ಬೆಂಗಳೂರು (ಜ. 27): ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದ ಆರೋಪದ ಮೇಲೆ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ (ಶಶಿಕಲಾ ನಟರಾಜನ್) ಅವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 4 ವರ್ಷಗಳ ಜೈಲು ಶಿಕ್ಷೆಯನ್ನು ಮುಗಿಸಿರುವ ಶಶಿಕಲಾ ಅವರನ್ನು ಇಂದು ರಿಲೀಸ್ ಮಾಡಲಾಗಿದೆ. ಆದರೆ, ಅವರಿಗೆ ಕೊರೋನಾ ಸೋಂಕು ತಗುಲಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, ಜೈಲಿನಿಂದ ಬಿಡುಗಡೆಯಾದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಇನ್ನೂ 8 ದಿನಗಳು ಕಾಯಬೇಕಾಗಿದೆ.
ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಬಿಡುಗಡೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ವಿಕ್ಟೋರಿಯಾ ಆಸ್ಪತ್ರೆಯತ್ತ ದೌಡಾಯಿಸಿದರು. ಹಲವರು ಸಿಹಿ ಹಂಚಿ ಸಂಭ್ರಮಿಸಿದರು. ಪಿಪಿಇ ಕಿಟ್ ಧರಿಸಿ ಶಶಿಕಲಾ ಚಿಕಿತ್ಸೆ ಪಡೆಯುತ್ತಿರೋ ರೂಮ್ ಒಳಗೆ ಹೋದ ಜೈಲಧಿಕಾರಿಗಳು ಶಶಿಕಲಾರಿಂದ ಬಿಡುಗಡೆ ಪ್ರತಿ ಮೇಲೆ ಸಹಿ ಪಡೆದರು. ಸಹಿ ಹಾಕಿದ ಶಶಿಕಲಾ ಕೈ ಮುಗಿದು, ಜೈಲಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯಲ್ಲಿರುವ ಶಶಿಕಲಾ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಇನ್ನೂ 8 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, 8 ದಿನಗಳ ನಂತರ ಅವರು ಚೆನ್ನೈಗೆ ತೆರಳಿ, ಹೋಂ ಕ್ವಾರಂಟೈನ್ ಆಗಲಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಶಶಿಕಲಾ ಅವರ ರಿಲೀಸ್ನಿಂದ ಚುನಾವಣೆಯ ಫಲಿತಾಂಶದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: VK Sasikala: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ
ಶಶಿಕಲಾ ಅವರು ಇಂದು ಜೈಲಿನಿಂದ ರಿಲೀಸ್ ಆದ ಹಿನ್ನೆಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಈ ಹಿಂದೆ ಕುಟುಂಬಸ್ಥರು ಕೋರಿದ್ದರು. ಆದರೆ, ಜೈಲಿನ ಪ್ರೋಟೋಕಾಲ್ ಪ್ರಕಾರ ಶಿಫ್ಟ್ ಮಾಡಲು ಸಾಧ್ಯವಿರಲಿಲ್ಲ. ಆದರೆ, ಇಂದು ಅವರು ಜೈಲಿನಿಂದ ರಿಲೀಸ್ ಆಗಿರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.
![]()
ಶಶಿಕಲಾ ನಟರಾಜನ್ ಬಿಡುಗಡೆ ಆದೇಶ
ಜೈಲು ಶಿಕ್ಷೆ ಅವಧಿ ಮುಗಿದರೂ ಶಶಿಕಲಾ ಇನ್ನೂ 8 ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಕೊರೋನಾ ಸೋಂಕು ತಗುಲಿದ್ದರಿಂದ ಶಶಿಕಲಾ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಎ ಸಿಂಟಮ್ಸ್ ಸ್ಟೇಜ್ನಲ್ಲಿದ್ದಾರೆ. ವಿ.ಕೆ ಶಶಿಕಲಾ ಜೊತೆಯಲ್ಲಿ ಅವರ ಸಂಬಂಧಿ ಇಳವರಸಿ ಮತ್ತು ಸೋದರಳಿಯ ಸುಧಾಕರ್ ಅವರ ಜೈಲುವಾಸ ಕೂಡ ಇಂದಿಗೆ ಮುಕ್ತಾಯವಾಗಿದೆ. ಶಶಿಕಲಾ ಅವರೊಂದಿಗೆ ಇಳವರಸಿ ಅವರಿಗೂ ಕೊರೋನಾ ಸೋಂಕು ತಗುಲಿದೆ. ಹೀಗಾಗಿ, ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2017ರಲ್ಲಿ ಈ ಪ್ರಕರಣದಲ್ಲಿ ಶಶಿಕಲಾ ಸೇರಿ ಮತ್ತಿಬ್ಬರಿಗೆ 10 ಕೋಟಿ ರೂ. ದಂಡ, 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ನ್ಯಾಯಾಲಯ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಶಶಿಕಲಾ ಅವರ ಸಂಬಂಧಿಕರು ಪಾವತಿಸಿದ್ದಾರೆ. ಹೀಗಾಗಿ, ಅವರನ್ನು ಇಂದು ಜೈಲಿನಿಂದ ರಿಲೀಸ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ