ನವದೆಹಲಿ (ಮಾರ್ಚ್ 8): ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಮಧ್ಯೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಶಯದೊಂದಿಗೆ ಸಮತೋಲಿತ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, "ಇದನ್ನ ವಿಕಾಸ ಪತ್ರ ಎಂದು ಬಣ್ಣಿಸುವುದೇ ಸೂಕ್ತ. ಶಿಕ್ಷಣ, ಸಂಶೋಧನೆ, ಆರೋಗ್ಯ, ರಸ್ತೆ, ನೀರಾವರಿ, ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ₹ 44,237 ಕೋಟಿ ಬಂಡವಾಳ ವೆಚ್ಚ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮತ್ಸೋದ್ಯಮ ಹಾಗೂ ಕೃಷಿ ಸೌಲಭ್ಯ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗಾಗಿ ಒಟ್ಟು 31,028 ಕೋಟಿ ರೂಪಾಯಿ ಒದಗಿಸಲಾಗಿದೆ. ದಕ್ಷಿಣ ಮತ್ತು ಮಧ್ಯಮ ಭಾಗದ ನೀರಾವರಿ ಯೋಜನೆಗಳ ಜೊತೆಗೆ ಉತ್ತರ ಕರ್ನಾಟಕದ ಹಲವು ನೀರಾವರಿ ಯೋಜನೆಗಳಿಗೂ ಮಹತ್ವ ನೀಡಲಾಗಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗುತ್ತಿದ್ದು ಈ ವರ್ಷ ಬೇರೆ ಬೇರೆ ಕಾಲುವೆ ಕಾಮಗಾರಿಗಳಿಗಾಗಿ 5,600 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದಿದ್ದಾರೆ.
ಇದೊಂದು ದೂರದೃಷ್ಟಿಯ ಬಜೆಟ್ ಎಂದು ಹೇಳಬಹುದಾಗಿದೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಅಂದರೆ - ಕ್ವಾಂಟಮ್ ಕಂಪ್ಯೂಟಿಂಗ ಸಂಶೋದನೆಗೆ ಪ್ರತ್ಯೇಕ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆದಕ್ಕಾಗಿ ಆರಂಭಿಕವಾಗಿ 10 ಕೋಟಿ ರೂಪಾಯಿ ಒದಗಿಸಿದೆ. ಪೃಶ್ಚಿಮ ವಾಹಿನಿ ನದಿಗಳಿಗೆ ಸಂಬಂಧಿಸಿದ ಯೋಜನೆಗಳು ಕೂಡಾ ದೂರದೃಷ್ಟಿಯುಳ್ಳದ್ದು ಎಂದು ಹೇಳಬಹುದು. ಮಳೆಗಾಲದಲ್ಲಿ ಅರಭಿ ಸಮುದ್ರ ಸೇರಿ ವ್ಯರ್ಥವಾಗುವ ನೀರನ್ನು ಸದುಪಯೋಗಪಡಿಸಿಕೊಳ್ಳಲು ಯಡಿಯೂರಪ್ಪ ಸರ್ಕಾರವು ಮಾಸ್ಟರ್ ಪ್ಲಾನ್ ರೂಪಿಸಿದೆ. ಒಟ್ಟು 3,986 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಲಾಗಿದೆ.
ಇದಕ್ಕಾಗಿ ಪಶ್ಚಿಮ ವಾಹಿನಿ ನದಿಗಳಿಗೆ 1,348 ಕಡೆ ಚಿಕ್ಕಚಿಕ್ಕ (ಕಿಂಡಿ) ಅಣೆಕಟ್ಟುಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ವರ್ಷ ಇದಕ್ಕಾಗಿ 500 ಕೋಟಿ ಒದಗಿಸಲಾಗಿದೆ. ಅದೇ ರೀತಿ ಸಮುದ್ರದ ಉಪ್ಪುನೀರು ಕರಾವಳಿ ನದಿಗಳಲ್ಲಿ ಹಿಮ್ಮುಖವಾಗಿ ಹರಿದು ನದಿ ನೀರನ್ನು ಕುಲುಷಿತಗೊಳಿಸುವುದನ್ನು ತಡೆಯಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದ್ದು 300 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಬಜೆಟ್ ಅನ್ನು ಸದಾನಂದ ಗೌಡ ವಿವರಿಸಿದ್ದಾರೆ.
ಏಷ್ಯಾದ ಐಟಿ ರಾಜಧಾನಿ ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 7,795 ಕೋಟಿ ರೂಪಾಯಿ ಒದಗಿಸಲಾಗಿದೆ. ಜಂಟಿ ಯೋಜನೆಯಾದ 15,767 ಕೋಟಿ ರೂ ಮೊತ್ತದ ಬೆಂಗಳೂರು ಸಬರ್ಬನ್ ರೈಲು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯವು ಈ ಸಲ 850 ಕೋಟಿ ರೂ ಒದಗಿಸಿದೆ. ಅದೇ ರೀತಿ ರೇಲ್ವೆ ಹಾಗೂ ರಾಜ್ಯ ಸರ್ಕಾರ 50:50ರ ಅನುಮಾತದಲ್ಲಿ ಜಂಟಿಯಾಗಿ 7 ರೈಲು ಯೋಜನೆ (ಒಟ್ಟು ರೈಲುಮಾರ್ಗದ ಉದ್ದ 1,173 ಕಿಮಿ) ಕೈಗೆತ್ತಿಕೊಂಡಿವೆ. ಇವು ಒಟ್ಟು 7,984 ರೂಪಾಯಿ ಯೋಜನೆಗಳು. ಈ ಬಜೆಟ್ಟಿನಲ್ಲಿ ರಾಜ್ಯವು ಭೂಸ್ವಾದೀನಕ್ಕಾಗಿ 2630 ಕೋಟಿ ರೂ ಒದಗಿಸಿರುವುದು ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದರು.
ಬೆಂಗಳೂರು ದೇಶದ ನವೋದ್ಯಮದ (ಸ್ಟಾರ್ಟ್ಅಪ್) ರಾಜಧಾನಿಯೂ ಆಗಿದೆ. ಈ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ನವೋದ್ಯಮ ನೀತಿಯ ಪರಿಷ್ಕರಣೆ ಜೊತೆಗೇ 100 ಕೋಟಿ ರೂಪಾಯಿ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇ.ಎಸ್.ಡಿ.ಎಂ ವಲಯದಲ್ಲಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನೋಂದಣಿ, ಮುದ್ರಾಂಕ ಮತ್ತು ಭೂಪರಿವರ್ತನಾ ಶುಲ್ಕದಿಂದ ಸಂಪೂರ್ಣ ವಿನಾಯ್ತಿ ಸೇರಿದಂತೆ ಹಲವು ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಿರುವುದು ರಾಜ್ಯದಲ್ಲಿ ಇನ್ನಷ್ಟು ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ