39.56 ಕೋಟಿ ರೂಪಾಯಿ Electricity Bill ಬಾಕಿ! ಈ ಜಿಲ್ಲೆಯ ಗ್ರಾಮಸ್ಥರ ಬದುಕು ಇನ್ನು ಕತ್ತಲು!

ಗ್ರಾಮ ಪಂಚಾಯ್ತಿಗಳ ವಿದ್ಯುತ್ ಬಿಲ್ ಪಾವತಿಗೆ  ಸರ್ಕಾರ ನೀಡುವ ಅನುದಾನ  ಕಡಿಮೆ ಇರುವುದರಿಂದ ಪ್ರತಿ ತಿಂಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಬಾಕಿ ಉಳಿದುಕೊಂಡು ಬರುತ್ತಿದೆ, ಇತ್ತ ಗ್ರಾಮಗಳಲ್ಲಿ ತೆರಿಗೆ ಸಂಗ್ರಹಣೆಯು ಕಡಿಮೆಯಾಗಿದೆ. ಇವೆಲ್ಲದರ ಮಧ್ಯೆ ವಿದ್ಯುತ್ ಕಡಿತದಿಂದ ಗ್ರಾಮಗಳು ಕತ್ತಲಲ್ಲೇ ಮುಳುಗಬೇಕಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳು (Gram Panchayat) ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ (Electricity Bill) ಬಾಕಿ ಉಳಿಸಕೊಂಡು ಗ್ರಾಮಗಳು ಕಗ್ಗತ್ತಲಿನಲ್ಲಿ ಮುಳುಗುವಂತೆ ಮಾಡಿವೆ. ಜಿಲ್ಲೆಯ 130 ಗ್ರಾಮ ಪಂಚಾಯತಿಗಳು  ಕುಡಿಯುವ ನೀರು (Drinking Water) ಸರಬರಾಜು ಹಾಗು ಬೀದಿ ದೀಪಗಳ (Road Light) ಬಾಬ್ತು ರೂ.39.56 ಕೋಟಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಕೆಲವು ಗ್ರಾಮ ಪಂಚಾಯ್ತಿಗಳಂತೂ ತಲಾ ಒಂದು ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದರೆ  ಹಲವಾರು ಗ್ರಾಮ ಪಂಚಾಯ್ತಿಗಳು  60 ಲಕ್ಷ, 70 ಲಕ್ಷ, 80 ಲಕ್ಷ ರೂಪಾಯಿ ಹೀಗೆ ಬೃಹತ್ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ನೋಟಿಸ್‌ ನೀಡಿದರೂ ಬಿಲ್ ತುಂಬದೇ ನಿರ್ಲಕ್ಷ್ಯ

ಹಲವಾರು ಬಾರಿ  ನೊಟೀಸ್ ನೀಡಿದರೂ ವಿದ್ಯುತ್ ಬಿಲ್ ಪಾವತಿಸದೆ ಗ್ರಾಮ ಪಂಚಾಯ್ತಿಗಳು ಬಾಕಿ ಪಾವತಿಗೆ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ಪತ್ರಿಕಾ ಪ್ರಕಟಣೆ, ಸಾರ್ವಜನಿಕ ಪ್ರಕಟಣೆ, ನೊಟೀಸ್ ಜಾರಿ ಹೀಗೆ ಹಲವಾರು ರೀತಿಯಲ್ಲಿ ಚೆಸ್ಕಾಂ ಎಚ್ಚರಿಕೆ ನೀಡಿದರು ಗ್ರಾಮ ಪಂಚಾಯ್ತಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೆ ಗ್ರಾಮಗಳ ಬೀದಿ ದೀಪ ಹಾಗು ಗ್ರಾಮ ಪಂಚಾಯತಿ  ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಚೆಸ್ಕಾಂ ಕ್ರಮ ವಹಿಸಿದೆ.

62 ಗ್ರಾಮಗಳಲ್ಲಿ ಬೀದಿ ದೀಪಗಳ ಸಂಪರ್ಕ ಕಡಿತ

ಈಗಾಗಲೇ ಜಿಲ್ಲೆಯ 62 ಗ್ರಾಮಗಳಲ್ಲಿ  ಬೀದಿ ದೀಪಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ,  62 ಗ್ರಾಮ ಪಂಚಾಯ್ತಿ ಕಚೇರಿಗಳಿಗು ವಿದ್ಯುತ್ ಸಂಪರ್ಕ ಬಂದ್ ಮಾಡಲಾಗಿದೆ.  ಇದರಿಂದ ಬೀದಿ ದೀಪಗಳಿಲ್ಲದೆ ಗ್ರಾಮಗಳು ಕಗ್ಗತ್ತಲಿನಲ್ಲಿ ಮುಳುಗುವಂತಾಗಿದೆ.  ಇದರಿಂದ ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಅದರಲ್ಲು ಸದಾ ಕಾಡು ಪ್ರಾಣಿ ಗಳ ಭಯದಲ್ಲೇ ಬದುಕುವ  ಕಾಡಂಚಿನ ಗ್ರಾಮಸ್ಥರ ಪಾಡಂತು ಹೇಳತೀರದಾಗಿದೆ.

ಇದನ್ನೂ ಓದಿ: Climate Change Impact: ಹವಾಮಾನ ಬದಲಾವಣೆಯ ಪ್ರಭಾವ; ಗಾಳಿ, ಸೌರ ಶಕ್ತಿಗಳಿಗೆ ಫುಲ್ ಡಿಮ್ಯಾಂಡ್

ವಿದ್ಯುತ್‌ ಇಲ್ಲದೇ ಕಚೇರಿಗಳಲ್ಲಿ ಪರದಾಟ

ಇದಲ್ಲದೆ ವಿದ್ಯುತ್  ಸಂಪರ್ಕ ಕಡಿತ ಮಾಡಿರುವುದರಿಂದ  ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಕೆಲಸ ಸ್ಥಗಿತಗೊಂಡಿದೆ. ಪ್ರಸ್ತುತ ಗ್ರಾಮ ಪಂಚಾಯತಿ ಕಚೇರಿಯ ಬಹುತೇಕ ಕೆಲಸ ಕಾರ್ಯಗಳು ಕಂಪ್ಯೂಟರ್ ಆಧಾರಿತವಾಗಿ ಹಾಗು  ಆನ್‌ಲೈನ್ ನಲ್ಲೇ ನಡೆಯುವುದರಿಂದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಎಲ್ಲಾ ರೀತಿಯ ಕೆಲಸಕಾರ್ಯಗಳಿಗು ತೊಡಕಾಗಿದೆ.

ಅನಿವಾರ್ಯವಾಗಿ ಪವರ್ ಕಟ್

" ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡರೆ ನಿಗಮ ನಡೆಸುವುದಾದರೂ ಹೇಗೆ? ನಾವು ವಿದ್ಯುತ್ ಖರೀದಿಸಿ ಸರಬರಾಜು ಮಾಡುವುದಾದರೂ ಹೇಗೆ?   ಹಲವಾರು ಬಾರಿ ತಿಳುವಳಿಕೆ ನೀಡಿದರೂ ವಿದ್ಯುತ್ ಬಿಲ್ ಬಾಕಿ ಪಾವತಿಸಲು ಗ್ರಾಮ ಪಂಚಾಯತಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ಅನಿವಾರ್ಯವಾಗಿ ಬೀದಿ ದೀಪ ಹಾಗು ಗ್ರಾಮ ಪಂಚಾಯತಿ ಕಚೇರಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಬೇಕಿದೆ" ಎನ್ನುತ್ತಾರೆ ಸೆಸ್ಕ್  ಚಾಮರಾಜನಗರ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪೂರ್ಣಚಂದ್ರತೇಜಸ್ವಿ ಹಾಗೂ ಕೊಳ್ಳೇಗಾಲ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪ್ರೀತಮ್.

ಸಭೆಗಳ ಮೇಲೆ ಸಭೆ

ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಕೆ.ಎಂ.ಗಾಯತ್ರಿ,  ಚೆಸ್ಕಾಂನ ಅಧೀಕ್ಷಕ ಎಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್, ತಾಲೋಕು ಪಂಚಾಯ್ತಿಗಳ  ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಎಲ್ಲಾ ಗ್ರಾಮಚಾಯ್ತಿಗಳ ಪಿಡಿಒಗಳ ಜಂಟೀ ಸಭೆಯನ್ನು ಎರಡು ಬಾರಿ ನಡೆಸಲಾಗಿದೆ.

ಬಿಲ್ ಪಾವತಿಸುವಂತೆ ನಿರ್ದೇಶನ

ಎಷ್ಟು ಬಾಕಿ ಇದೆಯೋ ಅದನ್ನು ಪಾವತಿಸಬೇಕು,  ವಿದ್ಯುತ್ ಬಿಲ್ ಪಾವತಿಸಿದ್ದರೂ ಮತ್ತೆ ಅದೇ  ಬಿಲ್ ನೀಡಿದ್ದರೆ ಅದನ್ನು  ಕಡಿತ ಮಾಡಿ ಹೊಸ ಬಿಲ್ ನೀಡಬೇಕು ಗ್ರಾಮ ಪಂಚಾಯ್ತಿಗಳು ಸಂಗ್ರಹಿಸುವ ತೆರಿಗೆ ಹಣ ಹಾಗು‌14 ನೇ ಹಣಕಾಸಿನಲ್ಲಿ ಉಳಿದಿರುವ ಹಣ ಬಳಸಿಕೊಂಡು ವಿದ್ಯುತ್ ಬಿಲ್ ಪಾವತಿಸುವಂತೆ ಎಲ್ಲಾ ಪಿ.ಡಿ.ಒ.ಗಳಿಗು  ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ

ಅನುದಾನದ ಕೊರತೆಯಿಂದ ಸಮಸ್ಯೆ

"ಗ್ರಾಮ ಪಂಚಾಯ್ತಿಗಳ ವಿದ್ಯುತ್ ಬಿಲ್ ಪಾವತಿಗೆ  ಸರ್ಕಾರ ನೀಡುವ ಅನುದಾನ  ಕಡಿಮೆ ಇರುವುದರಿಂದ ಪ್ರತಿ ತಿಂಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಬಾಕಿ ಉಳಿದುಕೊಂಡು ಬರುತ್ತಿದೆ, ಇತ್ತ ಗ್ರಾಮಗಳಲ್ಲಿ ತೆರಿಗೆ ಸಂಗ್ರಹಣೆಯು ಕಡಿಮೆಯಾಗಿದೆ, ನಾವೇನು ತಾನೆ ಮಾಡಲು ಸಾದ್ಯ" ಎಂದು ಹೆಸರು ಹೇಳಲು ಇಚ್ಚಿಸದ ಪಿಡಿಒ ತಮ್ಮ ಅಸಹಾಯಕತೆ ವ್ಯಕ್ತಡಿಸಿದರು.

ಇದನ್ನೂ ಓದಿ: ಯುಗಾದಿ ಹಬ್ಬದ ದಿನ ವಿದ್ಯುತ್ Shock ಹೊಡೆಯೋದು ಗ್ಯಾರೆಂಟಿ! ದರ ಏರಿಕೆಯ ‘ಬೇವು’ ಕೊಡಲು ನಡೆದಿದೆ ಪ್ಲಾನ್

ಇಂತಹ ಸಮಸ್ಯೆ ರಾಜ್ಯದ ಇತರ ಜಿಲ್ಲೆಗಳಲ್ಲು ತಲೆದೋರಿದೆ, ಬೆಕ್ಕಿಗೆ ಗಂಟೆ ಕಟ್ಟೋರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ,  ಸರ್ಕಾರ ಮಧ್ಯಪ್ರವೇಶ ಮಾಡಿ ಈ ಸಮಸ್ಯೆ ಪರಿಹಾರಕ್ಕೆ  ಅಗತ್ಯ ಕ್ರಮ ಕೈಗೊಂಡು ಕಗ್ಗತ್ತಲಿನಲ್ಲಿ ಮುಳುಗಿರುವ ಗ್ರಾಮ ಪಂಚಾಯ್ತಿಗಳಿಗೆ ಬೆಳಕು ನೀಡುವ ಕೆಲಸ ಮಾಡುತ್ತಾ ? ಕಾದು ನೋಡಬೇಕಿದೆ.
Published by:Annappa Achari
First published: