- ಮಂಜುನಾಥ್ ಯಡಳ್ಳಿ
ಧಾರವಾಡ (ಏ.09): ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಮನೆಯನ್ನು ಇಬ್ಭಾಗ ಮಾಡುವಂಥ ಕುತಂತ್ರಿ. ಮಾಜಿ ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನಾನು ಆರೋಪಿಯೂ ಅಲ್ಲ. ಎಫ್ಐಆರ್, ಚಾರ್ಜ್ಶೀಟ್ನಲ್ಲಿಯೂ ನನ್ನ ಹೆಸರೂ ಇಲ್ಲ. ಈಗ ಚುನಾವಣೆ ಬಂದಿದೆ, ಹೀಗಾಗಿ ಪ್ರಹ್ಲಾದ್ ಜೋಶಿ ಇಂಥ ಕುತಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಮಾಜಿ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯನಾಶ ಆರೋಪದಡಿ ಕೇಸು ದಾಖಲಿಸಲು ನಿನ್ನೆ ಧಾರವಾಡ ಜೆಎಂಎಫ್ಸಿ ಕೋರ್ಟ್ ಸೂಚನೆ ನೀಡಿದೆ. ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಅದು ಯಾವತ್ತೋ ಆಗಿರುವ ಯೋಗೇಶ್ ಗೌಡ ಕೊಲೆ ಕೇಸ್ ಈಗ ಚುನಾವಣೆಯಲ್ಲಿಯೇ ಮುನ್ನೆಲೆಗೆ ಬಂದಿದ್ದು ಏಕೆ? ಇಷ್ಟು ದಿನ ಇವರು ಮಲಗಿಕೊಂಡಿದ್ದರೇನು? ಕೇಸ್ ಆಗಿ 3 ವರ್ಷ ಆಗಿದೆ. ಇದೆಲ್ಲವೂ ಪ್ರಹ್ಲಾದ್ ಜೋಶಿ ಕುತಂತ್ರ. ಜನ ಇದನ್ನೆಲ್ಲ ನೋಡುತ್ತಿದ್ದಾರೆ ಎಂದು ತಿಳಿಸಿದರು.
ಆ ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ 62 ಸಾಕ್ಷಿಗಳು ಇದ್ದವು. ಅದರಲ್ಲಿ 59 ಸಾಕ್ಷಿಗಳು ಮುಗಿದಿವೆ. ಕೇಸ್ ಹಾಕಿರುವ ಯೋಗೀಶ್ ಗೌಡ ಅವರ ಅಣ್ಣ ಗುರುನಾಥಗೌಡ ಅವರು ಪ್ರಹ್ಲಾದ್ ಜೋಶಿ ಜೊತೆಯೇ ಇರುತ್ತಾರೆ. ಹಾಗಾದರೆ ಯಾರು ಈ ಕೇಸ್ ಮಾಡಿದಂತಾಯ್ತು? ಎಂದು ಪ್ರಶಿಸಿದ ಅವರು, ಧಾರವಾಡದಲ್ಲಿ ಏನು ನಡೆದರೂ ವಿನಯ ಕುಲಕರ್ಣಿ ಮಾತ್ರ ಕಾಣುತ್ತಾರೆ ಎಂದು ವಿಷಾದಿಸಿದರು.
ಇದನ್ನೂ ಓದಿ : ಪ್ರಲ್ಹಾದ್ ಜೋಶಿಯನ್ನು ಸೋಲಿಸುವುದು ಖಚಿತ; ಧಾರವಾಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಸವಾಲು
ದಿವಂಗತ ಅನಂತಕುಮಾರ್ ಹೆಂಡತಿಯ ಪರವಾಗಿ ಒಂದು ದಿನವೂ ಪ್ರಲ್ಹಾದ್ ಜೋಶಿ ಧ್ವನಿ ಎತ್ತಿಲ್ಲ. ಜೋಶಿ ಅವರು ಬೆಳೆಯಲು ಅನಂತ ಕುಮಾರ್ ಕೊಡುಗೆ ಬಹುಮುಖ್ಯವಾಗಿದೆ ಎಂದು ವಿನಯ್ ಕುಲಕರ್ಣಿ ಟೀಕಿಸಿದರು.
ನಾನು ಲಿಂಗಾಯತ. ಕ್ಷೇತ್ರದ ಬಹುತೇಕ ಲಿಂಗಾಯತರು ಈ ಬಾರಿ ನನ್ನನ್ನೇ ಬೆಂಬಲಿಸುತ್ತಾರೆ. ಧಾರವಾಡ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ನಡೆಯಲ್ಲ. ಬಿಜೆಪಿಯವರು ಸುಳ್ಳಿನ ಸರದಾರರು. ರಾಜ್ಯಕ್ಕೆ ಇವರ ಕೊಡುಗೆ ಏನು? ಎಂದು ಕಾಂಗ್ರೆಸ್ ಮುಖಂಡ ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ