ಬೆಂಗಳೂರು (ಜ. 27): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ ಹಾಗೂ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಇಂದು ಬಿಡುಗಡೆಯಾಗಲಿದ್ದಾರೆ. ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ ಚಿನ್ನಮ್ಮ ಇಂದು ಬಿಡುಗಡೆಯಾಗಲಿದ್ದಾರೆ. ಆದರೆ, ಅನಾರೋಗ್ಯದಿಂದ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಜೈಲಿನಿಂದ ಬಿಡುಗಡೆಯಾದರೂ ಅವರು ಸದ್ಯಕ್ಕೆ ಚೆನ್ನೈಗೆ ತೆರಳುವಂತಿಲ್ಲ.
ಜೈಲು ಶಿಕ್ಷೆ ಅವಧಿ ಮುಗಿದರೂ ಶಶಿಕಲಾ ಇನ್ನೂ ಮೂರು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಕೊರೋನಾ ಸೋಂಕು ತಗುಲಿದ್ದರಿಂದ ಶಶಿಕಲಾ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಎ ಸಿಂಟಮ್ಸ್ ಸ್ಟೇಜ್ನಲ್ಲಿದ್ದಾರೆ. ಇಂದು 10 ಗಂಟೆ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಲಿರೋ ಜೈಲಧಿಕಾರಿಗಳು ಶಶಿಕಲಾ ಅವರನ್ನು ಬಿಡುಗಡೆ ಮಾಡುವ ಪ್ರತಿಯನ್ನು ವಿಕ್ಟೋರಿಯಾ ಆಸ್ಪತ್ರೆ ಡೀನ್ಗೆ ನೀಡಲಿದ್ದಾರೆ. ಡೀನ್ ಮೂಲಕ ಬಿಡುಗಡೆ ಮಾಡಿದ್ದೇವೆ ಎಂದು ಶಶಿಕಲಾ ಅವರಿಂದ ಜೈಲಧಿಕಾರಿಗಳು ಸಹಿ ಪಡೆಯಲಿದ್ದಾರೆ.
ಶಶಿಕಲಾ ಇನ್ನು 2-3 ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಬಳಿಕ, ಆ್ಯಂಬುಲೆನ್ಸ್ ಮೂಲಕ ಚೆನೈಗೆ ತೆರಳಿ ಹೋಂ ಕ್ವಾರಂಟೈನ್ ಆಗಲಿದ್ದಾರೆ. ಜೈಲಿನ ನಿಯಾಮವಾಳಿ ಪ್ರಕಾರ ಶಶಿಕಲಾ ಇಂದು ಬಿಡುಗಡೆ ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಆಸ್ಪತ್ರೆ ಗೇಟ್ ಮುಂಭಾಗವೇ ಬ್ಯಾರಿಕೇಡ್ ಹಾಕಿ ಭದ್ರತೆ ನೀಡಲಾಗಿದೆ. ಆಸ್ಪತ್ರೆಗೆ ಇಂದು ರೋಗಿಗಳಿಗೆ ಬಿಟ್ಟು ಯಾರಿಗೂ ಒಳಗೆ ಪ್ರವೇಶವಿಲ್ಲ. ಸದ್ಯಕ್ಕೆ ಶಶಿಕಲಾ ಬೆಂಬಲಿಗರು ಒಬ್ಬೊಬ್ಬರೇ ಆಸ್ಪತ್ರೆ ಬಳಿ ಆಗಮಿಸುತ್ತಿದ್ದಾರೆ.
ವಿ.ಕೆ ಶಶಿಕಲಾ ಜೊತೆಯಲ್ಲಿ ಅವರ ಸಂಬಂಧಿ ಇಳವರಸಿ ಮತ್ತು ಸೋದರಳಿಯ ಸುಧಾಕರ್ ಅವರ ಜೈಲುವಾಸ ಇಂದಿಗೆ ಮುಕ್ತಾಯವಾಗಲಿದೆ. ಶಶಿಕಲಾ ಅವರೊಂದಿಗೆ ಇಳವರಸಿ ಅವರಿಗೂ ಕೊರೋನಾ ಸೋಂಕು ತಗುಲಿದೆ. ಹೀಗಾಗಿ, ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕಲಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ