ಚಿಕ್ಕಮಗಳೂರು(ಅ.24): ಕಾಫಿನಾಡಲ್ಲಿ ಒಂದೆಡೆ ಜನರಿಗೆ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ವರದಿ, ಸೂಕ್ಷ್ಮವಲಯ ಯೋಜನೆ ಅಂತಾ ಹತ್ತಾರು ತೂಗುಗತ್ತಿಗಳು ಒಂದರ ಮೇಲಂತೆ ಒಂದು ಜನಸಾಮಾನ್ಯರ ಬದುಕಿಗೆ ಪೆಟ್ಟು ಕೊಟ್ಟರೆ, ಇನ್ನೊಂದೆಡೆ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ತೋಟ, ಜಮೀನಿನ ಮೇಲೂ ಇದೀಗ ಅರಣ್ಯ ಇಲಾಖೆ ಕಣ್ಣಿಟ್ಟಿದೆ. ಗುಡಿಸಲು ತೆರವುಗೊಳಿಸುವ ವೇಳೆ ನಡೆದ ಜಟಾಪಟಿ ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ವಾಸವಿದ್ದ ಗುಡಿಸಲನ್ನ ತೆರವುಗೊಳಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗುಡಿಸಲು ಮಾಲೀಕ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಸಮೀಪದ ಹೊಳೆಕೂಡಿಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣೇಗೌಡ ಎಂಬುವವರು ಹಲವು ವರ್ಷಗಳ ಹಿಂದೆಯೇ ಸುಮಾರು 2 ಎಕರೆ ಜಾಗದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಆದ್ರೆ ಈ ಜಾಗಕ್ಕೆ ದಾಖಲೆಗಳಿಲ್ಲ ಎನ್ನುವ ಕಾರಣಕ್ಕೆ ಅರಣ್ಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಈ ಬಡ ಕುಟುಂಬವನ್ನ ಇಲ್ಲಿಂದ ತೆರವುಗೊಳಿಸಲು ಮುಂದಾಗಿದ್ದಾರೆ.
ಇದು ಕೃಷ್ಣೇಗೌಡರ ಪುತ್ರ ಪ್ರವೀಣ್ ಅಸಮಾಧನ, ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ತೆರವು ಮಾಡಲು ಬಂದಿದ್ದನ್ನ ಪ್ರವೀಣ್ ಕುಟುಂಬ ಸೇರಿದಂತೆ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಕುಟುಂಬದ ನಡುವೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಎರಡು ಕಡೆಯವರ ನಡುವೆ ಮಾತು ವಿಕೋಪಕ್ಕೆ ಹೋದಾಗ ತಳ್ಳಾಟ, ನೂಕಾಟ ನಡೆದಿದೆ. ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿಕೊಂಡ ಪೊಲೀಸರು ಹಲ್ಲೆ ಮಾಡಿದ ಆರೋಪದಡಿ ಕೃಷ್ಣೇಗೌಡ ಮಗ ಪ್ರವೀಣ್, ಪ್ರವೀಣ್ ಪತ್ನಿ ಸೇರಿದಂತೆ ಶಿವರಾಜ್ ಗೌಡ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ನಿಂತಿಲ್ಲ ಉಗ್ರ ಬೆಂಬಲ; ಎಫ್ಎಟಿಎಫ್ನ ಬೂದು ಪಟ್ಟಿಯಲ್ಲೇ ಪಾಕಿಸ್ತಾನ ಮುಂದುವರಿಕೆ
ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದರೂ ಏಕಾಏಕಿ 50ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕುಟುಂಬವನ್ನ ತೆರವು ಗೊಳಿಸಲು ಬಂದಿದ್ದು, ಸಾಮಾನ್ಯವಾಗಿ ಈ ಕುಟುಂಬಕ್ಕೂ ಹತಾಶೆ, ನೋವು, ಆಕ್ರೋಶ ತರಿಸಿದೆ. ಹಾಗಾಗೀ ಇಡೀ ಊರಿನವರು ಕೂಡ ಈ ಬಡಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಕಣ್ಣೆದುರೇ ಕಷ್ಟಪಟ್ಟು ಬೆಳೆಸಿದ ಬೆಳೆ, ಕಟ್ಟಿದ ಗುಡಿಸಲು ಎಲ್ಲವನ್ನೂ ಕಿತ್ತೆಸೆಯುವಾಗ ಯಾರಿಗೆ ತಾನೇ ಕೋಪ ಬರಲ್ಲಾ ಹೇಳಿ..? ಒಂದು ನೋಟಿಸ್ನ್ನೂ ಕೂಡ ಕೊಡದೇ ನಮ್ಮನ್ನ ಪ್ರಚೋದಿಸಿ ಈಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹತ್ತಾರು, ನೂರಾರು ಎಕರೆ ಜಮೀನು ಒತ್ತುವರಿ ಮಾಡಿಕೊಂಡವರನ್ನು ಅರಣ್ಯ ಇಲಾಖೆಯವರು ಕೇಳಲ್ಲ. ಉಳ್ಳವರ ಮೇಲೆ ಇಲ್ಲದ ಈ ದಬ್ಬಾಳಿಕೆ, ಏನೂ ಇಲ್ಲದವರ ಮೇಲೆ ಯಾಕೆ ಅಂತಾ ಸಂಬಂಧಿಕರು ಪ್ರಶ್ನಿಸಿದ್ದಾರೆ.
ಆಕ್ರೋಶಗೊಂಡು ಹಲ್ಲೆ ಮಾಡಲು ಏನು ಮಾಡಬೇಕೋ, ಅದನ್ನ ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಪ್ರಚೋದಿಸಿ ಮಾಡಿದ್ರೂ ಕೂಡ ಕಾನೂನು ರೀತಿಯಲ್ಲಿ ಪ್ರವೀಣ್, ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದು ತಪ್ಪು. ಆದ್ರೆ ಮಲೆನಾಡು ಭಾಗದಲ್ಲಿ ಶ್ರೀಮಂತರು ನೂರಾರು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಂಡ್ರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ, ಏನೂ ಇಲ್ಲದವರು ಹೊಟ್ಟೆಪಾಡಿಗಾಗಿ ಸಾಗುವಳಿ ಮಾಡಿಕೊಂಡ್ರೆ ದಾಖಲೆಗಳಿಲ್ಲ ಅಂತಾ ಸಬೂಬು ಹೇಳಿ ಅಂತವರ ಮೇಲೆ ಪೌರುಷ ತೋರಿಸೋದು ಎಷ್ಟು ಸರಿ ಅನ್ನೋದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ