news18-kannada Updated:December 28, 2020, 3:57 PM IST
ಮೃತ ಯುವಕ ಜಯರಾಮ್
ಕಲಬುರ್ಗಿ(ಡಿಸೆಂಬರ್. 28): ಪ್ರತಿ ಬಾರಿ ಯಾರಾದರೂ ಸತ್ತಾಗಲೂ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಈ ಗ್ರಾಮದಲ್ಲಿದೆ. ಶವ ಹೂಳಲು ಸ್ಮಶಾನ ಭೂಮಿ ಇಲ್ಲದ್ದಕ್ಕೆ ಶವವನ್ನು ಬಸ್ ನಿಲ್ದಾಣದಲ್ಲಿಯೇ ಇಟ್ಟು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಲಬುರ್ಗಿ ತಾಲೂಕಿನ ನಂದಿಕೂರು ತಾಂಡಾದಲ್ಲಿ ನಡೆದಿದೆ. ಸರ್ಕಾರಿ ಜಮೀನಿನಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕೇಂದ್ರ ಕಾರಾಗೃಹ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಕೂಡಲೇ ರುದ್ರಭೂಮಿ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಈ ಗ್ರಾಮದಲ್ಲಿ ಯಾರಾದರೂ ಸತ್ತರೆ ಅಂತ್ಯಕ್ರಿಯೆಗೆ ಒಂದೆರಡು ದಿನವಾದರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರ್ಗಿ ಮಹಾನಗರಕ್ಕೆ ಹೊಂದಿಕೊಂಡು ಇರುವ ನಂದಿಕೂರು ಗ್ರಾಮದಲ್ಲಿ ಯಾರೇ ಸತ್ತರೂ ಹೂಳಲು ಜಾಗವಿಲ್ಲದಂತಾಗಿದೆ. ಹೀಗಾಗಿ ಊರಲ್ಲಿ ಯಾರಾದರೂ ಸತ್ತರೆ ಮೊದಲು ಬೀಗರಿಗೆ ಸುದ್ದಿ ತಿಳಿಸುವ ಬದಲಿಗೆ, ಅಧಿಕಾರಿಗಳಿಗೆ ಸುದ್ದಿ ತಿಳಿಸುವ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಗ್ರಾಮಸ್ಥರಿಗಿದ್ದ ಏಕೈಕ ರುದ್ರಭೂಮಿ ತಮಗೆ ಸೇರಿದ್ದಂತೆ ಕಲಬುರ್ಗಿ ಕೇಂದ್ರ ಕಾರಾಗೃಹ ಸಿಬ್ಬಂದಿ ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಹಾಗೆ ನೋಡಿದರೆ ಕಲಬುರ್ಗಿ ಕೇಂದ್ರ ಕಾರಾಗೃಹ 1964ರಲ್ಲಿ ಸ್ಥಾಪನೆಯಾಗಿದೆ. ಆ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಉದ್ಭವವಾಗಿರಲಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ತಲೆದೋರಿದ್ದು, ಜಿಲ್ಲಾಡಳಿತ ಹಾಗೂ ಗ್ರಾಮಸ್ಥರ ತಿಕ್ಕಾಟಕ್ಕೆ ಕಾರಣವಾಗಿದೆ. ಇದೀಗ ಯುವಕನೋರ್ವ ಸಾವನ್ನಪ್ಪಿದ್ದು, ಶವ ಸಂಸ್ಕಾರಕ್ಕೆ ಜಾಗ ಸಿಗದೆ ನಿನ್ನೆಯಿಂದಲೂ ಕಾದು ಕುಳಿತುಕೊಳ್ಳುವಂತಾಗಿದೆ.
ಗ್ರಾಮದ ಜಯರಾಮ್(28) ಎಂಬಾತ ಅಪಘಾತಕ್ಕೀಡಾಗಿ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಎಂದಿನಂತೆ ಹಳೆಯ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಹೋಗಿದ್ದಕ್ಕೆ ಕೇಂದ್ರ ಕಾರಾಗೃಹ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ ಶವವನ್ನು ನಂದಿಕೂರು ತಾಂಡಾದ ಬಸ್ ನಿಲ್ದಾದಲ್ಲಿಟ್ಟು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಮತ್ತು ತಹಶೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯೂ ಶವ ಸಂಸ್ಕಾರಕ್ಕಾಗಿ ಪರದಾಡುವಂತಾಗಿದೆ. ಈಗಿರುವ ಹಳೆಯ ರುದ್ರಭೂಮಿಯಲ್ಲಿಯೇ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಿ, ಇಲ್ಲವೆ ನಂದಿಕೂರು ಗ್ರಾಮ ಹಾಗೂ ನಂದಿಕೂರು ತಾಂಡಾಗಳಿಗೆ ಪ್ರತ್ಯೇಕ ರುದ್ರಭೂಮಿ ಸ್ಥಾಪಿಸಿ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪವನ್ ಒಳಕೇರಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ :
ಈ ಗ್ರಾಮದಲ್ಲಿ ಇದ್ದಾರೆ ನೂರಾರು ಸತ್ಯಪ್ಪ, ಸತ್ಯವ್ವ; ಗದಗದಲ್ಲೊಂದು ಭಕ್ತಿ ಪರಾಕಷ್ಟೆಯ ಹಳ್ಳಿ
ಶವ ಇಟ್ಟು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಗ್ರಾಮಸ್ಥರ ಮನವೊಲಿಕೆಗೆ ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊನೆಗೂ ಘಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು 15 ದಿನಗಳೊಳಗಾಗಿ ರುದ್ರ ಭೂಮಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಶವ ಡಿ ಕಂಪೋಸ್ ಆಗುತ್ತಿದ್ದರಿಂದಾಗಿ ಕೊನೆಗೆ ಹಳ್ಳದ ದಂಡೆಗೆ ಶವ ದಹನ ಮಾಡಲಾಗಿದೆ.
Published by:
G Hareeshkumar
First published:
December 28, 2020, 3:56 PM IST