ಬೆಂಗಳೂರು: ಪಂಚಮಸಾಲಿ ಮೀಸಲಾತಿಗಾಗಿ (Panchamasali Reservation) ನಿನ್ನೆ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮೀಸಲಾತಿ ಕುರಿತಂತೆ ನಿರ್ಧಾರ ಕೈಗೊಳ್ಳಲು ಕಾನೂನು ತೊಡಕಿನ ಕಾರಣ ನೀಡಿ, ಕಾಲಾವಕಾಶವನ್ನು ಪಡೆದುಕೊಂಡಿದ್ದಾರೆ. ಮುಂದಿನ ಒಂದು ವಾರದ ಬಳಿಕ ಮೀಸಲಾತಿ ಕುರಿತಂತೆ ಸ್ಪಷ್ಟ ನಿರ್ಧಾರವನ್ನು ಸರ್ಕಾರ (Karnataka Government) ಪ್ರಕಟಿಸಲಿದೆ ಎಂದು ಪಂಚಮಸಾಲಿ ಮೀಸಲು ಹೋರಾಟಗಾರರಿಗೆ ಸಿಎಂ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಮುಖಂಡರು ಡಿಸೆಂಬರ್ 29ರ ವರೆಗೂ ಸರ್ಕಾರದ ನಿರ್ಧಾರದ ಬಗ್ಗೆ ಕಾದು ನೋಡುತ್ತೇವೆ, ಆ ಬಳಿಕ ಮುಂದಿನ ಹೋರಾಟ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ಸಂಕಟ ಎದುರಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟ ನಡುವೆ, ಒಕ್ಕಲಿಗ ಸಮುದಾಯದ (Vokkaliga Reservation) ಮೀಸಲಾತಿ ಒತ್ತಡ ಹೆಚ್ಚಾಗಿದೆ. ಹೌದು, ಈ ಕುರಿತಂತೆ ಒತ್ತಾಯ ಮಾಡಲು ಸಿಎಂ ಅವರನ್ನು ಒಕ್ಕಲಿಗ ಸಮುದಾಯದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶೋಕ್, ಒಕ್ಕಲಿಗ ಸಮುದಾಯದ ನ್ಯಾಯಯುತ ಬೇಡಿಕೆ. ಜನಸಂಖ್ಯೆ ಆಧಾರದಲ್ಲಿ ನಾವೂ ರಾಜ್ಯದಲ್ಲಿ ಶೇ.16 ಪರ್ಸೆಂಟ್ ಇದ್ದೇವೆ. ನಮ್ಮಲ್ಲೂ ತುಂಬಾ ಬಡವರಿದ್ದಾರೆ. ಜಮೀನುಗಳನ್ನ ಕಳೆದುಕೊಂಡಿದ್ದಾರೆ. ನಮ್ಮ ಸಮುದಾಯದ ಮೀಸಲಾತಿಯನ್ನ ಶೇ.4 ರಿಂದ ಶೇ.12ಕ್ಕೆ ಹೆಚ್ಚಿಸಬೇಕು. ಒಕ್ಕಲಿಗ ಸಮುದಾಯವನ್ನು ಭಾಗ ಮಾಡಿ ಹೊಡಿದಿದ್ದಾರೆ. ಹೀಗಾಗಿ ಭಂಟರು, ರೆಡ್ಡಿ, ಕುಂಚಿಟಗರು ಸೇರಿದಂತೆ ಕೇಂದ್ರ ಓಬಿಸಿ ರಿಸರ್ವೇಶನ್ ನಲ್ಲಿ ಸೇರಿಸಬೇಕು.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮುಖ್ಯಮಂತ್ರಿ @BSBommai ಯವರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬಿಜೆಪಿಯ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗದಿಂದ ಮನವಿ ಸಲ್ಲಿಸಲಾಯಿತು. pic.twitter.com/yx5aVtuxLB
— R. Ashoka (ಆರ್. ಅಶೋಕ) (@RAshokaBJP) December 23, 2022
ನಾವು ಯಾವುದೇ ಬೆದರಿಕೆ ಹಾಕೋದಿಲ್ಲ
ಒಕ್ಕಲಿಗ ಸಮುದಾಯಕ್ಕೆ ಅಭದ್ರತೆ ಕಾಡುತ್ತಿದೆ. ಇಡೀ ಒಕ್ಕಲಿಗ ಸಮುದಾಯವನ್ನು ಒಟ್ಟಿಗೆ ಸೇರಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ, ಹೀಗಾಗಿ ನಮಗೆ ನಂಬಿಕೆ ಇದೆ. ನಮ್ಮ ಬೇಡಿಕೆಯನ್ನ ಗೌರವಿಸಿ ಪರಿಹಾರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಅಂತ ಸಿಎಂ ಹೇಳಿದ್ದಾರೆ. ನಾವೂ ಗಲಾಟೆ, ಧಮ್ಕಿ ಮಾಡಿಲ್ಲ. ಸ್ವಾಮೀಜಿಗಳನ್ನು ಜನವರಿ 4ರಂದು ಭೇಟಿ ಮಾಡುತ್ತೇವೆ. ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕಿ, ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ.
ನಾವೂ ಯಾವುದೇ ಬೆದರಿಕೆ ಹಾಕಲ್ಲ. ಒಕ್ಕಲಿಗ ಸಮಾಜಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸದಾ ಜೊತೆಗಿದ್ದಾರೆ. ವಿಧಾನ ಸೌಧದ ಎದುರು ಕೆಂಪೇಗೌಡರ ಪ್ರತಿಮೆ ಮಾಡಲು ಹಣ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗರ ನಿಗಮ ಮಾಡಿ 120 ಕೋಟಿ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ಕೊಡ್ತೀವಿ. ಜೆಡಿಎಸ್, ಕಾಂಗ್ರೆಸ್ ಶಾಸಕರು ಅಧಿಕಾರ ಇದ್ದಾಗ ಇದ್ರು, ನಾವೂ ಈಗ ತಾನೇ ಬಂದು ಏರ್ ಪೋರ್ಟ್ ನಲ್ಲಿ ಕೆಂಪೇಗೌಡರ ಪ್ರತಿಮೆ ಮಾಡಿದ್ದೀವಿ. ನಾವೂ ಅವರನ್ನ ಮುಂದೆ ಸೇರಿಸಿಕೊಳ್ಳುತ್ತೇವೆ ಎಂದರು.
ಇನ್ನು, ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ಒಕ್ಕಲಿಗರ ಮೀಸಲಾತಿ ವಿಚಾರದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಅಂತ ರಾಜ್ಯ ಒಕ್ಕಲಿಗರ ಸಂಘ ಒತ್ತಾಯ ಮಾಡುತ್ತಿದೆ. ಮೀಸಲಾತಿ ವಿಚಾರದ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ನಗರೀಕರಣ ಹೆಚ್ಚಾಗಿದೆ. ಸಮುದಾಯದ ಜನರು ಜಮೀನನ್ನ ಕಳೆದುಕೊಂಡಿದ್ದಾರೆ. ವ್ಯವಸಾಯದಲ್ಲಿ ಹಿನ್ನಡೆಯಾಗಿ ಆತ್ಮಹತ್ಯೆ ಹೆಚ್ಚಾಗಿದೆ. 3ಎ ನಲ್ಲಿ ಶೇ.20 ರಷ್ಟ ವರ್ಗ ಇದೆ.
ಇದನ್ನೂ ಓದಿ: Actor Chetan: ಟೀಂ ಇಂಡಿಯಾದಲ್ಲೂ ಎಸ್ಸಿ-ಎಸ್ಟಿಗೆ ಮೀಸಲಾತಿ ಕೊಡಿ! ಆ ದಿನಗಳ ನಟ ಚೇತನ್ ಆಗ್ರಹ
ಒಕ್ಕಲಿಗ ಸಮುದಾಯಕ್ಕೆ ಶೇ.3 ಮೀಸಲಾತಿ ಸಿಗುತ್ತಿದೆ. ಇವತ್ತು ನಮ್ಮ ಸರ್ಕಾರದಲ್ಲಿ ನಮ್ಮ ಬಿಜೆಪಿಯ ನಾಯಕರು ಸಮುದಾಯಕ್ಕೆ ನ್ಯಾಯ ಕೊಡಿಸಬೇಕೆಂಬ ಬೇಡಿಕೆ ಇಟ್ಟಿದ್ದೇವೆ. ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿ ಕೆಲ ಸಮುದಾಯ ಬಿಟ್ಟು ಹೋಗಿದೆ. ನಗರ ಪ್ರದೇಶದಲ್ಲಿ ಮೀಸಲಾತಿ ಅನುಕೂಲ ಕೂಡ ಸಿಗುತ್ತಿಲ್ಲ. ಅವರಿಗೂ ಸಹಾ ಆರ್ಥಿಕತೆ ಅನ್ವಯ ಮೇಲೆ ಪಟ್ಟಿಗೆ ಸೇರಿಸಬೇಕು. ಜನರ ಬೇಡಿಕೆಯನ್ನ ಸ್ಪಂದಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ