HOME » NEWS » State » VILLAGERS DEMANDED FOR ELECTION PEOPLE OF THIS VILLAGE OPPOSED UNOPPOSED ELECTION HK

ಅವಿರೋಧ ಆಯ್ಕೆಗೆ ಗ್ರಾಮಸ್ಥರ ವಿರೋಧ; ಗ್ರಾಮದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

ಅವಿರೋಧ ಆಯ್ಕೆಯಾದ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಿ ಗ್ರಾಮದಲ್ಲಿ ಚುನಾವಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ

news18-kannada
Updated:December 23, 2020, 4:18 PM IST
ಅವಿರೋಧ ಆಯ್ಕೆಗೆ ಗ್ರಾಮಸ್ಥರ ವಿರೋಧ; ಗ್ರಾಮದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ
ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು
  • Share this:
ಚಿಕ್ಕೋಡಿ(ಡಿಸೆಂಬರ್​. 23): ಸದ್ಯ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದೆ. ಈಗಾಗಲೇ ಒಂದು ಹಂತದ ಚುನಾವಣೆ ಮುಗಿದಿದ್ದು, ಎರಡನೆ ಹಂತದ ಚುನಾವಣೆ ತಯಾರಿ ಕೂಡ ಜೋರಾಗಿಯೆ ನಡೆದಿದೆ. ಕೆಲವು ಗ್ರಾಮಗಳಲ್ಲಿ ಜನ ಯಾವುದೇ ಚುನಾವಣೆ ಬೇಡಾ ಎಂದು ಇಡಿ ಗ್ರಾಮ ಪಂಚಾಯಿತಿಯನ್ನೇ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇನ್ನು ಕೆಲವಡೆ ಅವಿರೋಧ ಆಯ್ಕೆಗೆ ಕಸರತ್ತು ಪಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಗ್ರಾಮದ ಜನ ಅವಿರೋಧ ಆಯ್ಕೆಯಾಗಿದ್ದಕ್ಕೆ ಕೋಪಗೊಂಡು ಗ್ರಾಮದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹದೊಂದು ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಹಂದಿಗುಂದ ಕುಡಚಿ ಮತಕ್ಷೇತ್ರದ ಒಂದು ಗ್ರಾಮ 7 ಸಾವಿರ ಜನಸಂಖ್ಯೆ ಹೊಂದಿರುವ ಒಟ್ಟು ಆರು ವಾರ್ಡ್ ಗಳು ಈ ಗ್ರಾಮದಲ್ಲಿ ಇದ್ದು, 22 ಜನ ಸದಸ್ಯರು ಇದ್ದಾರೆ.

ಈ ಬಾರಿ ಚುನಾವಣೆ ಘೋಷಣೆ ಆದ ಬಳಿಕ ಒಟ್ಟು 59 ಜನ ಗ್ರಾಮ ಪಂಚಾಯಿತಿಗೆ ಸ್ಪರ್ಧೆ ಮಾಡಬೇಕು ಎಂದು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಆದರೆ, ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ನಾಮಪತ್ರಗಳನ್ನ ಹಿಂದೆ ಪಡೆದಿದ್ದಾರೆ. ಸ್ಥಳೀಯ ಶಾಸಕ ಪಿ ರಾಜೀವ್ ಅವರ ಬೆಂಬಲಿಗರು ನಾಮಪತ್ರಗಳನ್ನ ಸಲ್ಲಿಸಿದವರಿಗೆ ಹಣದ ಆಮಿಷ ತೋರಿದ್ದಾರೆ. ಆಮಿಷಕ್ಕೆ ಸ್ಪಂದಿಸದ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ ನಾಮಪತ್ರಗಳನ್ನ ವಾಪಸ್ ಪಡೆಯದೆ ಇದ್ದಲ್ಲಿ ಗ್ರಾಮದಿಂದ ಬಹಿಷ್ಕಾರ ಹಾಕಿಸುವುದಾಗಿ ಹೇಳಿ, ತಮಗೆ ಬೇಕಾದ 22 ಜನ ಸದಸ್ಯರನ್ನ ಬಿಟ್ಟು ಇನ್ನುಳಿದ ಎಲ್ಲರ ನಾಮಪತ್ರಗಳನ್ನ ಹಿಂದೆ ಪಡೆಯುವಂತೆ ದಬ್ಬಾಳಿಕೆ ನಡೆಸಿದ್ದಾರೆ ಎಂದು  ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನು ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿ ಗ್ರಾಮದಲ್ಲಿ ಯವುದೇ ಚುನಾವಣೆ ನಡೆಸುವುದು ಬೇಡಾ ಬದಲಾಗಿ ಗ್ರಾಮ ಸುಧಾರಣೆ ಸಮಿತಿ ಮಾಡುವುದಾಗಿ ಗ್ರಾಮದ ಹಿರಿಯರು ನಂಬಿಸಿ ಮೊಸ ಮಾಡಿದ್ದಾರೆ. ತಮಗೆ ಬೇಕಾದ ಮೇಲ್ವರ್ಗದ ಜನರನ್ನ ಆಯ್ಕೆ ಮಾಡಿಕೊಂಡು ಕೆಳ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಚುನಾವಣೆ ವೇಳೆ ಮತದಾನ ಮಾಡುವುದು ನಮ್ಮ ಹಕ್ಕು ನಮಗೆ ಬೇಕಾದ ಅಭ್ಯರ್ಥಿಯನ್ನ ನಾವೇ ಆಯ್ಕೆ ಮಾಡಬೇಕು ಇದು ನಮ್ಮ ಹಕ್ಕು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ನಮ್ಮ ಹಕ್ಕುಗಳನ್ನ ಕಿತ್ತುಕೊಳ್ಳಲಾಗಿದೆ. ಅವಿರೋಧ ಆಯ್ಕೆಯಾದ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಿ ಗ್ರಾಮದಲ್ಲಿ ಚುನಾವಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Farmers Day 2020: ರೈತ ದಿನದಂದು ಶುಭಕೋರಿ ಕೃಷಿ ಕಾಯ್ದೆಗಳ ಕುರಿತ ಅನುಮಾನ ನಿವಾರಿಸಿದ ಡಿಸಿಎಂ ಅಶ್ವತ್ಥನಾರಾಯಣ

ಈ ಗ್ರಾಮದಲ್ಲಿ ಬರುವ 27 ರಂದು ಎರಡನೆ ಹಂತದಲ್ಲಿ ಚುನಾವಣೆ ನಡೆಯಬೇಕಾಗಿತ್ತು ಆದರೆ, ಅವಿರೋಧ ಆಯ್ಕೆ ಪ್ರಕ್ರಿಯಿಂದಾಗಾಗಿ ಚುನಾವಣೆ ನಡೆಯುತ್ತಿಲ್ಲ. ಬರುವ 27 ರಂದೆ ಚುನಾವಣೆ ನಡೆಸಬೇಕು ಇಲ್ಲವಾದಲ್ಲಿ ಮತ್ತೊಂದು ದಿನಾಂಕ ಘೋಷಣೆ ಮಾಡಿ ಈ ಗ್ರಾಮದಲ್ಲಿ ಚುನಾವಣೆ ಮೂಲಕವೇ ಸದಸ್ಯರ ಆಯ್ಕೆ ನಡೆಸಬೇಕು ಎಂದು ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಅವಿರೋಧ ಆಯ್ಕೆ ಪದ್ದತಿಗೆ ವಿರೋಧ ಮಾಡುತ್ತಿರುವ ಗ್ರಾಮಸ್ಥರು ಪ್ರತಿಭಟನೆ ಮೂಲಕ ತಮ್ಮ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಇದೆ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಲು ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ.
Published by: G Hareeshkumar
First published: December 23, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories