ಬೆಂಗಳೂರು (ಫೆ. 8): ಅಕ್ರಮ ಹಣ ಸಂಪಾದನೆ ಆರೋಪದಲ್ಲಿ 4 ವರ್ಷಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ 10 ದಿನಗಳ ಹಿಂದೆ ಜೈಲಿನಿಂದ ರಿಲೀಸ್ ಆಗಿದ್ದರು. 4 ವರ್ಷಗಳ ಬಳಿಕ ಇಂದು ಅವರು ಬೆಂಗಳೂರಿನಿಂದ ತಾಯ್ನಾಡು ತಮಿಳುನಾಡಿಗೆ ತೆರಳುತ್ತಿದ್ದಾರೆ. ಹೀಗಾಗಿ, ಅವರನ್ನು ಕರೆದೊಯ್ಯಲು ಖಾಸಗಿ ಎಸ್ಕಾರ್ಟ್ ಆಗಮಿಸಿದ್ದು, ಎಐಡಿಎಂಕೆ ಬಾವುಟವಿರುವ ಕಾರಿನಲ್ಲಿ ಶಶಿಕಲಾ ತಮಿಳುನಾಡಿನತ್ತ ಹೊರಟಿದ್ದಾರೆ. ಪೊಲೀಸರು ಮತ್ತು ಬೆಂಬಲಿಗರ ಭದ್ರತೆಯಲ್ಲಿ ಇಂದು ಚೆನ್ನೈಗೆ ಪ್ರಯಾಣಿಸಲಿದ್ದಾರೆ.
ಇಂದು ಬೆಳಗ್ಗೆ 7.30ಕ್ಕೆ ನಂದಿಬೆಟ್ಟದ ಬಳಿ ಇರುವ ರೆಸಾರ್ಟ್ನಿಂದ ಹೊರಟ ಶಶಿಕಲಾ ಅವರಿಗೆ ಬೆಂಬಲಿಗರು ಕುಂಬಳಕಾಯಿ ಒಡೆದು, ಕುಣಿದು ಕುಪ್ಪಳಿಸಿ ಸ್ವಾಗತ ಕೋರಿದ್ದಾರೆ. ಶಶಿಕಲಾ ಜೊತೆ ಜೈಲು ಸೇರಿದ್ದ ಅವರ ಆಪ್ತೆ ಇಳವರಸಿ ಮತ್ತು ಸಂಬಂಧಿ ಟಿ.ಟಿ ದಿನಕರನ್ ಕೂಡ ಜೈಲಿನಿಂದ ರಿಲೀಸ್ ಆಗಿದ್ದು, ಅವರು ಕೂಡ ಇಂದು ಶಶಿಕಲಾ ಅವರೊಂದಿಗೆ ಚೆನ್ನೈಗೆ ತೆರಳುತ್ತಿದ್ದಾರೆ.
ನಂದಿಬೆಟ್ಟದ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್ನಲ್ಲಿ ಉಳಿದುಕೊಂಡಿರುವ ಶಶಿಕಲಾ ಅವರನ್ನು ಕರೆದೊಯ್ಯಲು ನೂರಾರು ಬೆಂಬಲಿಗರ ಕಾರುಗಳು ಆಗಮಿಸಿವೆ. ರೆಸಾರ್ಟ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ದೇವನಹಳ್ಳಿ, ಹೆಬ್ಬಾಳ, ಹೆಣ್ಣೂರು, ಟಿನ್ ಪ್ಯಾಕ್ಟರಿ, ಮಾರತ್ತಹಳ್ಳಿ, ಸಿಲ್ಕ್ ಬೋರ್ಡ್, ಹೊಸರೋಡ್, ಅತ್ತಿಬೆಲೆ ಮೂಲಕ ಶಶಿಕಲಾ ನಟರಾಜನ್ ಹೊಸೂರು ಗಡಿ ತಲುಪಲಿದ್ದಾರೆ. ನಗರ ವ್ಯಾಪ್ತಿಯಲ್ಲಿ ಮೆರವಣಿಗೆ, ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಶಶಿಕಲಾ ಬೆಂಬಲಿಗರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಭ್ರಮಾಚರಣೆ ಮಾಡಲು ಪೊಲೀಸರು ಅನುಮತಿ ನೀಡಿಲ್ಲ.
ತಿರುವಣಮಲೈ ದೇವಸ್ಥಾನದ ಪ್ರಖ್ಯಾತ ಜ್ಯೋತಿಷಿಯನ್ನು ಸಂಪರ್ಕಿಸಿದ್ದ ಶಶಿಕಲಾ ಕುಟುಂಬಸ್ಥರು ಚಿನ್ನಮ್ಮನನ್ನು ಯಾವಾಗ ಚೆನ್ನೈಗೆ ಕರೆದುಕೊಂಡು ಬರಬಹುದು ಎಂದು ಕೇಳಿದ್ದರು. ಆಗ ಅವರು ದಿನಾಂಕಗಳನ್ನು ನೀಡಿದ್ದರು. ಫೆ. 8 ಮತ್ತು 11ನೇ ತಾರೀಖು ಸೂಕ್ತವೆಂದು ಹೇಳಿದ್ದರು. ಆದ್ದರಿಂದ ಇಂದು ಶಶಿಕಲಾ ಚೆನ್ನೈಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ನಾನು ಸಿವಿಲ್ ಇಂಜಿನಿಯರ್, ಕಾಡಿನ ಇಂಜಿನಿಯರ್ ಅಲ್ಲ: ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಅರವಿಂದ ಲಿಂಬಾವಳಿ
ಹೊಸೂರಿನಿಂದ 15 ಕಡೆ ಶಶಿಕಲಾರಿಗೆ ಭವ್ಯ ಸ್ವಾಗತಕ್ಕೆ ಸಿದ್ದತೆ ನಡೆಸಲಾಗಿದೆ. ನಿನ್ನೆ ರಾತ್ರಿಯಿಂದಲೇ ರೆಸಾರ್ಟ್ ಬಳಿ ಜಮಾಯಿಸಿದ ಶಶಿಕಲಾ ಬೆಂಬಲಿಗರ ದಂಡು ಕಾರು, ಕ್ಯಾಬ್, ಟಿಟಿಗಳಲ್ಲಿ ತಂಡೋಪತಂಡವಾಗಿ ಆಗಮಿಸಿದ್ದಾರೆ. ಇಂದು ಶಶಿಕಲಾ ಕಾರಿನ ಹಿಂದೆಯೇ ನೂರಾರು ಕಾರುಗಳು ಸಾಗಲಿವೆ. ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟನೆ ಮಾಡಿದ್ದರೂ ಅವರ ಬೆಂಬಲಿಗರು ಎಐಎಡಿಎಂಕೆ ಪಕ್ಷದ ಬಾವುಟ ಹಿಡಿದು ರೆಸಾರ್ಟ್ ಹೊರಗೆ ಸ್ವಾಗತ ಕೋರಿದ್ದಾರೆ.
ಶಶಿಕಲಾ ಚೆನ್ನೈಗೆ ತೆರಳಲು ಬೆಂಬಲಿಗರು ಖಾಸಗಿ ಎಸ್ಕಾರ್ಟ್ ವ್ಯವಸ್ಥೆ ಮಾಡಿದ್ದಾರೆ. 8ಕ್ಕೂ ಹೆಚ್ಚು ವಾಹನಗಳಲ್ಲಿ ಎಸ್ಕಾರ್ಟ್ ಒದಗಿಸಲಾಗಿದೆ. ಅದರ ಹಿಂದೆ ಕಾರುಗಳಲ್ಲಿ ಬೆಂಬಲಿಗರು ತೆರಳಲಿದ್ದಾರೆ. ದೇವನಹಳ್ಳಿಯಿಂದ ಅತ್ತಿಬೆಲೆ, ಹೊಸೂರು ಮೂಲಕ ತಮಿಳಿನಾಡಿಗೆ ಎಂಟ್ರಿ ಕೊಡಲಿರುವ ಶಶಿಕಲಾ ಅವರಿಗೆ ತಮಿಳುನಾಡು ರಸ್ತೆಯುದ್ದಕ್ಕೂ ಹದಿನೈದು ಕಡೆ ಭವ್ಯ ಸ್ವಾಗತಕ್ಕೆ ಪ್ಲಾನ್ ಮಾಡಲಾಗಿದೆ. ಪ್ರೆಸ್ಟೀಜ್ ವಿಲ್ಲಾದಿಂದ ಹೊಸೂರಿನವರೆಗೂ ಶಶಿಕಲಾ ಕಾರಲ್ಲಿ ಪ್ರಯಾಣ ಮಾಡಲಿದ್ದಾರೆ. ಹೊಸೂರು ತಲುಪುತಿದ್ದಂತೆ ಜೂಜುವಾಡಿ ನಗರದಲ್ಲಿ ಶಶಿಕಲಾರಿಗೆ ಭವ್ಯ ಸ್ವಾಗತ ಕೋರಲಾಗುವುದು. ಆ ಬಳಿಕ ಮೆರವಣಿಗೆ ಮೂಲಕ ಚಿನ್ನಮ್ಮ ತೆರಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ