು ನಿಯಮದ ಮೇಲೆ ಕರ್ತವ್ಯ ನಿರ್ವಹಿಸುತ್ತೇನೆ, ಸದನ ನಡೆಸುತ್ತೇನೆ ಎಂದರು.
ಇದನ್ನು ಓದಿ: ಹನಿಟ್ರ್ಯಾಪ್ ಮೂಲಕ ಆಪರೇಷನ್ ಕಮಲ; ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ, ಪ್ರಶ್ನೆ ಬಂದಾಗ ಕೇಳದೇ ಇದ್ದಲ್ಲಿ ಏನಾದರೂ ರೂಲ್ ಇದೆಯಾ ಎಂದರು. ಇದಕ್ಕೆ ಸಾತ್ ನೀಡಿದ ಹರಿಪ್ರಸಾದ್, ನೈತಿಕತೆಯ ಪ್ರಶ್ನೆ ಮಾಡಿದ್ದೇವೆ, ಪ್ರತಿಭಟನೆ ಮಾಡುವುದು ನಮ್ಮಹಕ್ಕು, ಆಡಳಿತ ಪಕ್ಷದವರು ನಮ್ಮನ್ನು ಇವರೇನು ಹರಿಶ್ಚಂದ್ರರಲ್ಲ ಎನ್ನುತ್ತಾರೆ. ಹರಿಶ್ಚಂದ್ರ ಆದರೆ ಸ್ಮಶಾಣದಲ್ಲಿರಬೇಕು. ಇಲ್ಲಿ ಅಲ್ಲ. ಯಾವ ಕಾರಣಕ್ಕೂ ಸಚಿವರ ಉತ್ತರ ನಮಗೆ ಬೇಡ ಎಂದರು. ನಂತರ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ಪ್ರಶ್ನೆ ಕೇಳದಿದ್ದರೆ ಬೇಸರವಿಲ್ಲ, ಆದರೆ ತೇಜೋವಧೆ ಮಾಡುತ್ತಿರುವುದಕ್ಕೆ ಬೇಸರವಿದೆ, ಕಾಂಗ್ರೆಸ್ ನಲ್ಲಿದ್ದಾಗ ಮೇಟಿ ವಿರುದ್ಧ ಆರೋಪ ಬಂತು. ಅವರು ರಾಜೀನಾಮೆ ಕೊಟ್ಟರು ನಂತರ ಏನಾಯಿತು? ಮೂರು ತಿಂಗಳ ನಂತರ ಕ್ಲೀನ್ ಚಿಟ್ ಕೊಟ್ಟರು. ಆದರೆ ಮೇಟಿ ಮನಸ್ಸು ಚೂರಾಯಿತು. ಅವರ ಮಾನ ವಾಪಸ್ ಬಂತಾ? ನಮ್ಮ ಸಿಡಿ ಇದೆ ಎಂದು ಸ್ಟೇ ತಂದಿಲ್ಲ, ಸರ್ಕಾರ ಬರಲು ಕಾರಣ ಎಂದು ನಮ್ಮ ವಿರುದ್ಧ ಷಡ್ಯಂತ್ರ ರೂಪಿಸುತ್ತಾರೆ ಎಂದು ನಾವು ಕೋರ್ಟ್ ಗೆ ಹೋಗಿದ್ದೇವೆ. ನಾವು ನೈತಿಕತೆಯಲ್ಲೇ ಇದ್ದೇವೆ. ಸಿಡಿ ದೂರು ಕೊಟ್ಟವರು ಈಗ ವಾಪಸ್ ಪಡೆದಿದ್ದಾರೆ. ಈಗ ಹೋದ ಮಾನ- ಮರ್ಯಾದೆ ವಾಪಸ್ ಬರುತ್ತಾ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ