• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mud House: ಲಕ್ಸುರಿ ಮಣ್ಣಿನ ಮನೆ ನೋಡಿದ್ದೀರಾ? ಗಾಳಿ-ಮಳೆ ಬಂದ್ರೂ ಕುಸಿದು ಬೀಳಲ್ಲ

Mud House: ಲಕ್ಸುರಿ ಮಣ್ಣಿನ ಮನೆ ನೋಡಿದ್ದೀರಾ? ಗಾಳಿ-ಮಳೆ ಬಂದ್ರೂ ಕುಸಿದು ಬೀಳಲ್ಲ

ಮಣ್ಣಿನ ಮನೆ

ಮಣ್ಣಿನ ಮನೆ

ಸಾಮಾನ್ಯವಾಗಿ, ಮಣ್ಣಿನ ಮನೆಗಳ ಚಿತ್ರಣವು ಕತ್ತಲೆಯಾದ, ಇಕ್ಕಟ್ಟಾದ ಮನೆಯಾಗಿದ್ದು, ಅಲ್ಲಿ ಗೋಡೆಗಳು ಭಾರೀ ಮಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತವೆ ಎಂಬಂತಹ ಸಾಕಷ್ಟು ತಪ್ಪು ಕಲ್ಪನೆಗಳಿವೆ.

  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

ಮಣ್ಣಿನ ಮನೆಗಳೆಂದರೆ(Mud House) ಇಕ್ಕಟ್ಟಾದ, ಗಾಳಿ - ಬೆಳಕು ಇಲ್ಲದ, ಯಾವಾಗ ಬೇಕಾದರೂ ಕುಸಿದು ಬೀಳಬಹುದಾದ ಬಡವರ ಮನೆ ಎಂಬುದಾಗಿ ನಮ್ಮಲ್ಲಿ ಕಲ್ಪನೆಗಳಿವೆ. ಆದರೆ ಈ ಪರಿಕಲ್ಪನೆ ಈಗ ಬದಲಾಗಿದೆ. ಈಗ ಮಣ್ಣಿನ ಮನೆಯನ್ನೂ ಆಧುನಿಕ ಶೈಲಿಯಲ್ಲಿ, ಹೊಸ ವಿನ್ಯಾಸದೊಂದಿಗೆ ನಿರ್ಮಾಣ ಮಾಡಲಾಗುತ್ತದೆ. ಹೀಗೆ ಮಣ್ಣಿನ ಮನೆಗಳನ್ನು ಸಹ ಲಕ್ಸುರಿಯಾಗಿ, ಆಧುನಿಕ ಶೈಲಿಯಲ್ಲಿ ನಿರ್ಮಿಸುವುದಕ್ಕೆ ಬೆಂಗಳೂರಿನ(Bengaluru) ಓರ್ವ ವಾಸ್ತುಶಿಲ್ಪಿ(Architect) ಜನಪ್ರಿಯತೆ ಪಡೆದಿದ್ದಾರೆ. ಹೌದು, ಬೆಂಗಳೂರಿನ ವಾಸ್ತುಶಿಲ್ಪಿ ಶರಣ್ಯ ಅಯ್ಯರ್ ಅವರು ಸ್ಟುಡಿಯೋ ವರ್ಜ್ ಅನ್ನೋ ಕಂಪನಿ ನಡೆಸುತ್ತಿದ್ದಾರೆ. ಅವರು ಪರಿಸರ ಸ್ನೇಹಿ 'ಮಣ್ಣಿನ ಮನೆಗಳನ್ನು' ನಿರ್ಮಿಸುವ ಕೆಲಸ ಮಾಡುತ್ತಿದ್ದು, ಅವರ ಈ ಸಾಹಸೋದ್ಯಮವು ದಕ್ಷಿಣ ಭಾರತದಾದ್ಯಂತ(South India) ಸುಮಾರು 50 ಕ್ಕೂ ಹೆಚ್ಚು ಯೋಜನೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.


41 ವರ್ಷ ವಯಸ್ಸಿನ ಆರ್ಕಿಟೆಕ್ಟ್‌ ಶರಣ್ಯ 'ಮಣ್ಣಿನ ಕಟ್ಟಡಗಳನ್ನುʼ ನಿರ್ಮಿಸುತ್ತಾರೆ. ಈ ಮನೆಗಳು ಭೂ-ಸ್ನೇಹಿ ತಂತ್ರಗಳನ್ನು ಒಳಗೊಂಡಿದ್ದು, ಸೌಂದರ್ಯ ಮತ್ತು ಸೌಕರ್ಯಗಳೊಂದಿಗೆ ಮಣ್ಣಿನ ಮನೆಗಳನ್ನೇ ವಿಶೇಷವಾಗಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಹಳೆಕಾಲದ ಮಣ್ಣಿನ ಮನೆಗಳಿಗೆ ಹೊಸ ಟಚ್‌ ನೀಡುತ್ತಿದ್ದಾರೆ.




50ಕ್ಕೂ ಹೆಚ್ಚು ಮಣ್ಣಿನ ಮನೆಗಳ ನಿರ್ಮಾಣ


2013 ರಲ್ಲಿ ಸ್ಥಾಪನೆಯಾದ ಸ್ಟುಡಿಯೋ ವರ್ಜ್, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣದಲ್ಲಿ 50 ಕ್ಕೂ ಹೆಚ್ಚು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. “ಇಂಟರೆಸ್ಟಿಂಗ್‌ ವಿಚಾರವೆಂದರೆ ನನಗೆ ಬರುವ ಆರ್ಡರ್‌ಗಳಲ್ಲಿ ಹೆಚ್ಚಿನವು ಮನೆಗಳಿಗೆ ಸಂಬಂಧಿಸಿದೆ. ಸ್ವತಂತ್ರ ಮನೆಗಳ ಹೊರತಾಗಿಯೂ ನಾನು ಕೆಲವು ಶಾಲೆಗಳು ಮತ್ತು ಕಲಿಕಾ ಕೇಂದ್ರಗಳನ್ನು ನಿರ್ಮಿಸಿದ್ದೇವೆ.” ಎಂಬುದಾಗಿ ಅವರು ಹೇಳಿದ್ದಾರೆ.


ಸಾಮಾನ್ಯವಾಗಿ, ಮಣ್ಣಿನ ಮನೆಗಳ ಚಿತ್ರಣವು ಕತ್ತಲೆಯಾದ, ಇಕ್ಕಟ್ಟಾದ ಮನೆಯಾಗಿದ್ದು, ಅಲ್ಲಿ ಗೋಡೆಗಳು ಭಾರೀ ಮಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತವೆ ಎಂಬಂತಹ ಸಾಕಷ್ಟು ತಪ್ಪು ಕಲ್ಪನೆಗಳಿವೆ ಎನ್ನುವ ಶರಣ್ಯ, ತಾವು ನಿರ್ಮಿಸುವ ಮಣ್ಣಿನ ಮನೆಗಳಲ್ಲಿ ಬಾಳಿಕೆ ಮತ್ತು ನಿರ್ವಹಣೆಗೆ ವಿಶೇಷ ಗಮನ ನೀಡುತ್ತಾರಂತೆ.


ಶರಣ್ಯ ಅವರ ಕಲಿಕೆ ಮತ್ತು ಕನಸು !


ಹೈದರಾಬಾದ್‌ನ ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಮತ್ತು ಫೈನ್ ಆರ್ಟ್ಸ್ ವಿಶ್ವವಿದ್ಯಾಲಯದಲ್ಲಿ (JNAFAU) ವಿದ್ಯಾರ್ಥಿಯಾಗಿದ್ದಾಗ ಶರಣ್ಯ ಅವರ ಪ್ರಯಾಣ ಪ್ರಾರಂಭವಾಯಿತು.ಪುದುಚೇರಿಯಲ್ಲಿ ಅರ್ಥ್ ಇನ್‌ಸ್ಟಿಟ್ಯೂಟ್ ನೀಡಿದ ಒಂದು ತಿಂಗಳ ಕಾಲದ ಮಣ್ಣಿನ ನಿರ್ಮಾಣ ಕಾರ್ಯಾಗಾರವು ಶರಣ್ಯ ಅವರಿಗೆ ಇನ್ನಷ್ಟು ಮಾಹಿತಿ ನೀಡಿತು.


ನಂತರ ಅವರು ಅಮೆರಿಕದ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಲು ತೆರಳಿದರು. ಅವರು ಅಮೆರಿಕದಲ್ಲಿ ಮೇನ್‌ಸ್ಟ್ರೀಮ್ ನಿರ್ಮಾಣ ವಿಭಾಗದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ಅವರು ಅಲ್ಲಿ ಲೀಡ್‌ ಹಸಿರು ಕಟ್ಟಡ ಪ್ರಮಾಣೀಕರಣವನ್ನು ಮತ್ತು ಭಾರತದಲ್ಲಿ ಗೃಹ ಪ್ರಮಾಣೀಕರಣವನ್ನು ಪಡೆದಿದ್ದಾರೆ.




“ಭಾರತಕ್ಕೆ ಮರಳಿದ ನಂತರ, ನಾನು ಇತರರಿಗೆ ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ ಕೆಲಸ ತೃಪ್ತಿ ನೀಡಲಿಲ್ಲ. ನಾನು ಸ್ವಂತವಾಗಿ ಕೆಲಸ ಮಾಡಲು ನಿರ್ಧರಿಸಿ ಸ್ಟುಡಿಯೋ ವರ್ಜ್ ಅನ್ನು ಸ್ಥಾಪಿಸಿದೆ” ಎಂದು ಶರಣ್ಯ ಹೇಳುತ್ತಾರೆ.


ಮಣ್ಣಿನ ಮನೆಯ ನಿರ್ಮಾಣ ಹೇಗಿರುತ್ತದೆ?


ಮಣ್ಣಿನ ಮನೆಯ ನಿರ್ಮಾಣ ಮಾಡುವ ತಂತ್ರಗಳನ್ನು ವಿವರಿಸುತ್ತಾ, ಶರಣ್ಯ ಹೇಳುತ್ತಾರೆ, “ಸಾಮಾನ್ಯವಾಗಿ, ಒಂದೇ ಭೂಮಿಯನ್ನ ವಿವಿಧ ವಿಧಾನದಲ್ಲಿ ಬಳಸಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಕಾಬ್, ರಮ್ಡ್ ಅರ್ಥ್ ಮತ್ತು ಮಡ್ ಬ್ಲಾಕ್ಸ್ ಎಂಬ ಮೂರು ತಂತ್ರಗಳಿವೆ.


ಆದ್ರೆ ಶರಣ್ಯ ರಮ್ಡ್ ಅರ್ಥ್ ತಂತ್ರಕ್ಕೆ ಒಲವು ತೋರುತ್ತಾರೆ. ಅಲ್ಲಿ ಪ್ಲೈವುಡ್‌ನ ಎರಡು ಹಲಗೆಗಳ ನಡುವೆ ಮಣ್ಣನ್ನು ತುಂಬಿದ ನಂತರ ಒಂಬತ್ತು-ಇಂಚಿನ ದಪ್ಪದ ಗೋಡೆಯನ್ನು ತಯಾರಿಸಲಾಗುತ್ತದೆ. ಮಣ್ಣು ಗಟ್ಟಿಯಾದ ನಂತರ ಪ್ಲೈವುಡ್ ಅನ್ನು ತೆಗೆದುಹಾಕಲಾಗುತ್ತದೆ. ಇದು ಸುಮಾರು ಒಂದು ದಿನ ತೆಗೆದುಕೊಳ್ಳುತ್ತದೆ. ಈ ವಿಧಾನವು ಸುಲಭ ಮತ್ತು ವೇಗವಾಗಿದೆ ಎಂದು ಅವರು ಹೇಳುತ್ತಾರೆ.


ಅಲ್ಲದೇ ಭೂಮಿಯ ಕಟ್ಟಡಗಳು ಸಾಂಪ್ರದಾಯಿಕ ಕಟ್ಟಡಗಳಂತೆಯೇ ಗಟ್ಟಿಮುಟ್ಟಾಗಿರುತ್ತವೆ. ಹವಾಮಾನಕ್ಕೆ ಸೂಕ್ಷ್ಮವಾಗಿರುತ್ತವೆ ಎಂದು ಶರಣ್ಯ ಪ್ರತಿಪಾದಿಸುತ್ತಾರೆ.


ಮಣ್ಣಿನ ಮನೆಗಳ ಪ್ರಯೋಜನಗಳು


ಮಣ್ಣಿನ ಮನೆಗಳು ಹವಾನಿಯಂತ್ರಣ ಮತ್ತು ಹೀಟರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇವು ಸಾಕಷ್ಟು ಕ್ರಾಸ್‌ ವೆಂಟಿಲೇಶನ್‌, ಸಾಕಷ್ಟು ನೈಸರ್ಗಿಕ ಬೆಳಕನ್ನು ಹೊಂದಿರುವುದರ ಜೊತೆಗೆ ಶಾಖ ಹೀರಿಕೊಳ್ಳುವ ಗೋಡೆಗಳು ಮತ್ತು ಚಳಿಯನ್ನು ತಡೆಯುವಂಥ ಗೋಡೆಗಳನ್ನು ವಿನ್ಯಾಸ ಮಾಡಲಾಗುತ್ತದೆ ಎಂಬುದಾಗಿ ಶರಣ್ಯ ಹೇಳುತ್ತಾರೆ.




ಸ್ಥಳೀಯ ವಸ್ತುಗಳ ಬಳಕೆಯು ಇಂಗಾಲದ ಹರಿವನ್ನು ಕಡಿಮೆ ಮಾಡುತ್ತದೆ. "ಮಣ್ಣಿನ ಕಟ್ಟಡಗಳು ಪ್ರಕೃತಿ ಸ್ನೇಹಿಯಾಗಿರುವುದರ ಜೊತೆಗೆ ಉತ್ತಮ ಗಾಳಿಯ ಗುಣಮಟ್ಟ, ಆಕರ್ಷಕ ಹಸಿರು ಸ್ಥಳಗಳು ಮತ್ತು ಹೆಚ್ಚು ನೈಸರ್ಗಿಕ ಬೆಳಕನ್ನು ಹೊಂದಿರುತ್ತವೆ ಎಂದು ಶರಣ್ಯ ಹೇಳುತ್ತಾರೆ.


ಈ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ, ವಸ್ತು ಮತ್ತು ಕಾರ್ಮಿಕ ವೆಚ್ಚವು ಸುಮಾರು ಸರಿಸಮವಾಗಿರುತ್ತದೆ.


ಭೂಮಿಯ ಕಟ್ಟಡಗಳು ಸಾಂಪ್ರದಾಯಿಕ ರಚನೆಗಳಂತೆ ನಿರ್ಮಿಸಲು ಬಹುತೇಕ ಅದೇ ಸಮಯವನ್ನು ತೆಗೆದುಕೊಳ್ಳುತ್ತವೆ. ಅವುಗಳ ಬೆಲೆಯೂ ಅಷ್ಟೇ. ಮುಕ್ತಾಯದ ಆಯ್ಕೆಯ ಆಧಾರದ ಮೇಲೆ ಪ್ರತಿ ಚದರ ಅಡಿಗೆ ರೂ 1,500 ರಿಂದ ರೂ 3,000 ವರೆಗೆ ಇರುತ್ತದೆ ಎಂದು ಅವರು ಹೇಳುತ್ತಾರೆ.


"ಆದಾಗ್ಯೂ, ಕಾರ್ಮಿಕರಿಗೆ ಮತ್ತು ಕರಕುಶಲತೆಗೆ ಹೆಚ್ಚು ಖರ್ಚು ಮಾಡಲಾಗುತ್ತದೆ. ಅಲ್ಲದೆ, ನಾವು ಸ್ಥಳೀಯ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಅವರ ಕೌಶಲ್ಯಗಳನ್ನು ಬಳಸಿಕೊಳ್ಳುತ್ತೇವೆ ಎಂಬುದಾಗಿಯೂ ಶರಣ್ಯ ವಿವರಿಸುತ್ತಾರೆ.




ಭೂಮಿಯ ಕಟ್ಟಡಗಳ ಕೆಲವು ಅನಾನುಕೂಲತೆಗಳು


ಮೊದಲನೆಯದಾಗಿ, ಇಲ್ಲಿ ಹೆಚ್ಚಿನ ನಿರ್ವಹಣೆ ಅಗತ್ಯವಿರುತ್ತದೆ. ಮಣ್ಣನ್ನು ಸಂಗ್ರಹಿಸಲು ಮತ್ತು ಇಟ್ಟಿಗೆಗಳನ್ನು ಮಾಡಲು ದೊಡ್ಡ ಸೈಟ್‌ಗಳು ಬೇಕಾಗುತ್ತವೆ. ಕೊಠಡಿಗಳ ಎತ್ತರ ಮತ್ತು ಗಾತ್ರದ ವಿಷಯದಲ್ಲಿ ಕೆಲವು ಮಿತಿಗಳಿವೆ ಎನ್ನುತ್ತಾರೆ ಶರಣ್ಯ. ಇನ್ನು, ಮಣ್ಣಿನ ನಿರ್ಮಾಣದ ಉತ್ಸಾಹಿಗಳಾಗಿರುವ ವಾಸ್ತುಶಿಲ್ಪಿಗಳು ಕಾಬ್ ತಂತ್ರವನ್ನು ಬಳಸಲು ಹಿಂಜರಿಯುತ್ತಾರೆ. ಏಕೆಂದರೆ ದಪ್ಪ ಮಣ್ಣಿನ ಗೋಡೆಗಳು ಹೆಚ್ಚು ಜಾಗವನ್ನು ಆಕ್ರಮಿಸುತ್ತವೆ ಅವರು ವಿವರಿಸುತ್ತಾರೆ.


ಎರಡು ಮಹತ್ವದ ಯೋಜನೆಗಳನಿರ್ಮಾಣ


ಸ್ಟುಡಿಯೋ ವರ್ಜ್ ನಿರ್ಮಿಸಿದ ಹೆಚ್ಚಿನ ಮಣ್ಣಿನ ಕಟ್ಟಡಗಳು ಅರೆ-ಗ್ರಾಮೀಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿವೆ. ಬೆಂಗಳೂರಿನಿಂದ 50 ಕಿಮೀ ದೂರದಲ್ಲಿರುವ ಶಾಲಿನಿ ಥಲ್ಲಿ ಅವರ ಫಾರ್ಮ್‌ಹೌಸ್ ಅನ್ನು ನಿರ್ಮಿಸಲಾಗುತ್ತಿದೆ.


ಅಂದಹಾಗೆ ಶಾಲಿನಿ ಮತ್ತು ಅವರ ಪತಿ ಬೆಂಗಳೂರಿನಲ್ಲಿ ಕಂಪ್ಯೂಟರ್ ಎಂಜಿನಿಯರ್‌ಆಗಿ ಕೆಲಸ ಮಾಡುತ್ತಾರೆ. “ಕೆಲವು ವರ್ಷಗಳ ಹಿಂದೆ, ನಮಗೊಂದು ಸುಸ್ಥಿರವಾದ ಮನೆ ಬೇಕು ಎಂದು ಭಾವಿಸಿದ್ದೆವು. ನಮ್ಮ ತೋಟದ ಮನೆ ಸುಂದರವಾಗಿ ಮೂಡಿಬರುತ್ತಿದೆ” ಎಂಬುದಾಗಿ ಅವರು ಹೇಳುತ್ತಾರೆ.


ಹೆಚ್ಚುವರಿಯಾಗಿ, ಮಣ್ಣಿನ ಮನೆಯ ನಿರ್ಮಾಣದ ಭಾಗವಾಗಿ ಶರಣ್ಯ ಅವರು ಇತ್ತೀಚಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ನಿರ್ಮಿಸುತ್ತಿರುವ ಮನೆಯು ನಗರದ ಮಧ್ಯದಲ್ಲಿಯೂ ವಿಶಾಲತೆ ಮತ್ತು ಮುಕ್ತತೆಯ ಭಾವವನ್ನು ನೀಡುತ್ತದೆ. ಇದು, ಹಸಿರಿನ ಜೊತೆಗೆ ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ.



ಈ ಮನೆಗಾಗಿ ಶರಣ್ಯ ಅವರು, ಮಧ್ಯದ ಅಂಗಳದಲ್ಲಿ ಮಣ್ಣಿನ ಗೋಡೆಗಳನ್ನು ಬಳಸಿದ್ದಾರೆ ಮತ್ತು ಗಾಳಿ ಮತ್ತು ನೆರಳಿಗಾಗಿ ಟೆರಾಕೋಟಾ ಜಾಲಿಗಳನ್ನು ಹಾಕಿಸಿದ್ದಾರೆ. ಕಟ್ಟಡದ ಪರಿಸರ ಕಾರ್ಯಕ್ಷಮತೆಯನ್ನು ಸುಧಾರಿಸಲು ಸೌರ ಬೆಳಕು, ಮಳೆನೀರು ಕೊಯ್ಲು ಮತ್ತು ತ್ಯಾಜ್ಯನೀರಿನ ಮರುಬಳಕೆಯಂತಹ ತಂತ್ರಜ್ಞಾನಗಳನ್ನು ಅವರು ಅಳವಡಿಸಿದ್ದಾರೆ.


ಪರಿಸರವಾದಿಯ ದೃಷ್ಟಿಕೋನ


ಅಹಮದಾಬಾದ್‌ನಲ್ಲಿ ಸೆಂಟರ್ ಫಾರ್ ಎನ್ವಿರಾನ್‌ಮೆಂಟ್ ಎಜುಕೇಶನ್ (CEE) ಯ ಸಂಸ್ಥಾಪಕರಾದ ಕಾರ್ತಿಕೇಯ ಸಾರಾಭಾಯ್, ಅವರು ಭೂಮಿಯ ಕಟ್ಟಡಗಳ ಬಗ್ಗೆ ಬಹಳ ಧನಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ.


“ಭೂಮಿಯ ಕಟ್ಟಡಗಳನ್ನು ವಿವಿಧ ಸಂದರ್ಭಗಳಲ್ಲಿ ಬಳಸಬಹುದು. ರಾಮ್ಡ್ ಅರ್ಥ್ ಬಹಳ ಆಸಕ್ತಿದಾಯಕ ತಂತ್ರವಾಗಿದೆ. ಗುಜರಾತ್ ಭೂಕಂಪದ ನಂತರ, ಕಚ್‌ನಲ್ಲಿ ಗಮನಾರ್ಹ ಪ್ರಮಾಣದ ಕಟ್ಟಡಗಳ ನಿರ್ಮಾಣವಾಗಿತ್ತು. ನಿರ್ಮಾಣದಲ್ಲಿ ಬಳಸುವ ವಸ್ತುಗಳ ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ. ವಾಸ್ತುಶಿಲ್ಪಿಗಳು ಗ್ರಾಹಕರಿಗೆ ವಿಶಾಲವಾದ ಆಯ್ಕೆಗಳನ್ನು ಪ್ರಸ್ತುತಪಡಿಸಬೇಕಿದೆ” ಅವರು ಹೇಳುತ್ತಾರೆ.


ಈ ಮಧ್ಯೆ, ಹೆಚ್ಚು ಹೆಚ್ಚು ಜನರು ಭೂಮಿ ನಿರ್ಮಾಣ ಇಷ್ಟಪಡುತ್ತಾರೆ ಎಂಬುದು ಶರಣ್ಯ ಅವರ ಅಭಿಪ್ರಾಯವಾಗಿದೆ. ಶರಣ್ಯ ಅವರು ಬೆಂಗಳೂರಿನ ಎರಡು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪರಿಸರ ಸ್ನೇಹಿ ನಿರ್ಮಾಣ ಬಗ್ಗೆ ಪಾಠ ಮಾಡುತ್ತಾರೆ. ಅಲ್ಲದೇ ಮಕ್ಕಳಿಗಾಗಿ ಜಾಗೃತಿ ಕಾರ್ಯಾಗಾರಗಳನ್ನು ನಡೆಸುತ್ತಾರೆ.




ಒಟ್ಟಾರೆ, ನಾವು ಬಳಸುವ ಹಲವಾರು ವಸ್ತುಗಳಿಂದ ಪರಿಸರಕ್ಕೆ ಅಪಾರ ಪ್ರಮಾಣದ ಹಾನಿಯಾಗುತ್ತಿದೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಅಪಾಯ ಹೆಚ್ಚಾಗುವ ಮುನ್ನವೇ ನಾವು ಪರಿಸರಕ್ಕೆ ಪೂರಕವಾದ ವಸ್ತುಗಳ ಬಳಕೆಯತ್ತ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಶರಣ್ಯ ಮಾಡುತ್ತಿರುವ ಪರಿಸರ ಸ್ನೇಹಿ ಮಣ್ಣಿನ ಮನೆಗಳ ನಿರ್ಮಾಣ ಶ್ಲಾಘನೀಯ ಎಂದೇ ಹೇಳಬಹುದು. ಅದರಲ್ಲೂ ಆಧುನಿಕ ರೀತಿಯಲ್ಲಿ ಸುಸ್ಥಿರ ಮನೆಗಳ ಹಾಗೂ ಕಟ್ಟಡಗಳ ನಿರ್ಮಾಣ ಮಾಡುತ್ತಿರುವುದು ಆರೋಗ್ಯಕರ ಪರಿಸರಕ್ಕೆ ನೀಡುತ್ತಿರುವ ಕೊಡುಗೆ ಅಂತಲೇ ಹೇಳಬಹುದು.

Published by:Latha CG
First published: