HOME » NEWS » State » VISHU FESTIVAL CELEBRATING IN KERALA TULU NADU REGION IN KARNATAKA AKP SESR

Vishu Festival: ಕರಾವಳಿಯಲ್ಲಿ ಇಂದು ಸೌರಮಾನ ಯುಗಾದಿ ಸಂಭ್ರಮ; ವಿಷು ಹಬ್ಬದ ವಿಶೇಷತೆ ಬಗ್ಗೆ ಗೊತ್ತೆ?

ಈ ದಿನದಂದು ಕೃಷಿಕರು ತಾವು ಬೆಳೆದ ಬೆಳೆಗಳನ್ನು ದೇವರಿಗೆ ಕಾಣಿಕೆಯಾಗಿ ನೀಡುತ್ತಾರೆ. ಇದಕ್ಕೆ ಈ ಭಾಗದ ಜನ ವಿಷು ಕಣಿ ಎಂದು ಕರೆಯುತ್ತಾರೆ

news18-kannada
Updated:April 14, 2021, 2:38 PM IST
Vishu Festival: ಕರಾವಳಿಯಲ್ಲಿ ಇಂದು ಸೌರಮಾನ ಯುಗಾದಿ ಸಂಭ್ರಮ; ವಿಷು ಹಬ್ಬದ ವಿಶೇಷತೆ ಬಗ್ಗೆ ಗೊತ್ತೆ?
ಈ ದಿನದಂದು ಕೃಷಿಕರು ತಾವು ಬೆಳೆದ ಬೆಳೆಗಳನ್ನು ದೇವರಿಗೆ ಕಾಣಿಕೆಯಾಗಿ ನೀಡುತ್ತಾರೆ. ಇದಕ್ಕೆ ಈ ಭಾಗದ ಜನ ವಿಷು ಕಣಿ ಎಂದು ಕರೆಯುತ್ತಾರೆ
  • Share this:
 ಪುತ್ತೂರು (ಏ. 14): ಚಂದ್ರಮಾನ ಯುಗಾದಿಗೆ ಕರ್ನಾಟ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೇಗೆ ಹೊಸ ವರ್ಷವಾಗಿ ಆಚರಿಸಲಾಗುತ್ತದೆಯೋ, ಅದೇ ರೀತಿ  ಸೌರಮಾನ ಯುಗಾದಿಯನ್ನು ಕೇರಳ ಹಾಗೂ ತುಳುನಾಡಿನ ಜನ ವಿಷು ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಾರೆ. ಇಂದಿನಿಂದ ಈ ಭಾಗದಲ್ಲಿ ಹೊಸ ಸಂವತ್ಸರ ಆರಂಭಗೊಳ್ಳುವುದರಿಂದಾಗಿ ಈ ದಿನವನ್ನು ಹೊಸ ವರ್ಷವನ್ನಾಗಿಯೂ ಈ ಭಾಗದ ಜನ ಸಂಭ್ರಮಿಸುತ್ತಾರೆ. ಈ ದಿನದಂದು ಕೃಷಿಕರು ತಾವು ಬೆಳೆದ ಬೆಳೆಗಳನ್ನು ದೇವರಿಗೆ ಕಾಣಿಕೆಯಾಗಿ ನೀಡುತ್ತಾರೆ. ಇದಕ್ಕೆ ಈ ಭಾಗದ ಜನ ವಿಷು ಕಣಿ ಎಂದೂ ಕರೆಯುತ್ತಾರೆ.  ತುಳುನಾಡು ಹಾಗೂ ಕೇರಳದ ಜನರಿಗೆ ಇಂದು ಹೊಸ ವರ್ಷದ ಸಂಭ್ರಮ. ತುಳುನಾಡಿನ ಹಾಗೂ ಕೇರಳದ ಎಲ್ಲಾ ದೇವಸ್ಥಾನಗಳಲ್ಲಿ ಈ ದಿನ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಜನರೂ ಅಧಿಕ ಸಂಖ್ಯೆಯಲ್ಲಿ ದೇವಸ್ಥಾನಗಳಲ್ಲಿ ದೇವರ ಪೂಜೆಯಲ್ಲಿ ತೊಡಗುತ್ತಾರೆ. ದೇವರಿಗೆ ಈ ದಿನ ವಿಶೇಷವಾಗಿ ವಿಷು ಕಣಿಯನ್ನು ಇಡುವ ಸಂಪ್ರದಾಯ ಕರಾವಳಿ ಹಾಗು‌ ಕೇರಳ ಭಾಗದಲ್ಲಿದೆ.

ಹಿಂದೆ ಒಕ್ಕಲು ಪದ್ಧತಿ ವ್ಯವಸ್ಥೆಯಿದ್ದ ಸಂದರ್ಭದಲ್ಲಿ ಒಕ್ಕಲು ಮನೆಯವರು ಧಣಿಗಳಿಗೆ ಸೌರಮಾನ ಯುಗಾದಿಯಾದ  ಈ ದಿನ ತಾವು ಬೆಳೆದ ಬೆಳೆಗಳನ್ನು ಧಣಿಗಳಿಗೆ ಅರ್ಪಿಸುವಂತಹ ಸಂಪ್ರದಾಯವಿತ್ತು. ಕ್ರಮೇಣ ಈ ಒಕ್ಕಲು ಪದ್ಧತಿ ಮರೆಯಾದ ಬಳಿಕ ಪ್ರತಿ ಕುಟುಂಬಗಳೂ ತಮ್ಮಲ್ಲಿ ಬೆಳೆದಂತಹ ದವಸ- ಧಾನ್ಯಗಳನ್ನು, ತರಕಾರಿ ಬೆಳೆಗಳನ್ನು ದೇವರಿಗೆ ಕಾಣಿಕೆ ಇಡುವಂತಹ ಸಂಪ್ರದಾಯ ಬೆಳೆದು ಬಂದಿದೆ. ಈ ರೀತಿಯ ಕಾಣಿಕೆ ಇಡುವುದನ್ನು ವಿಷು ಕಣಿ ಎಂದು  ಕರೆಯಲಾಗುತ್ತದೆ. ಹೆಚ್ಚಾಗಿ ಕೃಷಿ ಕುಟುಂಬಗಳಲ್ಲಿ ಈ ಆಚರಣೆಯಲ್ಲಿ ತೊಡಗಿಕೊಂಡಿದೆ.


ಅಲ್ಲದೆ ಪ್ರತೀ ದೇವಸ್ಥಾನಗಳಲ್ಲೂ ಇಂದು ದೇವರ ಮುಂದೆ ವಿಷು ಕಣಿಯನ್ನು ಇಡಲಾಗುತ್ತದೆ. ಮನೆ ಮಂದಿ ಹಿಂದಿನ ದಿನವೇ ವಿಷು ಕಣಿಗೆ ಇಡಬೇಕಾದಂತಹ ವಸ್ತುಗಳನ್ನು ಸಂಗ್ರಹಿಸಿಡುತ್ತಿದ್ದು, ಹೆಚ್ಚಾಗಿ ಮನೆಯಲ್ಲೇ ಬೆಳೆದ ಹಣ್ಣು,ತರಕಾರಿಗಳನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ. ದೇವರ ಮುಂದೆ ಇಟ್ಟ ಈ ಕಣಿಯನ್ನು ಮನೆ ಮಕ್ಕಳು ಮುಂಜಾನೆ ಎದ್ದು ಕೂಡಲೇ ನೋಡಬೇಕು ಎನ್ನುವ ಕಟ್ಟುಪಾಡು ಕರಾವಳಿಯ ಭಾಗದಲ್ಲಿದೆ. ವಿಷು ಸಂಕ್ರಮಣದ ದಿನ ವಿವಿಧ ಖಾದ್ಯಗಳ ಮೂಲಕ ಭೋಜನದ ವ್ಯವಸ್ಥೆಯನ್ನೂ ಮಾಡಲಾಗುತ್ತಿದ್ದು, ವಿಷು ಭೋಜನಕ್ಕೆ ವಿಶೇಷ ಮಹತ್ವವೂ ಇದೆ. ಪ್ರತೀ ಕುಟುಂಬ ಸದಸ್ಯರು ಒಟ್ಟಾಗಿ ಈ ದಿನ ಭೋಜನ ಮಾಡುವುದು ಕರಾವಳಿಯ ಈ ಆಚರಣೆಯ ಒಂದು ವಿಶೇಷವೂ ಆಗಿದೆ.

ಹೊಸ ವರ್ಷವೆಂದೇ ಆಚರಿಸಲ್ಪಡುವ ಈ ದಿನದಂದು ತುಳುನಾಡಿನ ಜನ ಹೊಸ ಬಟ್ಟೆಯನ್ನು ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಪ್ರತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ಈ ದಿನದಂದು ದೇವಸ್ಥಾನಗಳಿಗೆ ಭೇಟಿ ನೀಡಿದಲ್ಲಿ ಮುಂದಿನ ಜೀವನ ಸುಖಮಯವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಉತ್ತರ ಕರ್ನಾಟಕದ ಭಾಗದಲ್ಲಿ ಯಾವ ರೀತಿ ಯುಗಾದಿಯನ್ನು ಆಚರಿಸುತ್ತಾರೋ, ಅದೇ ರೀತಿಯಲ್ಲಿ ಕರಾವಳಿ ಭಾಗದ ಜನರಿಗೆ ಈ ದಿನವನ್ನು ವಿಷು ಹಬ್ಬವಾಗಿ ಆಚರಿಸುತ್ತಾರೆ.
Published by: Seema R
First published: April 14, 2021, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories