ಬೆಳಗಾವಿಯಲ್ಲಿ ವ್ಯಕ್ತಿಯ ಅಕಾಲಿಕ ನಿಧನ; ಒಡೆಯನ ಸಾವಿನಿಂದ ಊಟ ತ್ಯಜಿಸಿದ ಸಾಕುನಾಯಿ!

ಮಾಲೀಕ ತೀರಿ ಹೋಗಿ 6 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕನಾಗಿ ಕುಳಿತಿದೆ ಮಾಲೀಕನ ಪ್ರೀತಿಯ ಶ್ವಾನ. ಅಲ್ಲದೆ, ನೆನಪಾದಾಗಲೆಲ್ಲ ತನ್ನ ಒಡೆಯನ ಸಮಾಧಿಗೆ ಹೋಗಿ ಕೆಲಹೊತ್ತು ನಿಂತು ಮತ್ತೆ ಮನೆಗೆ ವಾಪಾಸ್ ಬರುತ್ತಿದೆ.

ಮಾಲೀಕನ ನೆನಪಿನಲ್ಲಿ ಕಾಯುತ್ತಿರುವ ಸಾಕುನಾಯಿ

ಮಾಲೀಕನ ನೆನಪಿನಲ್ಲಿ ಕಾಯುತ್ತಿರುವ ಸಾಕುನಾಯಿ

  • Share this:
ಬೆಳಗಾವಿ (ಸೆ. 12): ಮನುಷ್ಯನ ಬಂಧನಗಳು ಅವನ ಹುಟ್ಟಿನಿಂದ ಪ್ರಾರಂಭವಾಗಿ ಯಾವಾಗ ಅವನ ಅಂತ್ಯವಾಗುತ್ತೋ ಆಗ ಮುಗಿದು ಹೋಗಿಬಿಡುತ್ತವೆ. ಅಬ್ಬಬ್ಬಾ ಅಂದರೆ ಮನೆಯವರು, ಸಂಬಂಧಿಕರು, ನೆರೆಹೊರೆಯವರು ಮೂರು ದಿನ ನೆನೆಸಿಕೊಂಡು ಅತ್ತು ನಾಲ್ಕನೇ ದಿನಕ್ಕೆ ಸುಮ್ಮನಾಗುತ್ತಾರೆ. ಆದರೆ, ಇಲ್ಲೊಬ್ಬ ತನ್ನ ಮಾಲೀಕ ತೀರಿ ಹೋದ ಅಂತ ತುತ್ತು ಕೂಳು ಸಹ ತಿನ್ನದೆ ಕಾಯುತ್ತಿದ್ದಾನೆ. ಮಾಲೀಕ ತೀರಿ ಹೋಗಿ 6 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕನಾಗಿ ಕುಳಿತಿದೆ ಮಾಲೀಕನ ಪ್ರೀತಿಯ ಶ್ವಾನ. ಅಲ್ಲದೆ, ನೆನಪಾದಾಗಲೆಲ್ಲ ತನ್ನ ಒಡೆಯನ ಸಮಾಧಿಗೆ ಹೋಗಿ ಕೆಲಹೊತ್ತು ನಿಂತು ಮತ್ತೆ ಮನೆಗೆ ವಾಪಾಸ್ ಬರುತ್ತಿದೆ.

ಹೌದು, ಬಂದು ಹೋಗೋ ಈ ಪ್ರಪಂಚದಲ್ಲಿ ಯಾವುದು ಶಾಶ್ವತ ಹೇಳಿ? ಪ್ರತಿಯೊಂದು ಜೀವಿ ಕೂಡ ಹುಟ್ಟಿದ ಮೇಲೆ ಸಾಯಲೇಬೇಕು. ಆದರೆ ಬಂದು ಹೋಗುವ ನಡುವೆ ಬೆಳೆದ ಸಂಬಂಧಗಳು ಮಾತ್ರ ಶಾಶ್ವತವಾಗಿ ಉಳಿದುಕೊಂಡು ಬಿಡುತ್ತದೆ. ಕಡ್ಡಿ ಎಂಬ ನಾಯಿಯ ಮಾಲೀಕ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಶಂಕರಪ್ಪ ಮಡಿವಾಳರ ಕಳೆದ 6ನೇ ತಾರೀಕು ಮನೆಯಲ್ಲಿದ್ದಾಗಲೇ ಏಕಾಏಕಿ ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದರು. ಅವರು ತೀರಿ ಹೋದಾಗಿನಿಂದಲೂ ಸಹ ಈ ಶ್ವಾನ ತುತ್ತು ಕೂಳು ಸಹ ತಿನ್ನದೆ ಹೀಗೆ ಮೂಕವೇದನೆ ಅನುಭವಿಸುತ್ತಿದೆ. ತನ್ನ ಯಜಮಾನ ಈಗ ಬರ್ತಾನೆ, ಆಗ ಬರ್ತಾನೆ ಎಂದು ಕಾದು ಕುಳಿತಿದೆ.

ಇದನ್ನೂ ಓದಿ: ಅನೈತಿಕ ಚಟುವಟಿಕೆಯಿಂದಲೇ ಜಮೀರ್ ಅಹಮದ್ ಉನ್ನತ ಮಟ್ಟಕ್ಕೇರಿದ್ದಾರೆ; ರೇಣುಕಾಚಾರ್ಯ ಟೀಕೆ

ಈ ಶ್ವಾನಕ್ಕೆ ಶಂಕರಪ್ಪ ದುಡ್ಡು ಕೊಟ್ಟೇನೂ ತಂದಿರಲಿಲ್ಲ.‌ ಬದಲಾಗಿ ಗ್ರಾಮೀಣ ಭಾಗದಲ್ಲಿ ಸಿಗುವ ನಾಯಿಯನ್ನೇ ತಂದು ಸಾಕಿದ್ದರು. ಶಂಕರಪ್ಪ ಇದಕ್ಕೆ ಪ್ರೀತಿಯಿಂದ ಕಡ್ಡಿ ಎಂದು ಕರೆದು ಅದಕ್ಕೆ ನಾಮಕರಣ ಮಾಡಿದ್ದರು. ತಾನು ಮಲಗುವ ಎಸಿ ರೂಮಿನೊಳಗೂ ಸಹ ಈ ಕಡ್ಡಿಯನ್ನು ಬಿಟ್ಟುಕೊಳ್ಳುತ್ತಿದ್ದ ಶಂಕರಪ್ಪ ಈ ಕಡ್ಡಿಯನ್ನು ತನ್ನ ಸ್ನೇಹಿತನಿಗಿಂತಲೂ ಸಹ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರಂತೆ. ಅಲ್ಲದೆ ಈ ಶ್ವಾನಕ್ಕೆ ನಿತ್ಯವೂ ಶಂಕರಪ್ಪನವರೆ ಊಟ ಮಾಡಿಸುತ್ತಿದ್ದರು. ಹೀಗಾಗಿ ಈ ಕಡ್ಡಿ ಮತ್ತು ಶಂಕರಪ್ಪ ನಡುವೆ ಇನ್ನಿಲ್ಲದ ಸಂಬಂಧ ಬೆಳೆದುಬಿಟ್ಟಿತ್ತು.  ಹೀಗಾಗಿ ಅವರು ಕಣ್ಮುಚ್ಚಿದ ಬಳಿಕ ಕಡ್ಡಿ ಊಟವನ್ನೂ ಸಹ ಮಾಡದೇ ಮೂಕ ವೇದನೆ ಅನುಭವಿಸ್ತಿದೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ತೀರಿಹೋದ 3 ದಿನಕ್ಕೆ ಪಿಂಡ ಇಟ್ಟು ಕೈ ತೊಳೆದುಕೊಳ್ಳುವ ಮನುಷ್ಯ ಸಂಬಂಧಗಳ ಮಧ್ಯೆ ಶ್ವಾನ ಪಡುತ್ತಿರುವ ನೋವು, ತೋರುತ್ತಿರುವ ಸ್ವಾಮಿನಿಷ್ಠೆ, ಮೂಕರೋದನೆ ಮನುಷ್ಯ ಸಂಬಂಧವನ್ನೇ ಪ್ರಶ್ನೆ ಮಾಡುವಂತಿದೆ. ಬಂದು ಹೋಗುವ ಪ್ರಪಂಚದಲ್ಲಿ ದ್ವೇಷ, ಹಗೆ, ಕೆಸರೆರಚಾಟದಲ್ಲೆ ತೊಡುವ ಮನುಷ್ಯ ಇದರಿಂದಾದಲೂ ಪಾಠ ಕಲಿಯಲಿ ಎನ್ನುವುದೊಂದೇ ನಮ್ಮ ಆಶಯ.
Published by:Sushma Chakre
First published: