ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪನ್ನು ನಾನು ಖಂಡಿಸುತ್ತೇನೆ; ಅಸಮಾಧಾನ ಹೊರಹಾಕಿದ ಖರ್ಗೆ

ದೇಶದಲ್ಲಿ ಪರಿಶಿಷ್ಟರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರಗಳು ಇರುವ ಕಡೆಗಳಲ್ಲೆಲ್ಲಾ ಇಂಥ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ. ಬಿಜೆಪಿ ನಾಯಕರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆ.

  • Share this:
ಬೆಂಗಳೂರು (ಫೆಬ್ರವರಿ 09); ಇಡೀ ರಾಷ್ಟ್ರ ತಲ್ಲಣಗೊಳ್ಳುವಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಮೀಸಲಾತಿ ನೀಡುವುದು ರಾಜ್ಯಗಳಿಗೆ ಬಿಟ್ಟ ವಿಚಾರ. ಆದರೆ, ಇದು ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಇಡೀ ದೇಶವನ್ನು ತಪ್ಪು ದಾರಿಗೆ ಎಳೆಯುವಂತಿದೆ. ಈ ತೀರ್ಪನ್ನು ನಾನು ವ್ಯಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಂಸದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ವಿರುದ್ಧ ತಮ್ಮ  ಅತೃಪ್ತಿಯನ್ನು ಹೊರಹಾಕಿದ್ದಾರೆ.

ಶುಕ್ರವಾರ ಮೀಸಲಾತಿ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, “ಮೀಸಲಾತಿ ಎಂಬುದು ಮೂಲಭೂತ ಹಕ್ಕಲ್ಲ” ಎಂಬ ಅಚ್ಚರಿಯ ತೀರ್ಪು ನೀಡಿತ್ತು. ಸುಪ್ರೀಂ ತೀರ್ಪಿನ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ದಿನೇಶ್ ಗುಂಡೂರಾವ್ ಜೊತೆಗೆ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿರುವ ಮಲ್ಲಿಕಾರ್ಜುನ ಖರ್ಗೆ,

“ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದ 16ನೇ ವಿಧಿ ಈಗಾಗಲೇ ಇದೆ. ಇದಕ್ಕೆ ನ್ಯಾಯ ನೀಡುವ ಸಲುವಾಗಿ 16(4), 16(4ಬಿ) ಸಹ ಇದೆ. ಆದರೆ, ಇದೂ ತಿಳಿದಿದ್ದೂ ಸುಪ್ರೀಂ ಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿರುವುದು ಅಚ್ಚರಿ ಮೂಡಿಸುವಂತಿದೆ. ನಾನು ವ್ಯಯಕ್ತಿಕವಾಗಿ ಈ ತೀರ್ಪನ್ನು ಖಂಡಿಸುತ್ತೇನೆ” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

“ದೇಶದಲ್ಲಿ ಪರಿಶಿಷ್ಟರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರಗಳು ಇರುವ ಕಡೆಗಳಲ್ಲೆಲ್ಲಾ ಇಂಥ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ. ಬಿಜೆಪಿ ನಾಯಕರು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಮೀಸಲಾತಿ ರದ್ದು, ಸಂವಿಧಾನ ಬದಲು ಮಾಡುವ ಪ್ರಯತ್ನಕ್ಕೆ ಬಿಜೆಪಿ ಮೊದಲಿಂದಲೂ ಕೈ ಹಾಕುತ್ತಿದೆ. ಬಿಜೆಪಿ ಸರ್ಕಾರಗಳು ಇರುವ ಕಡೆಗಳಲ್ಲೆಲ್ಲಾ ದಲಿತರ ಮೇಲೆ ಶೋಷಣೆಗಳು ಹೆಚ್ಚಾಗುತ್ತಿದೆ.

ಈಗ ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಮೂಲಭೂತ ಹಕ್ಕೇ ಇಲ್ಲ ಅಂದ್ರೆ ಹೇಗೆ ನಿಮಗೆ ಮೀಸಲಾತಿ ಮೂಲಭೂತ ಹಕ್ಕೇ ಅಲ್ಲ ಅಂದ್ರೆ ಪರಿಶಿಷ್ಟರು ಎಲ್ಲಿಗೆ ಹೋಗಬೇಕು ? 70 ವರ್ಷಗಳಿಂದ ನಡೆದು ಬಂದಿದ್ದ ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ನೀಡುವುದು ಸರಿಯಲ್ಲ. ಮೀಸಲಾತಿ ರದ್ದು ಪ್ರಯತ್ನಗಳ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ನಾವು ಹೋರಾಟ ಮಾಡುತ್ತೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

“ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಆದರೆ,ಮೀಸಲಾತಿ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಇಂಥ ತೀರ್ಪುಗಳು ಬರಲು ಉತ್ತರಾಖಂಡ ಸರ್ಕಾರವೇ ಕಾರಣ. ಈಗ ಉತ್ತರ ಪ್ರದೇಶ ಸಹ ಈ ತೀರ್ಪನ್ನು ಅನುಸರಿಸಲು ಮುಂದಾಗುತ್ತದೆ. ಇದು ನಿಜಕ್ಕೂ ಅನಾಹುತಕಾರಿ ಬೆಳವಣಿಗೆಯಾಗಿದ್ದು, ಸುಪ್ರೀಂ ತೀರ್ಪು ಸರಿಯಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸುಪ್ರೀಂ ಕೋರ್ಟ್​ಗೆ ಈ ಕುರಿತು ಮನವರಿಕೆ ಮಾಡಿಕೊಡುವ ಅಗತ್ಯ ಇದೆ” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಭಾರತೀಯ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ ಅರವಿಂದ ಕೇಜ್ರಿವಾಲ್; ಕಾರಣವೇನು?
First published: