ಬೆಂಗಳೂರು,(ನ.28): ಡಿಸೆಂಬರ್ 30ರೊಳಗೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯಾದ್ಯಂತ ಸಿಂಹಗಳನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತೇವೆ ಎಂದು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ.
ಇಂದು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ವಿಳಂಬ ಮಾಡುತ್ತಿದೆ. ನಾವು ಶಾಂತಿ ಪ್ರಿಯರು, ಹೇಡಿಗಳಲ್ಲ. ಆದರೆ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಎಷ್ಟು ದಿನ ಕಾಯೋದು. ನಮ್ಮ ಸಿಎಂ ಕಚೇರಿ ಮುಂದೆ ಗಂಟೆಗಟ್ಟಲೇ ಕಾದಿದ್ದೇವೆ. ನಮ್ಮನ್ನು ತುಂಬಾ ಅಲೆಸುತ್ತಿದ್ದಾರೆ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ. 30 ರೊಳಗೆ ಮೈಸೂರಿನಲ್ಲಿ ನಿಗದಿ ಮಾಡಿರುವ ಸ್ಥಳದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡದಿದ್ದರೆ, ರಾಜ್ಯಾದ್ಯಂತ ಸಿಂಹಗಳನ್ನು ಬಡಿದೆಬ್ಬಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: 'ರಾಜಕೀಯ ಗೊಂದಲ ಮಾಡಿ, ದರ್ಪ ದವಲತ್ತು ತೋರಿಸಿಬೇಡಿ'; ವಿಷ್ಣು ಅಳಿಯನ ವಿರುದ್ಧ ಸಿಎಂ ಕಿಡಿ
ಈವರೆಗೂ 5 ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ, ಡಿಸಿ ಅವರನ್ನೂ ಭೇಟಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಸರ್ಕಾರ ಕ್ರಮ ಕೈಗೊಂಡಿಲ್ಲ. ನಾವು ಶಾಂತಿ ಪ್ರಿಯರು. ಧ್ವಂಸ ಮಾಡುವುದಿಲ್ಲ. ನಾವು ಸಹ 9 ವರ್ಷಗಳಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಹೇಳಿದ್ದು ನೀವೆ. ನಾವು ನಿರ್ಮಾಣ ಮಾಡಲು ಕೇಳಿಲ್ಲ. ಈಗ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗರಂ ಆದರು.
ನಾವು ಈಗಲೂ ಕಳಕಳಿಯಿಂದ ಮನವಿ ಮಾಡುತ್ತಿದ್ದೇವೆ. ಇಡೀ ಸರ್ಕಾರದ ಬಗ್ಗೆ ಮತ್ತು ಕುಮಾರಸ್ವಾಮಿ ಕುಟಂಬದ ಬಗ್ಗೆ ನಮಗೆ ವೈಯಕ್ತಿಕ ಗೌರವ ಇದೆ. ಸಿಎಂ ಕುಮಾರಸ್ವಾಮಿ ಮೇಲೆ ನಮಗೆ ಕೋಪವಿಲ್ಲ. ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಡಿಸೆಂಬರ್ 30 ರೊಳಗೆ ಸ್ಮಾರಕ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು. ಪ್ರೀತಿಯಿಂದ, ಕಾಳಜಿಯಿಂದ, ಗೌರವದಿಂದ ಸಿಎಂ ಬಳಿ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಮುಂದಾಳತ್ವದಿಂದ ವಿಷ್ಣು ಸ್ಮಾರಕ ಮಾಡಿಸಿಕೊಡಿ ಎಂದು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.
ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಬೇಡ:
ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ನಮ್ಮ ಒಪ್ಪಿಗೆ ಇಲ್ಲ. ಡಾ. ರಾಜ್ಕುಮಾರ್, ಡಾ. ಅಂಬರೀಷ್ ಅವರಿಗೆ ಇರುವಂತೆ, ಡಾ. ವಿಷ್ಣುವರ್ಧನ್ ಅವರಿಗೆ ಅವರದೇ ಆದ ವಿಶೇಷ ಸ್ಥಾನಮಾನ ಇದೆ. ಮೈಸೂರಿನಲ್ಲಿ ಈಗಾಗಲೇ ತೋರಿಸಿರುವ ಜಾಗದ ವಿವಾದವನ್ನು ಬಗೆಹರಿಸಿ ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಿಕೊಡಬೇಕು ಎಂದರು. ಇದು ಸರ್ಕಾರದ ಕೆಲಸ. ಸರ್ಕಾರ ಸ್ಮಾರಕ ನಿರ್ಮಿಸಿದರೆ ಗೌರವ ಸಲ್ಲಿಸುತ್ತೇವೆ ಎಂದು ಹೇಳಿದರು.
ಸಿಎಂಗೆ ಜಗ್ಗೇಶ್ ಮನವಿ:
ಆದಷ್ಟು ಬೇಗ ವಿಷ್ಣು ಸ್ಮಾರಕ ನಿರ್ಮಾಣ ಮಾಡಿ ಎಂದು ನವರಸನಾಯಕ ಜಗ್ಗೇಶ್ ಟ್ವಿಟ್ಟರ್ನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ವಿಷ್ಣುಸೇನೆ, ಭಾರತಿವಿಷ್ಣುವರ್ಧನ್ ಅವರ ಜತೆ ಚರ್ಚಿಸಿ, ಆದಷ್ಟು ಬೇಗ ದಯಮಾಡಿ ವಿಷ್ಣು ದಾದ ಸ್ಮಾರಕದ ವಿಚಾರಕ್ಕೆ ಇತಿಶ್ರೀ ಹಾಡಿ. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತೆ ಎಂದಿದ್ದಾರೆ.
ಸಿನಿಮಸಂಬಂಧದೊಂದಿಗೆ ಬೆಳೆದ ನಮ್ಮ ಮಾನ್ಯ ಮುಖ್ಯಮಂತ್ರಿಗಳು #CMkarnataka ಶ್ರೀ ಕುಮಾರಸ್ವಾಮಿರವರು#ವಿಷ್ಣುಸೇನೆ #ಭಾರತಿವಿಷ್ಣು ರ ಜೊತೆ ಚರ್ಚಿಸಿ ದಯಮಾಡಿ #ವಿಷ್ಣುದಾದಾ ಸ್ಮಾರಕ ನಿರ್ಮಾಣದ ವಿಷಯಕ್ಕೆ ಇತಿಶ್ರೀ ಹಾಡಿ!ದಾದನ ಅಭಿಮಾನಿಗಳಿಗೆ
ಕನ್ನಡಿಗರಿಗೆ ಸಂತೋಷ ಸಮಾಧಾನ ಸಿಗುವಂತೆಮಾಡಿ..
ಇಲ್ಲದಿದ್ದರೆ ತಪ್ಪುಸಂದೇಶ ರವಾನೆ ಆಗುತ್ತೆ!🙏 pic.twitter.com/Q7sp9izQGV
— ನವರಸನಾಯಕ ಜಗ್ಗೇಶ್ (@Jaggesh2) November 28, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ