ಮೈಸೂರು (ಅಕ್ಟೋಬರ್ 5): ಆದಾಯಕ್ಕಿಂತಲೂ ಹೆಚ್ಚು ಆಸ್ತಿಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಹಾಗೂ ಡಿಕೆಶಿ ಬೆಂಬಲಿಗರು ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದು, ಇದೊಂದು ರಾಜಕ್ರೀಯ ಪ್ರೇರಿತ ದಾಳಿ ಎಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾರವಾಗಿ ಉತ್ತರಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ‘ಇಲ್ಲಿ ಟಾರ್ಗೆಟ್ ಮಾಡುವ ಉದ್ದೇಶ ಯಾರಿಗೂ ಇಲ್ಲ. ಹಾಗೆ ಟಾರ್ಗೆಟ್ ಮಾಡಬೇಕಿಂದ್ದರೆ ಡಿಕೆಶಿಗಿಂತ ದೊಡ್ಡ ನಾಯಕ ಸಿದ್ದರಾಮಯನವರನ್ನೇ ಟಾರ್ಗೆಟ್ ಮಾಡಬೇಕಿತ್ತಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸುಧಾಕರ್, "ಡಿಕೆ ಸಹೋದರರ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಇದು ಹಳೆಯ ಕೇಸ್ಗೆ ಸಂಬಂಧಿಸಿ ಮುಂದುವರೆದ ಶೋಧ ಇರಬಹುದು. ಡಿಕೆಶಿ ಅವರಿಗೆ ಪ್ರಾಮಾಣಿಕತೆ ಸಾಬೀತು ಮಾಡಲು ಇದೊಂದು ಅವಕಾಶ ಸಿಕ್ಕಿದೆ. ಅವರು ಪ್ರಾಮಾಣಿಕತೆಯನ್ನು ಸಾಬೀತು ಮಾಡಿಕೊಳ್ಳಲಿ," ಎಂದು ಹೇಳಿದ್ದಾರೆ.
ಡಿಕೆಶಿ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎನ್ನುವ ಮಾತು ಕೇಳಿ ಬಂದಿದೆ. ಇದಕ್ಕೆ ಉತ್ತರಿಸಿರುವ ಸುಧಾಕರ್, "ರಾಜಕೀಯ ಹಸ್ತಕ್ಷೇಪ ಮಾಡುವ ಉದ್ದೇಶ ಬಿಜೆಪಿಗೆ ಇಲ್ಲ. ಉಪಚುನಾವಣೆ ಇದೆ ಎನ್ನುವ ಕಾರಣಕ್ಕೂ ದಾಳಿ ನಡೆದಿಲ್ಲ. ನಮಗೆ ಈಗಾಗೇ 117 ಸ್ಥಾನ ಇದೆ. ಈಗ ಎರಡು ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಿಂದ ಸರ್ಕಾರದ ಅಳಿವು ಉಳಿವು ಪ್ರಶ್ನೆ ಬರುವುದಿಲ್ಲ. ಹೀಗಾಗಿ, ಇದು ರಾಜಕೀಯ ಪ್ರೇರಿತ ದಾಳಿ ಎಂಬ ಆರೋಪದಲ್ಲಿ ಹುರುಳಿಲ್ಲ. ಸಿದ್ದರಾಮಯ್ಯರಿಗಿಂತ ದೊಡ್ಡ ನಾಯಕ ಡಿಕೆಶಿ ಅಲ್ಲ. ಇದು ರಾಜಕೀಯ ಪ್ರೇರಿತ ದಾಳಿ ಆಗಿದ್ದರ ಮಾಜಿ ಸಿಎಂ ಸಿದ್ದರಾಮಯ್ಯ ಅವರರನ್ನು ಟಾರ್ಗೆಟ್ ಮಾಡಬೇಕಿತ್ತಲ್ಲವೇ?" ಎಂದು ಪ್ರಶ್ನಿಸಿದರು.
ಪ್ರತೀ ಬಾರಿ ಸಿಬಿಐ ದಾಳಿ ನಡೆದಾಗ ಅದು ರಾಜಕೀಯ ಪ್ರೇರಿತ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಅಮಿತ್ ಶಾ ಅವರಿಗೆ 2 ವರ್ಷ ಗುಜರಾತ್ ಪ್ರವೇಶ ನಿಷೇಧಿಸಿದ್ದಾಗ, ಈಗಿನ ಆಂಧ್ರ ಪ್ರದೇಶದ ಸಿಎಂ ಸೇರಿ ಹಲವಾರು ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿಬಿಐ ದಾಳಿ ನಡೆದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಎಂಬುದು ಮರೆತುಹೋಯಿತೇ?(1/2) pic.twitter.com/lXyjvMlksd
— Dr Sudhakar K (@mla_sudhakar) October 5, 2020
ಸಿಬಿಐ, ಈಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇ ಬೇಕು.(2/2)
— Dr Sudhakar K (@mla_sudhakar) October 5, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ