Muthappa Rai - ಐದು ಗುಂಡು ಬಿದ್ದಾಗಲೇ ಹೆದರಲಿಲ್ಲ, ಈ ಕ್ಯಾನ್ಸರ್​ಗೆ ಹೆದರುತ್ತೇನೆಯೇ ಎಂದಿದ್ದರು ಮುತ್ತಪ್ಪ ರೈ

ಕ್ಯಾನ್ಸರ್ ಬರೋಕೆ ತಂಬಾಕು ಮಾತ್ರವಲ್ಲ, ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರವೂ ಕಾರಣವಾಗುತ್ತದೆ. ಕೃತಕವಾಗಿ ಬೆಳೆಸಿದ ಮಾಂಸ, ಹಣ್ಣು, ತರಕಾರಿಯಿಂದಲೂ ಕ್ಯಾನ್ಸರ್ ಬರುತ್ತದೆ. ಇಂಥ ವ್ಯವಸ್ಥೆಯನ್ನು ನೀಗಿಸುವ ಕೆಲಸ ಆಗಬೇಕಿದೆ ಎಂದು ಅವರು ಕರೆ ನೀಡಿದ್ದರು.

ಮುತ್ತಪ್ಪ ರೈ

ಮುತ್ತಪ್ಪ ರೈ

 • Share this:
  ಬೆಂಗಳೂರು: ಮಾಜಿ ಅಂಡರ್​ವರ್ಲ್ಡ್ ಡಾನ್ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರಿಗೆ ಕ್ಯಾನ್ಸರ್ ಕಾಯಿಲೆ ಇರುವ ವಿಚಾರ ಗೊತ್ತಾಗಿದ್ದು ಕೆಲ ತಿಂಗಳ ಹಿಂದೆ. ಜನವರಿಯಲ್ಲಿ ನ್ಯೂಸ್18 ಕನ್ನಡದ ಜೊತೆ ಮಾತನಾಡುತ್ತಾ ಅವರು ತಮಗೆ ಬ್ರೈನ್ ಕ್ಯಾನ್ಸರ್ ಇರುವುದು ನಿಜ ಎಂದು ಹೇಳಿದ್ದರು. ತಾನೀಗ ಶೇ. 90 ರಷ್ಟು ಆರೋಗ್ಯವಂತನಾಗಿದ್ದರೂ ಅಬ್ಬಬ್ಬಾ ಅಂದರೆ ಐದು ವರ್ಷ ಬದುಕಲು ಮಾತ್ರ ಸಾಧ್ಯ ಎಂದು ಹೇಳಿದ್ದರು. ಪತ್ರಕರ್ತರೊಂದಿಗೆ ಆವತ್ತು ಅವರು ನಡೆಸಿದ ಸಂವಾದದ ಕೆಲ ಅಂಶಗಳು ಇಲ್ಲಿವೆ:

  “ಕೆಲ ತಿಂಗಳ ಹಿಂದೆ ನನಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಪರೀಕ್ಷಿಸಿದಾಗ ಕ್ಯಾನ್ಸರ್ ಇರುವುದು ಕಂಡುಬಂತು. ಬ್ರೇನ್​ಗೆ ಕ್ಯಾನ್ಸರ್ ಅಟ್ಯಾಕ್ ಆಗಿತ್ತು. ದೆಹಲಿ, ಮದ್ರಾಸ್ ಮತ್ತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ” ಎಂದು ಮಾಧ್ಯಮಗಳಿಗೆ ಮುತ್ತಪ್ಪ ರೈ ತಿಳಿಸಿದ್ದರು.

  ನಾನು ಗುಣಮುಖನಾಗಿಲ್ಲ. ಮಾನಸಿಕವಾಗಿ ಗುಣಮುಖನಾಗಿದ್ಧೇನೆ ಅಷ್ಟೇ. ವೈದ್ಯಕೀಯವಾಗಿ ಗುಣಮುಖನಾಗಿಲ್ಲ. ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಐದತ್ತು ವರ್ಷ ನನಗೆ ಟ್ರೀಟ್ಮೆಂಟ್ ಕೊಡಲು ಸಾಧ್ಯವಾಗಬಹುದು ಎಂದು ಅವರು ತಮ್ಮ ಕ್ಯಾನ್ಸರ್ ಕಾಯಿಲೆಯ ವಾಸ್ತವಿಕ ಸ್ಥಿತಿಯನ್ನು ಬಿಚ್ಚಿಟ್ಟದ್ದರು.

  ನನಗೆ ಹಿಂದೆ 5 ಗುಂಡುಗಳು ಬಿದ್ದಾಗಲೇ ಹೆದರಲಿಲ್ಲ. ಈಗ ಈ ಕ್ಯಾನ್ಸರ್​ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದೂ ಧೈರ್ಯವಾಗಿ ಮಾತನಾಡಿದ್ದರು.

  “ನೀವು ವಿಲ್ ಪವರ್ ಹೊಂದಿರಬೇಕು. ಗಾಳಿಯ ಮೂಲಕ ಸೋಂಕು ತಗುಲುವುದರಿಂದ ಸಾರ್ವಜನಿಕರನ್ನು ಭೇಟಿ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದರು. ಆದರೆ, ನಾನು ಪಬ್ಲಿಕ್​ಗೆ ಬಂದಿದ್ದೇ 10-15 ವರ್ಷದ ಹಿಂದೆ. ಅವರಿಲ್ಲದೇ ನಾನು ಇರಲು ಸಾಧ್ಯವಿಲ್ಲ. ನಾನು ಸತ್ತರೂ ಪರವಾಗಿಲ್ಲ ಅವರನ್ನು ಭೇಟಿಯಾಗದೇ ಇರಲಾರೆ ಎಂದು ಹೇಳಿದೆ” ಎಂದು ಮುತ್ತಪ್ಪ ರೈ ತಮ್ಮ ಜನಪ್ರೀತಿಯನ್ನು ತೋಡಿಕೊಂಡಿದ್ದರು.

  ತಮ್ಮ ಜೀವಕ್ಕೆ ಕುತ್ತು ತಂದ ಕ್ಯಾನ್ಸರ್ ಕಾಯಿಲೆ ವಿರುದ್ಧ ಕೊನೆಯುಸಿರಿರುವವರೆಗೂ ಹೋರಾಡುವುದಾಗಿ ಅವರು ಅಂದು ಪಣತೊಟ್ಟಿದ್ದರು.

  “ಇವತ್ತು ಶೇ. 50ರಷ್ಟು ಜನರಿಗೆ ಕ್ಯಾನ್ಸರ್ ರೋಗ ಇದೆ ಎಂದು ವೈದ್ಯರು ಹೇಳುತ್ತಾರೆ. ಕ್ಯಾನ್ಸರ್ ಆಸ್ಪತ್ರೆಗೆ ಹೋದರೆ ನಿಲ್ಲಲೂ ಜಾಗವಿರದಷ್ಟು ಜನರು ತುಂಬಿರುತ್ತಾರೆ. ಕ್ಯಾನ್ಸರ್ ಆಸ್ಪತ್ರೆಗಳಲ್ಲಿ 3,500 ಕೋಟಿ ಟರ್ನ್​ಓವರ್ ಇರುತ್ತದೆ. ಅಷ್ಟು ವ್ಯಾಪಕವಾಗಿದೆ ಈ ಕಾಯಿಲೆ. ಜಾತಿ, ಧರ್ಮದ ಕಲಹ ತರುವ ಬದಲು ಮಾನವ ಸೇವೆ ನಡೆಯಲಿ. ಹಸಿವೆಗೆ ಯಾವ ಜಾತಿ ಉಂಟು? ರೋಗಕ್ಕೆ ಯಾವ ಜಾತಿ ಉಂಟು? ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವಾಗಬೇಕು. ಕ್ಯಾನ್ಸರ್ ರೋಗವನ್ನು ಇನ್ಷೂರೆನ್ಸ್​ಗೆ ಸೇರಿಸಲು ಹೋರಾಡಬೇಕೇಕು. ಜಯ ಕರ್ನಾಟಕ ಸಂಘಟನೆಯಲ್ಲಿ ಆರೋಗ್ಯ ಜಾಗೃತಿಗೆ ಹೆಚ್ಚು ಒತ್ತು ಕೊಡಲು ನಿರ್ಧರಿಸಿದ್ಧೇನೆ” ಎಂದವರು ತಿಳಿಸಿದ್ದರು.

  ಇನ್ನು, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಮುತ್ತಪ್ಪ ರೈಗೂ ಟ್ರೀಟ್ಮೆಂಟ್ ನೀಡಿದ್ಧರಂತೆ. ರೈ ಅವರು ಈ ವಿಚಾರದ ಬಗ್ಗೆ ಮಾತನಾಡುತ್ತಾ, ತಮಗೆ ಟ್ರೀಟ್ಮೆಂಟ್ ನೀಡುತ್ತಿರುವ ವೈದ್ಯರ ಸೇವಾಪರತೆಯನ್ನು ಕೊಂಡಾಡಿದ್ದರು.

  “ನನ್ನ ಮಗನಿಗೆ ಯುವರಾಜ್ ಸಿಂಗ್ ಆಪ್ತ. ಅವರನ್ನು ಸಂಪರ್ಕಿಸಿ ಸಲಹೆ ಕೇಳಿದಾಗ ಅವರು ವೈದ್ಯರು ಹೇಳಿದಂತೆ ಕಣ್ಮುಚ್ಚಿ ಟ್ರೀಟ್ಮೆಂಟ್ ತೆಗೆದುಕೊಳ್ಳಿ ಎಂದರು. ಆ ವೈದ್ಯರು ನಾವು ರಾತ್ರಿ ಎಷ್ಟೇ ಹೊತ್ತಿನಲ್ಲಿ ಕರೆ ಮಾಡಿದರೂ ಕಾಲ್ ಪಿಕ್ ಮಾಡುತ್ತಿದ್ದರು. ಅಷ್ಟು ಸೇನಾ ನಿಷ್ಠೆ ಅವರಿಗಿದೆ. ಅಂಥ ವೈದ್ಯರು ಸಿಗುವುದು ತೀರಾ ವಿರಳ” ಎಂದು ಮುತ್ತಪ್ಪ ರೈ ತಿಳಿಸಿದ್ದರು.

  ಇದನ್ನೂ ಓದಿ : ಮಂಗಳೂರಿನ ಕ್ವಾರಂಟೈನ್ ಸೆಂಟರ್​ಗಳು ಕೊರೋನಾ ಹಾಟ್​ಸ್ಪಾಟ್ ಆಗುತ್ತವಾ?

  ಕ್ಯಾನ್ಸರ್ ಬರೋಕೆ ತಂಬಾಕು ಮಾತ್ರವಲ್ಲ, ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರವೂ ಕಾರಣವಾಗುತ್ತದೆ. ಕೃತಕವಾಗಿ ಬೆಳೆಸಿದ ಮಾಂಸ, ಹಣ್ಣು, ತರಕಾರಿಯಿಂದಲೂ ಕ್ಯಾನ್ಸರ್ ಬರುತ್ತದೆ. ಇಂಥ ವ್ಯವಸ್ಥೆಯನ್ನು ನೀಗಿಸುವ ಕೆಲಸ ಆಗಬೇಕಿದೆ ಎಂದು ಅವರು ಕರೆ ನೀಡಿದ್ದರು.
  First published: