ಮೋದಿ ಮತ್ತು ಅಮಿತ್ ಶಾ ಈ ದೇಶದ ಆಧುನಿಕ ಭಸ್ಮಾಸುರರು: ವಿ.ಎಸ್. ಉಗ್ರಪ್ಪ

ಮೋದಿ ನಿಮಗೆ ತಾಕತ್ತು ಇದ್ದರೆ ಇದೇ ಪೌರತ್ವ ಕಾಯ್ದೆ ವಿಷಯಕ್ಕೆ ಜನಾದೇಶಕ್ಕೆ ಹೋಗಿ. ಈಗಲೇ ಲೋಕಸಭೆ ವಿಸರ್ಜನೆ ಮಾಡಿ ಬ್ಯಾಲಟ್ ಪೇಪರ್ ಮೂಲಕ ಚುನಾವಣೆ ನಡೆಸಿರಿ. ನೀವು ಗೆದ್ದು ಬಂದರೆ ನನ್ನ ಕೊನೆಯ ಉಸಿರು ಇರುವವರೆಗೂ ಬಿಜೆಪಿಯವರು ಹೇಳಿದಂತೆ ಕೇಳಿಕೊಂಡು ಇರುತ್ತೇನೆ ಎಂದು ಉಗ್ರಪ್ಪ ಸವಾಲು ಹಾಕಿದ್ದಾರೆ.

ವಿಎಸ್ ಉಗ್ರಪ್ಪ

ವಿಎಸ್ ಉಗ್ರಪ್ಪ

 • News18
 • Last Updated :
 • Share this:
  ಚಿತ್ರದುರ್ಗ(ಜ. 20): ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲಿ ಕೈ ಹಾಕುತ್ತಾರೋ ಅವೆಲ್ಲವೂ ಭಸ್ಮ ಆಗುತ್ತವೆ. ಮೋದಿ ಮತ್ತು ಅಮಿತ್ ಶಾ ಆಧುನಿಕ ಭಸ್ಮಾಸುರರು ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಟೀಕಿಸಿದ್ದಾರೆ. ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ದೇಶದ ಆರ್ಥಿಕತೆ ಡೋಲಾಯಮಾನವಾಗಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

  “ಇವತ್ತು ದೇಶದಲ್ಲಿ ಭಸ್ಮಾಸುರರ ವಕ್ಕರಿಸಿದ್ದಾರೆ. ಮೋದಿ, ಅಮಿತ್ ಶಾ ಈ ದೇಶದ ಆಧುನಿಕ ಭಸ್ಮಾಸುರರು. ಇವರು 2014ರಲ್ಲಿ ಮತ್ತು 2019ರಲ್ಲಿ ಕೊಟ್ಟಿರುವ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಇವರ ಪ್ರಭಾವದಿಂದ ದೇಶದ ಆರ್ಥಿಕತೆ ಸಂಕಷ್ಟದ ಸ್ಥಿತಿ ತಲುಪಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನಿಂದ 1.73 ಲಕ್ಷ ಕೋಟಿ ಹಣ ವಿತ್​ಡ್ರಾ ಮಾಡಿರುವ ಯಾವುದಾದರೂ ಸರ್ಕಾರ ಇದ್ದರೆ ಅದು ಮೋದಿಯವರ ಸರ್ಕಾರ. ದೇಶವನ್ನು ಕಾಯುವ ಯೋಧರಿಗೆ ನೀಡಿದ ಅನುದಾನದಲ್ಲಿ 1 ಲಕ್ಷ ಕೋಟಿ ರೂ ಕಡಿಮೆ ಮಾಡಿದ್ದಾರೆ. ನಮ್ಮ ರಾಜ್ಯಕ್ಕೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಬರಬೇಕಿದ್ದ 5,600 ಕೋಟಿ ಜಿಎಸ್​ಟಿ ಹಣ ಇನ್ನೂ ಬಂದಿಲ್ಲ. ಅದು ನಮ್ಮ ದುಡ್ಡು. ಅದರ ಮೇಲೆ ನಮಗೆ ಹಕ್ಕಿದೆ. ಉದ್ಯೋಗ ಖಾತ್ರಿ ಯೋಜನೆಯ 2,867 ಕೋಟಿ ರೂ ಈಗಲೂ ಬಾಕಿ ಇದೆ. ದೇಶದ ಆರ್ಥಿಕತೆ ಅತ್ಯಂತ ಡೋಲಾಯಮಾನ ಸ್ಥಿತಿಯಲ್ಲಿದೆ. ದಿವಾಳಿಯ ಅಂಚಿಗೆ ಇವತ್ತು ಹೋಗುತ್ತಿದೆ” ಎಂದು ಉಗ್ರಪ್ಪ ಬೇಸರಿಸಿದ್ದಾರೆ.

  ಇದನ್ನೂ ಓದಿ: ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣ; ನಳಿನಿ ಪರ ಬೆಂಗಳೂರು ವಕೀಲರಿಂದ ವಕಾಲತ್ತು

  “ಮೋದಿ ಎಲ್ಲೆಲ್ಲಿ ಕೈ ಹಾಕುತ್ತಾರೋ ಅವೆಲ್ಲವೂ ಭಸ್ಮವೇ. ಒಂದು ಕಡೆ ಆರ್ಥಿಕತೆ ಭಸ್ಮ ಆಗುತ್ತಿದೆ. ಇನ್ನೊಂದೆಡೆ ದೇಶದ ಸಾಮರಸ್ಯ ಭಸ್ಮ ಆಗುತ್ತಿದೆ. ನಿರುದ್ಯೋಗ ಜಾಸ್ತಿ ಆಗ್ತಾ ಇದೆ. ಈಗ ಸಿಎಎ ಬಗ್ಗೆ ಒತ್ತು ಕೊಟ್ಟಿದ್ದಾರೆ. ಯಾವ ದೇಶದಲ್ಲೂ ಕೂಡ ಧರ್ಮದ ಆಧಾರದ ಮೇಲೆ, ಜಾತಿಯ ಆಧಾರದ ಮೇಲೆ ಪೌರತ್ವ ಕೊಡುವ ಕಾನೂನು ಮಾಡಿದ್ದಿಲ್ಲ. ಇವತ್ತು ಮೋದಿ ಮತ್ತು ಅಮಿತ್ ಶಾ ಅವರು ತಮ್ಮ ಹುಳುಕುಗಳನ್ನ ಮತ್ತು ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಮತ್ತು ಜನರ ಗಮನ ಬೇರೆಡೆಗೆ ಸೆಳೆಯಲು ಇದನ್ನು ಮಾಡುತ್ತಾ ಇದ್ದಾರೆ. ಎಲ್ಲೋ ಒಂದು ಕಡೆ ಸಮಾಜವನ್ನು ಒಡೆದು ಆಳುವಂಥ ಪ್ರಯತ್ನ ಮಾಡುತ್ತಿದ್ಧಾರೆ. ಒಂದು ಕಡೆ ಈ ದೇಶದಲ್ಲಿ ದಲಿತರ ಮೀಸಲಾತಿ ಕಿತ್ತು ಹಾಕುವ ಪ್ರಯತ್ನವಾಗುತ್ತಿದೆ. ಇನ್ನೊಂದು ಕಡೆ ಶ್ರೇಣೀಕೃತ ಜಾತಿ ವ್ಯವಸ್ಥೆ ಜಾರಿಗೆ ತರುವ ಸಂಘ ಪರಿವಾರದ ಹುನ್ನಾರಕ್ಕೆ ಇದು ಮೂಲವಾಗಿದೆ” ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  “ಮಿಸ್ಟರ್ ಮೋದಿ ನಿಮಗೆ ತಾಕತ್ತು ಇದ್ದರೆ ಇದೇ ಪೌರತ್ವ ಕಾಯ್ದೆ ವಿಷಯಕ್ಕೆ ಜನಾದೇಶಕ್ಕೆ ಹೋಗಿ. ಸಿಎಎ, ಎನ್​ಆರ್​ಸಿ ವಿಷಯಕ್ಕೆ ಜನಾದೇಶ ನಡೆಯಲಿ. ಈಗಲೇ ಲೋಕಸಭೆ ವಿಸರ್ಜನೆ ಮಾಡಿ ಬ್ಯಾಲಟ್ ಪೇಪರ್ ಮೂಲಕ ಚುನಾವಣೆ ನಡೆಸಿರಿ. ನೀವು ಇಷ್ಟು ಮಟ್ಟಕ್ಕೆ ಗೆದ್ದು ಬಂದರೆ ನನ್ನ ಕೊನೆಯ ಉಸಿರು ಇರುವವರೆಗೂ ಬಿಜೆಪಿಯವರು ಹೇಳಿದಂತೆ ಕೇಳಿಕೊಂಡು ಇರುತ್ತೇನೆ” ಎಂದು ಉಗ್ರಪ್ಪ ಸವಾಲು ಹಾಕಿದ್ದಾರೆ.

  ಇದನ್ನೂ ಓದಿ: ಶಾಸಕರ ಹೆಸರಲ್ಲಿ ಮಸೀದಿಗಳನ್ನು ತಲುಪುತ್ತಿವೆ ನಕಲಿ ಪತ್ರಗಳು; ಪೊಲೀಸರಿಂದ ತನಿಖೆ

  ಇದೇ ವೇಳೆ, ಯಡಿಯೂರಪ್ಪ ಅವರನ್ನು ಉಗ್ರಪ್ಪ ರಾಜಾ ಇಲಿ ಎಂದು ಲೇವಡಿ ಮಾಡಿದ್ದಾರೆ: “ರಾಜಾ ಹುಲಿಯಾಗಿದ್ದ ಯಡಿಯೂರಪ್ಪ ಈಗ ರಾಜಾ ಇಲಿ ಆಗಿದ್ಧಾರೆ. ಅವರಿಗೆ ಕ್ಯಾಬಿನೆಟ್ ವಿಸ್ತರಿಸುವ ಸ್ವಾತಂತ್ರ್ಯವೂ ಇಲ್ಲವಾಗಿದೆ. ಸಚಿವ ಸ್ಥಾನದ ವಿಚಾರ ಬಿಟ್ಟು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಇದಕ್ಕೆಲ್ಲಾ ಯಡಿಯೂರಪ್ಪ ಅವರ ಅಸಹಾಯಕತೆ ಕಾರಣವಾಗಿದೆ. 2011ರಲ್ಲಿ ಯಾರು ಅವರನ್ನು ಕೆಳಗಿಳಿಸಿದರೋ ಅವರೇ ಈಗ ಯಡಿಯೂರಪ್ಪರನ್ನು ಮುಗಿಸಲು ಯತ್ನಿಸುತ್ತಾರೆ“ ಎಂದು ವ್ಯಂಗ್ಯ ಮಾಡಿದ್ಧಾರೆ.

  ನೀವು ನಿಷ್ಕ್ರಿಯ ಮುಖ್ಯಮಂತ್ರಿ ಎಂಬ ಹೆಸರು ಪಡೆದುಕೊಳ್ಳಬೇಕಿದ್ದರೆ ಹೀಗೇ ಇರಿ. ಇಲ್ಲವಾದಲ್ಲಿ ಹೈಕಮಾಂಡ್ ವಿರುದ್ಧ ಸಿಡಿದು ನಿಂತು ರಾಜ್ಯದ ಅಭಿವೃದ್ಧಿ ಮಾಡಿ ಎಂದು ಯಡಿಯೂರಪ್ಪಗೂ ಉಗ್ರಪ್ಪ ಚಾಲೆಂಜ್ ಹಾಕಿದ್ಧಾರೆ.

  (ವರದಿ: ವಿನಾಯಕ ತೊಡರನಾಳ್)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: