HOME » NEWS » State » WANT MORE DEVELOPMENT TO VIDURASHWATHA VEERA SOUDHA RH

ಅನುದಾನ ಬೇಡುತ್ತಿದೆ ಹೋರಾಟದ ಕರ್ಮಭೂಮಿ; ರಾಜಕೀಯ ದ್ವೇಷಕ್ಕೆ ಬಲಿಯಾಗದಿರಲಿ ವಿಧುರಾಶ್ವತ್ಥದ ವೀರಸೌಧ

ಈಗ ಯಡಿಯೂರಪ್ಪನವರ ಬಜೆಟ್​ ಸಂದರ್ಭ ಬಂದಿದೆ. ಇಂಥಾ ಧರ್ಮ, ಕರ್ಮ, ದೇಶಪ್ರೇಮ ಮೆರೆದ ಕ್ಷೇತ್ರದ ಅಭಿವೃದ್ಧಿಗೆ ಹೊಸ ಸರ್ಕಾರವೂ ಕೈ ಜೋಡಿಸಬೇಕಿದೆ. ರಾಜಕೀಯ ದ್ವೇಷಕ್ಕೆ ಬಲಿಯಾಗದೆ, ಇನ್ನಷ್ಟು ಅಭಿವೃದ್ಧಿ ಆಗಬೇಕೆಂಬುದು ಎಲ್ಲರ ಆಶಯ.

HR Ramesh | news18-kannada
Updated:January 10, 2020, 7:34 AM IST
ಅನುದಾನ ಬೇಡುತ್ತಿದೆ ಹೋರಾಟದ ಕರ್ಮಭೂಮಿ; ರಾಜಕೀಯ ದ್ವೇಷಕ್ಕೆ ಬಲಿಯಾಗದಿರಲಿ ವಿಧುರಾಶ್ವತ್ಥದ ವೀರಸೌಧ
ವಿಧುರಾಶ್ವತ್ಥದ ವೀರಸೌಧ.
  • Share this:
ಚಿಕ್ಕಬಳ್ಳಾಪುರ: ಗಣತಂತ್ರ ದಿನ, ಸ್ವಾತಂತ್ರ್ಯ ದಿನ ಅಂದರೆ ಸಾಕು, ಥಟ್ಟನೆ ನೆನಪಾಗುತ್ತೆ ವಿಧುರಾಶ್ವತ್ಥ. ಕರ್ನಾಟಕದ ಜಲಿಯನ್ ವಾಲಾಬಾಗ್​ ಅಂತಾನೇ ಇದು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ಏಪ್ರಿಲ್​ 25, 1938. ಆದು ದೇಶವ್ಯಾಪಿ ಸ್ವಾತಂತ್ರ್ಯ ಆಂದೋಲನದ ಸಮಯ. ಬ್ರಿಟಿಷ್​ ಸರ್ಕಾರದ ನಿಷೇಧಾಜ್ಞೆ ನಡುವೆಯೂ ಅಲ್ಲಲ್ಲಿ ಹೋರಾಟಗಳು ನಡೆಯುತ್ತಲೇ ಇದ್ದವು. ಹಾಗೇ ಗೌರಿಬಿದನೂರು ತಾಲೂಕಿನಿಂದ ಕೇವಲ 6 ಕಿಲೋ ಮೀಟರ್ ದೂರದಲ್ಲಿರುವ ವಿಧುರಾಶ್ವತ್ಥದಲ್ಲೂ ಸ್ವಾತಂತ್ರ್ಯ ಕಹಳೆ ಮೊಳಗಿತ್ತು. ಆಂಧ್ರದ ಹಿಂದೂಪುರ, ಗುಡಿಬಂಡೆ, ಗೌರಿಬಿದನೂರು ಸುತ್ತಲಿನ ನೂರಕ್ಕೂ ಅಧಿಕ ಸೇನಾನಿಗಳು ಇಲ್ಲಿನ ಹೋರಾಟಕ್ಕೆ ಧುಮುಕಿದ್ದರು. ನಿಷೇಧ, ನಿರ್ಬಂಧದ ನಡುವೆಯೂ ಆಯೋಜನೆಗೊಂಡಿದ್ದ ಹೋರಾಟಕ್ಕೆ ಉತ್ತರ ಪಿನಾಕಿನಿ ದಾಟಿ ಬಂದವರು ಹಲವಾರು. ಬ್ರಿಟಿಷರ ಕಣ್ಗಾವಲನ್ನೇ ಭೇದಿಸಿ ಬಂದಿದ್ದರು ಅಂದಿನ ಕದನಕಲಿಗಳು. ಆ ಹೋರಾಟದ ಗುಂಪಿನ ಮೇಲೆ 96 ಸುತ್ತಿನ ಗುಂಡಿನ ದಾಳಿ ನಡೆದ ಪರಿಣಾಮ 32 ಹೋರಾಟಗಾರರು ವೀರ ಮರಣವನ್ನಪ್ಪಿದ್ದರು. ಹಲವರು ಗಾಯಗೊಂಡರು. ಕಡೆಗೆ ಸಿಕ್ಕಿದ್ದು ಕೇವಲ 10 ಶವಗಳು ಮಾತ್ರ.

ಉತ್ತರದ ಜಲಿಯನ್ ವಾಲಾಬಾಗ್ ಮಾದರಿಯಲ್ಲೇ ಇಲ್ಲೂ ನಡೆದಿತ್ತು ಆ ಮಾರಣಹೋಮ. ಆಗ ಮಹಾತ್ಮ ಗಾಂಧಿ ಸೂಚನೆ ಮೇರೆಗೆ ಸರ್ದಾರ್ ವಲ್ಲಭ ಬಾಯಿ ಪಟೇಲ್​ ಹಾಗೂ ಆಚಾರ್ಯ ಕೃಪಲಾನಿ ವಿಧುರಾಶ್ವತ್ಥಕ್ಕೆ ಭೇಟಿ ಕೊಟ್ಟು, ಆತ್ಮ,ಸ್ಥೈರ್ಯ ತುಂಬಿದ್ದರು. ಅಲ್ಲಿಂದೀಚೆಗೆ ಇಡೀ ದೇಶದಲ್ಲಿ ಅದು ದಕ್ಷಿಣದ ಜಲಿಯನ್ ವಾಲಾಬಾಗ್​ ಆಯ್ತು. 1973ರಲ್ಲಿ ಮೃತರ ನೆನಪಿಗಾಗಿ ಸ್ಮಾರಕ ಶಿಲೆ ನೆಡಲಾಯಿತು. 2004ರಲ್ಲಿ ಅದು ಸ್ಥೂಪ ರೂಪ ಪಡೆಯಿತು. ಬಳಿಕ ವೀರಸೌಧ ಆಯ್ತು.

ಪುರಾಣ ಪ್ರಸಿದ್ಧ ವಿಧುರಾಶ್ವತ್ಥ

ಹೋರಾಟದ ನೆಲೆಯಷ್ಟೇ ಅಲ್ಲ, ಪುಣ್ಯಕ್ಷೇತ್ರವಾಗಿಯೂ ವಿಧುರಾಶ್ವತ್ಥ ಪ್ರಸಿದ್ಧಿ. ದ್ವಾಪರ ಯುಗದಲ್ಲಿ ಮೈತ್ರೇಯ ಮಹಾಮುನಿ ಅಶ್ವತ್ಥ ಮರವೊಂದನ್ನು ಇಲ್ಲಿ ತಂದು ನೆಟ್ಟಿದ್ದನಂತೆ. ಶ್ರೀಕೃಷ್ಣನ ಪರಮಾಪ್ತ ಶಿಷ್ಯ ವಿಧುರನು ಇಲ್ಲಿ ಬಂದು ಈ ಮರದ ಕೆಳಗೆ ಆಶ್ರಯ ಪಡೆದ. ಅಲ್ಲಿಂದೀಚೆಗೆ ಅದು ವಿಧುರಾಶ್ವತ್ಥ ಆಯ್ತು ಅನ್ನೋದು ಪುರಾಣ ಪ್ರತೀತಿ. ಕಾಲಕ್ರಮೇಣ ಆ ಮರ ಸಿಡಿಲಿಗೆ ಬಲಿಯಾಯ್ತು.

ಪುಣ್ಯಕ್ಷೇತ್ರ ವಿಧುರಾಶ್ವತ್ಥ

ಅಶ್ವತ್ಧ ಮರ ಅಂದಾಕ್ಷಣ ಎಲ್ಲರಲ್ಲೂ ಪೂಜ್ಯ ಭಾವನೀಯ. ಹಾಗಾಗೇ ಪುರಾಣ ಕಾಲದಿಂದಲೂ ಅಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ವಿಧುರ ಅಶ್ವತ್ಥ ನಾರಾಯಣ ದೇವಸ್ಥಾನದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದೇವರ ಆರಾಧನೆ ಆಗುತ್ತೆ. ಈ ಕ್ಷೇತ್ರ ಸಂತಾನ ನಾಗೇಂದ್ರ ಸ್ವಾಮಿ ಅಂತಾನೇ ಸುತ್ತಲೂ ಪ್ರಸಿದ್ಧಿ. ಅಷ್ಟೇ ಅಲ್ಲ, ನಾಗದೋಷ ನಿವಾರಣೆಗೂ ಇಲ್ಲಿ ಪೂಜೆ ಆಗುತ್ತೆ. ಕುಕ್ಕೆಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯನಷ್ಟೇ ಮಹಿಮೆ ದೇವಾಲಯಕ್ಕೂ ಇದೆ. ಸಾಲು ಸಾಲು ನಾಗಮೂರ್ತಿಗಳ ಆರಾಧನೆ ಇಲ್ಲಿ ನಿತ್ಯವೂ ಇರುತ್ತೆ. ಇಂದಿಗೂ ಕೂಡ ಅಲ್ಲಿ ನಾಗಪ್ರತಿಮೆಗಳು ಪ್ರತಿಷ್ಠಾಪನೆ ಆಗುತ್ತಲೇ ಇವೆ.ಅಭಿವೃದ್ಧಿ ಪಥದಲ್ಲಿ ವಿಧುರಾಶ್ವತ್ಧ

ಧಾರ್ಮಿಕ ಕ್ಷೇತ್ರವೊಂದು ಸ್ವಾತಂತ್ರ್ಯ ಹೋರಾಟ ಕೇಂದ್ರವಾಗಿ ಇದೀಗ ಪ್ರವಾಸಿ ತಾಣವಾಗುತ್ತಿದೆ. ಬಡಬಗ್ಗರ ಮದುವೆಯ ತಾಣ, ದನಗಳ ಜಾತ್ರೆ, ರಥೋತ್ಸವಗಳ ಮೂಲಕ ಈಗಲೂ ಮೂಲ ಪರಂಪರೆಯೇ ಇಲ್ಲಿ ಪೋಷಣೆ ಆಗ್ತಿದೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಆಗ್ತಿದೆ. ಅಲ್ಲೊಂದು ಗ್ರಂಥಾಲಯ, ಅಧ್ಯಯನ ಕೇಂದ್ರ, ಪ್ರವಾಸಿಗರನ್ನು ಸೆಳೆಯೋ ಕೆಲಸ ಆಗ್ತಿದೆ. ಶಾಸಕರ ನೇತೃತ್ವದ ಸಮಿತಿಯಿಂದ ನಿತ್ಯವೂ ಕೆಲಸಗಳು ಆಗ್ತಾನೇ ಇವೆ. 5 ಎಕರೆ ವಿಸ್ತೀರ್ಣದಲ್ಲಿ ವೀರಸೌಧ ನಿರ್ಮಾಣ ಆಗಿದೆ. 1857ರ ಸಿಪಾಯಿದಂಗೆಯಿಂದ ಹಿಡಿದು 1947ರವರೆಗಿನ ಸ್ವಾತಂತ್ರ್ಯಾ ದಿನಾಚರಣೆಗರೆಗಿನ ಚಿತ್ರಣಗಳನ್ನು ಬಿಚ್ಚಿಡುವ ಚಿತ್ರಪಟಗಳು ಇಲ್ಲಿವೆ.

ಇದನ್ನು ಓದಿ: ಪಕ್ಕೆಲುಬು ಪದ ತಪ್ಪು ಉಚ್ಚಾರಣೆ ಮಾಡುವ ಬಾಲಕನ ವಿಡಿಯೋ ವೈರಲ್; ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೇಕಿದೆ ಇನ್ನಷ್ಟು ಅನುದಾನ

ಗೌರಿಬಿದನೂರು ಶಾಸಕ ಎನ್​ ಹೆಚ್​ ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜೊತೆಗೆ ಸಮಿತಿ ಸದಸ್ಯರ ನಿರಂತರ ಪ್ರಯತ್ನಗಳಿಂದಾಗಿ ವಿಧುರಾಶ್ವತ್ಥದಲ್ಲಿ ಹೋರಾಟದ ಹಾದಿಯನ್ನು ಮೆಲುಕು ಹಾಕುವ ಕೆಲಸಗಳು ಆಗುತ್ತಿವೆ. ಪ್ರವಾಸೋದ್ಯಮ ಇಲಾಖೆಯಿಂದ ಕಾಲಕಾಲಕ್ಕೆ ಅನುದಾನವೂ ಸಿಗ್ತಿದೆ. ಈಗ ಯಡಿಯೂರಪ್ಪನವರ ಬಜೆಟ್​ ಸಂದರ್ಭ ಬಂದಿದೆ. ಇಂಥಾ ಧರ್ಮ, ಕರ್ಮ, ದೇಶಪ್ರೇಮ ಮೆರೆದ ಕ್ಷೇತ್ರದ ಅಭಿವೃದ್ಧಿಗೆ ಹೊಸ ಸರ್ಕಾರವೂ ಕೈ ಜೋಡಿಸಬೇಕಿದೆ. ರಾಜಕೀಯ ದ್ವೇಷಕ್ಕೆ ಬಲಿಯಾಗದೆ, ಇನ್ನಷ್ಟು ಅಭಿವೃದ್ಧಿ ಆಗಬೇಕೆಂಬುದು ಎಲ್ಲರ ಆಶಯ.

  • ವಿಶೇಷ ವರದಿ: ಬಿ.ಎಸ್.​ ಬೈರ ಹನುಮಯ್ಯ


Published by: HR Ramesh
First published: January 10, 2020, 7:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories