• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸರ್ಕಾರದ ಗೊಡ್ಡು ಬೆದರಿಕೆಗೆ ಬಗ್ಗಲ್ಲ, ಕರ್ನಾಟಕ ಬಂದ್ ಬೆಂಬಲಿಸುವ ಬಗ್ಗೆ ನಿರ್ಧಾರ ಮಾಡಿಲ್ಲ: ಪ್ರವೀಣ್ ಶೆಟ್ಟಿ

ಸರ್ಕಾರದ ಗೊಡ್ಡು ಬೆದರಿಕೆಗೆ ಬಗ್ಗಲ್ಲ, ಕರ್ನಾಟಕ ಬಂದ್ ಬೆಂಬಲಿಸುವ ಬಗ್ಗೆ ನಿರ್ಧಾರ ಮಾಡಿಲ್ಲ: ಪ್ರವೀಣ್ ಶೆಟ್ಟಿ

Praveen Shetty

Praveen Shetty

Karnataka bandh: ನಮ್ಮ ಕರವೇ ಸಂಘಟನೆಯಲ್ಲೂ ಮರಾಠಿ ಮಿತ್ರರು ಇದ್ದಾರೆ. ಅವರು ಈಗ ನಮ್ಮನ್ನ ಆರ್ಥಿಕವಾಗಿ ಸದೃಡರಾಗಲು ಅವಕಾಶ ಕೊಡಿ, ಅಡ್ಡಿಪಡಿಸಬೇಡಿ ಎಂದು ನಮಗೆ ಕೇಳುತ್ತಿದ್ದಾರೆ.

  • Share this:

ಕೋಲಾರ: ರಾಜ್ಯ ಸರ್ಕಾರದಿಂದ ಮರಾಠ ನಿಗಮ ಮಂಡಳಿ ಸ್ಥಾಪನೆ ಕ್ರಮವನ್ನ ವಿರೋಧಿಸಿ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಡಿಸೆಂಬರ್ 5 ರಂದು ಕರೆ ನೀಡಿರುವ  ಕರ್ನಾಟಕ ಬಂದ್​ಗೆ ನಾವಿನ್ನು ಬೆಂಬಲ ಸೂಚಿಸಿಲ್ಲ ಎಂದು  ಕರವೇ ರಾಜ್ಯಾಧ್ಯಕ್ಷ್ಯ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಕೋಲಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಜಿಲ್ಲಾ ಕರವೇ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಬಳಿಕ ಮಾತನಾಡಿದ ಅವರು, ವಾಟಾಳ್ ನಾಗರಾಜ್ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ನಾವು ಬಂದ್ ಆಚರಿಸಲು ನಮ್ಮಲ್ಲೂ ಕೆಲ ಭಿನ್ನಾಭಿಪ್ರಾಯ ಇದೆ. ಹೀಗಾಗಿ ಬೆಂಬಲ ಸೂಚಿಸಿಲ್ಲ ಎಂದರು.


ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಸಂಘಟನೆಗೆ ಸೇರ್ಪಡೆಯಾದ ಕಾರ್ಯಕರ್ತರಿಗೆ,  ಗುರುತಿನ ಚೀಟಿ ವಿತರಣೆ ಮಾಡಿದರು. ಬಳಿಕ  ಕರ್ನಾಟಕ ಬಂದ್ ಕರೆ ಬಗ್ಗೆ,  ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಸೆಂಬರ್ 5 ರಂದು ಕರೆ ನೀಡಿರುವ ಬಂದ್ ಗೆ ನಾವಿನ್ನು ಬೆಂಬಲ ಸೂಚಿಸಿಲ್ಲ. ಆದರೆ ಈಗಾಗಲೇ ಮರಾಠ ನಿಗಮ ಮಂಡಳಿ ಸ್ಥಾಪಿಸುವ ಸರ್ಕಾರದ ಕ್ರಮವನ್ನ ಖಂಡಿಸಿದ್ದೇವೆ ಎಂದು ತಿಳಿಸಿದರು.


ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರವನ್ನ ಬರೆದಿದ್ದೇವೆ. ಬಂದ್ ಕರೆ ನೀಡಿರುವ  ವಾಟಾಳ್ ನಾಗರಾಜ್ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ನಾವು ಬಂದ್ ಆಚರಿಸಲು ನಮ್ಮಲ್ಲು ಕೆಲ ಭಿನ್ನಾಭಿಪ್ರಾಯ ಇದೆ. ಸಂಘಟನೆಯ ಮುಖಂಡರು ಪರ ವಿರೋದ ಚರ್ಚೆಗಳು ಆರಂಭಿಸಿದ್ದಾರೆ. ಹಾಗಾಗಿ ಡಿಸೆಂಬರ್ 1 ರಂದು ಮುಖಂಡರ ಸಭೆ ಕರೆದು ಚರ್ಚಿಸಿ ನಿರ್ಧಾರ  ಪ್ರಕಟಿಸಲಾಗುವುದು ಎಂದು ತಿಳಿಸಿದರು.


ಇನ್ನು  ಕರ್ನಾಟಕದಲ್ಲಿ ಹಲವು ವರ್ಷದಿಂದ ಇಲ್ಲೆ ಹುಟ್ಟಿರುವ ಮರಾಠಿ ಮಿತ್ರರು ಇದ್ದಾರೆ, ನಮಗಿಂತಲೂ ಹಿಂದೆ ಹುಟ್ಟಿದ ಮರಾಠಿಗಳು ಇಲ್ಲೇ ಇದ್ದಾರೆ. ನಮ್ಮ ಕರವೇ ಸಂಘಟನೆಯಲ್ಲೂ ಮರಾಠಿ ಮಿತ್ರರು ಇದ್ದಾರೆ. ಅವರು ಈಗ ನಮ್ಮನ್ನ ಆರ್ಥಿಕವಾಗಿ ಸದೃಡರಾಗಲು ಅವಕಾಶ ಕೊಡಿ, ಅಡ್ಡಿಪಡಿಸಬೇಡಿ ಎಂದು ನಮಗೆ ಕೇಳುತ್ತಿದ್ದಾರೆ. ಮರಾಠ ಎಂದ ಮಾತ್ರಕ್ಕೆ ನಾವು ಎಂಇಎಸ್ ಗುರಿ  ಮಾಡುತ್ತಿದ್ದೀವಿ. ಆದರೆ ಅವರಲ್ಲು ಹಲವು ಪಂಗಡಗಳು ಇವೆ. ಈ ಬಗ್ಗೆ ಸಿಎಂ ಅವರಿಗೆ ಪತ್ರವನ್ನ ಬರೆದಿದ್ದು, ಮರಾಠ ನಿಗಮದ ಬಗ್ಗೆ ಮಾಹಿತಿಯನ್ನ ಕೇಳಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು.


ಸರ್ಕಾರದ ಗೊಡ್ಡು ಬೆದರಿಕೆಗಳಿಗೆ ನಾವೆಂದು ಬೆದರಲ್ಲ:


ಕರ್ನಾಟಕ  ಬಂದ್​ಗೆ ನಿಮ್ಮ ಸಂಘಟನೆಯ ಬೆಂಬಲ ಇದೆಯಾ ಎಂದು ಪೊಲೀಸರು ನನ್ನ ಕೇಳುತ್ತಿದ್ದಾರೆ.  ಅದಕ್ಕಾಗಿ ನಮ್ಮ ಮನೆ ಬಳಿಗೆ ಬಂದು, ನಿಮ್ಮದು ಹಳೇ ಕೇಸ್ ಇದೆ. ಕೇಸ್ ಬಗ್ಗೆ ನೀವು ವಿಚಾರಣೆಗೆ ಬಂದಿಲ್ಲ ಎಂದು ಪೊಲೀಸರು ನಮ್ಮ ಮನೆಯ ಹತ್ತಿರಕ್ಕೆ ಬಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ  ಸರ್ಕಾರದ ಇಂತಹ ಗೊಡ್ಡು ಬೆದರಿಕೆಗೆ ನಾವು ಬಗ್ಗಲ್ಲ ಎಂದು ಕರವೇ ರಾಜ್ಯಾಧ್ಯಕ್ಷ್ಯ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.


ನಾವು ಕನ್ನಡಪರ ಹೋರಾಟ ಮಾಡಿ ಕೇಸ್ ಹಾಕಿಸಿಕೊಂಡಿದ್ದೇವೆ. ಈಗಲು ನಾವು ನ್ಯಾಯಾಂಗ ಹೋರಾಟ ಮಾಡುತ್ತಿದ್ದೇವೆ. ಸರ್ಕಾರಗಳು ಬದಲಾದಂತೆ ಅವರಿಗೆ ಯಾರು ಹತ್ತಿರ ಇರುವರೊ, ಅವರ ಮೇಲಿನ ಕೇಸ್ ಗಳನ್ನು ಹಿಂಪಡೆಯುವ ನಿರ್ಧಾರವನ್ನ ನಾವು ನೋಡಿದ್ದೇವೆ. ಆದರೆ ನಮ್ಮ ಮೇಲಿನ ಕೇಸ್​ಗಳು ಹಾಗೆಯೇ ಇದೆ.  ಅನೇಕ ಸರ್ಕಾರಗಳು ನಮ್ಮ ಮೇಲೆ ಕೇಸ್ ಗಳನ್ನ ಹಾಕಿದೆ ಎಂದರು.


ಈಗಿನ  ಬಂದ್ ಕರೆ ಬಗ್ಗೆಯೇ ಅಲ್ಲದೆ,  ಈ ಹಿಂದೆಯೂ ಕರವೇ ಹೋರಾಟಗಾರರ ಮೇಲೆ ಕೇಸ್ ಗಳನ್ನ ಹಾಕಲಾಗಿದೆ.  ಕನ್ನಡಕ್ಕಾಗಿ ಸ್ವಾಭಿಮಾನದಿಂದ ಹೋರಾಡಿದ್ದೇವೆ,  ಹೋರಾಟಕ್ಕಾಗಿ ಜೈಲಿಗೆ ಹೋಗಲು ಸಿದ್ದ. ಮುಂದೆ ರಾಜ್ಯದಲ್ಲಿ ದಲಿತಪರ, ರೈತಪರ, ಕನ್ನಡಪರ ಸಂಘಟನೆಗಳನ್ನ ಒಗ್ಗೂಡಿಸಿ, ಚಿಂತನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸುವುದಾಗಿ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!

Published by:zahir
First published: