news18-kannada Updated:February 26, 2021, 8:41 PM IST
ಸುಪ್ರೀಂಕೋರ್ಟ್.
ಬೆಂಗಳೂರು: ಕಾವೇರಿ ಮತ್ತು ಮಹದಾಯಿ ಹಾಗೂ ಕೃಷ್ಣ ಜಲ ವಿವಾದಗಳ ಸಂಬಂಧ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ನ್ಯಾಯಾಲಯದಲ್ಲಿರುವ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತಂತೆ ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ಜೊತೆಗೂಡಿ ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಬೊಮ್ಮಾಯಿ ಅವರು, ಹೆಚ್ಚುವರಿ ನೀರು ಹಂಚಿಕೆ ಬಗ್ಗೆ ನ್ಯಾಯಾಧಿಕರಣದಲ್ಲಿ ತೀರ್ಮಾನ ಆಗಬೇಕು. ಆಗಿದ್ದರೂ ಕಾನೂನಿಗೆ ವಿರೋಧವಾಗಿ ತಮಿಳುನಾಡು ಯೋಜನೆ ಜಾರಿಗೆ ತರಲು ಹೊರಟಿದೆ. ಬೆಂಗಳೂರು ಕುಡಿಯುವ ನೀರಿನ ಯೋಜನೆಗೆ ನಾವು ಮುಂದಾದಾಗ ವಿರೋಧ ವ್ಯಕ್ತಪಡಿಸಿದ್ದರು. ತಮಿಳುನಾಡು ನೀರಿನ ವಿಚಾರವಾಗಿ ಪ್ರತಿ ಹೆಜ್ಜೆಗೂ ವಿವಾದ ಸೃಷ್ಟಿಸಿದೆ ಎಂದು ತಿಳಿಸಿದರು.
ಈ ಬಾರಿ ಕಾವೇರಿ-ವೆಗೈ- ಗುಂಡೂರು ಯೋಜನೆಗೆ ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಕ್ಲಿಯರೆನ್ಸ್ ನೀಡದಂತೆ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮಧುರೈ ನ್ಯಾಯಾಲಯದಲ್ಲಿ ರೈತರ ಮೂಲಕ ಪಿಟಿಷನ್ ಹಾಕಿದ್ದಾರೆ. ಅಂತರಾಜ್ಯ ಜಲ ವಿವಾದ ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಹಾಕಿದ್ದಾರೆ. ವ್ಯಕ್ತಿಗಳು ಪಿಟಿಷನ್ ಹಾಕುವ ಹಾಗಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಪಿಟಿಷನ್ ನಲ್ಲಿ ನಮ್ಮನ್ನು ಪಾರ್ಟಿ ಮಾಡಿಲ್ಲ. ತಮಿಳುನಾಡನ್ನು ಪಾರ್ಟಿ ಮಾಡಿದ್ದಾರೆ. ಆದರೂ ಆ ಕೇಸಿನಲ್ಲೂ ವಾದ ಮಾಡಲು ತೀರ್ಮಾನ ಮಾಡಿದ್ದು, ಮಧುರೈ ಹೈಕೋರ್ಟ್ ನಲ್ಲಿ ನಮ್ಮ ವಕೀಲರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ವಾದ ಮಾಡುತ್ತಾರೆ ಎಂದರು.
ಮತ್ತೆ ಸುಪ್ರೀಂಕೋರ್ಟ್ ಗೆ ಈ ವಿಚಾರವನ್ನು ತೆಗೆದುಕೊಂಡು ಹೋಗುವಂತೆ ತೀರ್ಮಾನ ಮಾಡಿದ್ದೇವೆ. ಮಹದಾಯಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಗೋವಾದ ಪಿಟಿಷನ್ ಒಪ್ಪಿಕೊಂಡು ಈಗಿರುವ ಸ್ಥಿತಿಯಲ್ಲಿ ನೀರು ಡೈವರ್ಟ್ ಆಗಿದ್ಯಾ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಮೂರು ರಾಜ್ಯಕ್ಕೂ ಸೂಚನೆ ನೀಡಿದೆ. 3 ರಾಜ್ಯದ ಸುಪರಿಂಡೆಟ್ ಇಂಜಿನಿಯರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲಿರುವ ವಾಸ್ತವಾಂಶ ಪ್ರತಿಬಿಂಬಿಸಲು ತೀರ್ಮಾನ ಆಗಿದೆ. ನದಿ ಪಾತ್ರದ ಕೆಳಗಡೆ ಇದೆ, ಲಿಂಕಿಂಗ್ ಕೆನಾಲ್ ಎತ್ತರದಲ್ಲಿದೆ. ಹೀಗಾಗಿ ಯಾವುದೇ ನೀರು ಡೈವರ್ಟ್ ಆಗಲು ಸಾಧ್ಯವಿಲ್ಲ. ಟ್ರಿಬ್ಯೂನಲ್ ರೀತಿಯಲ್ಲಿ ರಾಜ್ಯ ಹೋಗುತ್ತಿದೆ. ಅದನ್ನು ತಿರುಗಿಸಿಲ್ಲ. ಆದರೆ ಗೋವಾ ಕಳಸಾ-ಬಂಡೂರಿ ಯೋಜನೆ ಮುಂದೂಡಲು ಈ ರೀತಿಯ ತಂತ್ರ ಮಾಡುತ್ತಿದೆ ಎಂದು ವಿವರಿಸಿದರು.
ಟ್ರಿಬ್ಯೂನಲ್ ನಲ್ಲಿ ಕೊಟ್ಟಿರುವ ನೀರನ್ನು ಬಳಕೆ ಮಾಡಲು ಕಾನೂನಿನ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಲು ಸರ್ಕಾರ ನಿರ್ಧರಿಸಿದೆ. ಕಾಮಗಾರಿಗೆ ಅನುಮತಿ ಪಡೆಯಲು ಸುಪ್ರೀಂಕೋರ್ಟ್ ನಲ್ಲಿ ಯಾವ ರೀತಿ ವಾದ ಮಾಡಬೇಕೆಂಬ ಬಗ್ಗೆ ಸಲಹೆ ನೀಡಿದ್ದೇವೆ. ರಾಜ್ಯ ಸರ್ಕಾರದಿಂದ ಯಾವುದೇ ವಿಳಂಬ ಆಗಿಲ್ಲ. ತಮಿಳುನಾಡು ಏಕಾಏಕಿ ಅಡಿಗಲ್ಲು ಹಾಕಿದೆ. ಈ ಬಗ್ಗೆ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರಲ್ಲಿ ಯಾವುದೇ ವಿಳಂಬ ಇಲ್ಲ, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರ ನಮ್ಮ ನೆಲ ಜಲ ಕಾಪಾಡಲು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಇದನ್ನು ಓದಿ: ಕೆಡಿಪಿ ಸಭೆಯಲ್ಲಿ ಮೊಬೈಲ್ನಲ್ಲಿ ಮಗ್ನವಾಗಿದ್ದ ಅಧಿಕಾರಿ; ತರಾಟೆಗೆ ತೆಗೆದುಕೊಂಡ ಸಚಿವೆ ಶಶಿಕಲಾ ಜೊಲ್ಲೆ!
ಕೃಷ್ಣ ಎರಡನೇ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಣೆಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಹಾಕಲಾಗಿದೆ. ನಮ್ಮ ಜೊತೆ ಮಹಾರಾಷ್ಟ್ರ ಸರ್ಕಾರವೂ ಈ ಸಂಬಂಧ ಅರ್ಜಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಮತ್ತು ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ಕಾನೂನು ತಂಡ ಅಣಿಯಾಗಿದೆ ಎಂದರು.
ರಾಜ್ಯದ ಅಡ್ವೊಕೇಟ್ ಜನರಲ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲರು, ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ಹಿರಿಯ ಅಧಿಕಾರಿಗಳು, ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಿತಿ ಸದಸ್ಯರು, ರಾಜ್ಯದ ಎಲ್ಲಾ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮಹತ್ವಯುತವಾದ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
Published by:
HR Ramesh
First published:
February 26, 2021, 8:36 PM IST