news18-kannada Updated:January 21, 2021, 10:31 PM IST
ವಿ.ಕೆ. ಶಶಿಕಲಾ
ಬೆಂಗಳೂರು (ಜ. 21): ಇದೇ ಜ. 27ರಂದು ಪರಪ್ಪನ ಆಗ್ರಹಾರದಿಂದ ಬಿಡುಗಡೆಯಾಗಬೇಕಿದ್ದ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾಗೆ ಕೋವಿಡ್ ದೃಢಪಟ್ಟಿದೆ. ಅವರಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಬೆಂಗಳೂರು ವೈದ್ಯಕೀಯ ವಿಶ್ವವಿದ್ಯಾಲಯದ ನಿರ್ದೇಶಕಿ ಹಾಗೂ ಡೀನ್ ಡಾ. ಜಯಂತಿ ಖಚಿತಪಡಿಸಿದ್ದಾರೆ. ಈ ಹಿನ್ನಲೆ ಅವರನ್ನು ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಕೋವಿಡ್ ದೃಢಪಟ್ಟ ಹಿನ್ನಲೆ ಇನ್ನು 10 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಇರಬೇಕಿದೆ. ಈ ಹಿನ್ನಲೆ ಅವರು ಜೈಲಿನಿಂದ ಬಿಡುಗಡೆಗೊಂಡರು ಆಸ್ಪತ್ರೆಯಿಂದ ಬಿಡುಗಡೆಯಾಗುವುದು ತಡವಾಗಲಿದೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನಲೆಯಲ್ಲಿ ಅವರನ್ನು ಇಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿರುವುದಾಗಿ ಆಸ್ಪತ್ರೆ ಸಂಜೆ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿತ್ತು,
ಶಶಿಕಲಾ ಅವರ ಜ್ವರ ಮತ್ತು ಕಫದ ಸಮಸ್ಯೆ ಅಲ್ಪ ಸುಧಾರಣೆಯಾಗಿದ್ದು, ಬಿಪಿ ಶುಗರ್ ನಾರ್ಮಲ್ ರಿಪೋರ್ಟ್ ಬಂದಿದೆ. ಆಂಟಿಜೆನ್ ಟೆಸ್ಟ್ ನೆಗಿಟಿವ್ ಬಂದಿದ್ದು, ಗಂಟಲು ದ್ರವ ಪರೀಕ್ಷೆ ವರದಿ ಇಂದು ಬರಲಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದ್ದು, ಯಾರೂ ಭಯಕ್ಕೊಳಗಾಗುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಶಶಿಕಲಾರನ್ನ ಭೇಟಿಯಾಗಲು ನೆನ್ನೆ ತಡರಾತ್ರಿ ತಮಿಳುನಾಡಿನಿಂದ ಕುಟುಂಬಸ್ಥರು ಬಂದಿದ್ದು ಯಾರಿಗೂ ಭೇಟಿಯಾಗುವ ಅವಕಾಶವನ್ನು ಪೊಲೀಸರು ನೀಡಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ವಿಕ್ಟೋರಿಯಾ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಶಶಿಕಲಾರಿಗೆ ಜ್ವರ ಮತ್ತು ಕೆಮ್ಮು ತೀವ್ರಗೊಂಡಿತ್ತು. ಈ ಹಿನ್ನಲೆ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಶಶಿಕಲಾ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಜೈಲಾಧಿಕಾರಿಗಳ ಮನವಿ ಹಿನ್ನಲೆ ಆಸ್ಪತ್ರೆಗೆ ಹೋಗಲು ಒಪ್ಪಿದರು.
Published by:
Seema R
First published:
January 21, 2021, 10:31 PM IST